ಶ್ರೀನಿವಾಸ ಹಾವನೂರು ರಚಿಸಿರುವ ಕೃತಿ ‘ಕಾದಂಬರಿಕಾರ ಗಳಗನಾಥರು’. ಕನ್ನಡ ಕಾದಂಬರಿ ಯುಗದ ಪ್ರವರ್ತಕರೆನಿಸಿದ ಗಳಗನಾಥರ ಬಗ್ಗೆ ಕನ್ನಡದಲ್ಲಿ ಅನೇಕ ಗ್ರಂಥಗಳು ಪ್ರಕಟವಾಗಿವೆ. ಅವುಗಳಲ್ಲಿ ಗಳಗನಾಥ ಮಾಸ್ತರರು ಎಂಬ ಶೀರ್ಷಿಕೆಯುಳ್ಳ ಪೂರ್ಣ ಸ್ವರೂಪದ ನನ್ನ ಕೃತಿ ಎರಡನೆಯದು ಎಂದಿದ್ದಾರೆ ಶ್ರೀನಿವಾಸ ಹಾವನೂರರು. ಡಾ. ಕೃಷ್ಣಮೂರ್ತಿ ಕಿತ್ತೂರರು ಗಳಗನಾಥರ ಕಾದಂಬರಿಗಳನ್ನು ಕುರಿತು ಉದ್ಗ್ರಂಥವನ್ನು ಬರೆದಿದ್ದಾರೆ. ಪ್ರಕೃತ ಈ ಪುಸ್ತಕದ ವಿಷಯ ಸಾಮಗ್ರಿಯನ್ನು ಇವೆರಡು ಗ್ರಂಥಗಳಿಂದ ತೆಗೆದುಕೊಂಡಿದೆ. ಇದು ಮುಂದೆ ಭಾಷಾಂತರಗೊಂಡು, ಭಾರತದ ವಿವಿಧ ಭಾಷಿಕರನ್ನು ತಲುಪಲಿದೆಯಾದ್ದರಿಂದ, ಅವರನ್ನು ಗಮನದಲ್ಲಿರಿಸಿಕೊಂಡು ವಿಷಯ ಮಂಡನೆ ಮಾಡಲಾಗಿದೆ. ಹಾಗಾಗಿ ಇದರಲ್ಲಿ ಗಳಗನಾಥರ ಕೃತಿಗಳ ಸೂಕ್ಷ್ಮ ವಿಮರ್ಶೆಗೆ ತೊಡಗಿಲ್ಲ. ಗಳಗನಾಥರನ್ನು ಕುರಿತು ಬರೆಯುವುದು ಒಂದರ್ಥದಲ್ಲಿ ಸುಲಭ- ಸರಳವಾದದ್ದು, ಏಕೆಂದರೆ ಅವರು ತಮ್ಮ ಪ್ರತಿಯೊಂದು ಗ್ರಂಥದ ಪೀಠಿಕೆಯಲ್ಲಿ ಅದರ ಆಕರವನ್ನೂ, ಕೃತಿ ರಚನೆಯ ತಮ್ಮ ಉದ್ದೇಶವನ್ನೂ, ಜೊತೆಗೆ ಸ್ವ-ವಿಷಯವನ್ನೂ ಬಿಚ್ಚು ಮಾತಿನಲ್ಲಿ ಹೇಳಿರುತ್ತಾರೆ. ಗಳಗನಾಥರನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅವು ನೇರ ಸಾಧನಗಳಾದ್ದರಿಂದ, ಅವುಗಳಿಂದ ಧಾರಾಳವಾಗಿ ಉದ್ಧರಿಸಿದ್ದೇನೆ. ಈ ಉಧೃತ ಭಾಗಗಳಿಂದ, ಇದರಲ್ಲಿ ವ್ಯಕ್ತವಾದ ಅಭಿಪ್ರಾಯಗಳ ಪ್ರಾಮಾಣ್ಯತೆಯನ್ನು ಕಾಯ್ದುಕೊಂಡಂತಾಗಿದೆ. ಇಲ್ಲಿ ಗಳಗನಾಥರ ಅಂದಿನ ಭಾಷಾ ಶೈಲಿಗೂ, ಈಗಿನ ನಮ್ಮ ಶಿಷ್ಟ ಕನ್ನಡ ಬರವಣಿಗೆಗೂ ಅಂತರವಿರುವುದನ್ನು ಗಮನಿಸಬೇಕು. ಉದಾ. ಮಾಡುವದು-ಮಾಡುವುದು. ನಮ್ಮ ಗಳಗನಾಥರನ್ನು ಅಖಿಲ ಭಾರತ ಮಟ್ಟದಲ್ಲಿ ಪ್ರಚಾರಗೊಳಿಸುತ್ತಿರುವ ಕೇಂದ್ರ ಸಾಹಿತ್ಯ ಅಕಾಡೆಮಿಗೆ ಅಭಿವಂದಿಸುವೆ ಎಂದಿದ್ದಾರೆ ಲೇಖಕ ಶ್ರೀನಿವಾಸ ಹಾವನೂರ.
ಕನ್ನಡ ಸಾಹಿತ್ಯಸಂಶೋಧನೆ ಮಾಡಲು ಮೊತ್ತಮೊದಲು ಕಂಪ್ಯೂಟರ್ ಬಳಸಿದವರು ಡಾ. ಶ್ರೀನಿವಾಸ ಹಾವನೂರರು (1928-2010). ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾದುದು, ವೈವಿಧ್ಯಮಯವಾದುದು. ಸಣ್ಣ ಕಥೆ, ಲಲಿತ ಪ್ರಬಂಧ, ಜೀವನ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ವಿಮರ್ಶೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ನಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಹಿಂದೆ ಮುಂಬಯಿಯ ಟಾಟಾ ಮೂಲಭೂತ ವಿಜ್ಞಾನ ಸಂಸ್ಥೆಯ ಗ್ರಂಥಪಾಲಕರಾಗಿದ್ದರು. ಮುಂದೆ ಮಂಗಳೂರು ಮತ್ತು ಮುಂಬಯಿ ವಿ.ವಿ.ಯ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದರು. ಆಮೇಲೆ ಪುಣೆಯಲ್ಲಿ ಮರಾಠಿ ಕನ್ನಡ ಸ್ನೇಹ ಸಂವರ್ಧನೆಯಲ್ಲಿ ಪಾತ್ರವಹಿಸಿದರು.. ಕೊನೆಗೆ ಕರ್ನಾಟಕ ಸರಕಾರದ ಸಮಗ್ರ ದಾಸ ಸಾಹಿತ್ಯ ಸಂಪಾದಕರಾಗಿ ೫೦ ಸಂಪುಟಗಳ ಪ್ರಕಟಣೆಯ ನೇತೃತ್ವ ವಹಿಸಿದರು. ಕನ್ನಡದ ನಾಡೋಜರೆಂದು ಹೆಸರಾದರು. ...
READ MORE