‘ಕಮಲಾದಾಸ್ ಕಥೆಗಳು’ ಕಮಲಾದಾಸ್ ಅವರ ಮಲಯಾಳಂ ಮೂಲ ಕೃತಿಯಾಗಿದ್ದು, ಕೆ.ಕೆ. ಗಂಗಾಧರನ್ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೇರಳದ ಸಾಹಿತ್ಯ ಪ್ರಿಯರಿಗೆ ಇಷ್ಟವಾದ ಲೇಖಕಿ ಮಾಧವಿಕುಟ್ಟಿ ಎಂಬ ಕಮಲಾದಾಸ್. ಕಮಲಾದಾಸ್ ಮಲಯಾಳಂ ಮತ್ತು ಇಂಗ್ಲಿಷ್‌ನಲ್ಲೂ ಕತೆ, ಕವನ, ಆತ್ಮಚರಿತೆ, ಕಾದಂಬರಿ ಹಾಗೂ ಇನ್ನೂ ಅನೇಕ ಶಾಖೆಗಳಲ್ಲಿ ಅವರು ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಅವರ ಬಹುತೇಕ ಕತೆಗಳು ಹೆಣ್ಣಿನ ಅಂತಃಕರಣವನ್ನು ಅನಾವರಣಗೊಳಿಸುತ್ತದೆ. ಗಂಡು-ಹೆಣ್ಣು, ಹೆಣ್ಣು-ಹೆಣ್ಣು, ಗಂಡು-ಗಂಡು ಪರಸ್ಪರ ಸಂಬಂಧಗಳನ್ನು ಯಾವ ಎಗ್ಗೂ ಇಲ್ಲದೆ ಒಡೆದು ಹೇಳುವ ಜಾಯಮಾನ ಅವರದ್ದು. ಇಲ್ಲಿನ ವಿಚಾರಗಳು ಸುಳಿಗಾಳಿಯಾಗಿ, ಬಿರುಗಾಳಿಯಾಗಿ, ತಿಳಿಗಾಳಿಯಾಗಿ ಓದುಗರ ಮನಸ್ಸಿನಲ್ಲಿ ಸುಳಿದಾಡುತಿರುತ್ತದೆ. 30 ಕಥೆಗಳ ಗುಚ್ಛವಾಗಿರುವ ಈ ಕೃತಿಯು ತೀವ್ರವಾದ ಭಾಷೆಯನ್ನು ಒಳಗೊಂಡಿದೆ. `
ಕೇರಳದ ಕಾಸರಗೋಡು ಜಿಲ್ಲೆಯ ಪಾತನಡ್ಕ ಎಂಬ ಹಳ್ಳಿಯಲ್ಲಿ ಜನಿಸಿದ ಗಂಗಾಧರನ್ ಅವರು ಬಾಲ್ಯವನ್ನು ಕೊಡಗಿನ ಸೋಮವಾರಪೇಟೆಯ ಸಮೀಪದ ಕಬ್ಬಿಣಸೇತುವೆಯಲ್ಲಿ ಕಳೆದರು. ಕಾಜೂರು, ಸೋಮವಾರಪೇಟೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನಿಂದ ಬಿಎಸ್‌ಸಿ ಪದವಿ ಪಡೆದರು. ಹಾಸನದ ಕೊಥಾರಿ ಕಾಫಿ ಕ್ಯೂರಿಂಗ್ ವರ್ಕ್ಸ್‌ನಲ್ಲಿ ವೃತ್ತಿ (1970) ಆರಂಭಿಸಿದ ಅವರು ನಂತರ ಅಂಚೆ ಇಲಾಖೆಯ ರೈಲ್ವೆ ಮೇಲ್ ಸರ್ವಿಸ್ ವಿಭಾಗದಲ್ಲಿ (1974) ಉದ್ಯೋಗ ಪಡೆದರು. ಅರಸೀಕೆರೆ, ತುಮಕೂರು, ಮೈಸೂರು, ಮಡಿಕೇರಿ ಹಾಗೂ ಬೆಂಗಳೂರುಗಳಲ್ಲಿ ಕೆಲಸ ಮಾಡಿದ ಅವರು ನಿವೃತ್ತ (2009)ರಾದರು. ಸದ್ಯ ಬೆಂಗಳೂರಿನ ವಿಶ್ವನೀಡಂನಲ್ಲಿ ನೆಲೆಸಿದ್ದಾರೆ. ...
READ MORE