‘ಮೇವು’ ವಿಜಯಾ ಮೋಹನ ಅವರ ಕಥಾಸಂಕಲನವಾಗಿದೆ. ಇಲ್ಲಿನ ಕಥೆಗಳು ವಸ್ತು ನಿರ್ವಹಣೆಯ ವಿಷಯದಲ್ಲಿ ಯಶಸ್ಸನ್ನು ಸಾಧಿಸಿವೆ. ಜಾತೀಯತೆ, ಸಮಾಜವಾದ, ಮಹಿಳಾವಾದ, ರಾಜಕೀಯ, ಆರ್ಥಿಕ ಹೀಗೆ ಅನೇಕ ಬಗೆಯ ಆಲೋಚನಾ ಕ್ರಮಗಳು ಕಥೆಗಳ ಮೂಲಕ ಅಭಿವ್ಯಕ್ತಗೊಂಡಿವೆ. ಬಯಲು ಸೀಮೆಯ ದನಗಳ ಮೇವಿನ ಬವಣೆ, ಕೊರೋನ ಕಾಲದಲ್ಲಿ ಉಂಟಾದ ಮನುಷ್ಯ ಸಂಬಂಧಗಳಲ್ಲಿನ ವಿಘಟನೆಯ ಸಮಸ್ಯೆ, ಶೌಚಾಲಯದ ಸಮಸ್ಯೆ, ಹೆಣ್ಣುಮಕ್ಕಳ ವಿವಾಹಕ್ಕೆ ಸಂಬಂಧಿಸಿದ ಸಮಸ್ಯೆ ಮೊದಲಾದ ಸನ್ನಿವೇಶಗಳು ಇಲ್ಲಿನ ಕಥಾವಸ್ತುಗಳಾಗಿವೆ. ಪಾಣಿ ಕಥೆಯು ತೇಜಸ್ವಿ ಅವರ ತಬರನ ಕಥೆಯನ್ನು ನೆನಪು ಮಾಡುತ್ತದೆ. ವ್ಯವಸ್ಥೆಯು ತಬರನ ಕಾಲದಿಂದ ಇಲ್ಲಿನವರೆಗೂ ಬದಲಾಗದೇ ಉಳಿದಿರುವುದನ್ನು ಕಥೆ ಸೂಚಿಸುತ್ತದೆ. ಹೀಗೆ ಇಲ್ಲಿನ ಕಥೆಗಳಲ್ಲಿ ದಟ್ಟವಾಗಿ ವ್ಯಾಪಿಸಿರುವ ಸ್ಥಳೀಯ ಬದುಕು ಮತ್ತು ಭಾಷೆ ಸಹಜವಾಗಿ ಮತ್ತು ಚೇತೋಹಾರಿಯಾಗಿ ಮೂಡಿಬಂದಿದೆ.
(ವಾರ್ತಾಭಾರತಿ, ಜೂನ್ 8, 2023)
ಮೇವು: ಸಂಕಟವೂ ಹೌದು ಸಂಭ್ರಮವೂ ಹೌದು
ಕನ್ನಡ ಸಾಹಿತ್ಯದ ಹಲವು ಸೃಜನಶೀಲ ಪ್ರಕಾರಗಳಲ್ಲಿ ದಣಿವರಿಯದ ಕೃಷಿ ಮಾಡುತ್ತಿರುವ ವಿಜಯಾ ಮೋಹನ್ ಅವರ ಇತ್ತೀಚಿನ ಬಹು ಮಹತ್ವದ ಕಥಾ ಸಂಕಲನ ಮೇವು, ತುಮಕೂರು ಜಿಲ್ಲೆಯ ಶಿರಾ ಮಧುಗಿರಿ ಸುತ್ತಮುತ್ತಲ ಭಾಗದ ಬದುಕು ಮತ್ತು ಭಾಷೆಯನ್ನು ಕೇಂದ್ರೀಕರಿಸಿಕೊಂಡಿರುವ ಈ ಕೃತಿ ಹಲವು ಕಾರಣಗಳಿಗಾಗಿ ಮುಖ್ಯವೆನಿಸುತ್ತದೆ. ಬಯಲು ಸೀಮೆಯ ಈ ಭಾಗದಿಂದ ಬಂದವನಾದ ನನ್ನಂತಹವನಿಗೆ ಮೇವು ಎಂಬುದು ಸಂಕಟವೂ ಹೌದು ಸಂಭ್ರಮವೂ ಹೌದು, ಬೇಸಿಗೆ ಅಥವಾ ಬರಗಾಲದ ದಿನಗಳಲ್ಲಿ ದನಗಳಿಗೆ ಮೇವು ಸಿಗದೆ ಪರದಾಡುವಾಗ ಆ ಜನರ ಸಂಕಟ ಹೇಳತೀರದು. ಅವುಗಳಿಗೆ ಹಲ್ಲು
ಹೊಂದಿಸುವುದೇ ಬಂಡಾಟವಾಗಿ ಉಂಡ
ತುತ್ತು ಗಂಟಲಲ್ಲೇ ಸಿಕ್ಕಿಹಾಕಿಕೊಂಡ
ಈ ಹೊತ್ತಿನ ಹೊತ್ತಿಗೆ ಅನುಭವ ದನಗಳನ್ನು ಕಟ್ಟಿಕೊಂಡ
ಯಾರಿಗಾದರೂ ಆಗಲೇಬೇಕು. ಮುಂಗಾರು
ಶುರುವಾಗಿ ಮಳೆ ಬಂದು ನಲ ಹಸುರಾದರ
ಸಂಭ್ರಮವೋ ಸಂಭ್ರಮ. ಹೊಲದ ಬದುಗಳಲ್ಲಿ ದನ ಮೇಯಿಸುವುದೆಂದರೆ ಎಲ್ಲಿಲ್ಲದ ಸಂತೋಷ ಈ ಕಥಾ ಸಂಕಲನಕ್ಕೆ 'ಮೇವು' ಎಂದು ಹೆಸರಿಟ್ಟಿರುವುದೇ ಆ ಭಾಗದ ಜನರ ಬದುಕಿನ ಎಲ್ಲಾ ಬವಣೆ, ಸಂಕಟ ಮತ್ತು ಸಂಭ್ರಮಗಳನ್ನು ಆವರಿಸಿಕೊಂಡಿರುವುದರ ಸಂಕೇತದಂತಿದೆ. ಸಂಕಲನದ ಪ್ರತಿಯೊಂದು ಕಥೆಯಲ್ಲಿಯೂ ಇದು ಒಡಮೂಡಿದೆ. ನಮ್ಮ ಸುತ್ತ ಅನೇಕ ಘಟನೆಗಳು ನಡೆಯುತ್ತಲೇ ಇರುತ್ತವೆ. ಅವುಗಳಿಗೆ ಸೃಜನಶೀಲ ಸ್ಪರ್ಶ ನೀಡಿದಾಗ ಅವು ಸಾಹಿತ್ಯವಾಗಿ ರೂಪುಗೊಳ್ಳುತ್ತವೆ. ಅಂತಹ ಸೃಜನಶೀಲ ಮನಸ್ಸಿನ ವಿಜಯಾ ಮೋಹನ್ ಅವರು ತಮ್ಮ ಸುತ್ತಲಿನ ಬದುಕನ್ನು ತೀವ್ರವಾದ ಹಂಬಲದಿಂದ ನೋಡುತ್ತಾ ಜನರಾಡುವ ಭಾಷೆಯಲ್ಲಿಯೇ ಅವರ ಬದುಕನ್ನು ಕಥೆಗಳಾಗಿ ನಿರೂಪಿಸಿದ್ದಾರೆ.
ಬದುಕು ಅದು ಸಮಕಾಲೀನವೂ ಹಾಗೂ ಸಾರ್ವಕಾಲಿಕವೂ ಆಗುತ್ತದೆ. ಒಂದೇ ಪ್ರದೇಶದಲ್ಲಿರುವ ಒಂದೇ ಭಾಷೆಯೊಳಗಿನ ಸ್ಥಳೀಯ ಭಾಷೆಗಳ ನಡುವೆ ಕೂಡ ಭಾಷಿಕ ಯಜಮಾನಿಕೆ ಕೆಲಸ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಭಾಷೆಯನ್ನು ಸೃಜನಶೀಲ ಬರವಣಿಗೆಗೆ ಕಸಿ ಮಾಡಿ ಅದನ್ನು ಸಾರ್ವತ್ರಿಕಗೊಳಿಸುವುದು ಸುಲಭದ ಮಾತಲ್ಲ. ಅದರಲ್ಲಿ ಹಿಡಿತ ಸಿಕ್ಕಿದರೆ ಆ ಭಾಷೆಗೂ ಆ ಭಾಷೆಯನ್ನಾಡುವ ಜನತೆಗೂ ಮತ್ತು ಸಾಹಿತ್ಯಕ್ಕೂ ಏಕ ಕಾಲದಲ್ಲಿ ಕೊಡುಗೆ ನೀಡಿದಂತಾಗುತ್ತದೆ. ಹೀಗೆ ಮಧುಗಿರಿ ಶಿರಾ ಸ್ಥಳೀಯ ಭಾಷೆಯನ್ನು ಬಳಸಿ ಅದರಲ್ಲಿ ತಮ್ಮದೇ ಆದ ಹಿಡಿತ ಸಾಧಿಸಿರುವವರು ವಿಜಯಾ ಮೋಹನ್. ತಮ್ಮ ಸ್ಥಳೀಯ ಭಾಷೆಯನ್ನೇ ಬಳಸಿ ಸೃಜನಶೀಲ ಕಥೆಗಳನ್ನು ಕಟ್ಟಿ ಆ ಕಥೆಗಳ ಮೂಲಕ ಆ ಭಾಷೆಯನ್ನೂ ತಮ್ಮ ಸ್ಥಳೀಯತೆಯ ಆಚೆಗೆ ದಾಟಿಸುವ ಸವಾಲನ್ನು ವಿಜಯಾ ಮೋಹನ್ ಸ್ವೀಕರಿಸಿ ಬಹುದೂರ ಸಾಗಿದ್ದಾರೆ. ಕನ್ನಡದ ಬಹುತೇಕ ಕಥೆಗಾರರು ಈ ಪ್ರಯೋಗವನ್ನು ಮಾಡಿ ಗೆಲುವು ಸಾಧಿಸಿದ್ದಾರೆ. ದೇವನೂರ ಮಹಾದೇವ ಅವರು 'ಕುಸುಮಬಾಲೆ' ಬರೆದಾಗ ಇದನ್ನು ಕನ್ನಡಕ್ಕೆ ಅನುವಾದ ಮಾಡಬೇಕು ಎಂದವರೂ ಇದ್ದಾರೆ. ಹಾಗಾಗಿ ಹೊಸದಾಗಿ ಸ್ವೀಕಾರಗೊಳ್ಳುವುದು ಕಷ್ಟವಾದರೂ ಅಂತಿಮವಾಗಿ ಅದು ಗೆಲ್ಲುತ್ತದೆ. ಈ ಸಂಭ್ರಮ ಇದ್ದಾಗ ಈ ಭಾಷೆಯನ್ನು ಬಳಸುವಾಗ ಎದುರಾಗಬಹುದಾದ ಕಷ್ಟವನ್ನು ದೂರ ಮಾಡಿಕೊಳ್ಳಲು ಮೇವು ಕಥೆಗಳಲ್ಲಿ ಪಾತ್ರಗಳು ಮಾತನಾಡುವಾಗ ದೇವನೂರರ ಕಥೆಗಳಲ್ಲಿ ಮಾತನಾಡುವ ಪಾತ್ರಗಳು ನೆನಪಾಗುತ್ತವೆ.
ಈ ಕಥೆಗಳಲ್ಲಿನ ಯಾವುದೇ ಪಾತ್ರಗಳು ಏನೋ ಸರ್ಕಸ್ ಮಾಡಿ ಸೃಷ್ಟಿಸಿಕೊಂಡು ತಂದ ಪಾತ್ರಗಳಲ್ಲ. ಸಹಜವಾಗಿ ನಮ್ಮ ನಡುವೆಯೇ ಇರುವ ಪಾತ್ರಗಳಾಗಿ ಕಂಡು ಬರುತ್ತದೆ. ತೇಜಸ್ವಿ ಕಥೆಗಳಲ್ಲಿ ಇಂತಹ ಪಾತ್ರಗಳು ಹೇರಳವಾಗಿ ಬರುತ್ತವೆ. ಕಥೆಗೆ ಒಂದು ಕೇಂದ್ರವಿರಬೇಕು, ಕಥೆಯ ನಿರೂಪಣೆ ಎಲ್ಲಿಗೆ ಹೋದರೂ ಅದು ತಿರುಗಿ ಕೇಂದ್ರಕ್ಕೇ ಬರಬೇಕು ಎಂಬ ಒಂದು ಕ್ರಮವಿದೆ. ಆದರೆ ಇಲ್ಲಿನ ಕಥೆಗಳಲ್ಲಿ ಈ ಕೇಂದ್ರ ವಸ್ತು ಯಾವುದು ಎಂಬುದನ್ನು ಗುರುತಿಸುವುದೇ ಕಷ್ಟವಾಗುತ್ತದೆ. ಒಂದೇ ಕಥೆಯಲ್ಲಿ ಹಲವು ವಸ್ತುಗಳನ್ನು ನಿರ್ವಹಿಸುವಾಗ ಕೇಂದ್ರವನ್ನು ಮರೆಯಾಗುವ, ಹಿನ್ನೆಲೆಗೆ ಸರಿಯುವ ಅಥವಾ ಹಗುರವಾಗುವ ಸಾಧ್ಯತೆಯಿರುತ್ತದೆ. ಇದು ಕೇಂದ್ರವಸ್ತುವನ್ನು ಅದರ ಆಶಯದನ್ನು ತೀವ್ರಗೊಳಿಸುವುದಕ್ಕೆ ತಡೆಯನ್ನು ಉಂಟುಮಾಡುತ್ತದೆ. ಒಂದೇ ಕಥೆಯಲ್ಲಿ ಹಲವು ಪಾತ್ರಗಳು ತಮ್ಮ ನೋವು ನಲಿವುಗಳನ್ನು ಅಭಿವ್ಯಕ್ತಿಸುವ ಹಾಗೆ ಹಲವು ಸನ್ನಿವೇಶಗಳು ಎದುರಾಗಿ ತಮ್ಮನ್ನು ಪ್ರೊಜೆಕ್ಟ್ ಮಾಡಿಕೊಳ್ಳುತ್ತವೆ. ಇಷ್ಟಾಗಿಯೂ ಇಲ್ಲಿನ ಕಥೆಗಳು ವಸ್ತು ನಿರ್ವಹಣೆಯ ವಿಷಯದಲ್ಲಿ ಯಶಸ್ಸನ್ನು ಸಾಧಿಸಿವೆ. ಇಲ್ಲಿನ ಕಥೆಗಳಲ್ಲಿ ಜಾತೀಯತೆ, ಸಮಾಜವಾದ, ಮಹಿಳಾವಾದ, ರಾಜಕೀಯ, ಆರ್ಥಿಕ ಹೀಗೆ ಅನೇಕ ಬಗೆಯ ಆಲೋಚನಾ ಕ್ರಮಗಳು ಕಥೆಗಳ ಮೂಲಕ ಅಭಿವ್ಯಕ್ತಗೊಂಡಿವೆ. ಬಯಲು ಸೀಮೆಯ ದನಗಳ ಮೇವಿನ ಬವಣೆ, ಕೊರೋನ ಕಾಲದಲ್ಲಿ ಉಂಟಾದ ಮನುಷ್ಯ ಸಂಬಂಧಗಳಲ್ಲಿನ ವಿಘಟನೆಯ ಸಮಸ್ಯೆ, ಶೌಚಾಲಯದ ಸಮಸ್ಯೆ, ಹೆಣ್ಣುಮಕ್ಕಳ ವಿವಾಹಕ್ಕೆ ಸಂಬಂಧಿಸಿದ ಸಮಸ್ಯೆ ಮೊದಲಾದ ಸನ್ನಿವೇಶಗಳು ಇಲ್ಲಿನ ಕಥೆಗಳ ವಸ್ತುಗಳಾಗಿ ಬಂದಿವೆ.
ಇಲ್ಲಿ ಬಳಕೆಯಾಗಿರುವ ರೂಪಕಗಳು ಅರ್ಥಪೂರ್ಣವಾಗಿವೆ. ಅವು ಸಾಮಾನ್ಯವಾಗಿ ಕೃಷಿ ಮೂಲದಿಂದ ಬಂದು ರೂಪಕಗಳು, ಜೈನ ಕಥನಕಾರರೂ, ಹಳಗನ್ನಡದ ಅನೇಕ ಕಥೆಗಾರರೂ ಹಾಗೂ ಮುಖ್ಯವಾಗಿ ವಚನಕಾರರು ಕೃಷಿ ಮೂಲದ ರೂಪಕಗಳನ್ನು ಬಳಸಿದ್ದಾರೆ. ಸಾಮಾನ್ಯವಾಗಿ ಅಲ್ಲಿನ ಕೃಷಿಕರು ಬಳಸುವ ಕೃಷಿ ಸಾಮಗ್ರಿಗಳನ್ನೇ ರೂಪಕಗಳಾಗಿ ಬಳಸಿರುವುದರಿಂದ ಕಥೆಗಾರ್ತಿ ಬದುಕನ್ನು ತೀವ್ರವಾಗಿ ಗ್ರಹಿಸಿರುವ ಸಾಧ್ಯತೆಯನ್ನು ಇದು ತೋರಿಸಿಕೊಡುತ್ತದೆ. ಪಾಣಿ ಕಥೆಯು ತೇಜಸ್ವಿ ಅವರ ತಬರನ ಕಥೆಯನ್ನು ನೆನಪು ಮಾಡುತ್ತದೆ. ವ್ಯವಸ್ಥೆ ತಬರನ ಕಾಲದಿಂದ ಇಲ್ಲಿನ ವರೆಗೂ ಬದಲಾಗದೇ ಉಳಿದಿರುವುದನ್ನು ಕಥೆ ಸೂಚಿಸುತ್ತದೆ. ಹೀಗೆ ಇಲ್ಲಿನ ಕಥೆಗಳಲ್ಲಿ ದಟ್ಟವಾಗಿ ವ್ಯಾಪಿಸಿರುವ ಸ್ಥಳೀಯ ಬದುಕು ಮತ್ತು ಭಾಷೆ ಸಹಜವಾಗಿ ಮತ್ತು ಚೇತೋಹಾರಿಯಾಗಿ ಮೂಡಿಬಂದಿದೆ. ಸ್ಥಳೀಯ ಭಾಷೆಯನ್ನು ತದ್ದು ಸೃಜನಶೀಲ ಬರವಣಿಗೆಯಲ್ಲಿ ಬಳಸಿ ಯಶಸ್ಸು ಸಾಧಿಸಿರುವ ವಿಜಯಾ ಮೋಹನ್ ಅವರು ಇನ್ನಷ್ಟು ತೀವ್ರವಾಗಿ ಭಾಷೆಯನ್ನು ಬಳಸಲಿ ಎಂದು ಆಶಿಸುತ್ತೇನೆ.
- `ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ
---
ಕೆಂಡಸಂಪಿಗೆಯಲ್ಲಿ ಪ್ರಕಟಗೊಂಡ ‘ಮೇವು’ ಕೃತಿಯ ಕುರಿತ ಸವಿತಾ ಬನ್ನಾಡಿ ಅವರ ಲೇಖನ
©2024 Book Brahma Private Limited.