ಲೇಖಕ ಟಿ. ಎಸ್. ಗೋಪಾಲ್ ಅವರು ಬರೆದ ಶಿವರಾಮ ಕಾರಂತರ ವ್ಯಕ್ತಿ ಪರಿಚಯ ಕೃತಿ ʼಕಡಲ ತಡಿಯ ಭಾರ್ಗವ ಶಿವರಾಮ ಕಾರಂತʼ. ಪುಸ್ತಕದ ಬೆನ್ನುಡಿಯಲ್ಲಿ, “ಕೋಟ ಶಿವರಾಮ ಕಾರಂತರು ಕನ್ನಡದ ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಖವಾದವು. ಹಾಗಾಗಿ ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದಿದ್ದಾರೆ. ಕಾರಂತರು ಬರೆದ ‘ಮರಳಿ ಮಣ್ಣಿಗೆ‘ ಎಂಬ ಕಾದಂಬರಿಯು ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಖ ಹಾಗೂ ಬಹು ಚರ್ಚಿತ ಕೃತಿಯಾಗಿದೆ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು ‘ಮರಳಿ ಮಣ್ಣಿಗೆ‘ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವ ಕಾರಂತರನ್ನು ಸೊಗಸಾಗಿ ಪರಿಚಯ ಮಾಡಿಕೊಟ್ಟಿದ್ದಾರೆ ಶ್ರೀ ಟಿ.ಎಸ್. ಗೋಪಾಲ್” ಎಂದಿದೆ.
ಟಿ. ಎಸ್. ಗೋಪಾಲ್ ಅವರು ಕನ್ನಡದ ಲೇಖಕರು. ಕನ್ನಡ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳ ಬಗ್ಗೆ ಆಸಕ್ತಿ ಹೊಂದಿರುವ ಇವರು, ಆ ಕುರಿತ ಲೇಖನಗಳು, ಪುಸ್ತಕಗಳನ್ನು ಬರೆದಿದ್ದಾರೆ. ಹೀಗೆ ಈವರೆಗೆ ಗೋಪಾಲ್ ಅವರು ಒಟ್ಟು 40ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿರುತ್ತಾರೆ. ಅವುಗಳಲ್ಲಿ ಅವರ 'ಕಾಡು ಕಲಿಸುವ ಪಾಠ' ಕೃತಿಗೆ ವಿಜ್ಞಾನ ವಿಷಯದಲ್ಲಿ 2013ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ. ಅಲ್ಲದೆ ಹಲವಾರು ಲಲಿತ ಪ್ರಬಂಧಗಳು, ವಿಮರ್ಶಾ ಲೇಖನಗಳು ಹಾಗೂ ವನ್ಯಜೀವಿಸಂರಕ್ಷಣೆಯನ್ನು ಕುರಿತ ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿಯಲ್ಲಿ ಪ್ರಕಟವಾಗಿವೆ. ...
READ MORE