‘ಅಧೋಮುಖ’ ಕೃತಿಯು ಶ್ರೀಧರ ಬಳಗಾರ ಅವರ ಕತಾಸಂಕಲನವಾಗಿದೆ. ಈ ಸಂಕಲನದಲ್ಲಿ ಒಟ್ಟು ಎಂಟು ಕಥೆಗಳಿವೆ. ತಲೆಮಾರು, ಸಂಯೋಗ, ಹಿನ್ನೆಲೆ, ಅಡವಿ, ಅಧೋಮುಖ, ಆಕ್ರಮಣ, ದೊಡ್ಡವರ ನಡುವೆ, ಸನ್ನಿವೇಶ ಇವೆಲ್ಲವುಗಳನ್ನು ಒಳಗೊಂಡಿದೆ. ಈ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪುಶಸ್ತಿ ಕೂಡಾ ಸಂದಿದೆ. ಇಲ್ಲಿನ ಕಥೆಗಳ ನಿರೂಪಣೆಯಲ್ಲಿ ನಮಗೆ ಕಾಣುವ ಮುಖ್ಯ ಅಂಶವೆಂದರೆ ಬಳಗಾರರಿಗೆ ಕಥಾನಕದ ಚಲನೆಗಿಂತ ಕಥಾನಕದ ಪಾತ್ರಗಳು, ಆ ಪಾತ್ರಗಳ ಮತ್ತು ಪರಿಸರದ ಜನಜೀವನದ ಸೂಕ್ಷ್ಮ ಚಲನೆ, ಅವರ ದೈನಂದಿನ, ಅವರು ಬದುಕುತ್ತಿರುವ ಜಗತ್ತಿನ ಚಿತ್ರ ಹೆಚ್ಚು ಮುಖ್ಯವೆನಿಸುವುದು. ಇವುಗಳ ಮೂಲಕವೇ ಅವರು ಕಥಾನಕವನ್ನೂ ಮುನ್ನಡೆಸುತ್ತ ಒಂದು ಕಥೆಯನ್ನು ಕಟ್ಟಿಕೊಡುತ್ತಾರೆ. ಇಲ್ಲಿನ ಅವರ ದೃಷ್ಟಿ ಕೂಡ ಸಮಷ್ಟಿಯದ್ದು ವ್ಯಕ್ತಿಗತವನ್ನು ಸಾಮಾಜಿಕವಾಗಿ ಕಾಣುವಂಥದ್ದು. ಒಂದು ಅವಿಭಕ್ತ ಕುಟುಂಬದ ಒಡೆಯುವಿಕೆ ಸಮಾಜದಲ್ಲಿ ಹುಟ್ಟಿಸಬಲ್ಲ ತಲ್ಲಣಗಳನ್ನು ಶ್ರೀಧರ ಬಳಗಾರ ಸಮರ್ಥವಾಗಿ ತಮ್ಮ ಕಥೆಗಳಲ್ಲಿ ಕಾಣಿಸುತ್ತ ಬಂದಿದ್ದಾರೆ. ಎಷ್ಟೋ ಸಾರಿ ಇದು ಕೇವಲ ಆಸ್ತಿಯ ಹಿಸ್ಟರಿ ಮಾತ್ರ ಆಗಿರುವುದಿಲ್ಲ. ಕುಟುಂಬವೊಂದರ ನೋವು, ನಲಿವು, ಗುಟ್ಟು, ಸಂಬಂಧಗಳು, ನಿರ್ಬಂಧಗಳ ಸಂಕೋಲ, ಸ್ವಾತಂತ್ರ್ಯದ ಅಭಿಲಾಷೆ ಎಲ್ಲವೂ ಇದರಲ್ಲಿ ಅಡಗಿದೆ.
ಲೇಖಕ ಶ್ರೀಧರ ಬಳಗಾರ ಅವರ ಊರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಸಮೀಪದಲ್ಲಿರುವ ಬಳಗಾರ. ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಅಧೋಮುಖ', 'ಮುಖಾಂತರ', `ಇಳೆ ಎಂಬ ಕನಸು', 'ಒಂದು ಫೋಟೋದ ನೆಗೆಟಿವ್', 'ಅಮೃತಪಡಿ' ಎಂಬ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ 'ಕೇತಕಿಯ ಬನ', 'ಆಡುಕಳ' ಎಂಬ ಕಾದಂಬರಿಗಳು, 'ರಥ ಬೀದಿ' ಮತ್ತು 'ಕಾಲಪಲ್ಲಟ' ಅಂಕಣ ಬರಹಗಳು, ಹಾಗೇ ಕೆಲವು ಕಥೆಗಳು ಇಂಗ್ಲಿಷ್, ತಮಿಳು, ಹಿಂದಿಗೆ ಭಾಷಾಂತರಗೊಂಡಿವೆ. ಇನ್ನು ಕರ್ನಾಟಕ ವಿಶ್ವವಿದ್ಯಾಲಯ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಪದವಿ ಪಠ್ಯಕ್ಕೆ (ಕನ್ನಡ) ಸೇರ್ಪಡೆಯಾಗಿವೆ. ...
READ MORE