ನಮ್ಮ ಅರಸು

Author : ಬಸವರಾಜು ಮೇಗಲಕೇರಿ

Pages 584

₹ 570.00




Year of Publication: 2020
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ, ತಾ: ಹೊಸಪೇಟೆ ಜಿಲ್ಲೆ: ಬಳ್ಳಾರಿ

Synopsys

ಕರ್ನಾಟಕ ರಾಜ್ಯ ಕಂಡ ಧೀಮಂತ ಮುಖ್ಯಮಂತ್ರಿಗಳ ಪೈಕಿ ದೇವರಾಜ ಅರಸು ಒಬ್ಬರು. ಹಿಂದುಳಿದ ವರ್ಗಕ್ಕೆ ಸೇರಿದ ಅರಸು ಅವರು ತಾರತಮ್ಯ ಮಾಡದೇ ಸರ್ವ ಜನರಿಗೂ ಒಳಿತಾಗುವ ದೃಷ್ಟಿಯಿಂದ ಅಭಿವೃದ್ಧಿ ಕಾರ್ಯಗಳನ್ನು ರೂಪಿಸಿದ್ದು ಮಾತ್ರವಲ್ಲ; ಅವುಗಳ ಜಾರಿಗೆ ವಿಶೇಷ ಗಮನ ಹರಿಸಿದರು. ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕಾರಣ ಮಾಡಲಿಲ್ಲ. ಇಂತಹ ಮಹನೀಯರ ಬಗ್ಗೆ ಲೇಖಕ ಬಸವರಾಜು ಮೇಗಲಕೇರಿ ಅವರು ‘ನಮ್ಮ ಅರಸು’ ಶೀರ್ಷಿಕೆಯಡಿ ಪ್ರಕಟಿಸಿದ ಕೃತಿ.

About the Author

ಬಸವರಾಜು ಮೇಗಲಕೇರಿ

ಬಸವರಾಜು ಹುಟ್ಟಿದ್ದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ (1964). ಚನ್ನರಾಯಪಟ್ಟಣದಲ್ಲಿಯೇ ಪದವಿ ವ್ಯಾಸಂಗ. 1985ರಲ್ಲಿ `ಲಂಕೇಶ್ ಪತ್ರಿಕೆ ಸೇರ್ಪಡೆ. 1990ರಿಂದ 2000 ವರೆಗೆ, ಪತ್ರಿಕೆಯಲ್ಲಿ ಪತ್ರಕರ್ತನಾಗಿ ಹತ್ತು ವರ್ಷಗಳ ಕಾಲ ಕಾರ್ಯ ನಿರ್ವಹಣೆ. `ಅಗ್ನಿ ವಾರಪತ್ರಿಕೆಯಲ್ಲಿ 2001ರಿಂದ 2007ರ ವರೆಗೆ 6 ವರ್ಷಗಳ ಕಾಲ ಸಹಸಂಪಾದಕನಾಗಿ; 2007ರ ಫೆಬ್ರವರಿಯಿಂದ ಸೆಪ್ಟೆಂಬರ್ವರೆಗೆ, 8 ತಿಂಗಳ ಕಾಲ ಸಂಪಾದಕನಾಗಿ ಕಾರ್ಯ ನಿರ್ವಹಣೆ. 2007 ರಿಂದ 2009ರ ವರೆಗೆ, ಎರಡು ವರ್ಷಗಳ ಕಾಲ ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿ ಕಾರ್ಯನಿರ್ವಾಹಕ ಸಂಪಾದಕನಾಗಿ ಕಾರ್ಯ ನಿರ್ವಹಣೆ. ಕನ್ನಡದ ಸಾಂಸ್ಕೃತಿಕ ವೆಬ್ ತಾಣ ಕೆಂಡಸಂಪಿಗೆ ಡಾಟ್ ಕಾಂ-ನಲ್ಲಿ 2009ರಿಂದ 2012ರ ...

READ MORE

Reviews

ʼನಮ್ಮ ಅರಸುʼ ಕೃತಿಯ ವಿಮರ್ಶೆ- ಹೊಸ ಮನುಷ್ಯ

ದೇವರಾಜ ಅರಸು ಆಧುನಿಕ ಕರ್ನಾಟಕ ಕಂಡ ಅನನ್ಯ ರಾಜಕಾರಣಿ ಮತ್ತು ಮುಖ್ಯಮಂತ್ರಿ. ಎಂಟು ವರ್ಷಗಳು ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ರಾಜ್ಯ ರಾಜಕಾರಣದಲ್ಲಿ ತಂದ ಬದಲಾವಣೆಗಳು ಮತ್ತು (ಆಡಳಿದಲ್ಲಿ ತಂದ ಕ್ರಾಂತಿಕಾರಿ ಸುಧಾರಣೆಗಳು ಐತಿಹಾಸಿಕವಾದವುಗಳು. ಇದು ರಾಜ್ಯದ ಸಾರ್ವಜನಿಕ ಜೀವನದಲ್ಲಿನ ಒಂದು ನಿರ್ಣಾಯಕ ಘಟ್ಟ. ಇಲ್ಲಿ ಆವರೆಗೆ ಸಹಜವೆಂಬಂತೆ ನಡೆದಿದ್ದ ಬಲಾಡ್ಯ ಜಾತಿ ಮತ್ತು ವರ್ಗಗಳ ಮೇಲಾಟ ಅಂತ್ಯಗೊಂಡು ಪ್ರಜಾಪ್ರಭುತ್ವದ ನಿಜಾರ್ಥದಲ್ಲಿ ಕಾಣತೊಡಗಿತು. ಇದನ್ನು ಅರಸರು ಮಾಡಿದ್ದು ಬಸವರಾಜು ಮೇಗಲಕೋಲ ೧೯೬೯ರಲ್ಲಿ ಆದ ಕಾಂಗ್ರೆಸ್ ವಿಭಜನೆಯ ಚಲನಶೀಲತೆಯನ್ನು ಬಳಸಿಕೊಂಡು ರಾಜ್ಯದ ಪಕ್ಷ ರಾಜಕಾರಣದಲ್ಲಿ ಮನೆಮಾಡಿದ್ದ ಮೇಲಾತಿಗಳ ಪ್ರಾಬಲ್ಯವನ್ನು ಕುಗ್ಗಿಸಿ ಅಧಿಕಾರಕ್ಕೆ ಬರುವ ಮೂಲಕ, ಸ್ವತಃ ಬಹು ಅಲ್ಪಸಂಖ್ಯಾತವಾದ ಜಾತಿಗೆ ಸೇರಿದ ಅರಸರು ನಿಜವಾದ ಮಣ್ಣಿನಮಗ; ಹೋಲತೋಟಗಳಲ್ಲಿ ಮೈಬಗ್ಗಿಸಿ ದುಡಿಯುತ್ತಿದ್ದವರು; ವಿದ್ಯಾವಂತರಾದರೂ ಹಳ್ಳಿಯ ಹೈದನ ಖದರು ಉಳಿಸಿಕೊಂಡಿದ್ದವರು. ಹಾಗಾಗಿ ಅವರು ನಿಜ ಜನನಾಯಕನಾಗಿ ಮೂಡಲು ಸಾಧ್ಯವಾಗಿ ರಾಜ್ಯದ ದುಡಿಯುವ ಜನರ ನಾಡಿಮಿಡಿತವನ್ನು ಅರಿತು ಅವರ ಸಂಕಷ್ಟನೋವುಗಳಿಗೆ ಪರಿಹಾರವಾಗಬಲ್ಲ ಆಡಳಿತ ಶೈಲಿಯನ್ನು ಮತ್ತು ಶಾಸನಗಳನ್ನು ಜಾರಿಗೆ ತಂದರು. 'ಉಳುವವನೇ ನೆಲದೊಡೆಯ' ಎಂಬ ಸಮಾಜವಾದಿಗಳ ಆಶಯವನ್ನು ಭೂಸುಧಾರಣೆಯ ರೂಪದಲ್ಲಿ ಜಾರಿಗೆ ತಂದು ನಿಜ ಸಮಾಜವಾದಿ ಎನಿಸಿಕೊಂಡರು. ಇದರ ಜೊತೆಗೇ, ಜೀತ ಪದ್ಧತಿ ನಿರ್ಮೂಲನ, ಋಣ ಪರಿಹಾರ ಕಾಯಿದೆ, ಮಲ ಹೊರುವ ಪದ್ಧತಿಯ ನಿಷೇಧ ಕಾಯಿದೆ ಮತ್ತು ಹಿಂದುಳಿದ ಜಾತಿಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಕಾಯಿದೆಗಳನ್ನು ಜಾರಿಗೆ ತಂದರು. ರಾಜ್ಯದ ಜನತೆಯ ಬಹುಪಾಲು ಭಾಗದಲ್ಲಿ ಹೊಸ ಸಂಚಲನ-ಚೈತನ್ಯ ಸೃಷ್ಟಿಯಾಯಿತು.

ಅರಸರು ಬರೀ ಇಂತಹ ತಕ್ಷಣದ ಮತ್ತು ನೇರ ಪರಿಣಾಗಳನ್ನು ಉಂಟು ಮಾಡುವ ಕಾರ್ಯಕ್ರಮಗಳನ್ನಷ್ಟೇ ಅಲ್ಲ, ಹೊಸ ನೀರಾವರಿ ಯೋಜನೆಗಳನ್ನೂ ನಾಡಿನ ಕೆರೆ-ಕಟ್ಟೆ-ನದಿ-ಕಾಡು ಮುಂತಾದ ಪ್ರಾಕೃತಿಕ ಸಂಪನ್ಮೂಲಗಳನ್ನು ರಕ್ಷಿಸುವ ಯೋಜನೆಗಳನ್ನೂ, ನಾಡಿನ ಭಾಷೆ-ಸಂಸ್ಕೃತಿಗಳ ಪೋಷಣೆಯ ನಿರ್ಧಾರಗಳನ್ನೂ ಕೈಗೊಂಡರು. ಈ ಸಂಬಂಧ ಅವರು ಕೈಗೊಂಡ ಉಲ್ಲೇಖಾರ್ಹ ನಿರ್ಧಾರವೆಂದರೆ ರಾಜ್ಯಕ್ಕೆ ಕರ್ನಾಟಕವೆಂದು ಮರ್ನನಾಮಕರಣ ಮಾಡಬೇಕೆಂಬ ಕನ್ನಡಿಗರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿ ಕನ್ನಡವನ್ನು ರಾಜ್ಯಮಟ್ಟದಲ್ಲಿ ಆಡಳಿತ ಭಾಷೆಯೆಂದು ಘೋಷಿಸಿದ್ದು.

ಅರಸರು ಈ ಎಲ್ಲ ಜನಪರ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾದದ್ದು, ಇವನ್ನು ಸುಯೋಜಿತವಾಗಿ ರೂಪಿಸಿ ಜಾರಿಗೆ ತರಬಲ್ಲ ಅಧಿಕಾರಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ತೋರಿದ ಆಡಳಿತ ವ್ಯವಸ್ಥೆಯ ಒಳಹೊರಗನ್ನು ಸೂಕ್ಷ್ಮ ಮತ್ತು ನಿಕಟವಾಗಿ ಅವಲೋಕಿಸುವ ನಿಜವಾದ ನಾಯಕತ್ವ ಗುಣದಿಂದಾಗಿ, ಇದೆಲ್ಲದಕ್ಕೆ ಆಧಾರವಾದ ರಾಜಕೀಯ ಬಲ ಗಳಿಸಲು ಅವರು ಭೂಮಿಕೆ ಸಿದ್ಧಪಡಿಸುವಲ್ಲಿ ಅವರು ತೋರಿದ ಆತ್ಮವಿಶ್ವಾಸ, ಧೈರ್ಯ ಮತ್ತು ಮಾಡಿದ ದುಸ್ಸಾಹಸ ಮಹಾನಾಯಕನೊಬ್ಬನಿಗೆ ಮಾತ್ರ ಸಾಧ್ಯವಿರುವ ಸಂಕಲ್ಪಶಕ್ತಿಗೆ ಸಾಕ್ಷಿಯಂತಿವೆ. ತಮ್ಮನ್ನು ಅಧಿಕಾರಕ್ಕೆ ತಂದ 1972ರ ರಾಜ್ಯ ವಿಧಾನಸಭಾ ಚುನಾವಣೆಗಳ ಮುನ್ನ ಅವರು ಮಾಡಿದ ರಾಜ್ಯ ಪ್ರವಾಸದ ಸಮಯದಲ್ಲಿ ಚುನಾವಣೆಗೆ ಅಭ್ಯರ್ಥಿಗಳನ್ನು ಗುರುತಿಸಿದ ರೀತಿ ಇದಕ್ಕೆ ಸಾಕ್ಷಿ: ಬಹುಪಾಲು ಅಜ್ಞಾತರೂ, ಅನಾಮಿಕರೂ ಆಗಿದ್ದ ಜನರಲ್ಲಿ ಇವರು ಭವಿಷ್ಯದ ನಾಯಕರನ್ನು ಗುರುತಿಸಿದರು. ಅವರು ವೀರಪ್ಪ ಮೊಯ್ಲಿ ಆಗಿರಬಹುದು, ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಆಗಿರಬಹುದು, ಮೊಹಿಯುದ್ದೀನ್, ಜಾಫರ್ ಶರೀಫ್, ಸುಬ್ಬಯ್ಯ ಶೆಟ್ಟಿ, ಡಿ.ಬಿ. ಚಂದ್ರೇಗೌಡ, ವಿ.ಎ. ವಾಜ್ ಆಗಿರಬಹುದು. ಇದನ್ನು ಮುಂದೆ ರಾಜಕೀಯ ವಿಶ್ಲೇಷಕರು ಸಾಮಾಜಿಕ ನ್ಯಾಯ ರಾಜಕಾರಣ ಎಂದರು. ಇದರ ಪರಿಣಾಮವೆಂದರೆ, ಈ ಚುನಾವಣೆಯಲ್ಲಿ ಅರಸರ ಇಂದಿರಾ ಕಾಂಗ್ರೆಸ್ ಪರವಾಗಿ ವಿಧಾನಸಭೆಗೆ ಆಯ್ಕೆಯಾದ 165 ಜನ ಶಾಸಕರಲ್ಲಿ 95 ಜನ ಹೀಗೆ ಅರಸರಿಂದ ಗುರುತಿಸಲ್ಪಟ್ಟ 'ಹಿಂದುಳಿದ ಜಾತಿಗಳಿಗೆ ಸೇರಿದವರು. ರಾಜ್ಯ ಶಾಸನ ಸಭೆಯ ಇತಿಹಾಸದಲ್ಲಿ ಇದೊಂದು ಕ್ರಾಂತಿಯೇ ಆಗಿತ್ತು. ಅರಸುಯುಗ ಎಂದು ಕರೆಯಬಹುದಾದ ಅವಧಿಯ ಈ ಎಲ್ಲ ವಿದ್ಯಮಾನಗಳನ್ನೂ ಬಸವರಾಜ ಮೇಗಲಕೇರಿಯವರು ತಮ್ಮ ಈ ಪುಸ್ತಕದಲ್ಲಿ ಇದಕ್ಕೆ ಸಂಬಂಧಪಟ್ಟ ಪ್ರಮುಖ ರಾಜಕೀಯ ನಾಯಕರು, ಅಧಿಕಾರಿಗಳು, ರಾಜಕೀಯ ವೀಕ್ಷಕರು, ಪತ್ರಕರ್ತರು, ಲೇಖಕ-ಬುದ್ದಿಜೀವಿಗಳನ್ನು ಸ್ವತಃ ತಾವೇ ಮಾತಾಡಿಸಿ ಅವರದ್ದೇ ಭಾಷೆಯಲ್ಲಿ ದಾಖಲಿಸುವ ಮೂಲಕ ಸವಿವರವಾಗಿ ಚಿತ್ರಿಸಿ ನಮ್ಮ ಮುಂದೆ ಇಟ್ಟಿದ್ದಾರೆ.. ಹಾಗೇ ಅರಸರು ಎರಡನೇ ಬಾರಿ ಚುನಾವಣೆಗಳಲ್ಲಿ ಗೆದ್ದು, ಜೆಪಿ ಆಂದೋಲನ ಮತ್ತು ತುರ್ತು ಪರಿಸ್ಥಿತಿ ಘೋಷಣೆಯ ಪರಿಣಾಮವಾಗಿ ಸೋತು ಮೂಲೆ ಸೇರಿದ್ದ ಇಂದಿರಾ ಗಾಂಧಿಯವರನ್ನು ಚಿಕ್ಕಮಗಳೂರು ಉಪಚುನಾವಣೆಯಲ್ಲಿ ಗೆಲ್ಲಿಸಿ ಅವರಿಗೆ ರಾಜಕೀಯ ಪುರ್ನಜನ್ಮ ನೀಡಿದ ನಂತರ ಆರಂಭವಾದ ಅರಸರ ರಾಜಕೀಯ ಬದುಕಿನ ದುರಂತವನ್ನೂ ಬಸವರಾಜು ಇದೇ ದಾಖಲೆಗಳ ಮೂಲಕ ನಿರೂಪಿಸುವ ಪ್ರಯತ್ನ ಮಾಡಿದ್ದಾರೆ. ಈ ದಾಖಲೆಗಳ ಪ್ರಕಾರ ಅರಸು ಅವರ ದುರಂತಕ್ಕೆ ಮೂರು ಮುಖ್ಯ ಕಾರಣಗಳೆಂದರೆ, ಅವರು ತಾವು ಎಲ್ಲ ಜನಕಲ್ಯಾಣ ಕಾರ್ಯಕ್ರಮಗಳನ್ನೂ ಮಾಡಿದ್ದು ಇಂದಿರಾ ಗಾಂಧಿಯವರ ಹೆಸರಲ್ಲಿ ಎಂಬುದನ್ನು ಮರೆತು ಕೆಲವು ರಾಷ್ಟ್ರೀಯ ಮಾಧ್ಯಮಗಳ ಮೂಲಕ ತಾವು ಇಂದಿರಾಗಾಂಧಿಯವರನ್ನು ಮೀರಿಸಿ ರಾಷ್ಟ್ರ ನಾಯಕ(ಪ್ರಧಾನಿ) ಆಗಬಹುದೆಂಬ ಧಿಮಾಕು ಬೆಳೆಸಿಕೊಂಡದ್ದು, ತಮ್ಮ ಸಾಮಾಜಿಕ ನ್ಯಾಯ ರಾಜಕಾರಣಕ್ಕಾಗಿ ತಾವು ಗುರುತಿಸಿ ಬೆಳೆಸಿದ ನಾಯಕರ ಮನುಷ್ಯ ದೌರ್ಬಲ್ಯಗಳನ್ನು ಮರೆತದ್ದು ಮತ್ತು ಈ ರಾಜಕಾರಣಕ್ಕಾಗಿ ತಾವು ಅನಿವಾರ್ಯವೆಂಬಂತೆ ಘೋಷಿಸಿದ ಸಾಂಸ್ಥಿಕ ಭ್ರಷ್ಟಾಚಾರ ಮತ್ತು ರಾಜಕೀಯ ಗೂಂಡಾಗಿರಿ. ಇವು ಮೇಲ್ನೋಟಕ್ಕೆ ನಿಜ ಸಂಗತಿಗಳಾದರೂ, ಇವುಗಳ ಇನ್ನಷ್ಟು ಆಳದ ಪರಿಶೀಲನೆ ಅಗತ್ಯವಿದೆ.

ಮುಖ್ಯವಾಗಿ ಅರಸರ ದುರಂತದ ಕೇಂದ್ರದಲ್ಲಿರುವ, ಸಾಮಾಜಿಕ ನ್ಯಾಯ ರಾಜಕಾರಣವೆಂದರೆ ಕೇವಲ ಹಿಂದುಳಿದ ಜಾತಿಗಳ ಪ್ರತಿನಿಧಿಗಳ ಆಧಾರದ ಮೇಲೆ ನಡೆಸುವ ದಿನನಿತ್ಯದ ವ್ಯಾವಹಾರಿಕ ರಾಜಕಾರಣವೆ? ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯಗಳ, ಹೊಸ ರಾಜಕೀಯ ಸಂಸ್ಕೃತಿಯನ್ನು ಬೆಳೆಸುವ ವ್ಯಾಪಕ ಉದ್ದೇಶಗಳ ತಾತ್ತಿಕ ರಾಜಕಾರಣವೆ? ಭಾರತದಲ್ಲಿನ ಅರಸೋತ್ತರ ಸಾಮಾಜಿಕ ನ್ಯಾಯ ರಾಜಕಾರಣದ ಅವಸ್ಥಾಂತರಗಳನ್ನು ಅಧ್ಯಯನ ಮಾಡಲೂ ಈ ಪ್ರಶ್ನೆಯ ವಿವರವಾದ ಚರ್ಚೆ ಅಗತ್ಯವಿದೆ. ಸದರಿ ಪುಸ್ತಕ ಅರಸು ಅವರ ಬಗ್ಗೆ ಈವರೆಗೆ ಬಂದಿರುವ ಹಲವಾರು ಪುಸ್ತಕಗಳಿಗಿಂತ ಅರಸು ಎಂಬ ವಿದ್ಯಮಾನವನ್ನು ನಿರೂಪಿಸುವಲ್ಲಿ ಹೆಚ್ಚು ಸಮಗ್ರವಾಗಿದ್ದರೂ ಈ ಮುಖ್ಯ ಕೊರತೆಯನ್ನು ನೀಗಿಸುವ ಪ್ರಯತ್ನವಿಲ್ಲದೆ – ಪತ್ರಕರ್ತ ಡಿ.ವಿ.ರಾಜಶೇಖರ್‌ರೊಡನೆಯ ಮಾತುಕತೆಯ ದಾಖಲೆಯಲ್ಲಿ ಅರಸು ಈ ಬಗ್ಗೆ ತಮ್ಮ ತಪ್ಪಿನ ಒಂದು ಸಣ್ಣ ಸೂಚನೆ ನೀಡುವರಾದರೂ-ಕೊಂಚ ನಿರಾಸೆಯನ್ನು ಹುಟ್ಟಿಸುತ್ತದೆ ಎಂದೇ ಹೇಳಬೇಕು. ಆದರೆ ಈ ಪುಸ್ತಕದ ನಿಜವಾದ ವೈಶಿಷ್ಟ್ಯವೆಂದರೆ, ರಾಜಕಾರಣಿ ಅರಸು ಜತೆಯಲ್ಲೇ ಕುಟುಂಬದ, ಹಳ್ಳಿಯ ಪರಿವಾರದ ವ್ಯಕ್ತಿಯಾಗಿ ಅರಸು ಅವರ ಆತ್ಮೀಯ ವ್ಯಕ್ತಿತ್ವವನ್ನು ನಿರೂಪಿಸುತ್ತಾ-ವಿಶೇಷವಾಗಿ ಮಗಳು ಭಾರತಿ ಅರಸು ಅವರ ನಿರೂಪಣೆ-ಅರಸು ಅವರ ದುರಂತವನ್ನು ಹೆಚ್ಚು ವೈಯಕ್ತಿಕಗೊಳಿಸಿ ಬಹುಕಾಲ ನಮ್ಮನ್ನು ಕಾಡುವಂತೆ ಮಾಡುತ್ತದೆ.

(ಕೃಪೆ: ಪುಸ್ತಕಾವಲೋಕನ, ಬರಹ -ಡಿ.ಎಸ್. ನಾಗಭೂಷಣ)

Related Books