ಪ್ರಸ್ತುತ ಕೃತಿ 'ಕನಸಿನ ಹೂಗಳು' ಮೀನಾ ಕಾಕೊಡಕಾರ್ ಅವರ ಸಾಹಿತ್ಯ ಅಕಾದೆಮಿ ಪುರಸ್ಕೃತ 'ಸಪನಫುಲಾಂ' ಕಥಾಸಂಕಲನವನ್ನು ಲೇಖಕಿ ಗೀತಾ ಶೆಣೈ ಅವರು ಕನ್ನಡಕ್ಕೆ ಅನುವಾದಿಸಿರುವುದಾಗಿದೆ. ಈ ಕೃತಿಯಲ್ಲಿ ಒಟ್ಟು ಹದಿನಾರು ಸಣ್ಣಕಥೆಗಳು ಇವೆ. ಮೀನಾ ಅವರು ತಮ್ಮ ಕಥೆಗಳಿಗೆ ಆಯ್ದುಕೊಳ್ಳುವ ವಸ್ತುವಿನಲ್ಲಿ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧ ಮತ್ತು ಸ್ತ್ರೀ ಬದುಕಿನ ವಿವಿಧ ಆಯಾಮಗಳು, ಸ್ತ್ರೀ ಜಾಗೃತಿಯ ನೆಲೆಗಳು ಕೇಂದ್ರ ಸ್ಥಾನದಲ್ಲಿ ಇರುವುದನ್ನು ಗಮನಿಸಬಹುದು. ಈ ಕಥೆಗಳಲ್ಲಿ ಗೋವೆಯ ಸಮುದ್ರತೀರದ ಸುಂದರ ಪ್ರಕೃತಿ, ಅಲ್ಲಿಯ ಕೃಷಿಕರ ಬದುಕು ಮತ್ತು ವಲಸಿಗ ಕಾರ್ಮಿಕ ವರ್ಗದ ಅಸ್ಥಿರತೆ ಹಾಗೂ ಬದುಕನ್ನು ಹಾಗೂ ವ್ಯಕ್ತಿತ್ವವನ್ನು ವಿನಾಶದ ಕಡೆಗೆ ಕರೆದೊಯ್ಯುವ ಮನುಷ್ಯನ ಸ್ವಾರ್ಥ ಮತ್ತು ಸಂದೇಹ ಪ್ರವೃತ್ತಿಯನ್ನು ವಸ್ತುನಿಷ್ಟವಾಗಿ ಚಿತ್ರಿಸಿರುವ ಈ ಲೇಖಕಿ, ಸ್ತ್ರೀಯರು ತಮ್ಮ ಅನುಭವದ ಆಧಾರದಲ್ಲಿ ಆತ್ಮವಿಶ್ವಾಸವನ್ನು ಮತ್ತು ತಮ್ಮ ಹಕ್ಕುಗಳ ಕುರಿತಾದ ಅರಿವನ್ನು ಬೆಳೆಸಿಕೊಳ್ಳುವುದನ್ನು `ಸಕರಾತ್ಮಕವಾಗಿ ಚಿತ್ರಿಸಿದ್ದಾರೆ. ಈ ಸಂಕಲನದ 'ಹೀಗೊಂದು ಕನಸು... ಹೀಗಿದ ಜೀವನ!' ಕಥೆಯು 'ಬದುಕಿಗೆ ಮೂಲವಾದ ಪಾರಂಪರಿಕ ಕೃಷಿ ವೃತ್ತಿ ಹಾಗೂ ಆಧುನಿಕ ಶಿಕ್ಷಣದಿಂದ ಸುಧಾರಿಸಬಹುದಾದ ಜೀವನಮಟ್ಟದ ಆಮಿಷ ಇವೆರಡೂ ಪರಸ್ಪರ ವಿರೋಧ ನೆಲೆಯಲ್ಲಿ ನಿಂತು ತಲೆಮಾರುಗಳ ಆಲೋಚನಾ ವಿಧಾನಗಳನ್ನು ಹೇಗೆ ಪ್ರಭಾವಿಸಬಹುದು ಎಂಬುದನ್ನು ಬಹಳ ಸರಳವಾಗಿ, ಅಷ್ಟೇ ವಸ್ತುನಿಷ್ಠವಾಗಿ ಚಿತ್ರಿಸುತ್ತದೆ' ಎಂಬುದಾಗಿ ವಿಮರ್ಶಕರು ಗುರುತಿಸಿದ್ದಾರೆ. ಗಂಭೀರ ಸ್ವರೂಪದ ವೈಚಾರಿಕತೆಯ ಭಾರವಿಲ್ಲದೆ, ಕ್ಲಿಷ್ಟ ಶೈಲಿ ಹಾಗೂ ತಂತ್ರಗಳ ಗೋಜಿಗೆ ಹೋಗದೆ, ಸರಳವಾದ ಕಥಾ ನಿರೂಪಣೆಯೊಂದಿಗೆ ಕೆಲವೇ ಪುಟಗಳ ವ್ಯಾಪ್ತಿಯಲ್ಲಿ ಬಹು ಅಡಕವಾಗಿ ಜೀವನಪ್ರೀತಿಯ ಸಂದೇಶವನ್ನು ವ್ಯಕ್ತಿಪಡಿಸುವ ಲೇಖಕಿ ಮೀನಾ ಕಾಕೊಡಕಾರ. ಕೃತಿಯ ಪರಿವಿಡಿಯಲ್ಲಿ ಹಕ್ಕಿ ಮರಿಯೇ,ಉಂಡಾಡಿ, ಹೀಗೊಂದು ಕನಸು..ಹೀಗಿದೆ ಜೀವನ!, ಕಿಟಿಕಿಯ ಆಚೆ-ಈಚೆ, ತಿಲ್ಲಮ್ಮಾ ನೀನು ಹೋಗುವೆಯಾ?, ಕಳಚಿ ಬಿದ್ದ ಮೊಗ್ಗು, ಭಿಕೂ ಪಸರಕಾರನ ದಿನಚರಿ, ಅಪ್ಪಾ ನೀನು ನಗುತ್ತಿರುವೆ!, ಪಾರಿಜಾತ, ಕುರುಹು, ಸಂಜೆ, ಹೊಸಹುಟ್ಟು, ಚಂದನದ ಮರ, ಬಂಧಮುಕ್ತೆ, ದೇವಸೌತೆಗಳು, ಕಿನ್ನರ ಎಂಬ ಶೀರ್ಷಿಕೆಯ ಕಥೆಗಳಿವೆ.
ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'. ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...
READ MORE