'ಮಹಾತಾಯಿ' ಕೃತಿಯು ಶಂಭುಲಿಂಗ ವಾಲ್ದೊಡ್ಡಿ ಅವರ ಧರ್ಮಪತ್ನಿ ದಿ. ಶೋಭಾವತಿ ಅವರ ಜೀವನ ಚರಿತ್ರೆಯಾಗಿದೆ. ಶೋಭಾವತಿ ಅವರ ಸಂಯಮ, ಧೈರ್ಯ, ಹಾಸ್ಯ, ಮಾನವೀಯತೆ, ನೆರವಿನ ಹಂಬಲದ ಹೀಗೆ... ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಕೃತಿ ಇದು. ಕೃತಿಗೆ ಮುನ್ನುಡಿ ಬರೆದಿರುವ ದೇಶಾಂತ ಹುಡಗಿ ಅವರು, ಇದು ಒಬ್ಬ 'ಮಹಾತಾಯಿ'ಯ ಅದ್ಭುತ ಚರಿತ್ರೆ, ಒಬ್ಬ ಪತಿಯೊಡನೆ ಇಬ್ಬರು ಪತ್ನಿಯರ ಬದುಕಿನ ಚಿತ್ರಣ ಈ ದುರಂತದಲ್ಲಿ ರೂಪುಗೊಂಡಿದೆ. ವಾಲ್ಗೊಡ್ಡಿ ಎಂಬುವ ಹೆಸರು ಮೇದನಲ್ಲಿಯಿಂದ, ಬೀದರ, ಬೀದರದಿಂದ ಬೆಂಗಳೂರು, ಬೆಂಗಳೂರದಿಂದ ದಿಲ್ಲಿಯವರೆಗೆ ಅಷ್ಟೇ ಅಲ್ಲ ಅಂತರಾಷ್ಟ್ರೀಯ ಹೊಂದಿದ ಮಟ್ಟದಲ್ಲಿ ಅದು ವಾಲ್ಗೊಡ್ಡಿ ಎಂದಕೂಡಲೆ ದಲಿತರ ನೋವು ನಲಿವು, ಬಡತನ, ಕಷ್ಟ-ಕಾರ್ಪಣ್ಯ, ಕೂಳಿಲ್ಲದವರ ರೋದನೆಯಲ್ಲವು ಏಕಕಾಲಕ್ಕೆ ಕಣ್ಣೆದುರು ಬಂದು ನಿಲ್ಲುತ್ತವೆ. ಈ ನೋವು ನಷ್ಟಗಳೆಲ್ಲದರ ಕಾನನದಲ್ಲಿಯೇ ಹುಟ್ಟಿ ಬೆಳೆದು ಹೆಮ್ಮರವಾಗಿ ನಿಂತಿದೆ, ಜಾನಪದ ಹಾಡುಗಾರಿಕೆಯ ವಾಲೊಡ್ಡಿ ಎಂಬ ಆಲದ ಮರ, ಓದು ವಿದ್ಯೆಗಳೆಲ್ಲವನ್ನು ನೋವುಗಳಲ್ಲಿಯೇ ಅವರು ಕಂಡುಕೊಂಡರು. ಈ ಚರಿತ್ರೆ ಓದುತ್ತಿದ್ದಂತೆ ಸ್ವಾಂತ್ರ್ಯಪೂರ್ವದ ಮತ್ತು ಸ್ವಾತಂತ್ರ್ಯ ನಂತರದ ದಲಿತರ ಬದುಕು ಹೇಗಿತ್ತೆಂಬುದಕ್ಕೆ ನಿಲುಗನ್ನಡಿಯಾಗಿ ಕೆಲಸ ಮಾಡುತ್ತದೆ. ವಾಲ್ಗೊಡ್ಡಿ ಎಂದರೆ ಉತ್ತಮ ಶಿಕ್ಷಕ, ಹಾಡುಗಾರ, ಕರುಣಾಮಯಿ, ಸಾಕಾರ ಮೂರ್ತಿ ಎಂಬುವೆಲ್ಲ ನಮ್ಮ ಕಣ್ಮುಂದೆ ಮನದಲ್ಲಿ, ಕಿವಿಯಲ್ಲಿ, ರೋಮರೋಮಗಳಲ್ಲಿ ನಲಿದಾಡುತ್ತವೆ. ಈ ಕಾರಣದಿಂದಾಗಿಯೋ ಏನೋ ಅವರ ಬದುಕಿನಲ್ಲಿ ಪ್ರವೇಶಿಸಿದ ಇಬ್ಬರು ಧರ್ಮಪತ್ನಿಯರು, ದಯೆ, ಕರುಣೆ ಮತ್ತು ವಾತ್ಸಲ್ಯಮಯಿಯಾಗಿದ್ದರು. ಮೊದಲ ಹೆಂಡತಿ ಶಶಿಕಲಾ, ಬಾಳಸಂಗಾತಿಯಾಗಿ ಮುತ್ತಿನಂಥ ನಾಲ್ಕು ಮಕ್ಕಳನ್ನು ಕೊಟ್ಟು 14 ವರ್ಷಗಳಲ್ಲಿಯೇ ಇಹಲೋಕ ಯಾತ್ರೆಗೆ ಮಂಗಳ ಹಾಡಿದಳು. ಇದಾದ ನಂತರ ಎರಡನೇ ಧರ್ಮಪತ್ನಿಯಾಗಿ ಅವರ ಬಾಳಿನಲ್ಲಿ ಶೋಭಾವತಿ ಪ್ರವೇಶಿಸಿದಳು. ಇವಳು ಕೂಸು ಕುನ್ನಿಗಳಾಗದ ಕಾಣದಿಂದ ಬಂಜೆ ಎಂಬ ಕಳಂಕ ಹೊತ್ತಿದವಳು, ಬುದ್ಧನ ಶುದ್ಧ ಗುಣಗಳೆಲ್ಲವನ್ನು ತನ್ನಲ್ಲಿ ಅಳವಡಿಸಿಕೊಂಡಿದ್ದ ಶೋಭಾವತಿ ಶಶಿಕಲಾ ಬಿಟ್ಟುಹೋದ ಮಕ್ಕಳಿಗೆ ಸ್ವಂತ ತಾಯಿಯಾಗಿ ಬಂದಳು.
ನನಗನಿಸುತ್ತದೆ ಬುದ್ಧನ ಸಾಕು ತಾಯಿ ಗೌತಮಿಯು ಶೋಭಾವತಿಯ ರೂಪದಲ್ಲಿ ಬಂದಿರಬೇಕು. ಯಾಕೆಂದರೆ, ವಾಲ್ಗೊಡ್ಡಿಯ ಪ್ರಥಮ ಪತ್ನಿಯ ಮಕ್ಕಳು ತಮ್ಮ ಮಲತಾಯಿಯನ್ನು ಹೆತ್ತ ತಾಯಿಯಂತೆ ಬಗೆದರು. ಅಷ್ಟೇ ಅಲ್ಲ ಶೋಭಾವತಿ ಕೂಡ ತಾನು ಹೆತ್ತ ಮಗುವಿನ ಜವಾಬ್ದಾರಿಯನ್ನು ಗಂಡನಿಗೆ ಒಪ್ಪಿಸಿ ತನ್ನ ಸವತಿಯ ಮಕ್ಕಳನ್ನು ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಂತೆ ಕಂಡಳು. ಈ ಜಗತ್ತಿನಲ್ಲಿ ಇಂಥಾ ತಾಯಂದಿರು ಅಪರೂಪಕ್ಕೆ ಬರುತ್ತಾರೆ. ಉದಾಹರಣೆಯಾಗಿ ಉಳಿಯುತ್ತಾರೆ. ಶಂಭುಲಿಂಗ ವಾಲ್ಗೊಡ್ಡಿಯವರ ಬದುಕೆಂದರೆ ಸಾವು-ನೋವುಗಳ ದುರಂತಗಳ ಮಾಲೆ ಎಂದು ಹೇಳಬಹುದು. ಅವರು ತಮ್ಮ ಕಣ್ಣೆದುರಿಗೆ ಸಾಲುಸಾಲಾಗಿ ಸಾವುಗಳನ್ನು ಕಂಡರು, ನೋವುಗಳನ್ನೆ ಅನುಭವಿಸಿದರು. ಕೂಲಿ ಮಾಡಿ ಬದುಕನ್ನು ಸಾಗಿಸುತ್ತ ಬಂದ ಇವರು ಸ್ನಾತಕೋತ್ತರ ಪದವಿಧರ, ಮಾಸ್ತರ ಎಂಬ ಖ್ಯಾತಿ ಹೊಂದಿದವರು, ನಿತ್ಯ ಕೂಳಿಗಾಗಿ ಚಿಂತಿಸಿದವರು. ಇಂತಹ ಅವಸ್ಥೆಯಲ್ಲಿಯೂ ಇಬ್ಬರು ಹೆಂಡಿರ(ಒಬ್ಬರಾದ ನಂತರ ಒಬ್ಬರು ಬಂದರು) ಈ ಕಷ್ಟಕಾರ್ಪಣ್ಯಗಳ ಬಗ್ಗೆ ಸಿಡಿಮಿಡಿಗೊಂಡವರಲ್ಲ, ಚಕಾರ ಎತ್ತಿದವರಲ್ಲ. ಇನ್ನೊಂದು ಮಾತು ಹೇಳುವುದೇನೆಂದರೆ, ಇಬ್ಬರಲ್ಲಿ ಯಾವ ಹೆಂಡತಿಯು ಇವರನ್ನೂ ಇವರ ಬಡತನವನ್ನೂ ಹೀಯ್ಯಾಳಿಸಿದವರಲ್ಲ. ಅಷ್ಟೇ ಅಲ್ಲ ಇವರ ಹಾಡುಗಾರಿಕೆಯನ್ನೂ ಸಮುದಾಯದ ಸೇವಾ ಮನೋಭಾವನೆಯನ್ನು ನಿಂದಿಸಿದವರಲ್ಲ. ಯುವತಿಯರಾದ ಇವರಿಬ್ಬರೂ, ರಾತ್ರಿ 12 ಗಂಟೆಗೆ ಬರುವ ಗಂಡನನ್ನು ತಪ್ಪಿಯೂ ನಿಂದಿಸಿದವರಲ್ಲ. ಇವರ ಮನೆಯಲ್ಲಿ ಜರುಗಿದ ಸಾವುಗಳೆಲ್ಲ ಒಂದೊಂದು ವಿಶೇಷ ಕಾರ್ಯಕ್ರಮಗಳಲ್ಲಿ, ನಾಟಕಗಳ ಅಕ್ಷರ ಪ್ರಚಾರಗಳ ಪ್ರಸಂಗದಲ್ಲಿಯೇ ವಾಲ್ಗೊಡ್ಡಿಯು, ಎಲ್ಲಾ ಸಾವುಗಳ ಸಮಯದಲ್ಲಿ ಕಣ್ಣೀರು ಹಾಕುವುದನ್ನು ಬಿಟ್ಟು, ಕಾರ್ಯಕ್ರಮ ಹದಗೆಡಿಸದೆ ಅದನ್ನು ವ್ಯವಸ್ಥಿತವಾಗಿ ಒಂದು ಹಂತಕ್ಕೆ ಮುಟ್ಟಿಸಿದ ಮೇಲೆ ಸತ್ತವರ ದರ್ಶನಕ್ಕೆ ಹೋದವರು. ಇಲ್ಲಿ ವಾಲ್ಗೊಡ್ಡಿಯ ಕಲಾಭಿಮಾನ ಮತ್ತು ಸಮಯಕ್ಕೆ ಸಲ್ಲುವ ವರ್ತನೆಗಳೆಲ್ಲ ಶ್ಲಾಘನೀಯವಾದವು. ಶಂಭುಲಿಂಗ ವಾಲೊಡ್ಡಿಯವರು ನನಗೆ ಆತ್ಮೀಯ ಗೆಳೆಯರು. ಶೋಭಾವತಿಯನ್ನು ನಾನು ಬಹಳ ಸಮೀಪದಿಂದ ನೋಡಿದ್ದೇನೆ. ದೂರದಿಂದಲೂ ಅವಲೋಕಿಸಿದ್ದೇನೆ. ಅವಳೊಬ್ಬ ವಾತ್ಸಲ್ಯಮಯಿ ಜೀವಿಯಾಗಿದ್ದಳು. ಅವಳು ತನ್ನ ಬಣ್ಣ, ಚೆಲುವಿಗೆ ತಕ್ಕಂತೆ ಗುಣವಂತೆಯೂ ಆಗಿದ್ದಳು. ಶೋಭಾವತಿಯನ್ನು ನಾನೆಂದೂ ಗಂಟು ಮೋರೆಯಲ್ಲಿ ಕಂಡಿಲ್ಲ. ಶೋಭಾವತಿ ಚಟ್ಟದ ಮೇಲೆ ಮಲಗಿದಾಗಲು ನಗುಮುಖದಿಂದಲೆ ಮಲಗಿದ್ದಳು. ಇಂಥ ಅದ್ಭುತ ಮಹಿಳೆಗೆ ಸಂಬಂಧಿಸಿದ ಚರಿತ್ರೆ ಇದು ಶಂಭುಲಿಂಗ ವಾಲ್ಗೊಡಿಯದಲ್ಲ. ಶಶಿಕಲಾ ಮತ್ತು ಶೋಭಾವತಿಯವರದೆ ಎಂದು ಹೇಳಬಹುದು. ಇಡೀ ಚರಿತ್ರೆಯನ್ನು ಭಾವುಕ ಓದುಗನು ಓದುತ್ತಾ ಓದುತ್ತಾ ಹತ್ತಿಪ್ಪತ್ತು ಸಲವಾದರು ಕಣ್ಣೀರು ಹೊಳೆಯಲ್ಲಿ ಬಿಕ್ಕುವುದು ಖಾತ್ರಿಯೆಂದು ನನಗನಿಸುತ್ತದೆ. ಇದೊಂದು ಕಾದಂಬರಿಕಾರ ಚಿತ್ರಿಸಿದ ಕಾದಂಬರಿ ಎಂದು ಹೇಳಬಹುದು ಎಂದಿದ್ದಾರೆ.
ಶಂಭುಲಿಂಗ ವಾಗ್ದೊಡ್ಡಿ ಅವರು ಮೂಲತಃ ಬೀದರ ಜಿಲ್ಲೆಯ ವಾಗ್ದೊಡ್ಡಿ ಯವರು. ಲೇಖಕರು, ಜಾನಪದ ಕಲಾವಿದರು, ಗಾಯಕರು, ಬೀದರಿನ ವಿದ್ಯಾನಗರದ ಸಮತಾ ಪ್ರೌಢ ಶಾಲೆಯ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕೃತಿಗಳು: ಹೊಸ ದಿಗಂತದ ಹಾಯಿಕುಗಳು, ಮಹಾತಾಯಿ (ಜೀವನ ಚಿತ್ರ), ಮಮತೆಯ ಮಂದರ (ವಿಮರ್ಶಾ ಲೇಖನಗಳ ಸಂಕಲನ) ಪ್ರಶಸ್ತಿ-ಪುರಸ್ಕಾರಗಳು: ಅವರ ಜಾನಪದ ಕ್ಷೇತ್ರದ ಜೀವಮಾನದ ಸಾಧನೆಗಾಗಿ ಕರ್ನಾಟಕ ಜಾನಪದ ಪರಿಷತ್ತಿನಿಂದ 'ಜಾನಪದ ಲೋಕ ಪ್ರಶಸ್ತಿ' ಹಾಗೂ 2008-2009 ನೇ ಸಾಲಿನ 'ರಾಷ್ಟ್ರೀಯ ಉತ್ತಮ ಶಿಕ್ಷಕ' ಪ್ರಶಸ್ತಿ ಲಭಿಸಿದೆ. ...
READ MORE