‘ನೀಲಗಂಗಯ್ಯ ಪೂಜಾರ್’ ಜೀವನ-ಹೋರಾಟಗಳ ಅವಲೋಕನ' ಲೇಖಕ ಪೀರ್ ಬಾಷ ಅವರ ಕೃತಿ. ಭೂಮಿ ಇವರ ತಾತ್ವಿಕತೆಯ ಕೇಂದ್ರ ಗಾಂಧೀಜಿ ಜೀವನ ಮೌಲ್ಯಗಳ ಆದರ್ಶವಾದರೆ, ಲೋಹಿಯಾರ ಚಿಂತನೆಗಳೇ ಇವರ ಸಿದ್ದಾಂತ. ದೊಡ್ಡ ಮೇಟಿ ಅಂದಾನಪ್ಪ ರಾಜಕೀಯ ಗುರುವಾದರೆ, ಸಮಾಜವಾದವನ್ನು ಪರಿಚಯಿಸಿದ ಸಂಗಾತಿ ಸದಾಶಿವ ಕಾರಂತರು. ಹೀಗೆ ಈ ಎಲ್ಲ ವ್ಯಕ್ತಿ ಚಿಂತನೆಗಳ ಸಮರಸದ ಹೆಸರೇ -ನೀಲಗಂಗಯ್ಯ ಪೂಜಾರ್.
ಡಾ. ರಾಮಮನೋಹರ ಲೋಹಿಯಾ ಅವರ ಮೆಚ್ಚಿನ ಸಂಗಾತಿ ಪೂಜಾರ್ ಕರ್ನಾಟಕದಲ್ಲಿ ಸಮಾಜವಾದಿ ಚಳವಳಿಯನ್ನು ಕಟ್ಟಿ ಬೆಳೆಸಿದ ಮೊದಲ ತಲೆಮಾರಿನ ಪ್ರಮುಖರಲ್ಲಿ ಒಬ್ಬರು, ತಮ್ಮ 26ನೇ ವಯಸ್ಸಿನಲ್ಲಿ ಮುಂಬೈ ಶಾಸನಸಭೆಯ ಸದಸ್ಯರಾದರೂ, ನಂತರದಲ್ಲಿ ಅಧಿಕಾರ ರಾಜಕಾರಣದ ಮರೆಯಲ್ಲಿ ಉಳಿದು, ಚಳವಳಿ ರಾಜಕಾರಣದಲ್ಲಿ ಕ್ರಿಯಾಶೀಲರಾದರು. ಇವರು ಸಂಘಟಿಸಿದ ಹೆಬ್ಬಳ್ಳಿ ಭೂ ಹೋರಾಟ ರಾಜ್ಯದ ಭೂ ಹೋರಾಟಗಳ ಚರಿತ್ರೆಯಲ್ಲಿ ಪ್ರಧಾನವಾದದ್ದು ನಂತರದ ವಸತಿ ರಹಿತರ ಆಂದೋಲನವಂತೂ ಇಂದಿಗೂ ಮುಂದುವರಿದ ಸುದೀರ್ಘ ಕಥನ. ಅಂತಹ ಕಟು ನಿಷ್ಠುರಿ, ಹಠವಾದಿ, ಒಂದಿಷ್ಟು ಸಿಡುಕಿನವರಾಗಿಯೇ ಕಾಣುವ ನೀಲಗಂಗಯ್ಯ ಅವರ ಅಂತರಂಗದಲ್ಲಿ ಋಣಪ್ರಜ್ಞೆಯ ಸೆರೆಯಲ್ಲಿರುವ, ಮನಸಾಕ್ಷಿಗೆ ತಲೆಬಾಗುವ, ಶುದ್ಧ ಮಾನವೀಯ ಮಿಡಿತಗಳ ರೈತ ಇವರು. ಪೂಜಾರ್ ರ ಬದುಕು-ಹೋರಾಟದ ಮೇಲೆ ಬೆಳಕು ಚೆಲ್ಲುವ ಕೃತಿ ಇದು.
ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯಲ್ಲಿ ಬಿ. ಪೀರ್ ಬಾಷ ಅವರು ಹುಟ್ಟಿದ್ದು 1972 ರ ಮೇ 1 ರಂದು. ತಂದೆ- ಬಿ.ಬಾಷಾ ಸಾಹೇಬ್ ಹಾಗೂ ತಾಯಿ- ಹಯಾತ್ ಬಿ. ಸದ್ಯ ಕೊಪ್ಪಳ ಜಿಲ್ಲೆಯ ಗಂಗಾವತಿಯ ಕಾರಟಗಿಯಲ್ಲಿ ವಾಸ. ಸಾಮಾಜಿಕ ಚಟುವಟಿಕೆಯೊಂದಿಗೆ ಬರವಣಿಗೆ ರೂಢಿಸಿಕೊಂಡಿರುವ ಪೀರ್ ಬಾಷ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಸದಸ್ಯರು. ಕವನ ಸಂಕಲನಗಳು : ಜೀವ ಬಂತು ಹಾದಿಗೆ, ಜಾಲಿ ಹೂಗಳ ನಡುವೆ, ಅಕ್ಕಸೀತಾ ನಿನ್ನಂತೆ ನಾನೂ, ದೇವರು ಮನುಷ್ಯರಾದ ದಿನ, ಸಮಾಜವಾದಿ ಹೋರಾಟಗಾರರ ಸಂದರ್ಶನ ಮಾಡಿದ ಕೃತಿಗಳನ್ನು ಹಂಪಿಯ ಕನ್ನಡ ವಿ.ವಿ.ಪ್ರಕಟಿಸಿದೆ. ಸಮಾಜವಾದಿ ನೀಲಗಂಗಯ್ಯ ಪೂಜಾರ್ ಕುರಿತು ವ್ಯಕ್ತಿ ಚಿತ್ರಣ, ಸಂಪಾದಿತ ಕೃತಿ: ಶಿಲವೇರಿ ಶಿವಪ್ಪ ಸಂ (ತತ್ವಪದಗಳು), ...
READ MORE