ಕರ್ನಾಟಕದ ಶರಣ ಪರಂಪರೆಯ ಕೆಲವು ಶರಣರ ಮೂಲಕ ಪರಂಪರೆಯ ವೈವಿಧ್ಯವನ್ನೂ ಅದರ ಹಿಂದಿರುವ ಏಕಸೂತ್ರತೆಯನ್ನೂ ಪರಿಚಯ ಮಾಡಿಕೊಡಲು ಲೇಖಕರು ಪ್ರಯತ್ನಿಸಿದ್ದಾರೆ. ಶರಣ ಸಾಹಿತ್ಯದ ಹಾಗೂ ಶರಣರ ಆಧ್ಯಾತ್ಮಿಕ ಆಂದೋಲನದ ಕಾಲ 12ನೇ ಶತಮಾನವಾದರೂ ಅದಕ್ಕಿಂತ ಹಿಂದೆಯೇ ಈ ಪರಂಪರೆ ಆರಂಭವಾಯಿತು. ಅದು ಬೆಳೆದದ್ದು ಬಸವ ಯುಗ ದಲ್ಲಿ. ಆದುದರಿಂದ ಈ ಶರಣಕಥಾಮೃತದಲ್ಲಿ ಆ ಕಾಲಕ್ಕೆ ಸೇರಿದ ಶರಣರು ಸಹಜವಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಪುಸ್ತಕದಲ್ಲಿ ಆರಿಸಿ 22 ಜನ ಶರಣರಲ್ಲಿ 12ನೇ ಶತಮಾನಕ್ಕೆ ಸೇರಿದವರು 12 ಜನ; ಬಸವಪೂರ್ವ ಯುಗದವರು ಇಬ್ಬರು; ಅನಂತರದವರು ಎಂಟು ಜನ. ಶರಣರ ಸಾಧನೆಯ ವ್ಯಾಪಕತೆ, ವೈವಿಧ್ಯ, ವೈಶಿಷ್ಟ್ಯ ಕಂಡುಕೊಳ್ಳಲು ಸಹಾಯ ಆಗಬೇಕು ಎಂಬುದು ಇಲ್ಲಿನ ಶರಣರ ಆಯ್ಕೆಯಲ್ಲಿರುವ ಆಶಯ. ಇಲ್ಲಿರುವವರೆಲ್ಲಾ ಯುಗಧರ್ಮದ ಹಠವನ್ನೂ, ಪರಿಮಿತಿಯನ್ನೂ ಮೀರಿ ಬೆಳೆದು ತಮ್ಮ ಮಹೋನ್ನತ ಜೀವನದಿಂದ ಸಮಷ್ಟಿ ಜನಜೀವನಕ್ಕೆ ಒಂದು ದಾರ್ಶನಿಕ ಶ್ರೀಮಂತಿಕೆಯನ್ನು ತಂದುಕೊಟ್ಟವರು, ಒಂದು ಕಾಲದಲ್ಲಿದ್ದರೂ ಆ ಕಾಲವನ್ನು ಮೀರಿದವರು; ಒಂದು ಧರ್ಮದ ಪರಿಸರದಲ್ಲಿದ್ದರೂ ಅದನ್ನು ದಾಟಿದವರು; ಎಲ್ಲ ಕಾಲಕ್ಕೂ ಅನ್ವಯವಾಗುವ ಮಾನವ ಧರ್ಮದ ಮೂಲ ಮೌಲ್ಯಗಳನ್ನು ಜೀವನದಲ್ಲಿ ಸಾಧಿಸಿ ತೋರಿಸಿದ ಅನುಭಾವಿಗಳು.
ಶರಣರನ್ನು ಕುರಿತು ಕಾದಂಬರಿ ರಚಿಸುವ ಮೂಲಕ ಜನಪ್ರಿಯರಾಗಿರುವ ಎಚ್. ತಿಪ್ಪೇರುದ್ರಸ್ವಾಮಿ ಅವರು ಕರ್ನಾಟಕದ ಸಂಸ್ಕೃತಿಯ ಬಗ್ಗೆ ಆಳವಾದ ಅಧ್ಯಯನ ನಡೆಸಿದವರು. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯವರಾದ ತಿಪ್ಪೇರುದ್ರಸ್ವಾಮಿ ಜನಿಸಿದ್ದು 1928ರ ಫೆಬ್ರುವರಿ 3ರಂದು. ತಂದೆ ಚೆನ್ನಮಲ್ಲಯ್ಯ, ತಾಯಿ ಬಸಮ್ಮ. ಹೊನ್ನಾಳಿ, ಶಿರಾಳಕೊಪ್ಪ ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಆರಂಭಿಕ ಶಿಕ್ಷಣ ಪಡೆದ ತಿಪ್ಪೇರುದ್ರಸ್ವಾಮಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಂದಿಗೆ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ (ಎಂ.ಎ.) ಪಡೆದರು. ಶರಣರ ಅನುಭಾವ ಪ್ರಪಂಚ ಮಹಾಪ್ರಬಂಧಕ್ಕೆ ಡಾಕ್ಟೊರೇಟ್ ಪದವಿ (1962) ಪಡೆದರು. ಹಾಸನದ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ತಿಪ್ಪೇರುದ್ರಸ್ವಾಮಿ ...
READ MORE