ಅಪ್ಪನ ಪರಪಂಚದಲ್ಲಿ ಹೇಗಿತ್ತು. ಅಪ್ಪನ ಬದುಕು, ಅವರ ಸಾವಿನ ನಂತರ ಕುಟುಂಬ ಇವೆಲ್ಲವನ್ನು ಲೇಖಕರು ಆಪ್ತವಾಗಿ ಬರೆದಿದ್ದಾರೆ. ಅಪ್ಪನ ವಿದಾಯದ ನಂತರ ಅಪ್ಪ ಬರೆದಿಟ್ಟ ಉಯಿಲಿನಿಂದಾಗಿ ಕುಟುಂಬದೊಳಗಡೆ ನಡೆಯುವ ತಿಕ್ಕಾಟಗಳು ಶಕ್ತಿಯುತವಾಗಿ ಮೂಡಿವೆ. ಅವರು ಸಾಯುವ ಮುನ್ನದ ಬದುಕು, ಭಾವನೆಗಳು ಉಂಟು ಮಾಡಿರಬಹುದಾದ ಮನುಷ್ಯರ ಬಗೆಗಿನ ಭಾವನೆಗಳು ಯೋಚನೆಗೆ ಹಚ್ಚಿವೆ.
ಸರ್ಜಾಶಂಕರ ಅರಳೀಮಠರು ಬೆನ್ನುಡಿಯಲ್ಲಿ ಕೃತಿಯ ಬಗ್ಗೆ ಮಾತನಾಡುತ್ತಾ ’ಅಪ್ಪನ ಪರಪಂಚ' ಅಪ್ಪನ ಬಗ್ಗೆ ಮಾತ್ರ ಹೇಳುತ್ತಿಲ್ಲ. ಅಪ್ಪನ ಕಾಲಘಟ್ಟವನ್ನು ನಿಷ್ಟುರವಾಗಿ ಚಿತ್ರಿಸುತ್ತದೆ. ಮನುಷ್ಯನ ಸಣ್ಣತನ, ಸ್ವಾರ್ಥ ಯಾವುದೇ ಒಂದೇ ಕುಟುಂಬಕ್ಕೆ ಸೀಮಿತವಲ್ಲ. ಹಾಗಾಗಿ ಕೊಡಸೆ ಮನೆತನದ ಈ ಎಲ್ಲ ಸಹಜ ಬದುಕಿನ ಏರಿಳಿತಗಳು ಮನುಷ್ಯ ಜನಾಂಗದ ಭಾಗವೇ ಆಗಿದೆ’ ಎಂದಿದ್ದಾರೆ.
ಕತೆಗಾರ, ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು 1953 ಏಪ್ರಿಲ್ 12ರಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೊಡಸೆ ಗ್ರಾಮದಲ್ಲಿ ಜನಿಸಿದರು. ತಾಯಿ ಭರ್ಮಮ್ಮ, ತಂದೆ ಕರಿಯನಾಯ್ಕ. ಹುಟ್ಟೂರು ಹಾಗೂ ಹೊಸನಗರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರಜಾವಾಣಿಯಲ್ಲಿ ಉಪಸಂಪಾದಕರಾಗಿ, ಮುಖ್ಯವರದಿಗಾರರಾಗಿ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. ‘ಅಪ್ಪನ ಪರಪಂಚ, ಕೊಡಚಾದ್ರಿ, ಸಹಪಥಿಕ, ಅವ್ವ, ಬಿ. ವೆಂಕಟಾಚಾರ್ಯ, ಕುವೆಂಪು ಮತ್ತು, ಕನ್ನಡ ವಿಮರ್ಶಾ ವಿವೇಕ, ಹಾಯಿದೋಣಿ’ ಅವರ ಪ್ರಮುಖ ಕೃತಿಗಳು. ...
READ MORE