‘ಶೂನ್ಯದಿಂದತ್ತತ್ತ’ ಎ.ಆರ್. ಪಂಪಣ್ಣ ಅವರ ಕಥಾ ಸಂಕಲನ. ಈ ಕೃತಿಗೆ ಕತೆಗಾರ ಕೇಶವ ಮಳಗಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ “ಶೂನ್ಯದಿಂದತ್ತತ್ತ' ಕತೆಗಾರ ಎ.ಆರ್.ಪಂಪಣ್ಣ ಅವರ ಹೊಸ ಸಂಕಲನ, ಕಥೆ ಕಟ್ಟುವಾಗಿನ ಉತ್ಸಾಹ, ಸೀಮಿತ ಮಹತ್ವಾಕಾಂಕ್ಷೆ ಈ ಕೃತಿಯಲ್ಲಿ ಎದ್ದು ಕಾಣುವ ಅಂಶಗಳಾಗಿದೆ. ಉತ್ತರ ಕರ್ನಾಟಕದ ಭೌಗೋಳಿಕ ಪರಿಸರ, ಭಾಷೆ, ಸ್ಥಳೀಯತೆ ಮತ್ತು ಮಣ್ಣಿನ ಗೊಂಬೆಗಳಾದ ಮಾನವರು ಇಲ್ಲಿನ ಎಲ್ಲ ಕಥೆಗಳ ಹಿನ್ನೆಲೆಯಲ್ಲಿಯೂ ಇದ್ದಾರೆ. ಈ ಪ್ರದೇಶದಲ್ಲಿ ಕಣ್ಣಿಗೆ ಕಟ್ಟುವ ಬಡತನ, ವಲಸೆ, ಜಾತಿ, ಲಿಂಗ, ಸಾಮಾಜಿಕ ಸ್ಥಾನಮಾನಗಳಿಂದ ಹುಟ್ಟುವ ಕ್ರೌರ್ಯ ಎಲ್ಲವೂ ಪ್ರತಿಫಲನಗೊಂಡಿವೆ. ಬಡವರ ಬದುಕಿನ ಬವಣೆ, ಅಸಹಾಯಕತೆ, ಎಲ್ಲವನ್ನೂ ಮೀರಿ ಬಾಳು ಕಟ್ಟಿಕೊಳ್ಳುವ ಅವರ ಛಲವಂತಿಕೆಗಳು ಈ ಕಥೆಗಳ ನಿರ್ಮಿತಿಯಲ್ಲಿ ಊರುಗೋಲಾಗಿವೆ.
ಒಂದು ವಿಷಮ ಸ್ಥಿತಿಯಲ್ಲಿ ಒಳ ಕಸುವಿನ ಮೇಲೆ ಭಾರ ಹಾಕಿ ಎದ್ದು ನಿಲ್ಲಲು ಪ್ರಯತ್ನಿಸುವ ಇಲ್ಲಿನ ಹೆಣ್ಣು ಪಾತ್ರಗಳು ಮೆಚ್ಚುಗೆ ಗಳಿಸುತ್ತವೆ. ಅಂತೆಯೇ, ಹೆಣ್ಣು ಕಥಾಕೇಂದ್ರವಾಗಿರುವುದು ಕೂಡ. ಕಥನ ವಿನ್ಯಾಸ ಮತ್ತು ಭಾಷಾ ಬಳಕೆಯ ಕುಶಲತೆ ಅಚ್ಚರಿಗೊಳಿಸುವಂತೆ ಪಂಪಣ್ಣ ಅವರಿಗೆ ಒಲಿದಿವೆ. ಒಂದು ಕಥೆ ಬರೆಯುವಾಗ ಬದುಕಿನ ಯಾವೆಲ್ಲ ಅಂಶಗಳನ್ನು ಬೇಕಷ್ಟೇ ಪ್ರಮಾಣದಲ್ಲಿ ಪಡೆದು ಪರಿಣಾಮಕಾರಿಯಾಗಿ ಓದುಗನಿಗೆ ಮುಟ್ಟಿಸಬೇಕು ಎಂಬ ವಿಧಾನವನ್ನು ಸಹ ಪಂಪಣ್ಣನವರು ಬಲ್ಲರು. ಈ ಎರಡೂ ಅಂಶಗಳು ಅವರು ಮುಂದೆ ಬರೆಯಬಹುದಾದ ಗುಣಾತ್ಮಕ ಕಥೆಗಳ ಸೂಚಿಯಂತಿವೆ. ಈ ಪರಿಣತಿ ಕಡಿಮೆಯೇನಲ್ಲ. ನೆಲೆಯಿಲ್ಲದವರು ಒಬ್ಬರಿಗೊಬ್ಬರು ಆಸರೆಯಾಗಿ ಜೀವನ ನಡೆಸುವ ಜಾಣೆ ಅನಿವಾರ್ಯವಾದ ವಲಸೆಯನ್ನು ಸಹಜವಾಗಿ ಸ್ವೀಕರಿಸಿ ಹೊಂದಾಣಿಕೆಯಲ್ಲಿ ಜೀವನದ ಬಂಡಿಯನ್ನು ನಡೆಸುವ ಮನೋಭಾವ.
ವಿಷಮ ಸನ್ನಿವೇಶದಲ್ಲಿ ಅರಳಿ ಉಳಿಯುವ ಪ್ರೇಮ, ಮರ್ಯಾದೆಗೆ ಅಂಜಿ ಮುದುಡಿ ಹೋಗುವ ದಾಂಪತ್ಯ ಹೀಗೆ ಬಾಳಾಟದಲ್ಲಿ ಎದುರಾಗುವ ವಸ್ತುಗಳೇ ಈ ಕಥೆಗಳನ್ನು ಕಟ್ಟಿವೆ. ಇಂಥ ಸಕಾರಾತ್ಮಕ ಅಂಶಗಳ ಮಧ್ಯೆಯೇ ಚರ್ಚಿಸಬಹುದಾದ ಒಂದೆರಡು ಅಂಶಗಳು. ಸಿದ್ಧ ಮತ್ತು ಜನಪ್ರಿಯ ಮಾದರಿಗಳು ಒಂದು ನೆಲೆಯಲ್ಲಿ ಓದುಗರನ್ನು ತಲುಪಬಲ್ಲವು. ಹೊರ ನೋಟಕ್ಕೆ ಅವು ಎಷ್ಟೇ ಯಶಸ್ವಿ ಕಥೆಗಳಂತೆ ಕಾಣುತ್ತಿದ್ದರೂ ಅಂಥವುಗಳ ಆಯುಷ್ಯ ಬಹಳ ಇರಲಾರದು. ಭಾಷೆ, ಪರಿಸರ ಮತ್ತು ವಸ್ತು ವಿನ್ಯಾಸಗಳು ಒಲಿದ ಲೇಖಕ ಜನಪ್ರಿಯ ಮಾದರಿಗಳಾಚೆ ಹೋಗಿ ಬದುಕನ್ನು ಧ್ಯಾನಿಸಬೇಕಾಗುತ್ತದೆ. ಕಣ್ಣಿಗೆ ಕಾಣುವ ವಸ್ತುಗಳ ಹಿಂದೆ-ಮುಂದೆ, ಆಚೆ ಅವಕಾಶದಲ್ಲಿ ಅಗೋಚರ ಕಾಣೆಗಳಿರುತ್ತವೆ. ಅವನ್ನೂ ನಿರುಕಿಸಬೇಕಾಗುತ್ತದೆ. ಮತ್ತು ಅದು ಮಾತ್ರ ಬರವಣಿಗೆಗೆ ಸಾರ್ಥಕತೆಯನ್ನು ತಂದುಕೊಡಬಲ್ಲದು. ಕೆಲವು ದತ್ತ ಗುಣಗಳನ್ನು ಪಡೆದಿರುವ ಪಂಪಣ್ಣ ಅದನ್ನು ಸಾಧಿಸುವ ಸಾಮರ್ಥ್ಯ ಪಡೆದಿದ್ದಾರೆ ಎಂದಿದ್ದಾರೆ ಕೇಶವ ಮಳಗಿ.
ಎ.ಆರ್. ಪಂಪಣ್ಣ ಅಪ್ಪಟ ರೈತಾಪಿ ಭಾಷೆಯಲ್ಲಿ ಕತೆಯಾಗಿಸುವ ಎ.ಆರ್. ಪಂಪಣ್ಣ ಒಬ್ಬ ಅಪ್ಪಟ ದೇಶಿ ಕಥೆಗಾರರು. ಇವರ ಬೇಯುವ ಉಸಿರಿನ ಗುರುತು ಕೃತಿಯು ಹಲವಾರು ರೈತಾಪಿ ಕಥನಗಾರಿಕೆಯನ್ನು ತೆರೆದಿಡುವಂತದ್ದು. ಮಾಮರವೇ ಮಾಮರವೇ ಇವರ ಮೂರನೇ ಪುಸ್ತಕವಾಗಿದ್ದು ಮೊದಲನೇ ಪ್ರಬಂಧ ಸಂಕಲವೂ ಆಗಿದೆ. ...
READ MORE