‘ಗುಬ್ಬಿ ಹಳ್ಳದ ಸಾಕ್ಷಿಯಲ್ಲಿ’ ಕೃತಿಯು ಎಲ್.ಸಿ. ಸುಮಿತ್ರಾ ಅವರ ಕತಾಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : `ಗುಬ್ಬಿ ಹಳ್ಳದ ಸಾಕ್ಷಿಯಲ್ಲಿ‘ ಅವರ ಒಂದು ಕತೆಯಾಗಿದ್ದರೂ ಇಡೀ ಸಂಕಲನದ ಜವಾಬ್ದಾರಿ ಹೊತ್ತುನಿಂತ ಶೀರ್ಷಿಕೆ.`ಎಂತಹ ಕಡು ಬೇಸಿಗೆಯಲ್ಲಾದರೂ ಹಕ್ಕಿಗಳು ಕುಡಿಯುವಷ್ಟಾದರೂ ನೀರಿರುತ್ತದೆ ಎಂದು ಗುಬ್ಬಿಹಳ್ಳಿಯ ಹಳ್ಳಕ್ಕೆ ಬರುತ್ತವೆ. ಅಗತ್ಯ ಮುಗಿದಾಗ ನಗರಕ್ಕೆ ಮುಖಮಾಡುತ್ತವೆ! ಅಂತೆಯೇ ಇಲ್ಲಿನ ಕತೆಗಳ ಪಾತ್ರಗಳೂ ಕೂಡಾ. `ಗುಡಿಯೊಳಗೆ‘ ಕತೆಯ ರಾಮ, ನಿಮ್ನ ಜಾತಿಯವ. ಹೇಗೋ ವಿದ್ಯಾಭ್ಯಾಸ ಪಡೆದು ನಗರ ಸೇರಿದ. ಬ್ರಾಹ್ಮಣ ಕನ್ಯೆಯನ್ನು ವಿವಾಹವಾದಾಗ ಹಳ್ಳಿಯಲ್ಲಿದ್ದ ಅಮ್ಮ ಕೂಡಾ ದೂರವಾದರು. ತಮ್ಮ ಹಳ್ಳಿಯ ದೇವರ ಗುಡಿಗೆ `ರಾಮಣ್ಣನವರಾಗಿ‘ ಮರಳಿ ಬಂದರೂ ಅಲ್ಲಿ ಮರುವಾಸ್ತವ್ಯ ಹೂಡುವುದಿಲ್ಲ. `ಗುಬ್ಬಿಹಳ್ಳಿ ಸಾಕ್ಷಿಯಲ್ಲಿ‘ನ ನಿಸರ್ಗ ಪಟೇಲ್ ಅಂಥವನಲ್ಲ. ಆತ ಹಳ್ಳಿಯಿಂದ ಪೇಟೆಗೆ ಹೋಗಿ ವಿದ್ಯಾಭ್ಯಾಸ ಮುಗಿಸಿದ, ಮರಳಿ ಹಳ್ಳಿಗೆ ಬಂದ. `ಕಲ್ಲಿನ ಕೋಳಿ‘ಯ ಸುನೀಲ ಪೇಟೆಗೆ ಹೋಗಿ ಉದ್ಯೋಗ ಹಿಡಿದರೂ ತನ್ನ ಮುರಿದ ಕೈಗೆ ನಾಟಿ ಮದ್ದು ಮಾಡಲು ರಜ ತೆಗೆದು ಹಳ್ಳಿಗೇ ಬಂದ. `ಯು ಕಟ್‘ ಕತೆಯಲ್ಲಿ ಕೋಮಲಾಳ ಗಂಡ ತಾನು ಹಳ್ಳಿಯ ತೋಟಗದ್ದೆಗಳನ್ನು ಮಾರಿ ಸೇರಿದ್ದು ಪಟ್ಟಣಕ್ಕೆ. `ಒಂದು ಮುಚ್ಚಳ ಹಾಕಿದ ಪೆಟ್ಟಿಗೆ‘ಯಲ್ಲಿನ ಆ ಪೆಟ್ಟಿಗೆ ಇಲಿ ತಿಂದು ತೂತು ಬಿದ್ದಿದ್ದರೂ ಅದು ಹೋಗಿ ಸೇರಿದ್ದು ಪಟ್ಟಣಕ್ಕೆ. ಸುಮಿತ್ರಾ ಅವರದು ಹಳ್ಳಿ ಪಟ್ಟಣಗಳ ನಡುವೆ ಸೇತುವೆ ಕಟ್ಟುವ ಕೆಲಸ. ಅವರ ಜಾಣ್ಮೆ ಎಲ್ಲಿದೆಯೆಂದರೆ ಹಳ್ಳಿ, ಪಟ್ಟಣಗಳಲ್ಲಿ – ಇಂದಿನ ಪರಿಸರವಾದಿಗಳ ಹಾಗೆ – ಹಳ್ಳಿಯೇ ಸರ್ವಶ್ರೇಷ್ಠ ಎಂದು ಹೇಳ ಹೊರಡದೇ ಇರುವುದರಲ್ಲಿ. `ಅಲೆಗಳ ನಡುವೆ‘ಯಂತಹ ಕತೆಯಲ್ಲಿ ಐವರು ಗೆಳತಿಯರು ಕೈಗೊಂಡ ಯಾತ್ರೆಯಲ್ಲಿ ಕೇರಳದ ಪ್ರಕೃತಿಯ ಮನೋಜ್ಞ ವರ್ಣನೆಯಿದೆ.
ಜನಪ್ರಿಯ ಲೇಖಕಿ ಸುಮಿತ್ರ ಎಲ್.ಸಿ ಅವರು ಹುಟ್ಟಿದ್ದು ತೀರ್ಥಹಳ್ಳಿ ತಾಲ್ಲೂಕಿನ ಲಕ್ಷ್ಮೀಪುರ. ತಾಯಿ ಹೊನ್ನಮ್ಮ, ತಂದೆ ಎಲ್.ಚಂದ್ರಪ್ಪಗೌಡ. ಸಾಹಿತ್ಯದಲ್ಲಿ ಸ್ನಾತಕೋತ್ತರ ಪಡೆದಿರುವ ಇವರು ಹಾಲಿ ಅಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಕುಲದ ದಾರಿ (ಕಾವ್ಯ), ಪಿಂಜರ್(ಕಾದಂಬರಿ ಅನುವಾದ), ನಿರುಕ್ತ(ವಿಮರ್ಶೆ), ಗುಬ್ಬಿ ಹಳ್ಳದ ಸಾಕ್ಷಿಯಲ್ಲಿ(ಕಥಾ ಸಂಕಲನ), ಹೂ ಹಸಿರಿನ ಮಾತು ಇವು ಸುಮಿತ್ರ ಅವರ ಪ್ರಮುಖ ಕೃತಿಗಳಾಗಿವೆ. ಇವರಿಗೆ ನೀಲಗಂಗಾದತ್ತಿ ಬಹುಮಾನ, ಶಿವಮೊಗ್ಗ ಕರ್ನಾಟಕ ಸಂಘದಿಂದ ಎಸ್.ವಿ. ಪರಮೇಶ್ವರಭಟ್ಟ ಪ್ರಶಸ್ತಿ ನೀಡಿ ಗೌರಿವಿಸಲಾಗಿದೆ. ...
READ MORE