ಹೆಚ್. ಆರ್.ಸುಜಾತಾ ಅವರ ಕತಾ ಸಂಕಲನ ಮಣಿಬಾಲೆ. ಕೃತಿಯ ಮುನ್ನುಡಿಯಲ್ಲಿ ಲೇಖಕ ಪುರುಷೋತ್ತಮ ಬಿಳಿಮಲೆ ಹೇಳಿರುವಂತೆ, ಪ್ರಸ್ತುತ ಕೃತಿ ' ಮಣಿಬಾಲೆ ' ಯೂ ಸುಜಾತಾರವರ ಮೊದಲೆರಡು ಕೃತಿಗಳ ಸತ್ವಯುತ ಮುಂದುವರಿಕೆಯಾಗಿದೆ. ಊರನ್ನು ನೋಡುವ ಮತ್ತು ವಿವರಿಸುವ ಅವರ ಮೊದಲಿನ ಧೋರಣೆಯಲ್ಲಿ ಸ್ವಲ್ಪವೂ ಬದಲಾವಣೆಯಾಗಿಲ್ಲ. ಕತೆಯನ್ನು ಹೇಳಲು ತನ್ನದೇ ಪ್ರತಿರೂಪದಂತಿರುವ ಮಣಿ ಎಂಬ ಒಂಬತ್ತು ವರ್ಷದ ಬಾಲೆಯ ಪಾತ್ರವೊದನ್ನು ಇಲ್ಲಿ ಸ್ರುಷ್ಟಿಸಿಕೊಂಡಿದ್ದಾರೆ. ಮಣಿಬಾಲೆಯು ಹಾಸನದ ಸೇಂಟ್ ಫಿಲೋಮಿನಾ ಶಾಲೆಯ ಶಿಸ್ತುಬದ್ಧ ವಾತಾವರಣದಲ್ಲಿ ಓದುತ್ತಿರುವ ಬಾಲಕಿ. ಪರೀಕ್ಷೆ ಮುಗಿಸಿ ತನ್ನೂರಿಗೆ ಬಂದಾಗ ಆಕೆಯು ತನ್ನ ವಯೋಸಹಜವಾದ ಕುತೂಹಲದಿಂದ ಊರಿನ ಅನೇಕ ಘಟನೆಗಳನ್ನು ಮುಗ್ಧವಾಗಿ ನೋಡುತ್ತಾಳೆ. ಕೆಲವು ಬಾರಿ ಅವುಗಳಲ್ಲಿ ಭಾಗವಹಿಸುತ್ತಾಳೆ. ಅವಳ ನೋಟದ ಕೇಂದ್ರವು ಹೊಸಹಳ್ಳಿಯಾದರೂ, ಆ ಕಡೆಯ ಮಂಡ್ಯ ಮತ್ತು ಈ ಕಡೆಯ ಬಿಸಿಲೆ ಹಾಗೂ ಘಟ್ಟದ ಕೆಳಗಣ ಜನಗಳನ್ನೂ ಅವಳು ಗಮನಿಸುತ್ತಾಳೆ. ಅವಳ ನೋಟಕ್ಕೆ ಕೊನೆಯೆಂಬುದಿಲ್ಲ. ತನ್ನ ಊರನ್ನೋ ಪಕ್ಕದ ಊರನ್ನೋ ನೋಡಿ ಆಕೆಗೆ ದಣಿವಾಗುವುದೂ ಇಲ್ಲ. ಅವಕಾಶ ಸಿಕ್ಕಾಗ ತಾನು ಓದುತ್ತಿರುವ ಹಾಸನವೆಂಬ ನಗರದೊಡನೆ ಅನುಭವಗಳನ್ನು ಹೋಲಿಸಿಕೊಳ್ಳುತ್ತಾ ಅವಳು ಮುಂದುವರೆಯುತ್ತಾಳೆ. ಅವಳ ಅನುಭವಗಳೆಂದರೆ ಪೋಣಿಸಿದಷ್ಟೂ ಮುಗಿಯದ ಸರಮಾಲೆ. ಆದ್ದರಿಂದಲೇ ಕೃತಿಗೆ 'ಮಣಿಬಾಲೆ' ಯೆಂಬ ಸಾರ್ಥಕ ಹೆಸರು ಎಂದಿದ್ದಾರೆ.
ಸಾಹಿತ್ಯ ಲೋಕದ ಪ್ರವೇಶದ ಸಂದರ್ಭದಲ್ಲೇ ಗಮನಸೆಳೆದವರು ಹೆಚ್.ಆರ್.ಸುಜಾತ. ಲೇಖಕಿ, ಅಂಕಣಗಾರ್ತಿ, ಕವಯತ್ರಿ, ಕಥೆಗಾರ್ತಿಯಾಗಿ ಅವರದ್ದು ಹೊಚ್ಚ ಹೊಸ ಹೆಜ್ಜೆ ಗುರುತು. ಹಾಸನ ಜಿಲ್ಲೆ ಆಲೂರು ತಾಲೂಕಿನ ಮರಸುಹೊಸಹಳ್ಳಿ ಸುಜಾತರ ಹುಟ್ಟೂರು. ಓದಿದ್ದು ಬಿಎಸ್ಸಿ, ಆದರೆ ಆಸಕ್ತಿ ಮಾತ್ರ ಅಪ್ಪಟ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ. ಮಕ್ಕಳ ರಂಗಭೂಮಿ, ಪತ್ರಿಕೋದ್ಯಮ ಅನುಭವ, ಮಲೆನಾಡ ಬದುಕಿನ ಗಾಢ ಅನುಭವಗಳೇ ಬರಹಕ್ಕೆ ಸ್ಪೂರ್ತಿ. ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಅಂಕಣಬರಹಗಳ ಆಯ್ದ ಸಂಗ್ರಹ, ‘ನೀಲಿ ಮೂಗಿನ ನತ್ತು’ ಸುಜಾತ ಅವರ ಚೊಚ್ಚಲ ಕೃತಿ. ಮೊದಲ ಕೃತಿಗೆ ಅಮ್ಮ ಪ್ರಶಸ್ತಿ ಪುರಸ್ಕೃತರು. ಮಂಗಳೂರು ವಿವಿ ಪಠ್ಯಪುಸ್ತಕದಲ್ಲೂ ಸೇರ್ಪಡೆ. ...
READ MORE