‘ಚಂದ್ರ ಶಿಕಾರಿ’ ಚಳವಳಿಯ ಅಸಲಿ ಕಸಬುದಾರ: ಹೋರಾಟಗಾರ ಚಂದ್ರಶೇಖರ ತೋರಣಘಟ್ಟ ಅವರ ನೆನಪನ್ನು ಮರುಕಳಿಸಿ, ಉಳಿಸುವ ಕಥನ. ಈ ಕೃತಿಯಲ್ಲಿ ಅವರ ಹೋರಾಟದ ಬದುಕನ್ನು ಹತ್ತಿರದಿಂದ ಕಂಡು, ಅವರೊಂದಿಗೆ ಒಡನಾಡಿದ ಹಲವು ಜನರ ನೆನಪುಗಳು ದಾಖಲುಗೊಂಡಿವೆ. ಕವಿ, ಲೇಖಕ ಕೈದಾಳ್ ಕೃಷ್ಣಮೂರ್ತಿ ಈ ಕೃತಿಯನ್ನು ಸಂಪಾದಿಸಿದ್ದಾರೆ.ಈ ಕೃತಿಗೆ ಪ್ರೊ.ರಹಮತ್ ತರೀಕೆರೆ ಅವರು ಬೆನ್ನುಡಿ ಬರೆದಿದ್ದಾರೆ. ಅಕಾಲ ಮೃತ್ಯುವಿಗೀಡಾದ ಹೋರಾಟಗಾರ ಚಂದ್ರಶೇಖರ ತೋರಣಘಟ್ಟ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಈ ಕೃತಿ. ಹೆಮ್ಮೆಯನ್ನೂ, ದುಗುಡವನ್ನೂ ಮೂಡಿಸುತ್ತದೆ ಎನ್ನುತ್ತಾರೆ ರಹಮತ್ ತರೀಕೆರೆ.
ಜೊತೆಗೆ, ಲೋಕದ ಬಾಳನ್ನು ಹಸನುಗೊಳಿಸಲು ಆದರ್ಶ ಕಟ್ಟಿಕೊಂಡು ಸೆಣಸಾಡಿದ ಜೀವವೊಂದು ನಮ್ಮ ನಡುವೆಯಿತ್ತು ಎಂದು ಹೆಮ್ಮೆ: ಇಂತಹ ಜೀವವು ಬಾಳಿನಲ್ಲಿ ಪಡಬಾರದ ಪಾಡು ಪಟ್ಟು, ಬಾಳು ಪೂರೈಸುವ ಮೊದಲೇ ನಿರ್ಗಮಿಸಿತಲ್ಲಾ ಎಂದು ದುಗುಡ ಎನ್ನುತ್ತಾರೆ. ತೋರಣಘಟ್ಟರ ಪತ್ರ, ಕವನ, ಲೇಖನಗಳು, ಆದರ್ಶಗಳಿಂದ ಧಗಧಗಿಸುವ ವ್ಯಕ್ತಿತ್ವವೊಂದನ್ನು ಕಟೆದು ಕಾಣಿಸುತ್ತದೆ. ತೋರಣಘಟ್ಟದ ಜೀವನಸಂಗಾತಿ ಯಶೋಧಾ ಅವರ ವ್ಯಕ್ತಿತ್ವವು ಪ್ರೀತಿಗೆ ಗೌರವಕ್ಕೆ ಕಾರಣವಾಗುತ್ತದೆ. ಗಾಢಪ್ರೇಮ, ಜೀವನಪ್ರೀತಿ, ಮಗ-ಗಂಡ ತೀರಿದಾಗ ಎದುರಿಸಿದ ವೇದನೆ, ಬಾಳನ್ನು ಸಂಭಾಳಿಸಿದ ಬಗೆ, ಅವರನ್ನು ಕೃತಿಯ ಪರೋಕ್ಷ ನಾಯಕಿಯಾಗಿಸಿದೆ. ತನ್ನನ್ನೂ ಎಳೆಗೂಸನ್ನೂ ಸಿದ್ಧಾರ್ಥ ಬಿಟ್ಟು ಹೋದಾಗ ಯಶೋಧರೆ ಎದುರಿಸಿದ್ದಕ್ಕಿಂತ ಕಠಿಣವಾದ ಸವಾಲನ್ನು ಈ ಯಶೋದಾ ಎದುರಿಸಿದಂತಿದೆ. ಸಾಂಪ್ರದಾಯಿಕ ಇತಿಹಾಸದಲ್ಲಿ ಇರುವಂತೆ, ಕೆಲವೊಮ್ಮೆ ಜನಪರ ಚಳವಳಿಗಳೂ ನಾಯಕಕೇಂದ್ರಿತವಾಗಿ ದಾಖಲಾಗುತ್ತವೆ. ಈ ಹಿನ್ನೆಲೆಯಲ್ಲಿ ಇದು ವೈಯಕ್ತಿಕ ಬದುಕನ್ನು ಬಲಿಗೊಟ್ಟು ಚಳವಳಿಯ ಜಾಡಿನಲ್ಲಿ ಬೆಳಕು ಹಾಯಿಸುತ್ತ ತೆರೆಮರೆಯಲ್ಲೇ ಉಳಿದುಬಿಡುವ ದೀವಟಿಗೆ ಮತ್ತು ಕೈಮರಗಳ ಪ್ರಾತಿನಿಧಿಕ ಕಥನ’ ಎಂದು ರಹಮತ್ ತರೀಕೆರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಚಂದ್ರಶಿಕಾರಿ’ ಪುಸ್ತಕದ ವಿಮರ್ಶೆ
ವ್ಯಕ್ತಿ ಮತ್ತು ಹೋರಾಟ ಎರಡನ್ನೂ ಒಟ್ಟಿಗೆ ಅಭಿವ್ಯಕ್ತಿಸುವ ಕೃತಿ
ಚಳವಳಿಗಳ ಕಾಲ ಮುಗಿಯಿತು ಎಂದು ಮರುಗುವ ಮತ್ತು ಮೂಗುಮುರಿಯುವ ಕೆಲವರ ಮನೋವೃತ್ತಿಯ ನಡುವೆ ಒಡನಾಡಿ ಚಂದ್ರಶೇಖರ್ ತೋರಣಘಟ್ಟ ಅವರನ್ನು ಕುರಿತು ಈ ಕೃತಿ ಬರುತ್ತಿರುವುದು ಒಂದು ವಿಶಿಷ್ಟ ಉತ್ತರವೆಂದೇ ನಾನು ಭಾವಿಸಿದ್ದೇನೆ. ಚಳವಳಿಗಳ ಕಾಲ ಮುಗಿಯಿತೆಂದು ಮರುಗುವವರಲ್ಲಿ ಚಳವಳಿ ಪರವಾದ ಕಾಳಜಿಯೇ ಇರುತ್ತದೆ. ಆದರೆ ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿದ್ದ ಚಳವಳಿ ಪರವಾದ ಉಮೇದು, ಉಬ್ಬರಗಳು ಈಗ ಕಡಿಮೆಯಾಗಿರುವುದನ್ನು 'ಮುಗಿದೇ ಹೋಯಿತು' ಎಂಬ ನಿರಾಸೆಯ ನಿರ್ಣಯಕ್ಕೆ ಕೊಂಡೊಯ್ಯುತ್ತಿದ್ದಾರೆ. ನಿಜ, ಹಿಂದಿನಷ್ಟು ತೀವ್ರತರವಾಗಿ ನಮ್ಮ ಕರ್ನಾಟಕದಲ್ಲಿ ಚಳವಳಿಗಳು ನಡೆಯದಿರಬಹುದು. ಆದರೆ ಚಳವಳಿಗಳು ನಡೆಯುತ್ತಲೇ ಇಲ್ಲ ಎಂಬುದು ತಪ್ಪು ಕಲ್ಪನೆಯಾಗುತ್ತದೆ. ಚಳವಳಿಗಳ ತೀವ್ರತೆಯು ಕುಂದಿರುವುದಕ್ಕೆ ಕೆಲವರ ವೈಯಕ್ತಿಕ ಹಿತಾಸಕ್ತಿಯಿಂದಾದ ಹಿನ್ನಡೆಯನ್ನಷ್ಟೇ ತೋರಿಸುವ ಬದಲು ಚಾರಿತ್ರಿಕ ಕಾರಣಗಳನ್ನೂ ಗಮನಿಸಬೇಕಾಗುತ್ತದೆ. ವೈಯಕ್ತಿಕದಲ್ಲಿ ಚಾರಿತ್ರಿಕ ಮತ್ತು ಚಾರಿತ್ರಿಕದಲ್ಲಿ ವೈಯಕ್ತಿಕ ಬೆರೆತ ಜಟಿಲ ಸಂದರ್ಭಗಳನ್ನು ನಾವು ದಾಟುತ್ತ ಬಂದಿರುವುದನ್ನೂ ಗುರುತಿಸಬೇಕು. ಇದು ಬೇರೆಯದೇ ವಿಸ್ತೃತ ಚರ್ಚೆಯಾಗುತ್ತದೆಯಾದ್ದರಿಂದ ಈ ಬರಹದ ಚೌಕಟ್ಟಿನಲ್ಲಿ ಇಷ್ಟು ಸೂಚನೆ ಸಾಕು ಎಂದುಕೊಳ್ಳುತ್ತೇನೆ. ಇನ್ನು ಮೂಗುಮುರಿಯುವವರು ಚಳವಳಿ ಪರ ಕಾಳಜಿಯವರೇನಲ್ಲ. ಸದ್ಯ
ಚಳವಳಿಗಳು ಸ್ಥಗಿತಗೊಳ್ಳುತ್ತಿವೆಯೆಂದು ಒಳಗೊಳಗೇ ಸಂಭ್ರಮಿಸುತ್ತ, ಅವರಿವರ ಮುಂದೆ ಮೂಗುಮುರಿಯುವ ಮಾತಾಡುತ್ತ ದ್ವಿಪಾತ್ರಾಭಿನಯ ಸಿದ್ದರು. ಚಳವಳಿಯಲ್ಲಿರುವವರು ನಾನಾ ರೀತಿಯ ಪ್ರತಿಕ್ರಿಯೆಗಳಿಗೆ ಉತ್ತರಿಸುತ್ತ ಹೋಗುವ ಅನಿವಾರ್ಯವನ್ನು ಇಂತಹವರು ಸೃಷ್ಟಿಸುತ್ತಾರೆ. ಹಾಗೆಂದು ಯಾರಾದರೂ ಚಳವಳಿಯ ಅಥವಾ ಚಳವಳಿಗಾರರ ಕೊರತೆಗಳನ್ನು ಕಾಳಜಿಯಿಂದ ತಿಳಿಸಿ ಹೇಳಿದರೆ ಅವುಗಳನ್ನು ಕೇಳುವ ಕಿವಿಗಳು ಜಾತವಾಗಿರಬೇಕು, ಒಟಾರೆ ಚಳವಳಿಗಳ ಕಾಲ ಮುಗಿ ದಿಲ್ಲದಿದ್ದರೂ ಮೊದಲಿನಷ್ಟು ತೀವ್ರತೆ ಪಡೆದುಕೊಳ್ಳುತ್ತಿಲ್ಲ ಎಂಬುದು ನಿಜ.
ಈ ಮಧ್ಯೆ ದಿಲ್ಲಿಯ ಗಡಿಗಳಲ್ಲಿನ ರೈತರ ಹೋರಾಟದ ತೀವ್ರತೆಯು ಒಂದು ಆಶಾಕಿರಣವಾಗಿದೆ. ಹೀಗೆ ಚಳವಳಿಯ 'ಕಾಲ' ಕುರಿತ ಕಾಳಜಿ ಮತ್ತು ಕೊರತೆಗಳ ಮಾತುಕತೆಯ ನಡುವೆ ಚಂದ್ರಶೇಖರ ತೋರಣಘಟ್ಟ ಅವರ ಹೋರಾಟದ ಬದುಕನ್ನು ನೆನೆಯುವುದು ಮತ್ತು ದಾಖಲಿಸುವುದು ಚಳವಳಿಪರ ಪ್ರಜೆಯೇ ಆಗಿದೆ. ಚಳವಳಿಪರ ಪಜ್ಞೆ ಮತ್ತು ಪ್ರೀತಿಗಳಲ್ಲದೆ ಇಂತಹ ಕೃತಿ ಹುಟ್ಟುವುದಿಲ್ಲ. ಚಂದ್ರಶೇಖರ್ ಅವರನ್ನು ಕೇವಲ ಒಬ್ಬ ವ್ಯಕ್ತಿಯಾಗಿಯಷ್ಟೇ ನೋಡದೆ ಅವರ ಹೋರಾಟದ ಕ್ರಿಯಾತ್ಮಕ ಚೈತನ್ಯ ಹಾಗೂ ಚಲನಶೀಲ ಗುಣಗಳನ್ನು ಕಟ್ಟಿಕೊಡುವ ಕೃತಿಯ ಹಿಂದೆ ಇರುವ ಸಂಕಲ್ಪವೆಂದರೆ- ಚಳವಳಿ ಪ್ರಜ್ಞೆ ಆದ್ದರಿಂದ ಈ ಕೃತಿಯು ಚಳವಳಿಯ ಕಾಲ ಮುಗಿ ಯಿತೆಂದು ಮರುಗುವ ಮತ್ತು ಮೂಗುಮುರಿಯುವ ಎರಡು ವಿರುದ್ಧ ನೆಲೆಗಳಿಗೂ ಒದಗಿ ಬರುತ್ತಿರುವ ಒಂದು ವಿಶಿಷ್ಟ ಉತ್ತರವೆಂದೇ ನಾನು ಭಾವಿಸುತ್ತೇನೆ.
ಈ ಕೃತಿಯಲ್ಲಿ ವಿಭಿನ್ನ ಮಾದರಿಯ ಬರಹಗಳಿದ್ದರೂ ಕೇವಲ ವೈಯಕ್ತಿಕ ಕಾರಣಕ್ಕಾಗಿ ರಚನೆಯಾಗಿಲ್ಲ. ವೈಯಕ್ತಿಕ ನೆಲೆಯಿಂದ ಪ್ರಾರಂಭವಾಗುವ ಬರಹಗಳು ಕೂಡ ಚಂದ್ರಶೇಖರ್ ಅವರ ಹೋರಾಟ ಕುರಿತ ಪ್ರೀತಿ ಮತ್ತು ಗೌರವದಿಂದ ವಿಸ್ತರಿತವಾಗಿದೆ.
ಬೆನ್ ಟ್ಯೂಮರ್ ನಿ೦ದ ನಮನಗಲಿದ ಒಡನಾಡಿಗೆ ಈ ಕೃತಿಯು ಶ್ರದ್ದಾಂಜಲಿಯಾಗುವ ಬದಲು ವ್ಯಕ್ತಿ ಮತ್ತು ಹೋರಾಟ- ಎರಡನ್ನೂ ಅಕ್ಕರೆಯಿಂದ ಅಭಿವ್ಯಕ್ತಿಸುವ ಆಕೃತಿಯಾಗಿದೆ. ಹೀಗಾಗಿ ಚಂದ್ರಶೇಖರ್ ಅವರನ್ನು ನೆನೆಯುತ್ತಲೇ ಚಳವಳಿಯ ಚರಿತ್ರೆಯನ್ನು ಒಳಗೊಳ್ಳುವ ಕೃತಿಯಾಗಿ ಇದು ಮುಖ್ಯವಾಗುತ್ತದೆ.
(ಕೃಪೆ : ವಾರ್ತಾಭಾರತಿ, ಬರಹ : ಬರಗೂರು ರಾಮಚಂದ್ರಪ್ಪ)
©2024 Book Brahma Private Limited.