‘ನೂರೆಂಟು ನಾಯಿ ಬೊಗಳಿದರೇನು’ ತತ್ವಪದಗಾರ ವಡಿಕೆಪ್ಪ ತಾತ ಅವರ ತತ್ವಪದ ಮತ್ತು ಜೀವನ ಚರಿತ್ರೆ. ಕರ್ನಾಟಕದಲ್ಲಿ ಭಕ್ತಿಯ ಜೊತೆಗೆ ವೈಚಾರಿಕತೆಯನ್ನು ಹುಟ್ಟುಹಾಕಿದವರು ವಚನಕಾರರು. ಭೇದ ಸಂಸ್ಕೃತಿಯ ವಿರುದ್ಧ ಬಂಡೆದ್ದ ಅವರು, ಶತ-ಶತಮಾನಗಳಿಂದ ವಂಚಿತ ಜೀವಗಳಿಗೆ ಅರಿವು-ಅಕ್ಷರದ ಅವಕಾಶ ಕಲ್ಪಿಸಿಕೊಟ್ಟರು. ಆದ್ದರಿಂದ, ಕನ್ನಡ ನೆಲದ ಹಳ್ಳಿಹಳ್ಳಿಗಳಲ್ಲಿ ಅನುಭಾವಿಗಳ ದೊಡ್ಡ ಪಡೆಯೇ ಹುಟ್ಟಿಕೊಂಡಿತು. ತತ್ವಪದಕಾರರು ಎಂದು ಕರೆಸಿಕೊಳ್ಳುವ ಈ ಜನ, ಮತ-ಧರ್ಮ-ಸಂಪ್ರದಾಯಗಳ ಚೌಕಟ್ಟನ್ನು ಮೀರಿ 'ತತ್ವ'ವನ್ನು ಅಪ್ಪಿಕೊಂಡರು.
ತತ್ವ ಎಂದರೆ ಆತ್ಮ ತತ್ವ ಮತ್ತು ಪರಮಾತ್ಮ ತತ್ವ, ಎರಡೆಂಬ ಭೇದ ಅಳಿದು ಒಂದಾಗುವುದೇ ಇವರ ಗುರಿ. ಈ ಗುರಿ ಹಿಡಿದು ಬಾಳಿ, ಬಾಳಿನ ಅನುಭವಗಳನ್ನು ಹಾಡಿ, ಜನಮನಕೆ ಹತ್ತಿರವಾದವರು ಕೂಡಲೂರು ಬಸವಲಿಂಗ, ಘನಮಠದಾರ್ಯ, ಕಡಕೋಳ ಮಡಿವಾಳಪ್ಪ ಮೊದಲಾದವರು. ಅವರಲ್ಲಿ ವಡಿಕೆಪ್ಪ ತಾತ ಒಬ್ಬರು.
ಗಂಗಾವತಿ ತಾಲೂಕಿನ ವಡಿಕೆಯಲ್ಲಿ ಜನಿಸಿ, ಸಂಸಾರ ಒಪ್ಪಿದರೂ ತತ್ವದಲ್ಲಿ ಧ್ಯಾನವಿಟ್ಟು, ಪರಿವೆ ಇಲ್ಲದೆ ಲೋಕ ಸುತ್ತಿ ಲಿಂಗಸೂಗೂರು ತಾಲೂಕಿನ ಯಲಗಟ್ಟಿಯಲ್ಲಿ ದೇಹಬಿಟ್ಟ ವಡಿಕೆಪ್ಪ ತಾತ, 'ಗಡಿವಡಿಕೇಶ' ಅಂಕಿತದಲ್ಲಿ ಬರೆದ ಹಾಡುಗಳು ಭಜನೆಗಳಲ್ಲಿ ಅವತರಣಗೊಳ್ಳುತ್ತ ಬಂದುದೇ ಹೆಚ್ಚು, ತತ್ವದ ರುಚಿಯನ್ನು ಸಾಹಿತ್ಯದ ಸ್ವಾದವನ್ನು ಅಪೂರ್ವವಾಗಿ ಮೇಳವಿಸಿಕೊಂಡ ಈ ಹಾಡುಗಳನ್ನು, ಸಾಹಿತಿ ಡಾ. ಸಿ.ಬಿ. ಚಿಲ್ಕಾರಾಗಿ ಅವರು ಅತ್ಯಂತ ಶ್ರಮ ಹಾಗೂ ಶ್ರದ್ದೆಯಿಂದ ಸಂಗ್ರಹಿಸಿ ವಿಚಾರಪೂರ್ಣ ಟಿಪ್ಪಣಿಗಳನ್ನು ಒದಗಿಸಿ, ಈ ಹಾಡುಗಳ ಗಂಭೀರ ಅಧ್ಯಯನದ ಕಡೆಗೆ ನಮ್ಮನ್ನು ಸೆಳೆದಿದ್ದಾರೆ.
ಇಲ್ಲಿಯ 139 ಹಾಡುಗಳಿಗೆ, ತಾತನ ಲೋಕೋತ್ತರ ಬಾಳಿನ ವಿವರಗಳಿಗೆ ಕೊಪ್ಪಳ-ರಾಯಚೂರು-ಯಾದಗಿರಿ ಜಿಲ್ಲೆಗಳ 50 ಹಳ್ಳಿಗಳನ್ನು ತಮ್ಮ ಕ್ಷೇತ್ರಕಾರ್ಯಕ್ಕೆ ಲೇಖಕರು ಹೊಕ್ಕು ಬಳಸಿದ್ದು ವಿಶೇಷವಾಗಿದೆ.
ಡಾ. ಸಿ.ಬಿ. ಚಿಲ್ಕರಾಗಿ ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಚಿಲ್ಕರಾಗಿ ಗ್ರಾಮದವರು. ಚಿಲ್ಕರಾಗಿ, ಗುಡಿಹಾಳ, ಮಸ್ಕಿ ಮತ್ತು ಕೊಪ್ಪಳ ಜಿಲ್ಲೆಯ ಕನಕಗಿರಿ, ಗಂಗಾವತಿ ಪ್ರೌಢ ಶಿಕ್ಷಣ ಹಾಗೂ ಕಾಲೇಜು, ಪದವಿ ಶಿಕ್ಷಣ ನಂತರ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದರು. ಸದ್ಯಕ್ಕೆ, ಕೊಪ್ಪಳ ಜಿಲ್ಲಾ ಕೇಂದ್ರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದಾರೆ. ಕೃತಿಗಳು:ತಿಳಿವಳಿಕೆ ಬಯಲು, ನೂರೆಂಟು ನಾಯಿ ಬೊಗಳಿದರೇನು, ಪಣತಿ ಮತ್ತು ಮಹಾನವಮಿ, ಎಲ್ಲಿತ್ತು ಈ ಮೊದಲು ಎಲ್ಲಿಂದ ಬಂತವ್ವ ಹಾಗೂ ಹಮ್ಮಿಗೆ ಬ್ರಹ್ಮ ತಾ ಕೆಟ್ಟ ಎನ್ನುವ ಕೃತಿಗಳನ್ನುರಚಿಸಿದ್ದಾರೆ. ...
READ MORE