ಕರ್ನಾಟಕ ಜಾನಪದ ಅಧ್ಯಯನಕ್ಕೆ, ಸಂಶೋಧನೆಗೆ ನಾಂದಿ ಹಾಡಿದವರು ಡಾ.ಬಿ.ಎಸ್. ಗದ್ದಗಿಮಠ. ನಾಡು ಕಂಡ ಅಪರೂಪದ ಜಾನಪದ ವಿದ್ವಾಂಸರು. ಪ್ರಸ್ತುತ ಕೃತಿಯು ಗದ್ದಗಿಮಠ ಅವರ ಬದುಕು, ಬರಹ ಸಾಧನೆಯ ಕುರಿತು ಸಂಕ್ಷಿಪ್ತ ಮಾಹಿತಿ ನೀಡುತ್ತದೆ. ಹಿರಿಯ ಲೇಖಕ ಡಾ. ಬಿ.ಎಸ್. ಗದ್ದಗಿಮಠ ಅವರು ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಕೆರೂರಿನಲ್ಲಿ. ತಂದೆ- ಜನಪದ ಗೀತೆಗಳನ್ನು ಹಾಡುವುದರಲ್ಲಿ ಪ್ರಸಿದ್ಧರಾಗಿದ್ದರಿಂದ ಬಾಲ್ಯದಿಂದಲೂ ಜನಪದ ಲೋಕದ ಬಗ್ಗೆ ವಿಶೇಷ ಆಸಕ್ತಿ ಗದ್ದಗಿಮಠ ಅವರಿಗಿತ್ತು. ತಂದೆಯಿಂದ ಜಾನಪದ ಗೀತೆಗಳನ್ನು ಹಾಡುವುದನ್ನು ಕಲಿತಿದ್ದ ಅವರು ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ ಸಂಚರಿಸಿ ಜನಪದ ಗೀತೆಗಳನ್ನು ಸಂಶೋಧಿಸಿ, ಸಂಗ್ರಹಿಸಿ, ಪರಿಷ್ಕರಿಸಿ ‘ಜನಪದ ಗೀತೆಗಳು’ ಎಂಬ ಪ್ರೌಢ ಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ 1955 ರಲ್ಲಿ ಡಾಕ್ಟರೇಟ್ ಪಡೆದರು. ತಾವು ಸಂಗ್ರಹಿಸಿದ ಜನಪದ ಗೀತೆಗಳನ್ನು ಪ್ರಕಟಿಸಲು ‘ಜನಪದ ಕಾವ್ಯಮಾಲೆ’ ಎಂಬ ಒಂದು ಮಾಲೆಯನ್ನೇ ಪ್ರಾರಂಭಿಸಿ ‘ನಾಲ್ಕು ನಾಡಪದಗಳು’, ‘ಕಂಬಿಯ ಪದಗಳು’, ‘ಜನತಾಗೀತೆಗಳು’, ‘ಲೋಕಗೀತೆಗಳು’, ಕುಮಾರ ರಾಮನ ದುಂದುಮೆ (ಬಾಜನಗಬ್ಬ-ಒಂದು ಬಗೆಯ ಕಾವ್ಯ) ಗಳು ಎಂಬ ಗ್ರಂಥಗಳನ್ನು ಪ್ರಕಟಿಸಿದರು. ‘ಮಲ್ಲಮಲ್ಲಾಣಿ’ ಮತ್ತು ಕುಮಾರ ರಾಮನ ದುಂದುವೆಗಳಲ್ಲಿನ ಮೂಲ ಜಾನಪದ ಆಶಯಕ್ಕೆ ಚ್ಯುತಿ ಬಾರದಂತೆ, ಕಾಲ್ಪನಿಕ ಕಥಾವೃತ್ತದಿಂದ ಬರೆದ ‘ಅರ್ಜುನ ಜೋಗಿಯ ಹಾಡುಗಬ್ಬ’ ಕೃತಿ ಓದುಗರ ಗಮನ ಸೆಳೆದಿತ್ತು.
ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ವ್ಯಾಯಾಮ ಶಿಕ್ಷಕರಾಗಿ ಉದ್ಯೋಗ ಆರಂಭಿಸಿದ ಅವರು ನಂತರ ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣಾ ವಿಭಾಗದಲ್ಲಿ ಸಹಾಯಕ ನಿರ್ದೇಶಕರಾಗಿ ಸೇರಿದರು. ಸೇವಾವಧಿಯಲ್ಲಿರುವಾಗಲೇ 30-10-1960ರಲ್ಲಿ ಹೃದಯಾಘಾತಕ್ಕೊಳಗಾಗಿ ನಿಧನರಾದರು. ಇವರು ಬರೆದ ಪ್ರೌಢಪ್ರಬಂಧವನ್ನು ಕರ್ನಾಟಕ ವಿಶ್ವವಿದ್ಯಾಲಯವು 1963ರಲ್ಲಿ ಪ್ರಕಟಿಸಿತು.1967 ರಲ್ಲಿ ತರೀಕೆರೆಯಲ್ಲಿ ನಡೆದ ಜಾನಪದ ಸಮ್ಮೇಳನದ ಮಂಟಪಕ್ಕೆ ಇವರ ಹೆಸರನ್ನೇ ಇಟ್ಟು ಗೌರವಿಸಲಾಯಿತು.
ಡಾ. ಸಿ.ಕೆ. ನಾವಲಗಿ ಎಂತಲೇ ಪರಿಚಿತರಾಗಿರುವ ಲೇಖಕ ಚೆನ್ನಬಸಪ್ಪ ಕಲ್ಲಪ್ಪ ನಾವಲಗಿ ಅವರು 1956 ಆಗಸ್ಟ್ 1ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಜನಿಸಿದರು. ಕನ್ನಡ ಜಾನಪದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ, ಪಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ. ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಜಾನಪದ ಸ್ಪಂದನ, ಬೇಂದ್ರೆಯವರ ಕಾವ್ಯದ ಮೇಲೆ ಜಾನಪದ ಪ್ರಭಾವ, ಗಾದೆಗಳಲ್ಲಿ ಹಾಸ್ಯ, ಶರಣ ವಿಚಾರವಾಹಿನಿ, ವಚನ ಸಾಹಿತ್ಯ ಮತ್ತು ಜಾನಪದ, ದಿಕ್ಸೂಚಿ, ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು, ಗ್ರಾಮೀಣ ಗ್ರಹಿಕೆ, ಕಥನ ಕವನ ಸಂಚಯ, ...
READ MORE