‘ಹರಿಲಾಲ ಗಾಂಧಿ’ ಮಹಾತ್ಮನ ಮಗನ ದುರಂತ ಕಥನ. ಇದು ವಿಶ್ವೇಶ್ವರ ಭಟ್ ಅವರ ಕೃತಿ. ‘ಹರಿಲಾಲ’ ಗಾಂಧೀಜಿಯ ಮೊದಲ ಮಗ, ತೀರಾ ವಿಲಕ್ಷಣ ಸ್ವಭಾವದವ. ಮೊದಲಿನಿಂದಲೂ ಆತನಿಗೆ ತಂದೆ ಮೇಲೆ ವಿನಾಕಾರಣ ಸಿಟ್ಟು, ತನ್ನೆಲ್ಲ ಸಮಸ್ಯೆಗಳಿಗೆ ಅವರೇ ಕಾರಣ ಎಂಬ ನಂಬಿಕೆ. ತಂದೆ ತನ್ನನ್ನು ಬೇಕಂತಲೇ ದೂರವಿಟ್ಟರೇನೋ ಎಂಬ ಅನುಮಾನ. ಏಕಾಂಗಿತನ ಆತನ ನಿತ್ಯಸಂಗಾತಿ. ದೇಶಕಾರ್ಯದಲ್ಲಿ ಮಗ್ನರಾದ ತಂದೆ, ತನ್ನನ್ನು, ತನ್ನ ತಾಯಿಯನ್ನು ಕೂಪಕ್ಕೆ ತಳ್ಳಿದರೆಂದೇ ಭಾವಿಸಿದ್ದ ಹರಿಲಾಲ, ಗಾಂಧೀಜಿ ವಿರುದ್ಧವೇ ತಿರುಗಿಬಿದ್ದ, ಸಾರ್ವಜನಿಕವಾಗಿ ಅವರನ್ನು ಅವಮಾನಿಸಿದ. ಸುಳ್ಳ, ನಿರ್ದಯಿ, ಪತ್ನಿಪೀಡಕ ಎಂದೆಲ್ಲ ಜರೆದ, ಅಭದ್ರತೆಗೆ ಬಿದ್ದು ವೈಯಕ್ತಿಕ ಜೀವನ ಹಾಳುಮಾಡಿಕೊಂಡ. ವ್ಯಸನಕ್ಕೆ ಬಿದ್ದ. ಕುಡಿತ ಬದುಕನ್ನೇ ಕೆಡಿಸಿತು. ಇಸ್ಲಾಂಗೆ ಮತಾಂತರಗೊಂಡ. ಅನಂತರ ಅದನ್ನೂ ಬಿಟ್ಟ. ವ್ಯಾಪಾರ ಮಾಡಿದ. ಅದೂ ಕೈ ಹಿಡಿಯಲಿಲ್ಲ. ಹಾಗಂತ ಹರಿಲಾಲ ನಿಷ್ಪ್ರಯೋಜಕ ಮಗನಾಗಿರಲಿಲ್ಲ. ದೇಶಭಕ್ತಿ, ಹೋರಾಟ ಅವನ ರಕ್ತದಲ್ಲಿತ್ತು. ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹಿಯಾಗಿ ಆರು ಬಾರಿ ಸೆರೆವಾಸ ಅನುಭವಿಸಿದ್ದ.
ಭಾರತದಲ್ಲೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಹರಿಲಾಲ, ಒಂದು ಸಲ ಜೈಲಿಗೆ ಹೋಗಿದ್ದ. ಗಾಂಧೀಜಿಯನ್ನು ಕಂಡರೆ ಸಿಡಿಮಿಡಿಗೊಳ್ಳುತ್ತಿದ್ದ ಆತ, ಅವರು ನಿಧನರಾದಾಗ, ಮೊದಲ ಮಗನಾಗಿ ಚಿತೆಗೆ ಅಗ್ನಿಸ್ಪರ್ಶ ಮಾಡಬೇಕಿತ್ತು. ತಾನು ಆ ಕೆಲಸ ಮಾಡಲಾರೆ ಅಂದ. ಅದಾಗಿ ಕೆಲ ತಿಂಗಳಲ್ಲಿ ಅನಾಥವಾಗಿ ಸತ್ತು ಹೋದ. ಗಾಂಧೀಜಿ ಮಗ ಹೀಗೇಕಾದ? ಹರಿಲಾಲನ ಕನಸುಗಳೇನಿದ್ದವು? ಆತನ ಸಮಸ್ಯೆಗಳೇನು? ಗಾಂಧೀಜಿ ಮಗನಾಗಿ ಆತ ದುರ್ಮಾರ್ಗ ಹಿಡಿದಿದ್ದೇಕೆ? ತಾಯಿ ಕಸ್ತೂರ ಬಾ ಸಂಕಟಗಳೇನಿದ್ದವು? ಕೊನೆಗೂ ಮಗನನ್ನು ಸರಿದಾರಿಗೆ ತರಲು ಗಾಂಧೀಜಿ ಸೋತಿದ್ದೇಕೆ? ತಂದೆ- ಮಗನ ಕಾದಾಟ, ತಾಯಿ- ಮಗನ ವಾತ್ಸಲ್ಯ ಹೇಗಿದ್ದವು? ಹರಿಲಾಲನ ಸಂಸಾರ ಹೇಗಿತ್ತು? ಅಷ್ಟಕ್ಕೂ ಆತನ ದುಮ್ಮಾನಗಳಾದರೂ ಏನು? ಗಾಂಧೀಜಿ ಮಗನ ಮನಮಿಡಿಯುವ ಕಥೆಯಿದು. ಇದು ನಿಮಗೆ ಗೊತ್ತಿರದ 'ಗಾಂಧಿ'ಗಳ ಕಥೆ. ಇದು ಹರಿಲಾಲನ ಬದುಕಿನ ಸುತ್ತ ಹೆಣೆದ ಸತ್ಯಕಥೆ. ಗಾಂಧೀಜಿಯನ್ನು ಅರಿಯುವ ಪ್ರಯತ್ನವೂ ಇಲ್ಲಿದೆ.
ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್‌ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ, “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...
READ MORE