‘ಅಲ್ಪ ಸ್ವಲ್ಪ ವುಡ್ ಹೌಸ್ ಮತ್ತು ಇತರ ಕಥೆಗಳು’ ವಿಜ್ಞಾನ ಲೇಖಕ ಪಾಲಹಳ್ಳಿ ವಿಶ್ವನಾಥ್ ಅವರ ಕಥಾ ಸಂಕಲನ. ಕೃತಿಯ ಬಗ್ಗೆ ಬರೆಯುತ್ತಾ “ಆಂಗ್ಲ ಭಾಷೆಯ ಖ್ಯಾತ ಹಾಸ್ಯ ಲೇಖಕ ಪಿ.ಜಿ. ವುಡ್ಹೌಸರನ್ನು ಕರ್ನಾಟಕದಲ್ಲಿ ಇರಿಸಿ ಅವರ ಪಾತ್ರಗಳ ಬಾಯಲ್ಲಿ ಕನ್ನಡವನ್ನು ಏಕೆ ಮಾತನಾಡಿಸಬಾರದು ಎಂದುಕೊಂಡೆ ಎನ್ನುತ್ತಾರೆ ಲೇಖಕ ವಿಶ್ವನಾಥ್. ಇದೇನೂ ಹೊಸದಲ್ಲ, ಕೇಫ ಮತ್ತು ಇತರ ಹಿರಿಯರು ಇದನ್ನು ಹಿಂದೆಯೇ ಮಾಡಿದ್ದಾರೆ ಎಂದೂ ತಿಳಿಯಿತು. ಆದರೆ ನನ್ನದೂ ಪ್ರಯತ್ನವಿರಲಿ ಎಂದು ಕೆಲವು ಕಥೆಗಳನ್ನು ಕನ್ನಡೀಕರಿಸಿದ್ದೇನೆ ಎನ್ನುತ್ತಾರೆ; ಮೂಲ ಕಥೆಗಳಿಂದ ಮುಖ್ಯವಾಗಿ ಕಥಾವಸ್ತು, ಹಾಸ್ಯದ ಸನ್ನಿವೇಶಗಳು ಮತ್ತು ಸಂಭಾಷಣೆಗಳನ್ನು ತೆಗೆದುಕೊಂಡಿದ್ದು ಅನೇಕ ವಿವರಗಳನ್ನು ಬಿಟ್ಟಿದ್ದೇನೆ.
ಇದಕ್ಕೋಸ್ಕರವೆ 'ಅಲ್ಪ-ಸ್ವಲ್ಪ ವುಡ್ ಹೌಸ್” ಎಂಬ ಶೀರ್ಷಿಕೆ ನೀಡಿದ್ದೇನೆ ಎಂಬುದು ಲೇಖಕರ ಮಾತು. ಕೃತಿಯಲ್ಲಿ ಆಂಗ್ಲ ಭಾಷೆಯ ಖ್ಯಾತ ಹಾಸ್ಯ ಲೇಖಕ ಪಿ.ಜಿ. ವುಡ್ ಹೌಸರ ಕಥೆಗಳು ಸೇರಿದಂತೆ ಹಲವು ಹಾಸ್ಯ ಕಥೆಗಳಿವೆ.
ವಿಜ್ಞಾನ ಲೇಖಕ, ಅಂಕಣಕಾರ ಪಿ.ಆರ್. ವಿಶ್ವನಾಥ್ ಅವರು ಮೂಲತಃ ಬೆಂಗಳೂರಿನವರು. 1942ರಲ್ಲಿ ಜನಿಸಿದ ಪಿ.ಆರ್. ವಿಶ್ವನಾಥ್ ಅವರು ಪಾಲಹಳ್ಳಿ ವಿಶ್ವನಾಥ್ ಎಂದೇ ಪ್ರಸಿದ್ಧರಾದವರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್.ಸಿ ಪೂರೈಸಿದ ಅವರು ಆ್ಯನ್ ಆರ್ಬರ್ ಮಿಶಿಗನ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪಡೆದರು. ಆನಂತರ ಮುಂಬಯಿಯ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (ಟಿ.ಐ.ಎಫ್.ಆರ್)ಯಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಬೆಂಗಳೂರಿನ ಭಾರತೀಯ ಖಭೌತ ಸಂಸ್ಥೆ (ಐ.ಐ.ಎ) ಸಂದರ್ಶಕ ಪ್ರಾಧ್ಯಾಪಕರು; ಕ್ಯಾಲಿಫೋರ್ನಿಯ ಮತ್ತು ಮೇರಿಲ್ಯಾಂಡ್ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರು, ಭಾರತ ಮತ್ತು ಅಮೆರಿಕದಲ್ಲಿ ಹಲವಾರು ಭೌತವಿಜ್ಞಾನ ಮತ್ತು ಖಗೋಳ ವಿಜ್ಞಾನದ ಪ್ರಯೋಗಗಳಲ್ಲಿ ಭಾಗಿಯಾಗಿದ್ದರು. ...
READ MORE