ಸರ್. ಚಾರ್ಲ್ಸ್ ಲಯಲ್ (1792-1875) ಕುರಿತು ಲೇಖಕ ಡಾ. ಎಂ. ವೆಂಕಟಸ್ವಾಮಿ ಅವರು ಬರೆದ ಕೃತಿ. ಸರ್. ಚಾರ್ಲ್ಸ್ ಲಯಲ್ ಪ್ರಖ್ಯಾತ ಭೂವಿಜ್ಞಾನಿ. ಕನ್ನಡ ಪುಸ್ತಕ ಪ್ರಾಧಿಕಾರ 2000ದಲ್ಲಿ ''ದೀಪಮಾಲೆ'' ಸರಣಿಯಲ್ಲಿ ಹೊರ ತಂದ ಕೃತಿ ಇದು. ''ಭೂವಿಜ್ಞಾನದ ಜನಕ'' ಎಂಬ ಕೀರ್ತಿಗೆ ಭಾಜನರು. ಈತನ ಮೂಲ ಸ್ಕಾಟ್ಲೆಂಡ್. ಭೂವಿಜ್ಞಾನಿ ಸರ್. ಚಾರ್ಲ್ಸ್ ಲಯಲ್ ಹುಟ್ಟಿ ಇನ್ನೂರು ವರ್ಷವಾಯಿತು. ಲಯಲ್ ಜೀವನ ಚರಿತ್ರೆ ಬರೆಯಲು ಕ.ಪು.ಪ್ರಾ ನನಗೆ ಸೂಚಿಸಿದ್ದು ಭೂವಿಜ್ಞಾನಿಯಾದ ನನಗೆ ಹೆಚ್ಚಿನ ಸಂತಸ ತಂದಿತು. ನ್ಯೂಟನ್, ಐನ್ ಸ್ಟೈನ್, ಡಾವಿನ್ ಮುಂತಾದ ಪ್ರಖ್ಯಾತರ ವಿಜ್ಞಾನಿಗಳ ಕೊಡುಗೆಗಳಷ್ಟೇ ಲಯಲ್ ಕೊಡುಗೆಯೂ ಮುಖ್ಯವಾದದ್ದು, ಆದರೆ ಭೂವಿಜ್ಞಾನ ಉಳಿದ ವಿಜ್ಞಾನಗಳಷ್ಟು ಪ್ರಚಲಿತವಿಲ್ಲದ ಕಾರಣ ಲಯಲ್ ಹೆಸರು ಕೂಡ ಈ ಕ್ಷೇತ್ರದದ ಹೊರಗಿನವರಿಗೆ ವಿಶೇಷವಾಗಿ ಪರಿಚಯವಿರಲಾರದು. ಭೂವಿಜ್ಞಾನದ ಪ್ರಾಥಮಿಕ ತಿಳಿವಳಿಕೆಯನ್ನು ಜಗತ್ತಿಗೆ ತಿಳಿಸಲು ಲಯಲ್ ಪಟ್ಟ ಶ್ರಮ, ಅವರು ಪಡೆದ ವಿಶೇಷ ಅನುಭವ ಎಂದೆಂದಿಗೂ ವಿಜ್ಞಾನದಲ್ಲಿ ಮೈಲುಲ್ಲಾಗಿಯೇ ಉಳಿದುಕೊಂಡಿದೆ.
1831ರಲ್ಲಿ ಡಾವಿನ್ ''ಬೀಗಲ್ ರಾಕ್''' ನೌಕೆಯಲ್ಲಿ ಯಾತ್ರೆ ಕೈಗೊಂಡು ಪ್ರಕೃತಿ ವಿಜ್ಞಾನದ ಅಧ್ಯಯನದಲ್ಲಿ ತೊಡಗಿಕೊಂಡಾಗ ಅವರ ಕೈಯಲ್ಲಿ ಲಯಲ್ ಬರೆದ ''ಭೂವಿಜ್ಞಾನದ ಮೂಲತತ್ವಗಳು (principles of geology)'' ಎಂಬ ಎರಡು ಸಂಚಿಕೆಗಳಿದ್ದವು. ಡಾರ್ವಿನ್ ಆ ಕೃತಿಯ ಬಗ್ಗೆ ಹೀಗೆ ನುಡಿದಿದ್ದರು: ''ನಾನು ಕೇಪ್ ವುಡ್ ದ್ವೀಪದಲ್ಲಿ ನನ್ನ ಮೊದಲ ಸಂಶೋಧನೆಯನ್ನು ಕೈಗೊಂಡೆ. ನಾನು ಈವರೆಗೂ ಓದಿದ, ಮುಂದೆ ಓದಬಹುದಾದ ಭೂವಿಜ್ಞಾನ ಪುಸ್ತಕಗಳೊಡನೆ ಹೋಲಿಸಿದರೆ, ಲಯಲ್ ಅವರು ಭೂವಿಜ್ಞಾನ ಪ್ರತಿಪಾದಿಸಿರುವ ರೀತಿ ಮತ್ತು ನಿರೂಪಣೆ ಬಹು ಶ್ರೇಷ್ಟವಾದದ್ದು.'' ಲಯಲ್ ಅವರ ಪಾಂಡಿತ್ಯಕ್ಕೆ ಡಾರ್ವಿನ್ ನ ಈ ಮೆಚ್ಚುಗೆಯ ಮಾತುಗಳೆ ಸಾಕ್ಷಿ.
ಆಧುನಿಕ ಭೂವಿಜ್ಞಾನದ ಪಿತಾಮಹ ಎಂದು ಕರೆಯುವ ಜೇನ್ಸ್ ಹಟ್ಟನ್ (1726-1797) ಸಾರ್ವಕಾಲಿಕ ಸತ್ಯವನ್ನು ಕಂಡುಕೊಂಡು ಭೂವಿಜ್ಞಾನದಲ್ಲಿ ಮೊದಲಿಗೆ ``ಏಕಪ್ರಕಾರವಾದ (Unitarianism) ಎಂಬ ಸಿದ್ಧಾಂತವನ್ನು ಹುಟ್ಟು ಹಾಕಿದ. ಪ್ರಸ್ತುತ ನಿಸರ್ಗದಲ್ಲಿ ಏನೇನು ಘಟಿಸುತ್ತವೆಯೊ ಅವೆಲ್ಲವೂ ಹಿಂದೆಯೂ ಘಟಿಸಿವೆ. ಇಂದು ನಿನ್ನೆಗೆ ಕೀಲಿಕೈ (Present is the key to the past) ಎಂಬ ಚಿರಂತರ ರಹಸ್ಯವನ್ನು ಹಟ್ಟನ್ ಪ್ರಕಟಿಸಿದ. ಅನಂತರ ಈ ಸಿದ್ಧಾಂತಕ್ಕೆ ವಾಸ್ತವಿಕ ನೆಲೆಗಟ್ಟನ್ನು ಒದಿಗಿಸಿ, ಭೂಅಧ್ಯಯನದ ಮೂಲಕ ಅಸಂಖ್ಯೆ ಪುರಾವೆಗಳನ್ನು ಒದಿಗಿಸಿದ ಲಯಲ್ 18ನೇ ಶತಮಾನ ಕಂಡ ಶ್ರೇಷ್ಠ ವಿಜ್ಷಾನಿಗಳಲ್ಲಿ ಒಬ್ಬರು. ಚಾರ್ಲ್ಸ್ ಲಯಲ್ ಉತ್ತೇಜನ ನೀಡದೆ ಹೋಗಿದ್ದರೆ ಪ್ರಾಯಶಃ ಡಾರ್ವಿನ್ ನ ಕೃತಿ ''ಜೀವಸಂಕುಲ ಉಗಮ Theory of evolution'' ಎಂದಿಗೂ ಬೆಳಕು ಕಾಣುತ್ತಿರಲಿಲ್ಲ ಎಂದು ಲೇಖಕ ಡಾ.ಎಂ.ವೆಂಕಟಸ್ವಾಮಿ ಅಭಿಪ್ರಾಯಪಡುತ್ತಾರೆ.
ಈ ಕೃತಿಯಲ್ಲಿ ಚಾರ್ಲ್ಸ್ ಲಯಲ್ ಬಾಲ್ಯ-ವಿದ್ಯಾಭ್ಯಾಸ-ವಿವಾಹ, ಲಯಲ್ ಮೇಲೆ ಜೇಮ್ಸ್ ಹಟ್ಟನ್ ರ ಪ್ರಭಾವ, ಎಟ್ನ ಮತ್ತು ಭೂ ಪ್ರಾಚೀನತೆ, ನೇಪಲ್ಸ್ ಜೂಪಿಟರ್ ಸಿರಾಟಸ್ ಮಂದಿರ, ಭೂವಿಜ್ಞಾನದ ಮೂಲ ತತ್ವಗಳು ಮತ್ತು ಪ್ರೇರಣೆ, ಚಾರ್ಲ್ಸ್ ಡಾವಿ್ನ್ ಮೇಲೆ ಲಯಲ್ ಬೀರಿದ ಪ್ರಭಾವ, ಜೀವಸಂಕುಲಗಳ ಉಗಮ - ಲಯಲ್ ರ ಪಾತ್ರ, ಲಯಲ್ ರ ಅಂತಿಮ ದಿನಗಳು-ಹೀಗೆ ಅಧ್ಯಾಯಗಳು ಒಳಗೊಂಡಿವೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಗೆ ಸೇರಿದ ಡಾ.ಎಂ.ವೆಂಕಟಸ್ವಾಮಿ ಅವರು 06.11.1955 ರಂದು ಜನಿಸಿದರು, ಪ್ರಾಥಮಿಕ ಶಿಕ್ಷಣ ತನ್ನ ಊರಿನಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಘಟ್ಟುಮಾದಮಂಗಳದಲ್ಲಿ ಪೂರೈಸಿದರು. ಕೆ.ಜಿ.ಎಫ್‍ನ ಮುನಿಸಿಪಲ್ ಬಾಯ್ಸ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮತ್ತು ಕೆಜಿಎಫ್ ಪ್ರ.ದ.ಕಾಲೇಜಿನಲ್ಲಿ ಬಿ.ಎಸ್ಸಿ. ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (ಭೂವಿಜ್ಞಾನ) ಎಂ.ಎಸ್ಸಿ., ಮುಗಿಸಿದರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾದರು. ಅದಕ್ಕೆ ಮುಂಚೆ ಸ್ವಲ್ಪ ಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿ (SAIL) ಕೆಲಸ ಮಾಡಿದ್ದರು. ‘ಕೋಲಾರ ಚಿನ್ನದ ಗಣಿಗಳು'' ಮಹಾಪ್ರಬಂಧಕ್ಕೆ ...
READ MOREಭೂವಿಜ್ಞಾನವು ಲಯಲ್ ರಿಗೆ ಬಹುವಾಗಿ ಋಣಿಯಾಗಿದೆ. ಲಯಲ್ ಸಿದ್ಧಾಂತದ ಶ್ರೇಷ್ಠತೆಯೆಂದರೆ ಅದು ಇತರರ ಆಲೋಚನಾ ಪರಿಯನ್ನೇ ಬದಲಾಯಿಸುವುದು. 'ನನ್ನ ಕಣ್ಣನ್ನು ತೆರೆಸಿ ಅಜ್ಞಾನವನ್ನು ನಿರ್ಮೂಲನೆ ಮಾಡಿದ ಗುರು ಆತ'. ಸರ್. ಚಾರ್ಲ್ಸ್ ಲಯಲ್ ಕುರಿತ ಖ್ಯಾತ ಜೀವ ಶಾಸ್ತ್ರಜ್ಞ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಆಡಿದ ಈ ಮಾತುಗಳು ಲಯಲ್ ಸಾಧನೆಗೆ ಹಿಡಿದ ಕನ್ನಡಿಯಾಗಿದೆ.
200 ವರ್ಷಗಳ ಹಿಂದೆ ಸ್ಕಾಟ್ಲೆಂಡಿನ ಕಿನ್ನಾರ್ಡಿ ಎಂಬ ಹಳ್ಳಿಯ ಅನುಕೂಲಸ್ಥ ಮನೆತನದಲ್ಲಿ ಹುಟ್ಟಿದ ಲಯಲ್ ಬಾಲ್ಯದಿಂದಲೂ ನಿಸರ್ಗದ ಬಗ್ಗೆ ಆಕರ್ಷಿತನಾದ. ಮುಂದೆ ವಕೀಲಿ ವೃತ್ತಿಗೆ ಓದಿದರೂ ತನ್ನ ಬದುಕನ್ನು ಭೂವಿಜ್ಞಾನದ ಶೋಧನೆಗೆ ಮೀಸಲಿಟ್ಟರು. ತಾರಣ್ಯದಲ್ಲೇ ದೃಷ್ಟಿ ದೋಷಕ್ಕೆ ಒಳಗಾದರೂ ಲಯಲ್ ತನ್ನ ಪತ್ನಿಯ ನೆರವಿನೊಂದಿಗೆ ಸಂಶೋಧನೆಗಳನ್ನು ಮುಂದುವರಿಸಿ ಭೂವಿಜ್ಞಾನದ ಪಿತಾಮಹನೆನಿಸಿಕೊಂಡ ಯಶೋಗಾಥೆಯನ್ನು ಲೇಖಕರು ಹೃದ್ಯವಾಗಿ ಈ ಕೃತಿಯಲ್ಲಿ ಮಾಡಿಕೊಟ್ಟಿದ್ದಾರೆ
- ಕನ್ನಡ ಪುಸ್ತಕ ಪ್ರಾಧಿಕಾರ