`ಕೊಟ್ಟು ಹುಟ್ಟದವರ ಬದುಕು' ಕೃತಿಯು ಜಂಗಮಕೋಟೆ ಪುರುಷೋತ್ತಮ ಅವರ ಕಥಾಸಂಕಲನವಾಗಿದೆ. ಮೇಲ್ವರ್ಗದ ಜನರಲ್ಲಿ ಅಳವಾಗಿ ಬೇರೂರಿರುವ ಅನೇಕ ಸಂಗತಿಗಳನ್ನು ಪುರುಷೋತ್ತಮ ಅವರು ತುಂಬಾ ಸೂಕ್ಷ್ಮವಾಗಿ ಅಷ್ಟೇ ಪರಿಣಾಮಕಾರಿಯಾಗಿ ಹೊರತೆಗೆದಿದ್ದಾರೆ. ಅವರುಗಳ ಜೀವನ ಕ್ರಮ, ವ್ಯವಹಾರ ಚತುರತೆ, ಸ್ನೇಹದ ಸೋಗು, ಕಾಲೆಳೆಯುವ ಚಾಣತನ ಇವುಗಳನ್ನು ತಮ್ಮ ಸರಳವಾದ ಭಾಷೆಯ ಮೂಲಕ ಕಣ್ಣಮುಂದೆ ತಂದು ನಿಲ್ಲಿಸುತ್ತಾರೆ. ಓದುಗನಿಗೂ ಕತೆಯ ಪಾತ್ರಗಳಿಗೂ ನೇರ ಸಂಪರ್ಕವನ್ನು ಕಲ್ಪಿಸಿ ಕೊಡುವ ಈ ಕತೆ, ವ್ಯಂಗ್ಯದಲ್ಲಿ ಮುಕ್ತಾಯವಾಗುತ್ತದೆ. ಭಾಷೆಯಲ್ಲಿ ಕ್ಲಿಷ್ಟತೆಯಾಗಲಿ, ಆಡಂಬರವಾಗಲಿ ಇರದೆ ಸರಳವಾಗಿದೆ. ಸರಾಗವಾಗಿ ಹರಿದು ತನ್ನ ಪಾತ್ರವನ್ನು ವಿಸ್ತರಿಸಿಕೊಳ್ಳುತ್ತಾ ಹೋಗುವ ನದಿಯ ಗಂಭೀರತೆ, ಆಳ, ಇಲ್ಲಿನ ಕತೆಗಳಿಗೆ ಇರುವುದರಿಂದಲೇ ಅವು ಓದುಗನನ್ನು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತ್ತವೆ.
ಸಮಾಜದ ಕೆಳವರ್ಗದ ಜನರು ಹೋರಾಟ ನಡೆಸಿಯೇ ಬದುಕುತ್ತಿರುತ್ತಾರೆ. ಬದುಕಲು ನಡೆಸುವ ಹೋರಾಟ ಪ್ರತಿಫಲ ನೀಡದಿದ್ದಾಗ ಹೋರಾಟ ವ್ಯರ್ಥವಾಗುತ್ತದೆ. ಈ ತಿಳಿವಳಿಕೆ ಇದ್ದೂ ತನ್ನ ಬದುಕಿನಲ್ಲಿ ಅನಿರೀಕ್ಷಿತವಾಗಿ ಕೆಲಸ ಕಳೆದುಕೊಂಡು ಮತ್ತೆ ಅದನ್ನು ಪಡೆಯಲು ಹೆಣಗುವ - ಒಬ್ಬನ ಕತೆ ‘ಕೊಟ್ಟು ಹುಟ್ಟದವರ ಬದುಕು’ ಶಿವಣ್ಣ ಒಂದು ಕೆಮಿಕಲ್ ಫಾಕ್ಟರಿಯಲ್ಲಿ ಸುಮಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದವನು. ಪ್ರಾಮಾಣಿಕ, ಸಭ್ಯ, ಜೊತೆಗೆ ಫಾಕ್ಟರಿ ಮಾಲೀಕನ ಮಾತಿಗೆ ಪ್ರತಿಯಾಡದೆ ದುಡಿಯುತ್ತಿದ್ದ ಸಜ್ಜನ. ನಿಷ್ಠಾವಂತನಾದ ಶಿವಣ್ಣ ಲ್ಯಾಬ್ನಲ್ಲಿ ಕೆಲಸ ಮಾಡುತ್ತಿದ್ದುದರಿಂದ ಅನಿಲದ ಹೊಗೆಯಿಂದಾಗಿ ಅವನ ಶ್ವಾಸಕೋಶಗಳು ದುರ್ಬಲವಾಗಿರುತ್ತವೆ. ಮನೆಯಲ್ಲಿ ಅನಾರೋಗ್ಯದ ತಾಯಿ, ತನ್ನನ್ನೇ ನಂಬಿಕೊಂಡಿರುವ ಹೆಂಡತಿ ಮಕ್ಕಳಿಗೋಸ್ಕರ ತನ್ನ ಆರೋಗ್ಯವನ್ನೇ ಲೆಕ್ಕಿಸದೆ ದುಡಿಯುತ್ತಿರುತ್ತಾನೆ. ರಾಸಾಯನಿಕ ಕಾರ್ಖಾನೆಗಳಲ್ಲಿ ಸಾಮಾನ್ಯವಾಗಿ ಮಾಸ್ಕ್ ಹಾಗೂ ಗ್ಲೌಸ್ ನೀಡಿ ಕಾರ್ಮಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿರುತ್ತಾರೆ. ಆದರೆ ಶಿವಣ್ಣನ ಫ್ಯಾಕ್ಟರಿಯಲ್ಲಿ ಅದಾವುದೂ ಇರುವುದಿಲ್ಲ. ಜೊತೆಗೆ ಶಿವಣ್ಣ ಹಳೆಯ ಕಾಲದವನು. ಫ್ಯಾಕ್ಟರಿಯನ್ನು ಪ್ರಾರಂಭಿಸಿದ ಕಾಲದಿಂದಲೂ ಇರುವವನು. ಪರಿಸ್ಥಿತಿ ಹೀಗಿದ್ದೂ ಒಂದು ದಿನ ಶಿವಣ್ಣನ ಕೈ ಚೀಲದಲ್ಲಿ ಫ್ಯಾಕ್ಟರಿಯ ಒಂದು ವಸ್ತು ಸಿಕ್ಕು ಅವನು ಕದ್ದ ಆರೋಪದ ಮೇಲೆ ಕೆಲಸ ಕಳೆದುಕೊಳ್ಳುತ್ತಾನೆ. ಕತೆ ಇಲ್ಲಿಗೆ ಒಂದು ಘಟ್ಟ ಮುಟ್ಟುತ್ತದೆ. ಮುಂದಿನದು ಈ ಕತೆಗಾರರ ಅದ್ಭುತ ಕಲ್ಪನೆಯನ್ನು ನಿರೂಪಿಸುತ್ತದೆ.