‘ಒಂದಾನೊಂದು ಮಲೆನಾಡಲ್ಲಿ’ ಕೃತಿಯು ಮಾಕೋನಹಳ್ಳಿ ವಿನಯ್ ಮಾಧವ್ ಅವರ ಕಥಾಸಂಕಲನವಾಗಿದೆ. ಈ ಕೃತಿಯು ಮಲೆನಾಡಿನ ಕುರಿತ ವಿಚಾರವನ್ನು ಎಳೆಎಳೆಯಾಗಿ ಕಣ್ಣಮುಂದಿಡುತ್ತದೆ. ಈ ಸಂಕಲನದ ಬಹುತೇಕ ಕತೆಗಳು ಚಿಕ್ಕಮಗಳೂರು ಜಿಲ್ಲೆಯ ಆಸುಪಾಸಿನ ಊರು, ತಾಲೂಕು, ಹಳ್ಳಿ, ಹೋಬಳಿಗಳಲ್ಲೇ ನಡೆಯುವಂಥವು. ಆ ಪ್ರದೇಶದ ಪಾತ್ರಗಳೇ ಈ ಕತೆಗಳಲ್ಲಿ ಬರುತ್ತವೆ. ಬಡತನ, ದರ್ಪ, ಉಡಾಫೆ ಮತ್ತು ಅಸಡ್ಡಾಳ ಎಡಬಿಡಂಗಿತನದ ಜತೆಗೇ ಆಪಾರ ಜೀವನಪ್ರೀತಿ ಇರುವ ಪಾತ್ರಗಳನ್ನು ವಿನಯ್ ಮಾಧವ್ ಕತೆಗಳ ಮೂಲಕ ನಮ್ಮ ಮುಂದಿಟ್ಟಿದ್ದಾರೆ. ಇಲ್ಲಿನ ಹಲವು ಪಾತ್ರಗಳು ಸ್ವಾತಂತ್ರ್ಯ ಪೂರ್ವದ ಕಾಲಕ್ಕೆ ಸೇರಿದಂಥವು. ಇನ್ನು ಇಲ್ಲಿ ಲೇಖಕ ಮಲೆನಾಡಿನ ಕತೆ ಹೇಳುತ್ತಾ ಪರಿಸರಕ್ಕಿಂತ ವ್ಯಕ್ತಿಗಳಿಗೆ, ವ್ಯಕ್ತಿಗಳಷ್ಟೇ ಘಟನೆಗೆ ಪ್ರಾಧಾನ್ಯ ಕೊಟ್ಟಿದ್ದಾರೆ. ಹೀಗಾಗಿ ಮಲೆನಾಡಿನಿಂದ ಕತ್ತರಿಸಿ ನೋಡಿದಾಗಲೂ ಅವರು ಹೇಳುವ ಘಟನೆಗಳು ಮಜಾ ಕೊಡುತ್ತವೆ. ಸುಳ್ಳು ಹೇಳದ ಗಾಂಧೀಗೌಡ, ದೋಸೆ ಹೋಟೆಲಿನ ನಾರಾಯಣ, ಕುಲ್ವಾಡಿ, ಒಂದು ಕೋವಿಗಾಗಿ ಹಪಹಪಿಸಿದ ಬೋಬ, ಸ್ತ್ರೀಪ್ರಿಯ ಸಣ್ಣೇಗೌಡರು - ಹೀಗೆ ಇಲ್ಲಿ ಬರುವ ಪಾತ್ರಗಳೆಲ್ಲ ತಮ್ಮ ಕಾಲಮೇಲೆ ತಾವು ನಿಲ್ಲುವಷ್ಟು ಗಟ್ಟಿಯಾದ ಪಾತ್ರಗಳೇ. ಪ್ರತಿಯೊಬ್ಬರಿಗೂ ಅವರದ್ದೇ ಆದ ಕತೆಗಳೂ ವ್ಯಥೆಗಳೂ ಸಂಕಟಗಳೂ ಸಂಭ್ರಮಗಳೂ ಇವೆ. ಅವು ಸ್ವತಂತ್ರವಾಗಿ ವರ್ತಿಸುತ್ತವೆ.
ಮಾಕೋನಹಳ್ಳಿ ವಿನಯ್ ಮಾಧವ್ ಅವರು ಹುಟ್ಟಿದ್ದು ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿಯವರು. 1996ರಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಇಂಗ್ಲಿಷ್ ಪತ್ರಕರ್ತನಾಗಿ ಕೆಲಸ ಆರಂಭಿಸಿದರು. 25 ವರ್ಷಗಳಿಂದ ಹುಟ್ಟೂರಿಗೆ ಹೋಗಿ ಕಾಫೀ ಪ್ಲಾಂಟರ್ ಆಗಿ ಕಾರ್ಯನಿರ್ವಹಿಸುವ ಕನಸು ಕಾಣುತ್ತಿದ್ದಾರೆ. ...
READ MORE