ನಿದ್ರೆಯಲ್ಲಿ ನಡೆಯುವವನ ಪಾತ್ರಗಳು ರಾತ್ರಿ ನಿದ್ರೆಗೆಟ್ಟು ಹಗಲಿಡೀ ಮಂಪರಿನಲ್ಲಿರುವವರು ಅತ್ಯುತ್ತಮ ಕತೆಗಳನ್ನು ಸೃಷ್ಟಿಸಿ ಹೇಳುತ್ತಾರೆ. ಇದಕ್ಕೆ ಯಕ್ಷಗಾನ ಕಲಾವಿದರೇ ಸಾಕ್ಷಿ. ಇಲ್ಲಿರುವ ಕತೆಯೊಂದರಲ್ಲಿ, ರಾತ್ರಿಗಳಲ್ಲಿ ನಿದ್ರೆಯಿಲ್ಲದ ಕಾಯಿಲೆಯಿಂದ ಬಳಲುವ ವ್ಯಕ್ತಿಯೊಬ್ಬ ಆ ಶೂನ್ಯವನ್ನು ತುಂಬಿಕೊಳ್ಳಲು ನಿಜಜೀವನದಲ್ಲಿಯೇ ಅನೇಕ ಪಾತ್ರಗಳನ್ನು ನಟಿಸುತ್ತಾನೆ. ಈ ಕತೆಗಾರನೂ ಓದುಗನನ್ನು ನಂಬಿಸಲು ಹೀಗೆಯೇ ಅನೇಕ ಪಾತ್ರಗಳಲ್ಲಿ ಜೀವ ತುಂಬಿಕೊಂಡು ಮರಳಿ ಮರಳಿ ಬರುತ್ತಾನೆ. ಮನಸ್ಸಿನಂತೆಯೇ ದೇಹಕ್ಕೂ ಒಂದು ಮಾತಿದೆ ಎಂದು ಖಾತ್ರಿಪಡಿಸಿಕೊಂಡಿರುವ ಕತೆಗಾರನ ಹರೆಯದ ಹುಮ್ಮಸ್ಸು, ಪ್ರೇಮ ಮತ್ತು ವಿಹ್ವಲತೆಗಳು ಎಲ್ಲ ಕತೆಗಳಲ್ಲಿ ಆವರಿಸಿಕೊಂಡಿದೆ.
ನಿದ್ರೆಯಲ್ಲಿ ನಡೆಯುವವನಂತೆ ಕತೆಗಾರ ಇಲ್ಲಿನ ಕತೆಗಳಲ್ಲಿ ಒಂದರಿಂದ ಇನ್ನೊಂದಕ್ಕೆ ನಡೆಯುತ್ತ ಹೋಗಿದ್ದಾನೆ. ಕತೆಗಾರ ಥಟ್ಟನೆ ನಿದ್ರೆಯಿಂದ ಎಚ್ಚೆತ್ತಾಗ ಆ ಕನಸುಗಳು ಓದುಗನೊಳಗೆ ಪವಾಡಸದೃಶವಾಗಿ ಸೇರಿಕೊಂಡಿರುತ್ತವೆ. ಅಸ್ವಸ್ಥತೆಯೂ ಬದುಕಿನ ಅನಿವಾರ್ಯ ಅಂಗ ಎಂದು ಅರ್ಥ ಮಾಡಿಕೊಂಡವನಂತೆ ಪ್ರಮೋದ ಈ ಕತೆಗಳನ್ನು ಬರೆಯುತ್ತಾನೆ. ಈ ಕತೆಗಳ ರೋಲರ್ ಕೋಸ್ಟರ್ ರೈಡ್ನಲ್ಲಿ ʼನೀನು ನನಗೆ ಬೇಕುʼ ಎಂದು ಹೇಳಬೇಕಾದ ಕ್ಷಣದಲ್ಲಿ ʼದೂರವಾಗೋಣʼ ಎಂದು ಹೇಳುವವನಿದ್ದಾನೆ; ಒಂದು ರಾತ್ರಿಯ ಪ್ರಣಯಾನುಬಂಧಕ್ಕೂ ಕಸಿವಿಸಿಯ ಆವರಣ ಕಟ್ಟುವ ಬಾಲ್ಯವಿದೆ; ʼದೇಹದ ಗಾಯಗಳಿಗಿಂತಲೂ ಮನಸ್ಸಿಗೆ ಮಾಡುವ ಗಾಯ ಅಳಿಸಿಹೋಗುವುದಿಲ್ಲʼ ಎನ್ನುವವಳು ಕತೆಗಾರನ ವಂಚನೆಯ ಪ್ರತಿಮೆಯಾಗಿ ಆತನ ಕ್ಯಾಮೆರಾದಲ್ಲಿ ಉಳಿದುಕೊಳ್ಳುತ್ತಾಳೆ. ನಿಮ್ಮ ಮೊದಲ ಪ್ರೇಮದ ಹುಡುಗಿಯ ಇನ್ಸ್ಟಾಗ್ರಾಂ ಸ್ಟೇಟಸ್ಗೆ ಇನ್ನೇನು ನೀವು ಒತ್ತಲಿರುವ ಒಂದು ಲೈಕಿನ ಮುನ್ನಾಕ್ಷಣದ ನಡುಕದಂತೆ ಈ ಕತೆಗಳಿವೆ.
ಪದಚಿಹ್ನ ಎಂಬ ಕಾವ್ಯನಾಮ ಹೊಂದಿರುವ ಇವರು ಹುಟ್ಟಿದ್ದು ಮಲೆನಾಡಿನ ಸುಂದರ ಊರು ತೀರ್ಥಹಳ್ಳಿಯಲ್ಲಿ ಮತ್ತು ಬೆಳೆದಿದ್ದು ಕರಾವಳಿಯ ಕುಮಟಾದಲ್ಲಿ. ಬೆಂಗಳೂರೆಂಬ ಮಾಯಾನಗರಿಯಲ್ಲಿ ಪ್ರಸ್ತುತ ವಾಸ. ಇಂಜಿನಿಯರಿಂಗ್ ಓದಿ ಪ್ರಸ್ತುತ ಪತ್ರಿಕೋದ್ಯಮದಲ್ಲಿ ವೃತ್ತಿ, ಅದಕ್ಕೆ ಕಾರಣ ಬರವಣಿಗೆಯ ಮೇಲಿರುವ ಪ್ರೀತಿ. ಕಲೆ, ಸಾಹಿತ್ಯ, ರಂಗಭೂಮಿ, ಮಾತುಗಾರಿಕೆ, ಹಾಸ್ಯ, ಎಲ್ಲದರಲ್ಲೂ ಅಪಾರ ಆಸಕ್ತಿ. ಸಮಾಜಮುಖಿ ಕೆಲಸಗಳನ್ನು ಮಾಡಲು ಪರಹಿತಮ್ ಫೌಂಡೇಶನ್ ಎಂಬ ಎನ್ ಜಿ ಓ ಸ್ಥಾಪನೆ. ಒಳ್ಳೆಯ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು, ಬೈಕ್ ರೈಡಿಂಗ್, ಅಲೆಮಾರಿಯ ಬದುಕು ಇಷ್ಟ. ಕೃತಿ: ಮೈಸೂರ್ ಪಾಕ್ ಹುಡುಗ ...
READ MORE