ಈ ಕತೆಗಳ ಸಹವಾಸವೇ ಸಾಕು

Author : ಅಲಕ ತೀರ್ಥಹಳ್ಳಿ 

Pages 107

₹ 60.00




Published by: ಛಂದ ಪುಸ್ತಕ
Address: ಐ-004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು - 560 076
Phone: 98444 22782

Synopsys

ಅಲಕ ತೀರ್ಥಹಳ್ಳಿ ಅವರ "ಈ ಕತೆಗಳ ಸಹವಾಸವೇ ಸಾಕು" ಕಥಾ ಸಂಕಲನವಾಗಿದೆ. ಛಂದ ಪುಸ್ತಕ ಬಹುಮಾನ ಪಡೆದ ಕೃತಿ.ಶೀರ್ಷೆಕೆಯ ಕತೆಯು ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದೆ. ಸಾಗುವ ಇಲ್ಲಿಯ ಹಲವು ಕತೆಗಳು ಬಿಂಬಿಸುವುದು ಜನ ಸಾಮಾನ್ಯರ ದಿನಚರಿಯನ್ನು. ಯಾವುದೇ ಪೂರ್ವನಿಶ್ಚಿತವಿಲ್ಲದೆಯೇ ಆರಂಭಗೊಳ್ಳುವ ಕತೆಗಳು ಪೂರ್ವಾಗ್ರಹವಿಲ್ಲದೆಯೇ ಅಂತ್ಯಗೊಳ್ಳುತ್ತವೆ. ಕತೆಗಳಿಗೆ ಯಾವುದೇ ತಾರ್ಕಿಕ ಅಂತ್ಯಗಳ ಅಗತ್ಯವೇ ಇಲ್ಲವೇನೋ? ಎನ್ನಿಸುವುದು ಇವುಗಳ ವಿಶೇಷತೆ. ಎನಗೂ ಆಣೆ ನಿನಗೂ ಆಣೆ ಕತೆ ತನ್ನ ಬಿಗಿ ನಿರೂಪಣೆಯಿಂದ ಓದಿಸಿಕೊಳ್ಳುತ್ತದೆ. ಮಗನ ಸ್ವಹಿತಾಸಕ್ತಿಗೋಸ್ಕರ, ಮನೆ ಮಠ ಬಿಟ್ಟು ದೇಶಾಂತರ ಹೋದ ವ್ಯಕ್ತಿಯೊಬ್ಬನ ಸ್ವತ್ತನ್ನು ಪೂಜಾರಿಯೊಬ್ಬ ಗುಳುಂ ಮಾಡಿ ಆ ಜಾಗದಲ್ಲಿ ಅದಾಗಲೇ ಇದ್ದ ಮಂದಿರಕ್ಕೆ ನಾವೀನ್ಯ ರೂಪ ತಂದುಕೊಡುತ್ತಾನೆ. ಮಂದಿರವು ಶಕ್ತಿಪೀಠವಾಗಿ ಬದಲಾಗಿ ಹೆಸರು ಗಳಿಸಿದ್ದ ಸಂದರ್ಭಕ್ಕೆ ಸರಿಯಾಗಿ ಅದೇ ಪರ್ಯಟನೆ ಮಾಡಿದ್ದ ವ್ಯಕ್ತಿ ವಾಪಾಸ್ ಬಂದಾಗ, ಸಮಾಜ ಅವನನ್ನು ಹೇಗೆ ನಡೆಸಿಕೊಂಡಿತು? ಭಕ್ತಿಗಿಂತ ಆಡಂಬರವೇ ಮುಗಿಲು ಮುಟ್ಟಿದ್ದ ಮಂದಿರವನ್ನು ಕಂಡವನು ತನ್ನ ಮೌನ ಸಂವೇದಿ ಕ್ರಿಯಾ ಕಲಾಪಗಳ ಮೂಲಕ ನೀಡುವ ಚಾಟಿಯೇಟಿನ ಮಾತುಗಳು ಕತೆಯ ಹೈಲೈಟ್. ಬಹಳ ಅರ್ಥಗರ್ಭಿತ ಕತೆ ಇದು. ಏಳನೇ ತರಗತಿ ಮುಗಿಸಿದ ಹುಡುಗನೊಬ್ಬ ಹೈಸ್ಕೂಲ್ ಸೇರುವ ಕತೆ, ಮುಗ್ದ ನಡೆ ನುಡಿಯನ್ನು ಸೂಕ್ಷ್ಮವಾಗಿ ಅವಲೋಕಿಸುವ ಎಳೆಯ ಪೋರನ ಕತೆ, ಬಾಲ್ಯದಲ್ಲಿ ಪಾಠ ಕಲಿಸಿದ ಮಾಸ್ತರರೊಬ್ಬರ ಕಣ್ಣು ಕಾಣದಾದಾಗ ಶಿಷ್ಯನೊಬ್ಬ ತನ್ನ ಗುರುಗಳಿಗೆ ಏನಾದರೂ ಮಾಡಿ ಕಣ್ಣು ಕಾಣುವ ಹಾಗೆ ಮಾಡಲೇಬೇಕೆಂದು ಹೊರಡುವ ಭಗೀರಥ ಪ್ರಯತ್ನದ ಕತೆ, ಹಳೆಯ ಉಪಕಾರವನ್ನು ಸ್ಮರಿಸುವ ಮಾಸ್ತರರೊಬ್ಬರು ಕೊಟ್ಟ ಮಾತಿನಂತೆ ಕಾಡಿನ ಕುಗ್ರಾಮಕ್ಕೆ ಬಂದು ಅತಿಥಿ ಸತ್ಕಾರವನ್ನು ಮತ್ತೆ ಸ್ವೀಕರಿಸುವ ಕತೆ, ಪುಂಗಿ ವಾದ್ಯವನ್ನು ಬದುಕಿನ ಅವಿಭಾಜ್ಯ ಅಂಗವಾಗಿರಿಸಿಕೊಂಡ ಪುಂಗಿ ಊದುವವನ ಪುರಾಣದ ಕತೆ, ಒಂದೇ ಘಟನೆಗಿರಬಹುದಾದ ಹಲವು ಆಯಾಮಗಳ ಸತ್ಯ ನಿವೇದನೆಯುಳ್ಳ ಕತೆ, ಬಡ ದರ್ಜಿಯನ್ನು ಉದ್ಧಾರ ಮಾಡಲು ಹರಸಾಹಸ ಪಟ್ಟು ಆಗದೆ ಕೊನೆಗೆ ಸುಸ್ತಾದವನ ಕತೆ, ಬದುಕನ್ನು ಉಡಾಫೆಯಾಗಿ ಗಣಿಸಿದ ವ್ಯಕ್ತಿಯೊಬ್ಬ ಪ್ರೀತಿಸಿ ಕೈಹಿಡಿದ ಹೆಂಡತಿಯಿಂದ ದೂರಾಗಿ ತನ್ನ ವಿಚಿತ್ರ ಅಭ್ಯಾಸ ಮತ್ತು ಹವ್ಯಾಸಗಳಲ್ಲೇ ಜೀವನದ ಮುಕ್ಕಾಲು ಕಾಲವನ್ನು ಕಳೆದುಕೊಳ್ಳುವ ವೇಳೆಗೆ ಮಗಳಿಂದ ಬರುವ ಪತ್ರದ ಕತೆ.. ಎಲ್ಲವೂ ಸಹಜ ನೆಲಗಟ್ಟಿನಲ್ಲಿಯೇ ಸಾಗುವ ಕತೆಗಳು. ಯಾರೂ ಹೇಳದಿರುವುದನ್ನು ಹೇಳುವ ತವಕ ಇಲ್ಲಿನ ಕತೆಗಳದ್ದಲ್ಲ. ಬದುಕಿನ ಹಲವು ಮಜಲುಗಳ ಹೊರ ಪದರವನ್ನೇ ಸೂಚಿಸಿವ ಕತೆಗಳಿವು. ಕಥಾ ವಸ್ತು ಮನುಷ್ಯ ಬದುಕಿನ ಅಂಗಗಳೇ ಆಗಿವೆ. ಹೀಗಾಗಿ ಎಲ್ಲ ಕತೆಗಳೂ ಅಲ್ಲದಿದ್ದರೂ ಕೆಲವು ವಿಭಿನ್ನವಾಗಿ ನಿಲ್ಲುತ್ತವೆ. ಲೇಖಕರ ಮೊದಲ ಪ್ರಯತ್ನವಿದು ಎಂದೆನಿಸದಂತೆ ಓದಿಸಿಕೊಂಡು ಹೋಗುವ ಗುಣ ಮತ್ತು ಶಕ್ತಿ ಇಲ್ಲಿನ ಕತೆಗಳದು.

About the Author

ಅಲಕ ತೀರ್ಥಹಳ್ಳಿ 
(13 July 1956)

ಈ ಕತೆಗಳ ಸಹವಾಸವೇ ಸಾಕು- ಸಂಕಲನದ ಮೂಲಕ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದ ಅಲಕ ತೀರ್ಥಹಳ್ಳಿ ಅವರು ಸಾಗರ (ಶಿವಮೊಗ್ಗ ಜಿಲ್ಲೆ) ಸಮೀಪದ ಹೂಗೊಪ್ಪಲಿನವರು. ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ಕಥಾ ಸ್ಪರ್ಧೆಗಳಲ್ಲಿ ಬಹುಮಾನಗಳಿಸಿರುವ ಅಲಕ ಅವರು, ಛಂದ ಪುಸ್ತಕ ಪ್ರಶಸ್ತಿ(2005) ಕಥಾರಂಗಂ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 'ಅಲಕ ತೀರ್ಥಹಳ್ಳಿ' ಎಂಬ ಹೆಸರಿನಲ್ಲಿ ಲಕ್ಷ್ಮೀನಾರಾಯಣ ಬರೆದಿದ್ದಾರೆ. ಆ ಕಥೆಗಳಲ್ಲದೆ ಕವನ, ಹನಿಗವನ ಮತ್ತು ನಾಟಕಗಳನ್ನೂ ಬರೆದಿರುವ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. ಈ ಕಥೆಗಳ ಸಹವಾಸವೇ ಸಾಕು, ನವಿಲೆಸರ (ಕಥಾ ಸಂಕಲನಗಳು), ಶಾಲಾ ಮಕ್ಕಳ ...

READ MORE

Related Books