’ಕಾಟಿಹರದ ತಿರುವ’ಎರಡು ಪ್ರಧಾನ ಕಥೆಗಳೊಂದಿಗೆ ( ಬೊಮ್ಮ ಹಾಗೂ ಕಾಟಿಹರದ ತಿರುವು) ಮಲೆನಾಡಿನ ಪರಿಸರದ ಸುತ್ತಲೇ ಹೆಣೆದ ಒಟ್ಟು 11ಕಥೆಗಳ ಗುಚ್ಛ. ಮೂರು ಕಥೆಗಳನ್ನು ಹೊರತುಪಡಿಸಿ ಉಳಿದೆಲ್ಲ ಕಥೆಗಳು ವಾಸ್ತವಿಕ ನೆಲೆಗಟ್ಟಿನ ಕಥೆಗಳೇ. ಪಾತ್ರಗಳು, ಊರುಗಳು ಮಾತ್ರ ಕಾಲ್ಪನಿಕ. ಮಲೆನಾಡಿನಲ್ಲಿ ಅಲ್ಲಲ್ಲಿ ಇಣುಕುವ ಜಾತಿ ವ್ಯವಸ್ಥೆ, ನಕ್ಸಲ್ ಹೋರಾಟಗಳು, ಮಲೆನಾಡನ್ನು ಪೀಡಿಸುತ್ತಿರುವ ವಾಣಿಜ್ಯ ಯೋಜನೆಗಳು, ಇತ್ತೀಚೆಗೆ ಮಲೆನಾಡಿಗರನ್ನು ಬೀದಿಗೆ ತಳ್ಳಿದ ಭೀಕರ ಮಳೆ, ಬರಡಾಗುತ್ತಿರುವ ಜಲಸಂಪನ್ಮೂಲಗಳು... ಹೀಗೆ ಒಂದೊಂದು ಕಥೆಯಲ್ಲಿ ಒಂದೊಂದು ಸಮಸ್ಯೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
ಬೊಮ್ಮ ಕಥೆಯಲ್ಲಿ ದೇವರ ಬಗ್ಗೆ ಜನರ ಪೂರ್ವಾಗ್ರಹಗಳು ಹಾಗೂ ಅದರಿಂದ ನಲುಗಿ ಹೋಗುವ ಅಮಾಯಕ ವ್ಯಕ್ತಿ ಹಾಗೂ ಆತನ ಕುಟುಂಬದ ಕಥೆ. ಇದು ಪ್ರತಿ ಊರುಗಳಲ್ಲಿ ಸಂಭವಿಸುತ್ತಿರುವ ವ್ಯಥೆ. ’ಕಾಟಿಹರದ ತಿರುವು’ ನಕ್ಸಲ್ ಚಟುವಟಿಕೆ ಹೇಗೆ ಮತ್ತು ಯಾಕೆ ಮಲೆನಾಡಿನೊಳಕ್ಕೆ ಕಾಲಿಟ್ಟಿತು ಎಂಬುದನ್ನು ತಮ್ಮದೇ ಪರಿಸರದಲ್ಲಿ ಗಮನಿಸುತ್ತಾ ಬಂದ ನೈಜ ಘಟನೆಗಳನ್ನು ಒಟ್ಟುಗೊಳಿಸಿ ಹೆಣೆದ ಕಥೆ. ಇವೆರಡು ಕಥೆಗಳು ಸಮಾಜದ ಸ್ವಾಸ್ಥ್ಯ ದೃಷ್ಟಿಯಿಂದ ತುಂಬಾ ಮುಖ್ಯ ಎಂಬುದು ಕಥೆಗಾರರ ಅಭಿಪ್ರಾಯ.
ಕಥೆ ’ಹೆದ್ದಾರಿ’ ಅಭಿವೃದ್ಧಿಯ ಓಟಕ್ಕೆ ಬಿದ್ದಿರುವ ಸರ್ಕಾರ ಇಡೀ ಜೀವವಲಯದ ಆರೋಗ್ಯದ ದೃಷ್ಟಿಯಿಂದ ಅತಿಮುಖ್ಯ ಹಾಗೂ ಅತಿಸೂಕ್ಷ್ಮ ಪ್ರದೇಶ ಮಲೆನಾಡು ಹಾಗೂ ಪಶ್ಚಿಮಘಟ್ಟವನ್ನು ಅವೈಜ್ಞಾನಿಕವಾಗಿ ಬಗೆಯುತ್ತಿರುವ ಕುರಿತು ಆತಂಕ ವ್ಯಕ್ತಪಡಿಸುವ ಒಂದು ಪ್ರಯತ್ನ ಇಲ್ಲಿದೆ.
ಕಾರ್ತಿಕಾದಿತ್ಯ ಬೆಳ್ಗೋಡು ಅವರು ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕಿನ ಬೆಳ್ಗೋಡು ಗ್ರಾಮದವರು. ಮೂಡಿಗೆರೆಯಲ್ಲಿ ವಿದ್ಯಾಭ್ಯಾಸ ಪೂರೈಸಿ, ಕೃಷಿಯಲ್ಲಿ ನಿರತರು. ಪರಿಸರ ಕುರಿತು ಜನಜಾಗೃತಿಯಲ್ಲಿ ತೊಡಗಿಸಿಕೊಂಡವರು. ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವವನ್ನು ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಪುಸ್ತಕ ಪ್ರಕಾಶನಕ್ಕೂ ಮುಂದಾಗಿ ತಮ್ಮದೇ ಆದ ಕೆಂಜಳಿಲು ಪ್ರಕಾಶನದ ಮೂಲಕ ತಮ್ಮ ಪುಸ್ತಕಗಳಲ್ಲದೇ ಇತರೆ ಸಮಾನ ಮನಸ್ಕ ಯುವ ಬರಹಗಾರರ ಪುಸ್ತಕಗಳನ್ನು ಹೊರತರಲು ಪ್ರೋತ್ಸಾಹ ನೀಡುತ್ತಿದ್ದಾರೆ. ಕೃತಿಗಳು: ಕಾಟಿಹರದ ತಿರುವು, ಕಾಡು ಹಾದಿಯ ಜಾಡು ಹತ್ತಿ, ನಾನೂ-ನೀವೂ ಜೊತೆಗೊಂದಿಷ್ಟು, ಪ್ಯಾರಾಸೈಟ್, ...
READ MORE