ಲೇಖಕ ರೋಹಿತ್ ಚರ್ಕತೀರ್ಥ ಅವರ ಕತಾ ಸಂಕಲನ ಕೃತಿ ʻಗಣಿತ ತಜ್ಞರ ರಸಪ್ರಸಂಗಗಳುʼ. ಪುಸ್ತಕದ ಬೆನ್ನುಡಿಯಲ್ಲಿ, "ಹಲವು ವರ್ಷಗಳ ಹಿಂದೆ `ನಿಮ್ಮ ಉದ್ಯೋಗವೇನು? ಎಂದು ಕೇಳಿದವರಿಗೆ ನಾನು 'ಗಣಿತ ಬೋಧಿಸುತ್ತೇನೆ' ಎಂದರೆ ಅವರ ಹುಬ್ಬುಗಳು ಮೇಲೇರುತ್ತಿದ್ದವು. ಪ್ರಶ್ನೆ ಕೇಳಿದವರು ನನ್ನನ್ನು ಆಶ್ಚರ್ಯದಿಂದ, ಗೌರವದಿಂದ, ಕೆಲವೊಮ್ಮೆ ಸಹಾನುಭೂತಿಯಿಂದ ನೋಡುತ್ತಿದ್ದರು. ಗಣಿತವೆಂದರೆ ತಲೆಶೂಲ, ಗಣಿತಜ್ಞರು ಎಂದರೆ ಮಾನಸ ಸಂಚಾರಿಗಳು, ಅನ್ಯಮನಸ್ಕರು, ಗಣಿತದ ಹೊರತಾದ ಜಗತ್ತಿನಲ್ಲಿ ಸಂಪೂರ್ಣ ಮಡೆಯರು ಎಂಬ ಭಾವನೆಯೊಂದು ಸಮಾಜದಲ್ಲಿದೆ. ಅದು ಬಹುತೇಕ ನಿಜವೂ ಕೂಡ. ಹೇಗೆ ಅಮೃತಪಾನ ಮಾಡಿದಾತನಿಗೆ ಹಾಲು, ನೀರು, ಜೇನೆಲ್ಲ ಯಶಸ್ವಿ ಅನ್ನಿಸಿಬಿಡುತ್ತದೋ ಹಾಗೆಯೇ ಗಣಿತದಲ್ಲಿ ಮುಳುಗಿದವರಿಗೆ ವ್ಯಾವಹಾರಿಕ ಜಗತ್ತಿನ ಉಳಿದೆಲ್ಲ ವಿಷಯಗಳು ನಿಸ್ಸಾರವೆನಿಸುತ್ತದೆ. ಗಣಿತದ ಚೆಲುವಿನ ಮುಂದೆ ಮತ್ತಾವುದೂ ಅವರಿಗೆ ಆಕರ್ಷಕವೆನಿಸಲಾರದು, ದುರಂತವೆಂದರೆ ಹೀಗೆ ಗಣಿತದ ಚೆಲುವು, ರುಚಿ, ಸ್ವಾರಸ್ಯ ಎಂದೆಲ್ಲ ಏನು ಹೇಳುತ್ತೇವೋ ಅದನ್ನು ʻಇದು ಹೀಗಿದೆʼ ಎಂದು ಇನ್ನೊಬ್ಬರಿಗೆ – ಅದರಲ್ಲೂ ಗಣಿತದ ಪ್ರವೇಶವಿಲ್ಲದವರಿಗೆ - ದಾಟಿಸುವುದು ಬಹಳ ಕಷ್ಟ. ನೀರನ್ನೇ ನೋಡದವನಿಗೆ ಸಮುದ್ರವನ್ನು ವರ್ಣಿಸಿದರೆ ಹೇಗೋ, ಹಾಗೆ ಗಣಿತದ ಗಂಧಗಾಳಿ ಇಲ್ಲದವರಿಗೆ ಗಣಿತದ ಸೌಂದರ್ಯವನ್ನು ವರ್ಣಿಸಿದರೆ! ಗಣಿತಜ್ಞರು ಶಂಖದ ಹುಳುಗಳಂತೆ ತಮ್ಮ ಜಗತ್ತಿನೊಳಗೆ ಮುಳುಗಿಹೋಗಲು ಇದೂ ಒಂದು ಕಾರಣ. ಆದರೆ ಒಂದಷ್ಟು ಹಣಿಕಿಹಾಕಿದರೆ ನಮಗೆ ಆ ಜಗತ್ತಿನ ಸಣ್ಣಪುಟ್ಟ ವಿಸ್ಮಯಗಳು ದೃಷ್ಟಿಗೋಚರವಾದಾವು ಹೇಗೆ ಕಿಟಕಿಯಿಂದ ತೂರಿಬರುವ ಕೋಲ್ಮಿಂಚಿನಲ್ಲಿ ಸೂರ್ಯನ ಪ್ರಖರತೆಯ ಅಂದಾಜು ಸಿಗುವುದೋ ಹಾಗೆ ಗಣಿತಜ್ಞರ ಜೀವನದ ಒಂದಷ್ಟು ರಸನಿಮಿಷಗಳನ್ನು ಕಂಡರೂ ಗಣಿತಲೋಕದ ಸೌಂದರ್ಯಾತಿಶಯದ ಅಂದಾಜು ಸಿಕ್ಕೀತು. ಗಣಿತಜ್ಞರ ಬದುಕಿನ ಒಂದಷ್ಟು ತಮಾಷೆ ಪ್ರಸಂಗಗಳನ್ನು ಓದಿ, ಸವಿದು, ನಕ್ಕುಹಗುರಾದರೆ ಗಣಿತದ ಮೇಲಿನ ಭಯವೂ ಕೊಂಚ ಕರಗಿತು. ಭಯದ ಬಲೂನು ಎಷ್ಟೇ ದೊಡ್ಡದಿರಲಿ, ಅವನ್ನು ಒಡೆಯಲು ಹಾಸ್ಯದ ಮಟ್ಟ ಸೂಜಿ ಇದ್ದರೆ ಸಾಕು ತಾನೆ?" ಎಂದು ಹೇಳಿದ್ದಾರೆ.
ರೋಹಿತ್ ಚಕ್ರತೀರ್ಥ, ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕರಾಗಿ ಕಾಲೇಜುಗಳಲ್ಲಿ ಪಾಠ ಮಾಡಿ, ಈಗ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡು, ಹಲವು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ. ಜೊತೆಗೆ ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಇದುವರೆಗೆ 13 ಪುಸ್ತಕಗಳು ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಹವ್ಯಾಸ., ...
READ MORE