ʼಕೂದಲಸ್ವಾಮಿ ಮತ್ತು ಇತರ ಕಥೆಗಳುʼ ಕಥಾ ಸಂಕಲನವನ್ನು ಲೇಖಕ ಡಿ. ಎಸ್. ವೀರಯ್ಯ ರಚಿಸಿದ್ದಾರೆ. ಈ ಪುಸ್ತಕದ ಬೆನ್ನುಡಿಯಲ್ಲಿ ರಾಜಕೀಯ ಪಕ್ಷವೊಂದರಲ್ಲಿದ್ದರೂ ಪಕ್ಷಭೇದವಿಲ್ಲದೆ ದಲಿತರ ಹಿಂದುಳಿದವರ, ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಶ್ರಮಿಸುತ್ತ ಬಂದಿರುವ ವೀರಯ್ಯನವರು ಸಮಾಜನಿಷ್ಠ ಹೋರಾಟಗಾರರು. ದೇಶದ ಬಹುಜನರಿಗೆ ಆದರ್ಶವಾದ, ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರು ಪ್ರತಿಪಾದಿಸಿದ ಮಾನವತೆ, ಸಮಾನತೆ, ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯಿಟ್ಟವರು. ಹೋರಾಟದ ಬದುಕನ್ನು ಕಟ್ಟಿಕೊಂಡವರು. ಸುತ್ತಲಿನ ಸಮಾಜದ ಸತ್ಯಸಂಗತಿಗಳನ್ನೇ ವಸ್ತುವಾಗುಳ್ಳ ಇಲ್ಲಿನ ಕಥೆಗಳು ಸರಳವಾಗಿ ರೂಪುಗೊಂಡಿವೆ. ನಿರಾಭರಣ ಸೌಂದರ್ಯದ ಹೊಳಪು ಈ ಕಥೆಗಳಿಗಿದೆ. ಶೋಷಣೆಯ ಸರ್ಪಸುತ್ತಿನಿಂದ ಬಿಡುಗಡೆಗೊಳ್ಳಬೇಕೆಂಬ ಶೋಷಿತರ ಸಿಟ್ಟು, ಸಂಕಟ, ಪ್ರತಿಭಟನೆಯಾಗಿ ಬೆಳೆದು, ಪರಿವರ್ತನೆಯ 'ಹಿತದಲ್ಲಿ ವಿರಮಿಸುವ ಈ ವೈಚಾರಿಕ ಒಲವಿನ ಕಥೆಗಳು ಶೋಷಣೆ ರಹಿತ ಸಮಾಜ ವ್ಯವಸ್ಥೆಗೆ ಅವಸರಿಸುತ್ತವೆ. ವೀರಯ್ಯನವರ ಧ್ಯೇಯವು ಅನ್ಯಾಯಗಳ ವಿರುದ್ಧದ ಹೋರಾಟವೇ ಆಗಿರುವುದರಿಂದ ಇವರ ಬದುಕು ಮತ್ತು ಕಥೆಗಳಲ್ಲಿ ಸಾಂಗತ್ಯವನ್ನು ಕಾಣಬಹುದು. ಶೋಷಣೆಗೆ ಕೇವಲ ಶೋಷಕರನ್ನು ದೂರುವ ಏಕಮುಖ ಹೊರತಾಗಿ ಒಂದಿಷ್ಟು ಶೋಷಿತರ ಆಳಕ್ಕೂ ಇಳಿದು ಗುಣಗಳ ಅಂತರ್ನಿರೀಕ್ಷಣೆಗೆ ಹಚ್ಚುವ ಲೇಖಕರ ಪ್ರಯತ್ನವನ್ನು ಸಾಹಿತ್ಯವಲಯ ಗಂಭೀರವಾಗಿ ಸ್ವೀಕರಿಸುವುದೆಂಬ ಭಾವನೆ ನನ್ನದು. ಸರಳ ಸಜ್ಜನಿಕೆಯ ಚಿಂತನಶೀಲ ವ್ಯಕ್ತಿತ್ವದ ಶ್ರೀ ಡಿ.ಎಸ್. ವೀರಯ್ಯನವರ ಪ್ರತಿಭೆ ಪರಿಶ್ರಮ ವೃದ್ಧಿಹೊಂದಿ, ದೀನದಲಿತರ ಬದುಕಿನಲ್ಲಿ ನಿರಂತರ ಜಾಗೃತಿ ಮೂಡಿಸಲಿ ಎಂದು ಶ್ರೀ ವೀರಬಧ್ರ ಚನ್ನಮಲ್ಲ ಸ್ವಾಮೀಜಿ ಬೆನ್ನಡಿಯಲ್ಲಿ ಕೃತಿಯ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲೇಖಕ ಡಿ.ಎಸ್. ವೀರಯ್ಯ ಅವರು ಬೆಂಗಳೂರಿನ ಗಿರಿನಗರದವರು. ಎಂ.ಕಾಂ, ಎಲ್.ಎಲ್.ಬಿ, ಡಿ.ಪಿ.ಎಂ ಹಾಗೂ ಐಆರ್, ಡಿಪ್ಲೊಮಾ ಇನ್ ಜರ್ನಲಿಸಂ ಪದವೀಧರರು. ಪ್ರಸ್ತುತ ಡಿ. ದೇವರಾಜ್ ಟ್ರಕ್ಕ್ ಟರ್ಮಿನಲ್ ಅಧ್ಯಕ್ಷರು. ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ, ರಾಜ್ಯ ಕನ್ನಡ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಕೃತಿಗಳು: ಬಾಬಾ ಸಾಹೇಬ್ ಅಂಬೇಡ್ಕರ್ ಸಂದೇಶಗಳು. ಪ್ರಶಸ್ತಿ-ಪುರಸ್ಕಾರಗಳು: ಸಮಾಜ ರತ್ನ, ಕರ್ನಾಟಕ ರತ್ನ, ಬುದ್ಧ ರತ್ನ, ಬೆಸ್ಟ್ ಸಿಟಿಜನ್ ಆಫ್ ಇಂಡಿಯಾ, ಸರ್. ಎಂ.ವಿಶ್ವೇಶ್ವರಯ್ಯ ಆವಾರ್ಡ್, ಸಂಘಟನ ಶಿಲ್ಪಿ ಸೇರಿದಂತೆ ಹಲವಾರು ಪ್ರಶಸ್ತಿ-ಗೌರವಗಳು ಲಭಿಸಿವೆ. ...
READ MORE