ಹಮಾರಾ ಬಜಾಜ್ - ವಿಕ್ರಮ್ ಹತ್ವಾರ್ ಅವರ ಕಥಾ ಸಂಕಲನ. ವಿಕ್ರಮ್ ಅವರ ಕಥೆಗಳು ಹೆಚ್ಚಾಗಿ ಐಟಿ ಅಥವಾ ನಗರ ಕೇಂದ್ರಿತ. ಅದರಲ್ಲೂ ಬೆಂಗಳೂರು ಅಂದರೆ ಹೆಚ್ಚು. ಈ ಕಥೆಗಳಲ್ಲೂ ಐಟಿ ಜಗತ್ತಿನ ಕೆಲಸಗಾರರ ಕಷ್ಟಗಳು, ಸಂಬಂಧಗಳು, ನಗರಪ್ರಜ್ಞೆಯ ಕಾಡುವ ಏಕಾಕಿತನ ಇವೆಲ್ಲವೂ ಇವೆ.
ವಿಕ್ರಮರ ಕತೆಗಳಲ್ಲಿ ಒಳಗೊಂದು ದಾರಿಯಿದೆ. ಆ ಕಾಲುದಾರಿಗೆ ಹೋಗುವ ಗೇಟೊಳಗೆ ನಮ್ಮನ್ನು ಒಳಬಿಟ್ಟುಕೊಂಡು ಅವರು ಅದನ್ನು ಮುಚ್ಚಿ ಹೋಗಿಬಿಡುತ್ತಾರೆ. ಅಪರಿಚಿತ ಪ್ರದೇಶದಲ್ಲಿ ದಾರಿ ಹುಡುಕಿಕೊಂಡು ಹೋಗುವಾಗ ಏನೆಲ್ಲ ಅನುಭವ ಆಗುತ್ತದೋ ಅದೆಲ್ಲವನ್ನೂ ವಿಕ್ರಮರ ಕಥೆ ಓದುವಾಗ ನಮಗಾಗುತ್ತದೆ.
ಅವರ ಈ ಕೃತಿ ಹಮಾರ ಬಜಾಜ್ ಒಂದು ವಿಭಿನ್ನ ಲೋಕವನ್ನೇ ಓದುಗರ ಮುಂದೆ ತೆರೆದಿಡುತ್ತದೆ. ಕಿಡ್ನಿ ವೈಫಲ್ಯಕ್ಕೀಡಾಗಿ ಚಿಕಿತ್ಸೆ ಪಲಕಾರಿಯಾಗದೆ ಅಪ್ಪ ತೀರಿಕೊಂಡ ಬಳಿಕ ತನ್ನ ಹಾರ್ಡ್ ಡಿಸ್ಕಿನಲ್ಲಿನ ಡೈರಿಯ ಪುಟಗಳ ಓದುತ್ತಾ ಅಪ್ಪನ ಮಾರಿಹೋದ ಬಜಾಜ್ ಸ್ಕೂಟರಿನ ಇನ್ನೊಬ್ಬರಿಂದ ಪಡೆಯಲು ಯತ್ನಿಸುವ ಮಗ. ಈ ಕಥೆಯಲ್ಲಿ ಹತ್ವಾರ್ ಅವರ ಶಕ್ತಿ ಎದ್ದು ಕಾಣುತ್ತದೆ. ಯಾರದೂ ಸರಿ ತಪ್ಪುಗಳ ಹೇಳ ಹೋಗದೆ, ಇನ್ನೊಬ್ಬರ ಸಂಸಾರ ಎಲ್ಲ ಸರಿಯಾಗಿದ್ದರೆ ನಮ್ಮ ಸಂಸಾರದ ಕಥೆಯೂ ಇಷ್ಟೇ ಅಲ್ಲವೇ ಅನಿಸಿಬಿಡುವ ದಟ್ಟ ನಗರ ಪ್ರಜ್ಞೆಯ ಕಥೆ. ಸಾವೆಂಬ ಮಾಯಾವಿ ಇಡೀ ಕಥೆಯ ಎತ್ತರವನ್ನು ಇನ್ನೂ ಹೆಚ್ಚಿಸಿದೆ. ಹಲವಾರು ಬಗೆಯಿಂದ ಇದು ಕನ್ನಡದ ಉತ್ತಮ ಕಥೆಗಳಲ್ಲೊಂದು ಎನ್ನಬಹುದು.
ವಿಕ್ರಮ್ ಹತ್ವಾರ್ ತಮ್ಮ ಮೊದಲ ಕಥಾಸಂಕಲನಕ್ಕೆ ಯುವ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಪಡೆದವರು. ಕುಂದಾಪುರ ಮೂಲದವರಾದ ವಿಕ್ರಮ್, ಕನ್ನಡ ಸಾಹಿತ್ಯಲೋಕದಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಜೀರೋ ಮತ್ತು ಒಂದು, ಅಕ್ಷೀ ಎಂದಿತು ವೃಕ್ಷ, ನೀ ಮಾಯೆಯೋಳಗೋ ಹಾಗೂ ಹಮಾರಾ ಬಾಜಾಜ್ ಎಂಬ ಕೃತಿಗಳನ್ನು ರಚಿಸಿದ್ದಾರೆ. ...
READ MORE