‘ಆಕಾಶ ಮತ್ತು ಬೆಕ್ಕು’ ಅನಂತಮೂರ್ತಿ ಅವರ ನಾಲ್ಕನೆಯ ಕಥಾಸಂಕಲನ. 1973ರಿಂದ 1978ರ ಕಾಲಾವಧಿಯಲ್ಲಿ.ಹಲವು ಕತೆಗಳು ಬಿಡಿಬಿಡಿಯಾಗಿ ಪ್ರಕಟವಾವಾಗಿವೆ. “ಇಲ್ಲಿಯ ಕತೆಗಳಿಗೆ ಸಾಮಾಜಿಕ-ಸಾಂಸ್ಕ್ಕೃತಿಕ-ರಾಜಕೀಯ ಆಯಾಮಗಳನ್ನೂ ಮೀರಿದ ಒಂದು ಬಗೆಯ ತಾತ್ವಿಕ ಶೋಧ ಈ ಸಂಕಲನದ ಸ್ಥಾಯಿ ಗುಣವೆನ್ನಬಹುದು. ಇಲ್ಲಿ ಏನನ್ನೂ ಸ್ಥಾಪಿಸುವ ಧಾವಂತವಿಲ್ಲ. ‘ಖಚಿತತೆ’, ‘ಸ್ಪಷ್ಟತೆ’ ಎಂಬುವು ಇತ್ಯಾತ್ಮಕ, ‘ಅನಿಶ್ಚಿತತೆ’, ‘ಅಸ್ಪಸ್ಟತೆ’, ‘ದ್ವಂದ್ವ’ ಎಂಬುವು ನೇತ್ಯಾತ್ಮಕ ಎಂಬ ಗೃಹೀತವನ್ನು ಈ ಸಂಕಲನದ ಕತೆಗಳು ವ್ಯಕ್ತ ಮಾಡುತ್ತವೆ. ಇಲ್ಲಿ ಲೇಖಕರು ತಾವು ಈಗಾಗಲೇ ನಂಬಿರುವ ತತ್ವಗಳಿಗೆ, ತಲುಪಿರುವ ತೀರ್ಮಾನಗಳಿಗೆ ಕೇವಲ ಕಥಾರೂಪವನ್ನು ಕೊಡುವ ಉದ್ದೇಶವನ್ನು ಇಟ್ಟುಕೊಂಡಿಲ್ಲ. ಜೀವನ ಸಂದರ್ಭಗಳ ಬಹುಮುಖಿ ಶೋಧದ ಸದ್ಯದ ತುರ್ತಿನ ಪ್ರಕ್ರಿಯೆಯಲ್ಲಿ ಹೊರಹೊಮ್ಮುವ ಸತ್ಯಗಳಿಗೆ, ಅವು ಸಮಕಾಲೀನ ರಾಜಕೀಯ ನಂಬಿಕೆಗಳು ಮತ್ತು ವರ್ತನೆಗಳಿಗೆ ಸಲ್ಲದಿದ್ದರೂ, ತೆರೆದುಕೊಳ್ಳುವ ಎದೆಗಾರಿಕೆ ಈ ಕತೆಗಳಲ್ಲಿ ಕಂಡುಬರುತ್ತದೆ... ಪರಸ್ಪರ ತದ್ವಿರುದ್ಧವೆನ್ನಿಸುವ ಹಲವು ಸಂಗತಿ-ಸಂದರ್ಭ-ಪಾತ್ರಗಳನ್ನು ಸಮಾನ ಕುತೂಹಲ ಮತ್ತು ಸಹಾನುಭೂತಿಗಳಿಂದ ಹಲವು ನೆಲೆಗಳಲ್ಲಿ ಪರಿಶೀಲಿಸಿ ಪರಿಭಾವಿಸಿಕೊಳ್ಳುತ್ತಾ ಈ ಪ್ರಕ್ರಿಯೆಯನ್ನೇ ಓದುಗರ ಮುಂದೆ ಒಡ್ಡಿಕೊಳ್ಳುವುದು ಇಲ್ಲಿನ ಕತೆಗಳ ವಿನ್ಯಾಸವೆನ್ನಬಹುದು”, ಎಂದು ಪ್ರಸ್ತಾವನೆಯಲ್ಲಿ ಲೇಖಕ ಟಿ. ಪಿ. ಅಶೋಕ ಹೇಳುತ್ತಾರೆ.
ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...
READ MORE