'ದೆವ್ವಗಳ ನಾಡಿನಲ್ಲಿ' ರಾಜೇಂದ್ರ ಬಿ. ಶೆಟ್ಟಿ ಅವರ ಕಥಾಸಂಕಲನ. ಮೃದುಭಾಷಿ, ಮಿತಭಾಷಿ, ಸೂಕ್ಷ್ಮಮತಿ ಮತ್ತು ಸಂವೇದನಾಶೀಲ ಮುಗುಳ್ಳಗು ಅವರ ಮೊಗದ ಮೇಲೆ ಸದಾ ಮೈಹಾಸಿ ಮಲಗಿರುತ್ತದೆ. ಮೌನವೇ ಅವರ ಆಭರಣ. ತೋರುಗಾಣಿಕೆ ಅವರಿರುವೆಡೆ ಬಾರರು, ನೇರವಂತಿಕೆ ಅವರ ಸ್ವಭಾವ. ಅವರ ಆಸಕ್ತಿ, ಹವ್ಯಾಸಗಳೂ ವಿಧ ವಿಧ. ಸಾಹಿತ್ಯದ ಓದು, ನಾಟಕಗಳನ್ನು ನೋಡುವ ಗೀಳು ಸರಳಗಣಿತದ ಪ್ರತಿಪಾದಕ, ಬಿಂಬಗ್ರಾಹಿ, ಯಂತ್ರಪ್ರಿಯ, ಕ್ಯಾಮೆರಾವನ್ನು ಹೆಗಲೇರಿಸಿಕೊಂಡರೆ ಕಂಡದ್ದೆಲ್ಲವೂ ಅಲ್ಲಿ ಸೆರೆಯಾಗುತ್ತದೆ. ಶೆಟ್ಟರು ಇದೀಗ ತಮ್ಮ 'ದೆವ್ವಗಳ ನಾಡಿನಲ್ಲಿ' ಕಥಾಸಂಕಲನದ ಮೂಲಕ ಓದುಗರನ್ನು ಎದುರುಗೊಂಡಿದ್ದಾರೆ. ಭೂತ ಪ್ರೇತಗಳನ್ನು ನಿರಾಕರಿಸುವ ಜಾಯಮಾನದವರಾದ ಶೆಟ್ಟರು ಅವುಗಳ ಅಸ್ತಿತ್ವದ ಕುರಿತು ಕತೆಗಳನ್ನು ಹೆಣೆದಿದ್ದಾರೆ. ಭೂತವಲ್ಲದ ಭೂತವನ್ನು ಕಂಡುಹಿಡಿಯುವ ಪ್ರಯತ್ನ ಮಾಡಿದ್ದಾರೆ. ಸಮಾಜದ ಕೆಳಸ್ತರದ ಜನರತ್ತಲೇ ಒಲವು ತೋರುವ ಇವರ ಲೇಖನಿ ದೆವ್ವಗಳನ್ನು ಕಾಣಿಸುವುದರಲ್ಲೂ ಗೆದ್ದಿದೆ ಎಂತಲೇ ನನ್ನ ಅನಿಸಿಕೆ. ಓದುಗರ ಒಲವು ಅವರ ಈ ದೆವ್ವದ ಕತೆಗಳಿಗೂ ದಕ್ಕುವುದರಲ್ಲಿ ಸಂಶಯವಿಲ್ಲ. ವಿಶ್ರಾಂತ ಜೀವನದಲ್ಲಿ ಅಧ್ಯಯನ ನಿರತರಾಗಿರುವ ರಾಜೇಂದ್ರ ಬಿ. ಶೆಟ್ಟಿ ಅವರಿಂದ ಇನ್ನಷ್ಟು ಕೃತಿಗಳು ಬರುವಂತಾಗಲಿ ಎಂದು ಆಶಿಸುವೆ. - ಜಿ.ಪಿ. ರಾಮಣ್ಣ
ಲೇಖಕ ರಾಜೇಂದ್ರ. ಬಿ.ಶೆಟ್ಟಿ ಅವರು ಉಡುಪಿ ಜಿಲ್ಲೆಯ ಹೆಜಮಾಡಿಯವರು. ಸುರತ್ಕಲ್ಲಿನ ಕೆ. ಆರ್. ಈ. ಸಿ. ಯಲ್ಲಿ( ಈಗಿನ ಎನ್ ಐ ಟಿ ಕೆ ) ಇಂಜಿನಿಯರಿಂಗ್ ಪದವೀಧರರು. ಸುಮಾರು ನಲುವತ್ತು ವರ್ಷ ಬೇರೆ ಬೇರೆ ಊರುಗಳಲ್ಲಿ( ಮುಂಬೈ, ಬೆಂಗಳೂರು, ಜಯಪುರ ಮತ್ತು ಅಸನ್ ಗಾಂವ್ )ಕೆಲಸ ಮಾಡಿ ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಶಾಲಾ ದಿನಗಳಲ್ಲಿ ಕಥೆ ಬರೆಯಲು ಆರಂಭಿಸಿದ್ದು,ಕಾಲೇಜು ದಿನಗಳಲ್ಲಿ ಅವು ಮುಂಬೈ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಕೃತಿಗಳು: ' ನನ್ನದೂ ಒಂದಿಷ್ಟು...'( 2018), ' ಕಥನ ಕುತೂಹಲ '(2021) ಪ್ರಕಟಗೊಂಡಿದೆ. ...
READ MORE