’ಸೀತಾಳೆದಂಡೆಯ ಸದ್ದಿಲ್ಲದ ಕಥೆಗಳು’ ಭಾರತಿ ಹೆಗಡೆ ಅವರ ಮೊದಲ ಪುಸ್ತಕವಲ್ಲದಿದ್ದರೂ ಮೊದಲ ಕಥಾ ಸಂಕಲನ. ಇಲ್ಲಿ ಆಯ್ದುಕೊಂಡಿರುವ ವಸ್ತು, ಪಾತ್ರಗಳು, ಪರಿಸರ, ನಿರೂಪಣೆಯ ತಂತ್ರ ಎಲ್ಲವೂ ಭಿನ್ನವಾದದ್ದು. ಒಂದು ರೀತಿಯಿಂದ ಸಂಪ್ರದಾಯವನ್ನು ಪ್ರಶ್ನಿಸುವ ಮಟ್ಟಕ್ಕೆ ಯಾವುದೇ ಕಥೆಗಳು ಏರುವುದಿಲ್ಲ. ಬದಲಿಗೆ, ಆ ಸಂಪ್ರದಾಯಗಳು ಆಯಾ ಪಾತ್ರಗಳಿಗೆ ಸರಿಯಾಗಿ ವರ್ತಿಸದಿದ್ದಾಗ ಆಗುವ ಘರ್ಷಣೆಯನ್ನೂ, ಆ ಪಾತ್ರಗಳು ನಿಭಾಯಿಸುವ ರೀತಿಯನ್ನು ಲೇಖಕರು ಸಶಕ್ತವಾಗಿ ನಿರೂಪಿಸಿದ್ದಾರೆ. ಬೌದ್ಧಿಕ ಹಾಗೂ ಭಾವಾತಿರೇಕವೂ ಅಲ್ಲದ ಆದರೆ, ವ್ಯವಸ್ಥೆಯ ವಿರುದ್ಧ ತಮ್ಮದೇ ರೀತಿ ಸಿಡಿಯುವ ಪಾತ್ರಗಳು ಓದುಗರೊಂದಿಗೆ ಮುಖಾಮುಖಿಯಾಗುತ್ತವೆ.
ಸಿದ್ಧಾಪುರ ಸೀಮೆಯ ಸದ್ದಿಲ್ಲದ ಕಥೆ
ಪತ್ರಕರ್ತರೂ ಆಗಿರುವ ಭಾರತಿ ಹೆಗಡೆ ಇದೀಗ ತಮ್ಮ ತವರೂರಿನ ಆಸುಪಾಸಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ಕಂಡಿರುವ ಪಾತ್ರಗಳನೆಲ್ಲ ನೆನಪಿಟ್ಟುಕೊಂಡು ಆ ಪಾತ್ರಗಳನ್ನು ಕತೆಯೊಳಗೆ ತಂದಿದ್ದಾರೆ. ಸೀತಾಳದಂಡೆಯ ಸದ್ದಿಲ್ಲದ ಕತೆಗಳು ಹೆಸರಿನ ಈ ಕಥಾಸಂಕಲನದಲ್ಲಿ ಸಿದ್ದಾಪುರದ ಆಸುಪಾಸಲ್ಲಿ ಅವರು ನೋಡಿದ ಪಾತ್ರಗಳಿವೆ. ಗ್ರಾಮೀಣ ಪ್ರದೇಶಗಳ ಪಾತ್ರಗಳ ವೈಖರಿಯೇ ವಿಚಿತ್ರವಾಗಿರುತ್ತದೆ. ಆ ಪಾತ್ರಗಳು ಹಾಗೆ ವರ್ತಿಸುವುದಕ್ಕೆ ಕಾರಣಗಳೂ ಇರುತ್ತವೆ. ಉದಾಹರಣೆಗೆ ಗಂಡನ ಜೊತೆ ಮಾತಾಡುವಾಗ ಗೋಡೆಯನ್ನು ನೋಡಿ ಮಾತಾಡುತ್ತಿದ್ದ ಹೆಂಗಸು, ಮೈಮೇಲೆ ಚೌಡೇಶ್ವರಿ ಬಂದಾಗ ಮಾತ್ರ ಕೊಂಕಣಿ ಮತ್ತು ಉರ್ದು ಮಾತಾಡುತ್ತಿದ್ದ ಮಹಿಳೆ- ಹೀಗೆ ಭಾರತಿ ಕಣ್ಣಿಗೆ ಬಿದ್ದವರೆಲ್ಲ ವ್ಯಕ್ತಿ ವಿಶಿಷ್ಟ ಸಿದ್ದಾಂತಕ್ಕೆ ಸಿಲುಕಿದವರೇ. ಈ ಕತೆಗಳು ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಬಿಡುಗಡೆ ಆಗುತ್ತಿದೆ. ಟಿ ಎನ್ ಸೀತಾರಾಮ್ ಪುಸ್ತಕ ಬಿಡುಗಡೆ ಮಾಡುತ್ತಾರೆ.
ಕೃಪೆ : ಕನ್ನಡ ಪ್ರಭ (2020 ಜನವರಿ 05)
...................................................................................................................................
ಹಳ್ಳಿಗಿಡದ ಹಾಡುಪಾಡು
ಕನ್ನಡದ ಪ್ರಮುಖ ಕತೆಗಾರ್ತಿಯರನ್ನು ಕಾಡುತ್ತಾ ಬಂದ ಮುಖ್ಯ ಸವಾಲೆಂದರೆ ಕೌಟುಂಬಿಕ ಸಮಸ್ಯೆಗಳನ್ನು ಚಿತ್ರಿಸುವಾಗ ಸಬಲೀಕರಣ, ಸ್ತ್ರೀ ಸಂವೇದನೆ, ಸ್ತ್ರೀ ವಿಮೋಚನೆ, ಮೊದಲಾದ ಜೀವನಿಷ್ಠ ಸಂಗತಿಗಳು ಭಾಷಣದ ರೂಪದಲ್ಲಿ ಉಳಿದುಬಿಡುವುದು. ಕಳೆದ ತಲೆಮಾರಿನ ಕತೆಗಾರ್ತಿಯರಿಗೆ ಅನುಭವದ ದೃಷ್ಟಿಯಿಂದ ಹಾಗೆ ಬರೆಯುವುದು ಅನಿವಾರ್ಯವೂ ಆಗಿದ್ದಿರಬಹುದು.
ಇದರೊಂದಿಗೆ ಆ ಹೊತ್ತಿನ ಕಥೆಗಾರಿಕೆಯು ಹಲವು ಹೆಜ್ಜೆಗಳು ನಿರ್ಣಯಿಸಿದ ಕಾಲುದಾರಿಯನ್ನು
ಬಿಟ್ಟು ನಡೆಯುವುದು ಸಾಧ್ಯವೂ ಇರಲಿಲ್ಲ. ಎಲ್ಲವನ್ನೂ ಸರಳೀಕರಿಸಬಲ್ಲ ನಮ್ಮ ವಿಮರ್ಶಕರು ಈ ಕತೆಗಾರ್ತಿಯರ ಮೂಲಸಂವೇದನೆಯನ್ನು ಉಗ್ರವಾದ. ಉದಾರವಾದ ಮತ್ತು ತರ್ಕನಿಷ್ಠ ಸ್ತ್ರೀವಾದಗಳೆಂದು ವರ್ಗೀಕರಿಸಿದ್ದೂ ಆಯಿತು. ಅಲ್ಲಿಗೆ ಮಹಿಳಾ ಸಂವೇದನೆಗಳ ಕಥೆ ಮುಗಿಯಿತೆ ಎಂದುಕೊಂಡಾಗ, ಪ್ರಸ್ತುತ ಕಥಾಸಂಕಲನದ ಮೂಲಕ ಭಾರತಿ ಹೆಗಡೆಯವರು ಬಹುತ್ತವಾದವೆಂಬ ಮತ್ತೊಂದು ಸಾಧ್ಯತೆಯನ್ನು ನಮ್ಮ ಮುಂದಿಡುತ್ತಿದ್ದಾರೆ. ಬೆನ್ನುಡಿಯಲ್ಲಿ ಅಬ್ದುಲ್ ರಶೀದ್ ಗಮನಿಸಿದ ಹಾಗೆ ಸ್ತ್ರೀಶೋಷಣೆ, ಲಿಂಗತಾರತಮ್ಯ, ಧಾರ್ಮಿಕ ಮಡಿವಂತಿಕೆಗಳಂತಹ ಸೀಮಿತ ಪರಿಧಿಗಳಿಗೆ ದಕ್ಕದ ಸಾಧ್ಯತೆಯಿದು. ಹಾಗೆ ನೋಡಿದರೆ, ಪ್ರಚಲಿತವಿರುವ
ಸಣ್ಣಕಥಾ ? ಮಾನದಂಡಗಳ ಹಿನ್ನೆಲೆಯಲ್ಲಿ ಭಾರತಿ ಹೇಳುವ ಕಥೆಗಳು ಸಣ್ಣಕಥೆಗಳೆನ್ನಿಸದೇ ಪ್ರಕಾಶ ವ್ಯಕ್ತಿಚಿತ್ರಗಳೋ, ಪ್ರಬಂಧಗಳೊ ಎನ್ನಿಸಿದರೂ, ನನಗೆ ಅವರು ಈ ಬರಹಗಳ ಮೂಲಕ ನಮ್ಮ ಕಥೆಗಳ ಕಟ್ಟೋಣಕ್ಕೆ ಹೊಸ ಸಾಧ್ಯತೆಗಳನ್ನು ನೀಡುತ್ತಿದ್ದಾರೆ ಅನ್ನಿಸುತ್ತದೆ. ಅದು ಸಕಾರಣವೂ ಆಗಿದೆ. ಈ ಕಥೆಗಳಲ್ಲಿ ಬರುವ ಹವ್ಯಕ ಜಗತ್ತಿನ ಗಂಡು - ಹೆಣ್ಣುಗಳ ಸಂಬಂಧ, ಸಮಸ್ಯೆಗಳ ಚಿತ್ರಣಗಳು ಚತುರ ಫೋಟೋಗ್ರಾಫರ್ ಒಬ್ಬ ತೆಗೆದ ಫೋಟೊಗಳನ್ನು ಯಾವ ಪಾಳಿಯಲ್ಲಿ ಅಲ್ಲಮ್ಮಿಗೆ ಹಾಕಬೇಕೆನ್ನುವುದನ್ನು ಓದುಗರಿಗೇ ಬಿಟ್ಟುಕೊಟ್ಟ ಹಾಗೆ ಕಾಣಿಸುತ್ತದೆ. ಆದರೆ ಮಾಂತ್ರಿಕ ವಾಸ್ತವ ಕಥೆಗಳಂತೆ ಬರೆಯಲು ಸಾಧ್ಯವಿದ್ದ ಮಾತನಾಡುವ ಗೋಡೆಯ ಮನೆಯ ಚಪ್ಪಹರಕ ಗಂಡಸರು, ಎರಡು ಕಥೆಗಳಲ್ಲಿ ಬೇರೆಬೇರೆ ಸಾಧ್ಯತೆಗಳನ್ನು ತರುವ ಜಕಣಿಗಳು, ಹೆಂಗಸರ ಸೀರೆ ಒಳ ಉಡುಪುಗಳನ್ನು ಕದ್ದು ಧರಿಸುವ ಶಾಮಣ್ಣ, ನಿಗೂಢ ರಹಸ್ಯದಂತೆ ಕಾಣಿಸುವ ಗಡ್ಡಧಾರಿ ಸ್ವಾಮಿಗಳ ಕಥೆಗಳನ್ನು ಅವರಿಲ್ಲಿ ಮೌಖಿಕ ಕಥೆಗಳಂತೆ ಹೇಳುತ್ತಾರೆ.
ಸೀತಾಳದಂಡೆಯೆಂದರೆ ನಮ್ಮ ಕಡೆ ಕಾಡಿನಲ್ಲಿ ಮರಗಳ ಮೇಲೆ ಬೆಳೆವFoxtail Orchid ಎಂದು ಗುರುತಿಸುವ ಪರಾವಲಂಬಿ ಸಸ್ಯದ ಗುಂಪಿಗೆ ಸೇರಿದ್ದು, ಅವುಗಳಲ್ಲಿ ಮಳೆಗಾಲದ ಮೊದಲದಿನಗಳಲ್ಲಿ ದೀರ್ಘಕಾಲ ಅರಳಿಕೊಂಡೇ ಇರುವ ಅಪರೂಪದ ಸೊಬಗಿನ ಹೂವಿನ ದಂಡೆಯಂತೂ
ಕಾಣಿಸುತ್ತವೆ. ತಮಗೆ ಆಶ್ರಯ ಕೊಟ್ಟ ಮರದ ಕಾಂಡಗಳನ್ನು ಅಪ್ಪಿಕೊಂಡೇ ಅವುಗಳ ಸತ್ವವನ್ನು ಹೀರಿಬಿಡುವ ತಾಕತ್ತುಳ್ಳ ಬಂದಳಿಕೆ ಈ ಸೀತಾಳದಂಡೆ, 'ಸೀತಾಳೆದಂಡೆಯ ಸದ್ದಿಲ್ಲದ ಕಥೆಗಳು' ಎಂಬ ಹೆಸರಿನ ಈ ಸಂಕಲನದಲ್ಲಿ ಅದೇ ಹೆಸರಿನ ಒಂದೂ ಕಥೆಯಿಲ್ಲ. ಆದರೆ ಯಾವ ಹೆಣ್ಣಿನ ಮುಡಿಗೂ ಏರದ ಹೂವದು. ಇದಕ್ಕೂ ಇಲ್ಲಿನ ಕಥೆಗಳಲ್ಲಿ ಬರುವ ಪಾತ್ರಗಳಿಗೂ ಸಾಮ್ಯವಿರುವುದರಿಂದ ಕಥಾಸಂಕಲನಕ್ಕೆ ಈ ಹೆಸರಿರಿಸಿರುವುದಾಗಿ ಲೇಖಕಿ ಹೇಳಿಕೊಂಡಿದ್ದಾರೆ. ಅರಸಿ ನೋಡಿದರೆ, ಸಣ್ಣಸದ್ದಿಗೂ ಬೆಚ್ಚುತ್ತಿದ್ದ 'ಮೀನಾಕ್ಷಿ' ಎಂಬ ಕಥೆಯಲ್ಲಿ ಮಾತ್ರ ಸೀತಾಳದಂಡೆಯ ಪ್ರಸ್ತಾಪ ಕಾಣಸಿಗುತ್ತದೆ. ವಯಸ್ಸು ಮೂವತ್ತು ಮೀರಿದರೂ ಮದುವೆಯಾಗದೆ, ಕಾಣಲು ಬರುವ ಗಂಡುಗಳಿಗೆ ಉಪ್ಪಿಟ್ಟು ಕೇಸರಿಬಾತು ಮಾಡಿಕೊಡುವುದರಲ್ಲೇ ತಾರುಣ್ಯದ ಗಡಿದಾಟುತ್ತಿದ್ದ ಮೀನಾಕ್ಷಿಗೆ ಮಳೆಗಾಲದಲ್ಲಿ ಕಾಡಿನಿಂದ ಗೊಂಚಲುಗಟ್ಟಲೆ ಸೀತಾಳದಂಡೆ ತಂದುಕೊಡುತ್ತಿದ್ದ
ಮನೆಯ ಆಳು ಶಂಕ್ಯಾ ಜೀವನೋತ್ಸಾಹ ತುಂಬತೊಡಗಿದ ಬೆನ್ನಿನಲ್ಲೇ ಆಕೆಯ ತಂದೆಯ ಮಾಟಕ್ಕೆ ಬಲಿಯಾಗಿ ಬಿಡುವ ಕಥೆಯದು. ಇದೇ ಕುತೂಹಲದಿಂದ ನೋಡಿದರೆ, ಇಲ್ಲಿನ ಕಥೆಗಳಂತಹ ಕಥೆಗಳಲ್ಲಿರುವ ಮೈಮೇಲೆ ಚೌಡಿ ಬರುವ ದುಗ್ಧತೆ, ಗೋಡೆಯೊಂದಿಗೆ ಮಾತನಾಡುವ ಅಮ್ಮಮ್ಮ, ಬೀಡಿ ಸುಬ್ಬಮ್ಮ, Resultat ಗಂಡನಿಗೆ ಹೊಡೆಯುವ ಬಾಗತ್ತೆ, ದಿಗ್ಭ್ರಮೆ ವೆಂಕಟರಮಣನ ಹೆಂಡತಿ ಸಾವಿತ್ರಿ, ಅಸುಖ ದಾಂಪತ್ಯದ ಸರಸೋತಕ್ಕ, ಬ್ಯೂಟೀಶಿಯನ್ ಲಲಿತಕ್ಕ, ಸೂರಳ್ಳಿ ಅಣ್ಣನ ಅಮ್ಮ ಮಾಂಕಾಳಮ್ಮ ಮತ್ತವನ ಹೆಂಡತಿ ಸುಶೀಲಕ್ಕ, ಓಡಿಹೋದವನು ಕಥೆಯ ಶರಾವತಕ್ಕ, ಜಲದೇವತೆ ಕಲಾವತಕ್ಕ, ಘಟಶ್ರಾದ್ಧದ ಅಮ್ಮಮ್ಮ, ಕೊನೆಯ ಕಥೆಯ ಪಾರ್ವತಿ ಮತ್ತು ಗಣಪಿ ಇವರೆಲ್ಲರ ಬದುಕೂ ಸದ್ದಿಲ್ಲದೇ ಅರಳಿಹೋಗುವ ಸೀತಾಳದಂಡೆಯ ಕಥೆಗಳೇ. ಕೆಲವರು ಸಿದ್ದಾಪುರದ ಹಳ್ಳಿಗಾಡಿನ ಸೀತಾಳದಂಡೆಯ ಹೂವೇ ಆದರೆ ಮತ್ತೆ ಹಲವರು
ಆ ಪರಪುಷ್ಟಜೀವಿಗೆ ತಮ್ಮ ಜೀವಸತ್ವವನ್ನೇ ಕೊಟ್ಟುಬಿಟ್ಟ ಮರಗಳಾದರು. ಹಲವು ಅರ್ಥಗಳಲ್ಲಿ ಹಳ್ಳಿಗಾಡಿನ ಹವ್ಯಕಬದುಕಿನ ಆಲ್ಬಮಿನಂತೆ ಕಾಣಿಸುವ ಇಲ್ಲಿನ ಕಥೆಗಳಲ್ಲಿ ಮುಗ್ಧ ಬದುಕಿನ ಪ್ರೀತಿ, ವಿಶ್ವಾಸಗಳಷ್ಟೇ ಸಮರ್ಥವಾಗಿ ದುಗುಡ ಮತ್ತು ಕೆಡುಕನ್ನೂ ಚಿತ್ರಿಸುವ ಲೇಖಕಿಯ ಭಾಷೆ ಮತ್ತು ಅನುಭವದ ದಟ್ಟತೆ ವಿಸ್ಮಯ ಹುಟ್ಟಿಸುವಷ್ಟು ಪರಿಣಾಮಕಾರಿಯಾಗಿದೆ.
ಭಾರತಿಯವರ ಕಥೆಗಳು ಎಲ್ಲಿಯೂ ಏರುದನಿಗೆ ಹೋಗದೇ, ಹೆಣ್ಣುಬದುಕಿನ ಸಮಸ್ಯೆಗಳ ಗೋಜಲನ್ನು ಬಿಡಿಸಲು ಯತ್ನಿಸುತ್ತಾ ಬಿಡಿಚಿತ್ರಗಳ ಮೂಲಕ ಮನುಷಸಂಬಂಧವನ್ನು ಶೋಧಿ ಸಲೆತ್ನಿಸುತ್ತವೆ. ಅವರ ಕಥೆಗಾರಿಕೆಯು ಕೌಟುಂಬಿಕ ಸಮಸ್ಯೆಗಳ ಸಂಕೀರ್ಣತೆಯತ್ತ ಹೆಚ್ಚಿನ ಒಲವು ತೋರಿದ್ದರೂ, ಅಲ್ಲಲ್ಲಿ ಹವ್ಯಕ ಬದುಕಿನ ಸಾಮಾಜಿಕ ಸಮಸ್ಯೆಗಳತ್ತಲೂ ಗಮನ ಸೆಳೆಯುತ್ತದೆ. ಈ ನಡುವೆ ಹವ್ಯಕ ಸಮಾಜವು ಎಮ್ಮೆ ವ್ಯಾಪಾರದಲ್ಲಿ ಎಮ್ಮೆಯನ್ನು ಆಯ್ಕೆ ಮಾಡುವ ಹಾಗೆ ಹೆಣ್ಣುಮಕ್ಕಳನ್ನು ನೋಡುತ್ತಿದ್ದ ಕಾಲದಿಂದ ಹೆಣ್ಣುಮಕ್ಕಳ ಕೊರತೆಯಿಂದಾಗಿ ಗಂಡುಮಕ್ಕಳು ಮದುವೆಯಾಗದೆ ಉಳಿದುಬಿಡುವ ಕಾಲಕ್ಕೆ ಬದಲಾಗಿ ಹೋಗಿದೆ. ಲೇಖಕಿಯಾದರೋ ಈ ಕಥೆಗಳಂತಹ ಕಥೆಗಳಲ್ಲಿ ತಮ್ಮ ಹಿಂದಿನ ತಲೆಮಾರಿನ ನೋವು ಮತ್ತು ಸಂಕಟಗಳನ್ನು ಓದುಗರಿಗೆ ಸಶಕ್ತವಾಗಿಯೇ ದಾಟಿಸಿಬಿಟ್ಟಿದ್ದಾರೆ.
- ಬೆಳಗೋಡು ರಮೇಶ್ ಭಟ್
ಕೃಪೆ : ಹೊಸ ದಿಗಂತ, (2020 ಮಾರ್ಚಿ 01)
.........................................................................................................
‘ಕೆಂಡಸಂಪಿಗೆ' ಬ್ಲಾಗ್‌ನಲ್ಲಿ ಲೇಖಕಿ ಸಿದ್ದಾಪುರ ಸೀಮೆಯ ಕಥೆಗಳು' ಎಂದು ಬರೆಯುತ್ತಿದ್ದ ಅಂಕಣ ಬರಹಗಳಲ್ಲಿ ಆಯ್ದ ಕೆಲವು ಈಗ ‘ಸೀತಾಳದಂಡೆಯ ಸದ್ದಿಲ್ಲದ ಕಥೆಗಳು' ಎಂಬ ಹೆಸರಿನ ಕಥಾಸಂಕಲನದ ರೂಪದಲ್ಲಿ ಬಂದಿವೆ. ಈ ಮೊದಲ ಸಂಕಲನದಲ್ಲಿ ಹದಿನೇಳು ಕಥೆಗಳ ಓದು ಗುಚ್ಛವಿದೆ. ಬ್ಲಾಗ್ ಓದುಗರು ಇದರಲ್ಲಿ ಬಹುತೇಕವನ್ನು ಓದಿರಲೂಬಹುದು. ಆದರೂ ಮತ್ತೆ ಮತ್ತೆ ಓದಿಸಿಕೊಳ್ಳುವಂತಹ ಗುಣಗ್ರಾಹಿ ಅಂಶ ಮತ್ತು ಗಟ್ಟಿತನವನ್ನು ಈ ಕಥನಗಳು ಸಿದ್ಧಿಸಿಕೊಂಡಿವೆ. ಕಥಾವಸ್ತುವಾಗಿರುವ ವಿಚಾರಗಳನ್ನು ಎಲ್ಲೋ ಕೇಳಿದ್ದೀವಲ್ಲ, ಪಾತ್ರಗಳನ್ನು ಕಣ್ಣಾರೆ ನೋಡಿದ್ದೀವಲ್ಲ. ಅನಿಸುವಷ್ಟರಮಟ್ಟಿಗೆ ಲೇಖಕಿ ವಾಸ್ತವ ಬದುಕಿನಲ್ಲಿ ಕಂಡದ್ದು, ಉಂಡದ್ದನ್ನೇ ಅಕ್ಷರರೂಪಕ್ಕೆ ಇಳಿಸಿದ್ದಾರೆ.
ಈ ಸಂಕಲನದ 'ಕೊಂಕಣಿ ಚೌಡಿ ಮತ್ತು ದುಗ್ಗಿ', 'ಗೋಡೆಯೊಂದಿಗೆ ಮಾತನಾಡುವ ಅವಳು' ಕಥೆಗಳಲ್ಲಿನ ಪಾತ್ರಗಳು ವಿಲಕ್ಷಣವಾಗಿ ಕಂಡರೂ, ಬದುಕಿನ ವಾಸ್ತವವನ್ನು ಬಿಚ್ಚಿಡುತ್ತವೆ. ರೋಗಪೀಡಿತ ಸಮಾಜದ ಮುಖಗಳನ್ನು ತೆರೆದಿಡಲು ಕಥೆಗಾರ್ತಿ ಇಂತಹ ಪಾತ್ರ ಸೃಷ್ಟಿಸಿದ್ದಾರೆಯೇ ಎನ್ನುವ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಲೇ, ಉತ್ತರ ಕನ್ನಡದ ಭಾಷೆ ಮತ್ತು ಬದುಕನ್ನು ಆಪ್ತವಾಗಿ ಚಿತ್ರಿಸಿದ್ದಾರೆ. 'ಹಾವು ಗಣಪನ ಜಯಮಾಲಿನಿ ಹುಚ್ಚು' ಕಥೆಯಂತೂ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ. ಹಾಗೆ ನೋಡಿದರೆ ಹೆಣ್ಣು ಬದುಕಿನ ವಿಲಕ್ಷಣ ವ್ಯಥೆಗಳೇ ಬಹುತೇಕ ಎಲ್ಲ ಕಥೆಗಳಲ್ಲೂ ಜೀವ ತಳೆದಿವೆ. ಕಳೆದುಹೋದ ಮಗ, ಹುಚ್ಚು ಹಿಡಿದ ಗಂಡ, ಚೌಡಿ ಬರುವ ಅತ್ತೆ- ಹೀಗೆ ಇಲ್ಲಿ ಬರುವ ಪಾತ್ರಗಳು ಹಲವು ಪ್ರಶ್ನೆಗಳನ್ನು ಎತ್ತುತ್ತವೆಯಾದರೂ, 'ಅದೆಲ್ಲ ನಿಂಗೆ ಗೊತ್ತಾಗಿಲ್ಲ. ಸುಮ್ಮಂಗಿರು..' ಎನ್ನುವ ವಸುಮತಿಯ ಮಾತನ್ನು ಜ್ಞಾಪಿಸಿಕೊಂಡು ಓದುಗನೂ ಕಥೆಯ ಓಘದಲ್ಲಿ ತೇಲಿಹೋಗುತ್ತಾನೆ.
ಕೃಪೆ : ಪ್ರಜಾವಾಣಿ (2020 ಮಾರ್ಚಿ 08)
........................................................................................................
©2024 Book Brahma Private Limited.