ಮೋಹನದಾಸ ಕರಮಚಂದ ಗಾಂಧಿ ’ಮಹಾತ್ಮ ಗಾಂಧಿ’ಯಾಗುವುದಕ್ಕೂ ಮೊದಲು ಹೇಗಿದ್ದರು, ಅವರು ಕಾನೂನು ಅಧ್ಯಯನ ನಡೆಸಿದ್ದು ಹೇಗೆ, ಕಾನೂನು ಅಧ್ಯಯನ ಪೂರ್ಣಗೊಳಿಸಿದ ನಂತರ ಗಾಂಧಿಯ ಬದುಕು ಹೇಗಿತ್ತು, ವಕೀಲರಾದ ನಂತರ ಅವರು ಯಶಸ್ವಿ ವಕೀಲರಾದರೆ ಅಥವಾ ಅವರು ನಡೆಸುತ್ತಿದ್ದ ಕೇಸುಗಳಲ್ಲಿ ಸೋಲಾಯಿತೇ, ಆ ಸೋಲನ್ನು ಅವರು ಹೇಗೆ ಗೆಲುವಾಗಿ ಪರಿವರ್ತಿಸಿಕೊಂಡರು, ದಕ್ಷಿಣ ಆಫ್ರಿಕಾಕ್ಕೆ ಗಾಂಧಿ ಹೋಗಲು ಇದ್ದ ಕಾರಣವೇನು, ಅಲ್ಲಿ ಅವರು ವಕೀಲರಾಗಿ ಏನೆಲ್ಲ ಕಷ್ಟಗಳನ್ನು ಎದುರಿಸಬೇಕಾಯಿತು, ದಕ್ಷಿಣ ಆಫ್ರಿಕಾದಲ್ಲಿದ್ದಾಗ ಅವರಲ್ಲೊಬ್ಬ ಹೋರಾಟಗಾರ ಹುಟ್ಟಿದ್ದು ಹೇಗೆ... ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕಿದ ಕನ್ನಡ ಪುಸ್ತಕಗಳು ತೀರಾ ಕಡಿಮೆ ಎಂದೇ ಹೇಳಬೇಕು. ಈ ಕೊರತೆಯನ್ನು ನೀಗಲಿಕ್ಕೆಂದೇ ಓ.ಆರ್. ಪ್ರಕಾಶ್ ಅವರು ’ನಾವು ಕಂಡೂ ಕಾಣದ ಗಾಂಧಿ’ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕದಲ್ಲಿ ಗಾಂಧಿಯ ವಕೀಲಿಕೆಯ ದಿನಗಳ ಸಂಪೂರ್ಣ ವಿವರವಿದೆ, ಜೊತೆಗೆ ಆ ದಿನಗಳ ಚಿತ್ರಗಳೂ ಇವೆ. ಗಾಂಧಿ ಬದುಕಿನ ಚಿತ್ರ ತಿಳಿದುಕೊಳ್ಳಲು ಆಸಕ್ತಿ ಇರುವ ಪ್ರತಿಯೊಬ್ಬರೂ ಓದಬೇಕಾದ ಪುಸ್ತಕವಾಗಿದ್ದು, ವಕೀಲರಾಗಬೇಕೆಂದುಕೊಂಡವರು ಮತ್ತು ವಕೀಲರಾಗಿರುವವರು ತಮ್ಮ ಬದುಕಿನಲ್ಲಿ ಸ್ಫೂರ್ತಿ ಪಡೆಯಲು ಈ ಪುಸ್ತಕವನ್ನು ತಪ್ಪದೇ ಓದಬೇಕಿದೆ. ಪುಸ್ತಕಕ್ಕೆ ಸರ್ವೋದಯ ಕಾರ್ಯಕರ್ತರಾದ ಎಲ್. ನರಸಿಂಹಯ್ಯನವರು ಅರ್ಥಪೂರ್ಣ ಬೆನ್ನುಡಿ ಬರೆದಿದ್ದಾರೆ.
ಮತ್ತೆ ದಾದಾ ಅಬ್ದುಲ್ಲಾ ಕೇಸ್ 1894ರ ಸೆಪ್ಟೆಂಬರ್ 14ರಂದು ಗಾಂಧಿ ತಮ್ಮ ಹಿಂದಿನ ಉದ್ಯೋಗದಾತ ದಾದಾ ಅಬ್ದುಲ್ಲಾರ ಪರವಾಗಿ ಮತ್ತೊಂದು ಕೇಸಿನಲ್ಲಿ ಕೋರ್ಟಿಗೆ ಹಾಜರಾದರು. ಈ ಬಾರಿ ಗೋಪಿ ಮಹಾರಾಜ್ ಎಂಬ ಒಬ್ಬ ವ್ಯಕ್ತಿ ದಾದಾ ಅಬ್ದುಲ್ಲಾರ ಬಳಿ ಒಂದು ವ್ಯಾಪಾರವನ್ನು ಮಾಡಿ ಅದರ ತೀರುವಳಿಗಾಗಿ 204 ಪೌಂಡ್‌ಗಳಿಗೆ ಒಂದು ಪ್ರಾಮಿಸರಿ ನೋಟನ್ನು ನೀಡಿದ್ದ. ದಾದಾ ಅಬ್ದುಲ್ಲಾ ಇದರ ಪಾವತಿಗಾಗಿ ನೋಟನ್ನು ಹಾಜರುಪಡಿಸಿದಾಗ ಗೋಪಿ ಮಹಾರಾಜ್ ಹಣವನ್ನು ಕೊಡದೇ ವಂಚಿಸಿದ್ದ. ಈ ಕೇಸು ಡರ್ಬಾನಿನ ಕೋರ್ಟಿನ ರೆಸಿಡೆಂಟ್ ಮ್ಯಾಜಿಸ್ಟ್ರೇಟ್ ಫ್ರಾನ್ಸಿಸ್ ದಿಲ್ಲಾನ್ ಎಂಬುವವರ ಕೋರ್ಟಿಗೆ ವಿಚಾರಣೆಗಾಗಿ ಬಂತು. ಗಾಂಧಿ ದಾದಾ ಅಬ್ದುಲ್ಲಾರ ಪರವಾಗಿ ಹಾಜರಾಗಿ ಈ ರೀತಿ ವಾದ ಮಂಡಿಸಿದರು: ಗೋಪಿ ಮಹಾರಾಜ್ ಎನ್ನುವ ಈ ವರ್ತಕ ದಾದಾ ಅಬ್ದುಲ್ಲಾರೊಂದಿಗೆ ವ್ಯಾಪಾರವನ್ನು ನಡೆಸಿ ಅದರ ತೀರುವಳಿಗಾಗಿ ಭವಿಷ್ಯದಲ್ಲಿ ಪಾವತಿಸುತ್ತೇನೆಂದು ಭರವಸೆ ನೀಡಿ 204 ಪೌಂಡ್‌ಗಳಿಗಾಗಿ ಒಂದು ಪ್ರಾಮಿಸರಿ ನೋಟನ್ನು ನೀಡಿ ಅದನ್ನು ಪಾವತಿಸಲು ವಿಫಲನಾಗಿದ್ದಾನೆ. ಆದ್ದರಿಂದ ನನ್ನ ಕಕ್ಷಿದಾರರಾದ ದಾದಾ ಅಬ್ದುಲ್ಲಾರಿಗೆ ಪ್ರಾಮಿಸರಿ ನೋಟಿನಲ್ಲಿರುವ ಹಣವನ್ನು ಮತ್ತು ಕೋರ್ಟಿನ ಖರ್ಚನ್ನು ಸೇರಿಸಿ ಕೊಡಿಸಬೇಕು. ಇದು ಬಹಳ ಸರಳವಾದ ವಾದವೆಂಬುದು ಮೇಲ್ನೋಟಕ್ಕೇ ಕಾಣುತ್ತದೆಯಾದ್ದರಿಂದ ಸಹಜವಾಗಿ ಕೋರ್ಟು ದಾದಾ ಅಬ್ದುಲ್ಲಾರಿಗೆ 263 ಪೌಂಡ್‌ಗಳನ್ನು ಗೋಪಿ ಮಹಾರಾಜ್ ನೀಡಬೇಕೆಂದು ಆದೇಶ ನೀಡಿತು. ಇದು ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಗೆದ್ದ ಮೊದಲ ಕೇಸು! ಏಕೆಂದರೆ ಮೊದಲ ಕೇಸಾದ ದಾದಾ ಅಬ್ದುಲ್ಲಾರ ಕೇಸನ್ನು ಅವರು ಕಾಂಪ್ರೊಮೈಸ್ ಮುಖಾಂತರ ಇತ್ಯರ್ಥ ಪಡಿಸಿದ್ದಲ್ಲವೇ? ಆದರೆ ಇದೇ ವರ್ಷದ ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ ಗಾಂಧಿ ಎದುರಿಗೆ ಬಂದ ಕೇಸುಗಳು ಅವರಿಗೆ ಗೆಲುವನ್ನು ತಂದುಕೊಟ್ಟವಾಗಿರಲಿಲ್ಲ. ಡರ್ಬಾನಿನ West Street ಎನ್ನುವ ಜನನಿಬಿಡ ಬೀದಿಯಲ್ಲಿ ಭಾರತೀಯನೊಬ್ಬ ಒಂದು ವ್ಯಾಪಾರವನ್ನು ಹೊಂದಿದ್ದ. ಅವನ ಕೇಸು ಇದು: ಕೆಲ ದಿನಗಳ ಹಿಂದೆ ಆಫ್ರಿಕಾದ ಸ್ಥಳೀಯ ವ್ಯಕ್ತಿ-ಅಂದರೆ ಒಬ್ಬ ಕಪ್ಪು ವರ್ಣೀಯ- ತನ್ನ ಅಂಗಡಿಗೆ ಬಂದು ಸ್ವಲ್ಪ ಹಣ್ಣನ್ನು ಖರೀದಿಸಿದ; ಬಿಲ್ ಪಾವತಿಸಲೆಂದು ತನ್ನ ಕಿಸೆಯಿಂದ ಪರ್ಸನ್ನು ತೆಗೆದ. ಹಾಗೆ ತೆಗೆಯುವಾಗ, ಅಂಗಡಿಯಲ್ಲಿದ್ದ ಜನಸಂದಣಿಗೋ ಅಥವಾ ಆತನ ಗಡಿಬಿಡಿಗೋ, ಆತನ ಪರ್ಸಿನಿಂದ 10 ಶಿಲ್ಲಿಂಗ್ ನಾಣ್ಯವೊಂದು ಅಂಗಡಿಯ ಸಾಮಾನಿನ ರಾಶಿಯಲ್ಲಿ ಬಿದ್ದುಹೋಯಿತು. ಅದನ್ನು ಹುಡುಕಿಕೊಡಿ ಎಂದು ಆ ಕಪ್ಪು ವರ್ಣೀಯ ತನ್ನನ್ನು ಮೊರೆಹೊಕ್ಕ. ತಾನು ಅದನ್ನು ಹುಡುಕಿದೆ; ತನ್ನ ಕೆಲಸಗಾರರಿಗೂ ಅದನ್ನು ಹುಡುಕಲು ಹೇಳಿದೆ. ಆದರೆ ಆ 10 ಶಿಲ್ಲಿಂಗ್ ನಾಣ್ಯ ಅಲ್ಲೆಲ್ಲಿಯೂ ಸಿಗಲೇ ಇಲ್ಲ- ಏಕೆಂದರೆ ಆ ನಾಣ್ಯ ಅಲ್ಲಿ ಬಿದ್ದಿರಲೇ ಇಲ್ಲ. ಆದರೆ ಆ ನಾಣ್ಯವನ್ನು ತಾನೇ ಕಳ್ಳತನದಿಂದ ತೆಗೆದಿಟ್ಟುಕೊಂಡಿದ್ದೇನೆಂದು ಆರೋಪಿಸಿ ಆ ನೀಗ್ರೊ ತನ್ನ ಮೇಲೆ ಕೇಸ್ ಹಾಕಿದ್ದಾನೆ ಎಂದಿದ್ದ. ಅಂದರೆ ಆಫ್ರಿಕಾದ ಸ್ಥಳೀಯ ವ್ಯಕ್ತಿ ಭಾರತೀಯ ವರ್ತಕನ ವಿರುದ್ಧ ಕಳ್ಳತನದ ಆರೋಪ ಹೊರೆಸಿ ಆತನನ್ನು ಕೋರ್ಟಿಗೆ ಎಳೆದಿದ್ದ. ಗಾಂಧಿ ಭಾರತೀಯನ ಪರವಾದ ಲಾಯರಾಗಿದ್ದರು. ಈ ಕೇಸಿನ ಜಡ್ಜ್ ಅಲ್ಲಿನ ರೆಸಿಡೆಂಟ್ ಮ್ಯಾಜಿಸ್ಟ್ರೇಟ್ ಕ್ಯಾಪ್ಟನ್ ಲೂಕಾಸ್ ಗೌಲ್ಡ್ ಎಂಬಾತ. ಈ ಕೇಸಿನ ಫಿರ್ಯಾದುದಾರನಾದ ಕಪ್ಪು ವರ್ಣೀಯ ತನ್ನ ವಾದವನ್ನು ಹೀಗೆ ಮಂಡಿಸಿದ: ಆತ ತನ್ನ ಬಿಳಿಯ ಉದ್ಯೋಗದಾತರನ್ನು ಕೋರ್ಟಿನಲ್ಲಿ ಸಾಕ್ಷಿಯಾಗಿ ಕರೆಸಿ ಅವರಿಂದ ಈ ಘಟನೆ ನಡೆದ ಎರಡೇ ದಿನಗಳ ಹಿಂದೆಯಷ್ಟೇ ತಾನು ಆ ನೀಗ್ರೊನಿಗೆ ಆ ವಾರದ ಕೂಲಿಯಾಗಿ 10 ಶಿಲ್ಲಿಂಗ್‌ಗಳನ್ನು ನೀಡಿದ್ದೆ ಎಂದು ಹೇಳಿಸಿದ; ಹಾಗೂ ತನ್ನ ಬಳಿ ಕೆಲಸದಲ್ಲಿದ್ದ ಕಳೆದ ಮೂರು ವರ್ಷಗಳಿಂದಲೂ ಆ ಕಪ್ಪು ಬಣ್ಣದ ಮನುಷ್ಯನ ನಡತೆ ಅತ್ಯಂತ ನಂಬಲರ್ಹವಾಗಿತ್ತು ಎಂದೂ ಸಹಾ ಒಂದು ಪ್ರಮಾಣಪತ್ರವನ್ನು ನೀಡಿದಳು. ಇದಕ್ಕೆ ಪ್ರತಿಯಾಗಿ ಗಾಂಧಿ ತಮ್ಮ ಕಕ್ಷಿದಾರನ ಪರ ವಾದ ಮಂಡಿಸಿದ್ದು ಹೀಗೆ: ಆ ಘಟನೆ ನಡೆದ ದಿನ ನನ್ನ ಕಕ್ಷಿದಾರನಾದ ಅಂಗಡಿಯವನು ಆ ಕೃಷ್ಣವರ್ಣೀಯನು ಹೇಳಿದಂತೆ 10 ಶಿಲ್ಲಿಂಗ್ ನಾಣ್ಯವನ್ನು ಸ್ವತಃ ಹುಡುಕಿದ್ದಾನೆ- ತನ್ನ ಕೆಲಸಗಾರರಿಗೂ ಹುಡುಕಲು ಹೇಳಿದ್ದಾನೆ; ಮತ್ತು ಈ ದೃಶ್ಯವನ್ನು ಆ ಸಮಯದಲ್ಲಿ ಅಂಗಡಿಯಲ್ಲಿದ್ದ ಇತರೆ ಗಿರಾಕಿಗಳೂ ನೋಡಿದ್ದಾರೆ, ಯಾರಿಗೂ ಆ 10 ಶಿಲ್ಲಿಂಗ್ ನಾಣ್ಯ ದೊರಕಿಲ್ಲ, ಏಕೆಂದರೆ ಆ ನಾಣ್ಯ ಅಲ್ಲಿ ಬಿದ್ದಿರಲೇ ಇಲ್ಲ. ಆದ್ದರಿಂದ ಆ ಕಪ್ಪು ಬಣ್ಣದ ವ್ಯಕ್ತಿ ನನ್ನ ಕಕ್ಷಿದಾರನ ವಿರುದ್ಧ ವೃಥಾ ಆರೋಪ ಮಾಡುತ್ತಿದ್ದಾನೆ. ಆದ್ದರಿಂದ ನನ್ನ ಕಕ್ಷಿದಾರ ಕಳ್ಳನಲ್ಲ, ಮೋಸ ಮಾಡಿಲ್ಲ; ಬದಲಿಗೆ ಪ್ರಾಮಾಣಿಕ. ಆತನನ್ನು ಈ ಆರೋಪದಿಂದ ಮುಕ್ತರನ್ನಾಗಿಸಿ, ಎಂದು. ಇವೆಲ್ಲ ವಾದ-ವಿವಾದಗಳನ್ನು ಆಲಿಸಿದ ಮ್ಯಾಜಿಸ್ಟ್ರೇಟ್, ಭಾರತೀಯ ವ್ಯಾಪಾರಿ ಹೇಳುತ್ತಿರುವುದು ನಂಬಲು ಅನರ್ಹವಾದದ್ದು ಎಂದು ಅಭಿಪ್ರಾಯಪಟ್ಟು ಆತನನ್ನು ಅಪ್ರಾಮಾಣಿಕ ಎಂದು ಘೋಷಿಸಿ ಆತನಿಗೆ 2 ಪೌಂಡ್‌ಗಳ ಜುಲ್ಮಾನೆಯನ್ನು ಜಡಿದನು. ಅಂದರೆ ಈ ಕೇಸಿನಲ್ಲಿ ಗಾಂಧಿಗೆ ಸೋಲಾಯಿತು. ಇದಕ್ಕೆ ಪ್ರತಿಯಾಗಿ ಆ ಕೃಷ್ಣವರ್ಣೀಯ ತನ್ನ ಮಾಲೀಕನನ್ನು ಕೋರ್ಟಿಗೆ ಕರೆಸಿ, ಈ ಘಟನೆ ನಡೆದ ಹಿಂದಿನ ದಿನವೇ ಆತನು-ಅಂದರೆ ಬಿಳಿಯ ಒಡೆಯನು-ಆ ಕಪ್ಪು ವ್ಯಕ್ತಿಗೆ ಆತನ ವಾರದ ಕೂಲಿಯಾದ 10 ಶಿಲ್ಲಿಂಗ್‌ನ್ನು ನೀಡಿದ್ದಾಗಿ ಸಾಕ್ಷ್ಯ ನುಡಿಸಿದ. ಇದಲ್ಲದೇ ತನ್ನ ಜೀತದಾಳಾಗಿರುವ ಆ ನೀಗ್ರೊ ತನ್ನ ಸೇವಕತನದ ಅವಧಿಯಲ್ಲಿ ಎಂದೂ ಸುಳ್ಳನ್ನು ಹೇಳಿಲ್ಲ-ಕಳ್ಳತನ ಮಾಡಿಲ್ಲ-ಅಪ್ರಾಮಾಣಿಕನಾಗಿ ನಡೆದುಕೊಂಡಿಲ್ಲ ಎಂಬ ಒಂದು ಸರ್ಟಿಫಿಕೇಟನ್ನೂ ತಂದು ಹಾಜರು ಪಡಿಸಿದ. ಅಲ್ಲಿದ್ದ ನ್ಯಾಯಾಧೀಶ ಬಿಳಿಯನು ನೀಡಿದ ಸಾಕ್ಷ್ಯ ಮತ್ತು ಸರ್ಟಿಫಿಕೇಟನ್ನು ಪೂರ್ಣವಾಗಿ ನಂಬಿ ಗಾಂಧಿ ಮತ್ತು ಅವರ ಕಕ್ಷಿದಾರರು ಹೇಳುತ್ತಿರುವುದು ಸತ್ಯಕ್ಕೆ ದೂರವಾದ ಸುಳ್ಳು ಎಂಬ ತೀರ್ಮಾನಕ್ಕೆ ಬಂದು ಬಿಟ್ಟ! ಇದು ನ್ಯಾಯದಾನವೇ? ನಾವು ವಿಚಾರ ಮಾಡಬೇಕು. ಇದರೊಂದಿಗೆ ಇನ್ನೊಂದು ಕೇಸಿನ ವಿಚಾರವೂ ಇಲ್ಲಿ ಉಲ್ಲೇಖನಾರ್ಹ: ಡರ್ಬಾನಿನ ಪೈನ್ ಬೀದಿಯಲ್ಲಿ ಒಮ್ಮೆ ಮೂವರು ಹೆಂಗಸರು ಜಗಳವೊಂದನ್ನು ಮಾಡುತ್ತಿದ್ದರು; ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಇವರನ್ನು ಬೇರ್ಪಡಿಸುವ ಪ್ರಯತ್ನ ಮಾಡಿದ್ದು ಒಬ್ಬ ಆಂಗ್ಲ ಪೊಲೀಸ್ ಕಾನ್‌ಸ್ಟೇಬಲ್. ಇವರ ಜಗಳವನ್ನು ಬಿಡಿಸಿದ ನಂತರ ಇವರನ್ನು ಪೊಲೀಸ್ ಸ್ಟೇಷನ್ನಿಗೆ ಕರೆತಂದು ಇವರುಗಳ ಮೇಲೆ ಮೊಕದ್ದಮೆಯೊಂದನ್ನು ಹಾಕಿದ: ಆತನ ಆರೋಪವೆಂದರೆ, ಆ ಮೂವರು ಹೆಂಗಸರಲ್ಲಿ ಒಬ್ಬಳು ಅತ್ಯಂತ ಕೆಟ್ಟ ಭಾಷೆಯಲ್ಲಿ ತನ್ನನ್ನು ಬೈದಿದ್ದಾಳೆ! ಆ ಮೂವರು ಭಾರತೀಯ ಹೆಂಗಸರ ಪರವಾದ ಲಾಯರ್ ಗಾಂಧಿ. ಇವರುಗಳ ಪರವಾಗಿ ವಾದಿಸಿದ ಗಾಂಧಿಯ ಒಂದೇ ವಿಚಾರವೆಂದರೆ ಆ ಮೂವರು ಹೆಂಗಸರಲ್ಲಿ ಯಾರಿಗೂ ಇಂಗ್ಲಿಷ್ ಭಾಷೆಯ ಪರಿಚಯವೇ ಇರುವುದಿಲ್ಲ. ಅವರೆಲ್ಲರೂ ಅವರವರದ್ದೇ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತಿದ್ದರು ಅಷ್ಟೇ. ಅವರಲ್ಲಿ ಯಾರೂ ಪೊಲೀಸನ್ನು ಬೈಯಲೂ ಇಲ್ಲ-ಅಪಮಾನಿಸಲೂ ಇಲ್ಲ; ಹಾಗಾಗಿ ನಿರಪರಾಧಿಗಳೂ, ಅಮಾಯಕರೂ ಆದ ನನ್ನ ಕಕ್ಷಿದಾರರಾದ ಈ ಹೆಂಗಸರುಗಳು ಯಾವುದೇ ತಪ್ಪು ಮಾಡಿಲ್ಲವಾದ್ದರಿಂದ ಅವರುಗಳಿಗೆ ಕೋರ್ಟು ಯಾವುದೇ ಶಿಕ್ಷೆಯನ್ನು ವಿಧಿಸಬಾರದು. ಆದರೆ ಆ ಕೋರ್ಟಿನ ಮ್ಯಾಜಿಸ್ಟ್ರೇಟ್ ಧಿಲ್ಲಾನ್, ಆ ಪೊಲೀಸ್ ಕನಿಷ್ಠ ಬಿಲ್ಲೆ ಹೇಳಿದ್ದೇ ಸರಿ; ಗಾಂಧಿಯ ವಾದ ಸರಿಯಿಲ್ಲ ಮತ್ತು ಆ ಹೆಂಗಸರು ಶಿಕ್ಷಾರ್ಹರು ಎಂದು ತೀರ್ಮಾನಿಸಿ ಅವರಿಗೆ ತಲಾ 5 ಪೌಂಡ್ ದಂಡ ಶುಲ್ಕವನ್ನು ಜಡಿದ! ಇದಕ್ಕೆ ಯಾರಾದರೂ ಯಾವುದೇ ರೀತಿಯ ಸಮರ್ಥನೆಯನ್ನು ನೀಡಬಹುದೇ? ಇದಲ್ಲದೆ ಇದೇ ವರ್ಷದ ನವೆಂಬರ್ ತಿಂಗಳಲ್ಲಿ ಗಾಂಧಿ ಇನ್ನೊಂದು ಕೇಸಿನಲ್ಲಿಯೂ ಸೋಲನ್ನಪ್ಪಿದರು. ಅದರ ವಿವರ ಹೀಗಿದೆ: ಒಬ್ಬ ಭಾರತೀಯ ಸಾಹುಕಾರ 5 ಪೌಂಡ್‌ಗಳ ಸಾಲವನ್ನು ಇನ್ನೊಬ್ಬ ಭಾರತೀಯನಿಗೆ ನೀಡಿದ್ದ. ಹೀಗೆ ಸಾಲ ಪಡೆದ ವ್ಯಕ್ತಿ ತನ್ನ ಸಾಲದ ಮೊತ್ತವನ್ನು ತನ್ನ ಸಾಹುಕಾರನಿಗೆ ಹಿಂತಿರುಗಿಸಿರಲಿಲ್ಲ. ಆತ (ಸಾಹುಕಾರ) ತನ್ನ ಮೂಲ ಹಣ ಮತ್ತು ಬಡ್ಡಿ ಹಣಕ್ಕಾಗಿ ಆಗ್ರಹಿಸಿ ಕೋರ್ಟಿನಲ್ಲಿ ದಾವಾ ಹೂಡಿ ಗಾಂಧಿಯನ್ನು ತನ್ನ ಲಾಯರಾಗಿ ನೇಮಿಸಿಕೊಂಡ. ಈ ಸರಳ-ಸಹಜವಾದ ಬೇಡಿಕೆ ಕೋರ್ಟಿನ ಜಡ್ಜ್‌ನಿಗೆ ಸರಿ ಕಾಣದೆ ಸಾಲ ಪಡೆದವನು ಸಾಲ ಕೊಟ್ಟವನಿಗೆ ಏನನ್ನೂ ಸಹಾ ವಾಪಸ್ ಕೊಡಬೇಕಿಲ್ಲ ಎಂದು ತೀರ್ಪನ್ನಿತ್ತ! ಇದೆಂಥಾ ನ್ಯಾಯ? ಜಡ್ಜ್ ನೀಡಿದ ತೀರ್ಪು ಎಲ್ಲರಿಗೂ ಕಾಣುವಂತಿರುವ ಅನ್ಯಾಯವಲ್ಲವೇ? ಈ ರೀತಿಯ ವಿಚಿತ್ರವಾದ ನ್ಯಾಯ ತೀರ್ಮಾನಕ್ಕೆ ಕಾರಣವೆಂದರೆ ಆಗಿನ ಆಳರಸರಾಗಿದ್ದ ಇಂಗ್ಲೀಷರಿಗೆ ಭಾರತೀಯರು ಸಾಮಾನ್ಯವಾಗಿ ಸುಳ್ಳುಬುರುಕರು-ತಲೆಬುಡವಿಲ್ಲದ ಕತೆಗಳನ್ನು ರೋಚಕವಾಗಿ ಹೇಳುವವರು; ಹಾಗಾಗಿ ಇವರುಗಳು ನೀಡಿದ ಸಾಕ್ಷ್ಯಗಳನ್ನು ನಂಬಬೇಕಾಗಿಲ್ಲ ಎಂಬ ಭಾವನೆಯಿತ್ತು. ಈ ಕಾರಣಕ್ಕಾಗಿ ಯಾವುದೇ ಕೇಸಿನಲ್ಲಿ ಯುರೋಪಿಯನ್ನರು ನೀಡಿದ ಸಾಕ್ಷ್ಯ-ಪುರಾವೆ-ಹೇಳಿಕೆಗಳನ್ನು ನಂಬಿ, ಅವುಗಳ ಆಧಾರದ ಮೇಲೆಯೇ ನ್ಯಾಯ ತೀರ್ಮಾನವನ್ನು ಮಾಡಲಾಗುತ್ತಿತ್ತು. ಇದಕ್ಕೆ ಪೂರಕವಾಗಿ ಆ ಕಾಲದ ಕೆಲವು ಪತ್ರಿಕೆಗಳು ಈ ರೀತಿಯ ವಿಚಾರಗಳನ್ನು ಎಗ್ಗಿಲ್ಲದೆ ಪ್ರಕಟಿಸುತ್ತಿದ್ದವು. “Indians told most astounding and preposterous stories” -Natal Advertiser. “Mr. Gandhi misrepresents the views we expressed. He makes any call; a parade of Christianity; His aim is transparent: it is that of introducing himself as a champion of his fellow countrymen” ಇಂಗ್ಲಿಷರು ತಮ್ಮ ರಾಜ್ಯವನ್ನು ವಿವರಿಸುವಾಗ ತಮ್ಮದು ರೂಲ್ ಆಫ್ ಲಾ ಎಂದು ಬಣ್ಣಿಸಿಕೊಳ್ಳುತ್ತಿದ್ದರು. ಇದನ್ನು ಅವರು ಆಗಾಗ್ಗೆ ಭಾರತೀಯರ ಮುಖಕ್ಕೆ ಹೊಡೆದ ಹಾಗೆ ಹೇಳಿ, ಈ ಹಿಂದೆ ನಿಮ್ಮ ದೇಶದಲ್ಲಿದ್ದ ರಾಜರು-ಮಹಾರಾಜರು-ನವಾಬರ ಹುಚ್ಚು ನಿರ್ಧಾರಗಳಿಗೆ ಬದಲಾಗಿ ನಾವು ಕಾನೂನಿನ ರಾಜ್ಯವನ್ನು ಜಾರಿಗೆ ತಂದಿದ್ದೇವೆ ಎಂದು ಬಡಾಯಿ ಕೊಚ್ಚುತ್ತಿದ್ದರು. ಇವೆಲ್ಲವನ್ನು ಗಮನಿಸಿದರೆ ಅದು ನಿಜವೆನಿಸುತ್ತದೆಯೇ? -The Times of Natal ( 22 Oct, 1894)
©2024 Book Brahma Private Limited.