ಮೈಸೂರು ಸಂಸ್ಥಾನದ ದಿವಾನರಾಗಿದ್ದ ಶೆಟ್ಟಿ ಪುಣ್ಯ ವೀರವಳ್ಳಿ ರಂಗಾಚಾರ್ಲು, ದಿವಾನ ರಂಗಾಚಾರ್ಲು ಎಂದೇ ಖ್ಯಾತಿ. ಅವರ ಜೀವನ ಚರಿತ್ರೆ ಹಾಗೂ ಅಂದಿನ ಸ್ಥಿತಿಗತಿಗಳ ಕುರಿತು ಡಿ.ವಿ. ಗುಂಡಪ್ಪನವರು ವಿಸ್ತಾರವಾದ ವಿವರಣೆ ನೀಡಿರುವ ಕೃತಿ ಇದು.
ಬುದ್ದಿಶಕ್ತಿಯಿಂದಲೂ, ಗುಣಾತಿಶಯದಿಂದಲೂ ಪ್ರಖ್ಯಾತರಾದ ಮಹಾಪುರುಷರ ಜೀವನ ಚರಿತ್ರೆಗಳು, ರಾಜ್ಯಭಾರ ನಿರ್ವಹಣೆಯಲ್ಲಿ ಪ್ರಖ್ಯಾತರಾದ ಆಡಳಿತಗಾರರ ಜೀವನ ಚರಿತ್ರೆಗಳು ಸಾಹಿತ್ಯದಲ್ಲಿ ದಾಖಲಾದರೂ ಸಂಖ್ಯೆಯಿಂದ ವಿರಳ. ಈ ಕೊರತೆಯನ್ನು ಈ ಕೃತಿಯು ತುಂಬಿ ಕೊಡುತ್ತದೆ ಎಂದು ಲೇಖಕರು ಹೇಳಿದ್ದಾರೆ. ಒಬ್ಬರ ಜೀವನ ಚರಿತ್ರೆಯನ್ನು ಸಮಗ್ರವಾಗಿ ಬರೆಯುವುದು ಕಷ್ಟ. ಏಕೆಂದರೆ, ನಾವು ನೋಡಿದ್ದಷ್ಟೇ ಬರೆಯಲಾಗುತ್ತದೆ. ಇತರರ ಕಣ್ಣಲ್ಲಿ ಅವರ ವ್ಯಕ್ತಿತ್ವವು ಬೇರೆಯದ್ದೇ ಆಗಿರುತ್ತದೆ. ಆ ಮಗ್ಗಲು ಸಹ ದಾಖಲಾರ್ಹವಾದರೂ ಬಹುತೇಕ ವೇಳೆ ತಪ್ಪಿ ಹೋಗುತ್ತದೆ. ಇಂತಹ ಅಭಾವದ ಮಧ್ಯೆಯೂ ಲೇಖಕರು ರಂಗಾಚಾರ್ಲು ಅವರ ವ್ಯಕ್ತಿತ್ವವನ್ನು ಹಾಗೂ ಅಂದಿನ ವಾಸ್ತವದ ಸ್ಥಿತಿಗತಿಗಳನ್ನು ಚಿಕ್ಕ ಗ್ರಂಥದ ಮೂಲಕ ಕಟ್ಟಿಕೊಟ್ಟಿದ್ದಾರೆ.
ಈ ಕೃತಿಯು ನಾಲ್ಕನೇಯ ಆವೃತ್ತಿ. 1911, 1920 ಹಾಗೂ 1928ರಲ್ಲಿ ಈ ಕೃತಿ ಪ್ರಕಟವಾಗಿತ್ತು. 1928ರಲ್ಲಿ ಪ್ರಕಟಿತ ಕೃತಿಯನ್ನು ಬೆಂಗಳೂರಿನ ಬಸವನಗುಡಿಯ ಕರ್ಣಾಟಕ ಪ್ರಕಾಶನಾಲಯ (ಪುಟ 149) ಪ್ರಕಟಿಸಿತ್ತು.
ಮಂಕುತಿಮ್ಮನ ಕಗ್ಗ ಕಾವ್ಯದಿಂದ ಲೋಕವಿಖ್ಯಾತರಾದ ಡಿವಿಜಿ ಅವರು (ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ) ಲೇಖಕ- ಪತ್ರಕರ್ತ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ 1887ರ ಮಾರ್ಚ್ 17ರಂದು ಜನಿಸಿದ ಗುಂಡಪ್ಪ ಅವರು ಪ್ರೌಢಾಶಾಲಾ ಶಿಕ್ಷಣವನ್ನು ಮೈಸೂರು ಮಹಾರಾಜ ಪ್ರೌಢಶಾಲೆಯಲ್ಲಿ ಪಡೆದರು. ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ ಸ್ವಂತ ಅಧ್ಯಯನದಿಂದ ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪರಿಣತರಾಗಿದ್ದರು. ಮುಳುಬಾಗಿಲಿನ ಒಂದು ಶಾಲೆಯಲ್ಲಿ ಕೆಲವು ಕಾಲ ಬದಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ಅನಂತರ ಕೋಲಾರದ ಸೋಡಾ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿ ಬೇಸತ್ತು ಬೆಂಗಳೂರಿನಲ್ಲಿ ಜಟಕಾಬಂಡಿಗೆ ಬಣ್ಣ ಬಳಿಯುವ ಕಾರ್ಖಾನೆಯಲ್ಲಿ ಕೆಲಕಾಲ ಕೆಲಸ ಮಾಡಿದರು. ಅನಂತರ ಪತ್ರಿಕಾರಂಗ ...
READ MORE