ಲೇಖಕಿ ಶೈಲಜಾ ಪ್ರಸಾದ್ ಅವರ ಕಥಾ ಸಂಕಲನ-ಮಳೆ ನಿಂತ ಮೇಲೆ. ವಸ್ತು ವೈವಿಧ್ಯತೆಯ ದೃಷ್ಟಿಯಿಂದ ಇಲ್ಲಿಯ ಕಥೆಗಳು ವಿಭಿನ್ನವಾಗಿವೆ. ನಿರೂಪಣೆ, ಶೈಲಿ, ತಂತ್ರಗಳು ಆಕರ್ಷಕವಾಗಿ ಗಮನ ಸೆಳೆಯುತ್ತವೆ. ‘ಮಳೆ ನಿಂತ ಮೇಲೆ’ ಮತ್ತು ‘ಕಾರ್ಮೋಡಕ್ಕೆ ಬೆಳ್ಳಿ ಅಂಚು’- ಈ ಕಥೆಗಳು ಆಧುನಿಕ ಸಮಾಜದ ತರುಣ-ತರುಣಿಯರ ಜೀವನ ಶೈಲಿ, ಮನೋಭಾವಗಳ ಚಿತ್ರಣವನ್ನು ಒಳಗೊಂಡಿದೆ. ಬಲಿಪಶು, ಹೊಸಹೆಜ್ಜೆ, ಹೊಂಬೆಳಕು ಮೂಡಿತು- ಈ ಕಥೆಗಳು ಹೆಣ್ಣಿನ ಮನಸ್ಥಿತಿಯ ವಿವಿಧ ಆಯಾಮಗಳನ್ನು ಅನಾವರಣಗೊಳಿಸುತ್ತವೆ. ಕಾಲಾಯಾ ತಸ್ಮೈ ನಮಃ ಎಂಬ ಕಥೆಯಲ್ಲಿ , ತಮಗೆ ಬರುವ ಎಲ್ಲ ಕಷ್ಟಗಳನ್ನು ಕಥಾನಾಯಕಿಯು ಹೇಗೆ ನಿವಾರಿಸಿಕೊಳ್ಳುತ್ತಾಳೆ ಎಂಬ ವಿಭಿನ್ನ ಆಲೋಚನೆಯ ಮಾದರಿಯನ್ನು ಲೇಖಕರು ತೋರಿದ್ದಾರೆ. ‘ಮನೆಗೆ ಮಲ್ಲಿಗೆಯಾಗು’ ಈ ಕಥೆಯು ಮಾದಕ ವಸ್ತುಗಳಿಗೆ ಬಲಿಯಾಗುವ ತರುಣ-ತರುಣಿಯರ ಜೀವನವನ್ನು ತುಂಬಾ ಪರಿಣಾಮಕಾರಿಯಾಗಿ ಚಿತ್ರಿಸುವ ಕಥೆಯಾಗಿದೆ.
ಕೃತಿಗೆ ಮುನ್ನುಡಿ ಬರೆದ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ‘ಅಲ್ಪ ಪ್ರಭಾವದ ಅನೇಕ ಕಥೆಗಳನ್ನು ರಚಿಸುವುದಕ್ಕಿಂತ ಅತೀತ ಪ್ರಭಾವ ಬೀರುವ ಚಮತ್ಕಾರವುಳ್ಳ ವಸ್ತುಗಳನ್ನು ಆಯ್ಕೆ ಮಾಡಿ, ಶೈಲಿಯಲ್ಲಿ ಮಾನವನ ಮನಸ್ಸಿನ ತುಮುಲಗಳನ್ನು ಸೃಷ್ಟಿಸಿದರೆ ಅದರಿಂದ ಅತ್ಯುತ್ತಮ ಕಥೆಗಳು ಬರುವುದರಲ್ಲಿ ಸಂದೇಹವಿಲ್ಲ. ಇಂತಹ ಕಥೆಗಳ ಸೃಷ್ಟಿಯ ಸಾಮರ್ಥ್ಯ ಈ ಲೇಖಕಿಯಲ್ಲಿದೆ’ ಎಂದು ಪ್ರಶಂಸಿಸಿದ್ದಾರೆ.
ಶೈಲಜಾ ಪ್ರಸಾದ್ ಅವರು ಮೂಲತಃ ಮೈಸೂರಿನ ಕಿಕ್ಕೇರಿಯವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವೀಧರರು. ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆಯ ಸದಸ್ಯರು. ಮಳೆ ನಿಂತ ಮೇಲೆ-ಕಥಾ ಸಂಕಲನ. ಬಾನಂಗಳದಲ್ಲಿ-ಪ್ರಬಂಧ ಸಂಕಲನ. ಅಗೋಚರ-ಇವರ ಕಾದಂಬರಿ. ಬೆಂಗಳೂರು ಆಕಾಶವಾಣಿಯಲ್ಲಿ ‘ಕರುಣಾಳು ಬಾ ಬೆಳಕೆ’ ಕಥೆ ವಾಚನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಲೇಖಿಕಾ ಸಾಹಿತ್ಯ ವೇದಿಕೆಯಿಂದ ಸನ್ಮಾನ, ಅಕ್ಕನ ಮನೆ ಪ್ರತಿಷ್ಠಾನದಿಂದ ರಾಜ್ಯ ಮಟ್ಟದ ದೇಸಿ ದಿಬ್ಬಣ ಪ್ರಶಸ್ತಿ-2020ರಲ್ಲಿ ಇವರ ಪ್ರಬಂಧಕ್ಕೆ ಬಹುಮಾನ, ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ತಿನಿಂದ ಸೇವಾ ರತ್ನ ಪ್ರಶಸ್ತಿ ಲಭಿಸಿದೆ. ...
READ MORE