ಕೀರ್ತಿನಾಥ ಕುರ್ತಕೋಟಿ

Author : ಎಸ್. ಆರ್. ವಿಜಯಶಂಕರ್

Pages 116

₹ 50.00




Year of Publication: 2019
Published by: ಸಾಹಿತ್ಯ ಅಕಾಡೆಮಿ
Address: ನವದೆಹಲಿ
Phone: 08022245142

Synopsys

ಕಾವ್ಯ, ಹರಟೆ, ನಾಟಕ ಮುಂತಾದ ಪ್ರಕಾರಗಳಲ್ಲಿ ತಮ್ಮ ಛಾಪು ಮೂಡಿಸಿ ವಿಮರ್ಶೆಯಲ್ಲೂ ಖ್ಯಾತಿ ಗಳಿಸಿದವರು ಕೀರ್ತಿನಾಥ ಕುರ್ತಕೋಟಿ. ಅವರ ಸಾಹಿತ್ಯ ಸಾಧನೆ, ನಡೆದು ಬಂದ ದಾರಿ, ಸಾಹಿತ್ಯ ಕೊಡುಗೆಯನ್ನು ಮತ್ತು ಜೀವನವನ್ನು ಲೇಖಕರು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಕುರ್ತಕೋಟಿಯವರ 'ಯುಗಧರ್ಮದ ಸಾಹಿತ್ಯ ಪುಕಲ್ಪನೆ ಕನ್ನಡದಲ್ಲಿ 'ಸಮಕಾಲೀನ ಪ್ರಜೆ'ಗೆ ಪರ್ಯಾಯವೆಂಬಂತೆ ಸ್ವೀಕಾರ ಆಗಲಿಲ್ಲ ಎಂಬುದನ್ನು ಸೂಚಿಸಿದ್ದಾರೆ ಲೇಖಕರು.

About the Author

ಎಸ್. ಆರ್. ವಿಜಯಶಂಕರ್

ಎಸ್. ಆರ್. ವಿಜಯಶಂಕರ್ ಒಬ್ಬ ವಿಮರ್ಶಕರು. ಬೆಂಗಳೂರಿನಲ್ಲಿ ವಾಸವಿರುವ ಅವರು, ಸಾಹಿತ್ಯ , ಸಂಸ್ಕೃತಿ,  ವಿಮರ್ಶಾ ಬರಹಗಳಿಂದ ಕನ್ನಡ ಓದುಗರಿಗೆ ಪರಿಚಿತರಾಗಿದ್ದಾರೆ.  ಇಂಟೆಲ್ ಟೆಕ್ನಾಲಜಿ ಯಲ್ಲಿ ದಕ್ಷಿಣ ಏಷ್ಯಾದ  ಸಂವಹನ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು, ಜನಪ್ರಿಯ ನಿಯತಕಾಲಿಕೆಗಳಲ್ಲಿ ಲೇಖನಗಳನ್ನೂ ಅಂಕಣಗಳನ್ನೂ ಬರೆಯುತ್ತಾ ಬಂದಿದ್ದಾರೆ. ಇತ್ತೀಚೆಗೆ ಅವರು ತಮ್ಮ ಹೆಚಿನ ಬರಹಗಳನ್ನು ಸಾಹಿತ್ಯಿಕ ಕಿರುಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದಾರೆ.  ಹಿಂದಿನ ಕೃತಿಗಳ ಮರು ಓದುಗರಿಗೆ ಗಮನ ಕೊಡುತ್ತಿರುವ ವಿಜಯ ಶಂಕರ್, ಕವಿ ಗೋಪಾಲಕೃಷ್ಣ ಅಡಿಗರ  ಮರು ಓದಿನ 'ಪ್ರತಿಮಾ ಲೋಕ', ಕೃತಿಯನ್ನು ಸಂಪಾದಿಸಿದ್ದಾರೆ. ...

READ MORE

Reviews

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ 'ಭಾರತೀಯ ಸಾಹಿತ್ಯ ನಿರ್ಮಾಪಕರು' ಮಾಲಿಕೆಯ ಈ ಕೃತಿಯು ವಿಮರ್ಶಕ ಕೀರ್ತಿನಾಥ ಕುರ್ತಕೋಟಿ ಅವರ ಸಾಹಿತ್ಯ ಮತ್ತು ಬದುಕಿನ ಬಗ್ಗೆ ಅರಿಯಲು ಉಪಯುಕ್ತವಾಗಿದೆ. 10 ಅಧ್ಯಾಯಗಳಿರುವ ಈ ಹೊತ್ತಿಗೆಯಲ್ಲಿ ಅವರ ವಿಮರ್ಶಾ ಸಾಹಿತ್ಯದ ಸಮಗ್ರ ಮಾಹಿತಿ ಅಡಕಗೊಂಡಿದೆ. ಕುರ್ತಕೋಟಿ ಅವರನ್ನು ಹತ್ತಿರದಿಂದ ಬಲ್ಲ ವಿಮರ್ಶಕ ಎಸ್.ಆರ್. ವಿಜಯಶಂಕರ ಅವರು, ಕುರ್ತಕೋಟಿ ಅವರ ವಿಮರ್ಶೆಯ ಅಧ್ಯಯನಕ್ಕೆ ಇಳಿಯುವವರಿಗೆ ಉತ್ತಮವಾದ ಒಂದು ಪ್ರವೇಶಿಕೆ ಒದಗಿಸಿದ್ದಾರೆ.

ಕುರ್ತಕೋಟಿಯವರ 'ಯುಗಧರ್ಮದ ಸಾಹಿತ್ಯ ಕಲ್ಪನೆ ಕನ್ನಡದಲ್ಲಿ 'ಸಮಕಾಲೀನ ಪ್ರಜೆ'ಗೆ ಪರ್ಯಾಯವೆಂಬಂತೆ ಸ್ವೀಕಾರ ಆಗಲಿಲ್ಲ. ಎಂಬುದನ್ನು ಸೂಚಿಸಿದ್ದಾರೆ. ಅವರ ವಿಮರ್ಶಾ ಬರಹಗಳ ಸಮಸ್ಯೆಗಳನ್ನು ಹಾಗೂ ಮಿತಿಗಳನ್ನು ಒಟ್ಟೊಟ್ಟಿಗೆ ಈ ಕೃತಿಯಲ್ಲಿ ತೆರೆದಿಟ್ಟಿದ್ದಾರೆ.

ಕೃಪೆ : ಪ್ರಜಾವಾಣಿ (2020 ಫೆಬ್ರುವರಿ 16)

..............................................................................................

ಕುರ್ತಕೋಟಿ ವಿರ್ಮರ್ಶೆಯ ಮೂಲ್ಯಮಾಪನ

ಆಧುನಿಕ ಕನ್ನಡ ಸಾಹಿತ್ಯದ ಮೊದಲನೆಯ ಮುಖ್ಯ ವಿಮರ್ಶಕ ಎನ್ನಬಹುದಾದ ಕೀರ್ತಿನಾಥ ಕುರ್ತಕೋಟಿಯವರ ಬಗ್ಗೆ ಕೇಂದ್ರ ಸಾಹಿತ್ಯ ಅಕಾದೆಮಿ, ಭಾರತೀಯ ಸಾಹಿತ್ಯ ನಿರ್ಮಾಪಕರು ಮಾಲೆಯಲ್ಲಿ ಕೃತಿಯನ್ನು ಪ್ರಕಟಿಸುವ ಮೂಲಕ ಅವರ ಕೊಡುಗೆಯನ್ನು ಗುರುತಿಸಿದೆ. ಈ ಕೃತಿಯನ್ನು ಬರೆದವರು ಕನ್ನಡದ ಖ್ಯಾತ ವಿಮರ್ಶಕ ಎಸ್. ಆರ್. ವಿಜಯಶಂಕರ.

ಧಾರವಾಡದ ಕೀರ್ತಿನಾಥ ಕುರ್ತಕೋಟಿಯವರು (1928-2003) ಇಂಗ್ಲಿಷ್ ಉಪನ್ಯಾಸಕರಾಗಿ ಗುಜರಾತಿನ ಆನಂದ ಎಂಬಲ್ಲಿದ್ದವರು. ಅವರು ಸಂಸ್ಕೃತ, ಇಂಗ್ಲಿಷ್, ಮರಾಠಿ ಮತ್ತು ಕನ್ನಡ ಸಾಹಿತ್ಯಗಳ ತಳಸ್ಪರ್ಶಿ ಅಧ್ಯಯನ ಮಾಡಿದವರು. ಆದರೆ ಮುಖ್ಯವಾಗಿ ಪಾಶ್ಚಾತ್ಯ ಸಾಹಿತ್ಯದ ಸಿದ್ದಾಂತಗಳಿಗೆ ಒಲಿಯದೆ, ಪಾರಂಪರಿಕ ಭಾರತೀಯ ಸಾಹಿತ್ಯದ ಚಿಂತನೆಗಳ ಮೂಲಕ ಲಿಬರಲ್ ಮಾನವತಾವಾದದ ಒಂದು ವಿಮರ್ಶಾ ಪ್ರಕಾರವನ್ನು ಬೆಳೆಸಿದವರು. (ವಿಜಯಶಂಕರ್ ಅವರು ಈ ಲಿಬರಲ್ ಡ್ಯೂಮನಿಸಮ್ ಶಬ್ದವನ್ನು ಬಳಸುವುದಿಲ್ಲ.

ಕನ್ನಡದಲ್ಲಿ ವಿಮರ್ಶೆಯ ಪ್ರಕಾರ ಗಂಭೀರವಾದ ಶಿಸ್ತಾಗಿ ಬೆಳೆಯಬೇಕಾಗಿದ್ದ ಕಾಲದಲ್ಲಿ ಈ ಕ್ಷೇತ್ರಕ್ಕೆ ಪ್ರವೇಶಿಸಿ ಇದಕ್ಕೆ ಘನತೆಯನ್ನು ತಂದುಕೊಟ್ಟವರು ಬಹುಶ್ರುತ ವಿದ್ವಾಂಸ ಕೀರ್ತಿನಾಥ ಕುರ್ತಕೋಟಿಯವರು ಎನ್ನುವುದನ್ನು ವಿಜಯಶಂಕರ ಅವರು ಬಹಳ ಸ್ಪಷ್ಟವಾಗಿ ಗುರುತಿಸುವ ಮೂಲಕ ಕುರ್ತಕೋಟಿಯವರ ಕುರಿತಾದ ಪರಿಚಯ ಅವರ ವಿಮರ್ಶಾ ಸಿದ್ದಾಂತಗಳ ಮೂಲ್ಯಮಾಪನವನ್ನು ಮಾಡಲು ತೊಡಗುತ್ತಾರೆ. 1958ರಲ್ಲಿ ಧಾರವಾಡದ ಮನೋಹರ ಗ್ರಂಥಮಾಲೆ ತನ್ನ ಬೆಳ್ಳಿಹಬ್ಬದ ನೆನಪಿಗೆ ಸಾಹಿತ್ಯದ ವಿವಿಧ ಪ್ರಕಾರಗಳ ಬಗ್ಗೆ ನಡೆದು ಬಂದ ದಾರಿ ಎಂಬ ಸಂಪುಟಗಳನ್ನು ಪ್ರಕಟಿಸಿತು. ಆಗ ಅವುಗಳಿಗೆ ಕುರ್ತಕೋಟಿಯವರು ಬರೆದ ಪ್ರಸ್ತಾವನೆಗಳೇ ಆಧುನಿಕ ಕನ್ನಡ ಸಾಹಿತ್ಯದ ವಿಕಾಸದ ಪ್ರಥಮ ಮೂಲ್ಯಮಾಪನಗಳಾಗಿ ಹೊಸ ಸಂಚಲನವನ್ನು ಸೃಷ್ಟಿಸಿದವು.

ಒಬ್ಬ ವಿಮರ್ಶಕನ ಬಹುಮುಖ್ಯ ಪರಿಕಲ್ಪನೆಗಳನ್ನು ಗ್ರಹಿಸಿ ಅದನ್ನು ಖಚಿತವಾಗಿ ದಾಖಲಿಸುವುದು ಕೂಡ ಸಾಹಿತ್ಯ ಚರಿತ್ರೆಯಲ್ಲಿ ನಡೆಯಬೇಕಾದ ಮುಖ್ಯ ಮೂಲ್ಯಮಾಪನ ಕ್ರಿಯೆಗಳಲ್ಲಿ ಒಂದು. ಕುರ್ತಕೋಟಿಯವರ ಸಮಗ್ರ ಬರವಣಿಗೆಯನ್ನು ಪರಿಶೀಲಿಸಿ, ಅವರ ಕೊಡುಗೆಯನ್ನು ವಿವರಿಸುವ ಮೂಲಕ ಎಸ್. ಆರ್. ವಿಜಯಶಂಕರ ಕನ್ನಡ ಸಾಹಿತ್ಯಕ್ಕೆ ಒಟ್ಟಾರೆಯಾಗಿ ಮತ್ತು ಕುರ್ತಕೋಟಿಯವರ ಅಧ್ಯಯನಕ್ಕೆ ವೈಯಕ್ತಿಕವಾಗಿ ಒಂದು ಮುಖ್ಯ ಕೊಡುಗೆಯನ್ನು ನೀಡಿದ್ದಾರೆ. ಮತ್ತೂ ಒಂದು ವಿಶಿಷ್ಟ ಅಂಶವನ್ನು, ಅಂದರೆ, ಕುರ್ತಕೋಟಿಯವರು ಪ್ರಬಂಧಗಳಲ್ಲಿಯೇ (ಅಂದರೆ ಸಮಗ್ರ ಅಧ್ಯಯನದ ಏಕ ಕೃತಿ ರಚನೆಯ ಶಿಸ್ತಿನಲ್ಲಿ ಬರೆದ ಪುಸ್ತಕಗಳ ರೂಪದಲ್ಲಿ ಅಲ್ಲ)

ತಮ್ಮ ವಿಮರ್ಶೆಯ ಬರಹಗಳನ್ನು ನೀಡಿದವರು ಎನ್ನುವುದನ್ನು ವಿಜಯಶಂಕರ್ ಗುರುತಿಸುತ್ತಾರೆ. ಹೀಗೆ ಮಾಡಿರುವುದರಿಂದ ಕುರ್ತಕೋಟಿಯವರಿಗೆ ತಮ್ಮ ವಿಮರ್ಶೆಯ ಮಾನದಂಡಗಳನ್ನು ಒಂದು ಸಿದ್ಧಾಂತವಾಗಿ ಸ್ಪಷ್ಟಪಡಿಸುವ ಅಗತ್ಯ ಕಾಣದಿರಬಹುದು, ಅದನ್ನು ವಿಜಯಶಂಕರ್ ಅವರು ಮಾಡಿದ್ದಾರೆ. ಈಗ, ಕುರ್ತಕೋಟಿಯವರ ವಿಮರ್ಶೆಯ ಪ್ರಬಂಧಗಳನ್ನು ಬೇಂದ್ರೆ ವಿಮರ್ಶೆ ಇತ್ಯಾದಿ ವಿಷಯವಾರು ಸಂಪಾದಿಸಿ ಹನ್ನೆರಡು ಸಂಪುಟ ಗಳಲ್ಲಿ ಸಂಕಲಿಸಿ ಕನ್ನಡಿಗರಿಗೆ ಒದಗಿಸುವ ಬಹಳ ದೊಡ್ಡ ಸಾರಸ್ವತ ಸೇವೆಯನ್ನು ಗಿರಡ್ಡಿ ಗೋವಿಂದರಾಜರು ಮಾಡಿದ್ದು, ಈಗಾಗಲೇ ನಾಲ್ಕು ಸಂಪುಟಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದೆ.

ಈ ಪುಸ್ತಕದ ಅಧ್ಯಾಯಗಳು: 1.ಜೀವನ ಪರಿಚಯ, 2. ವಿಮರ್ಶಾ ಪರಿಕಲ್ಪನೆಗಳು: ಯುಗಧರ್ಮ ಹಾಗೂ ಸಾಹಿತ್ಯ ದರ್ಶನ, 3.ವಿಮರ್ಶಾ ವಿವರಗಳು: ಕನ್ನಡ ಸಾಹಿತ್ಯ ಸಂಗಾತಿ ಮತ್ತು ನೂರು ಮರ ನೂರು ಸರ ಕುವೆಂಪು ಬಗೆಗಿನ ವಿಮರ್ಶೆ.4.ಬೇಂದ್ರೆ ವಿಮರ್ಶೆ.5. ಕುಮಾರವ್ಯಾಸ ವಿಮರ್ಶೆ 6. ಪ್ರತ್ಯಭಿಜ್ಞಾನ: ಸಂಸ್ಕೃತ ನಾಟಕಗಳು. 7, ಅಂಕಣ ಬರಹಗಳು. 8. ಇತರ ಕೃತಿಗಳು: ಅನುವಾದ, ಸಂಪಾದನೆ ಹಾಗೂ ಸೃಜನಶೀಲ ಕೃತಿಗಳು. 9. ಉಪಸಂಹಾರ. 10. ಅನುಬಂಧ.

ವಿಜಯ ಶಂಕರ್ ಅವರು ಕುರ್ತಕೋಟಿಯವರ ವಿಮರ್ಶೆಯ ಹಂತಗಳನ್ನು ಹೀಗೆ ಗುರುತಿಸುತ್ತಾರೆ: ''ಮೂಲ್ಯಮಾಪನ ಕ್ರಮದಲ್ಲಿ ಪ್ರಾರಂಭವಾದ ಕೀರ್ತಿಯವರ ವಿಮರ್ಶೆ, ಸಾಹಿತ್ಯ-ಸಂಸ್ಕೃತಿಗಳ ಸಾತತ್ಯದ ಪರಿಕಲ್ಪನೆಗಳನ್ನು ಎರಡನೇ ಹಂತದಲ್ಲಿ ಬೆಳೆಸಿತು. ಮುಂದೆ ವಸಾಹತೋತ್ತರ ಚಿಂತನೆಗೆ ಹತ್ತಿರವಾದ್ದೆಂದು ವಿಶ್ಲೇಷಿಸಲು ಅನುಕೂಲವಿರುವ, ಭಾಷಾಂತರ, ಕಥಾಂತರಗಳ ಹಾಗೂ ಅವುಗಳಿಂದ ಉಂಟಾಗುವ ಅರ್ಥಾಂತರಗಳ ಸಿದ್ದಾಂತವನ್ನು ಅವರ ವಿಮರ್ಶೆ ಮಂಡಿಸಿತು. ಭಾಷಾಂತರಗಳ ಮೂಲಕ ಭಾರತದಲ್ಲಿ ಇಲ್ಲದಿದ್ದ ಇತಿಹಾಸ ಕಲ್ಪನೆಯನ್ನು ಬ್ರಿಟಿಷರು ನೀಡಿದಾಗ ಹೇಗೆ ಹೊಸ ಅರ್ಥಗಳು ಸೃಷ್ಟಿಯಾದವು ಎಂಬುದು ಅವರ ಭಾಷಾಂತರ ಸಿದ್ದಾಂತದ ಸಾರ. ಈ ಅರ್ಥಾಂತರಗಳು ನಮ್ಮ ಅಸ್ಮಿತೆಯ ಮೂಲ ಬಿಂಬವನ್ನು ಮರೆಯಿಸಿದವು. ಕಳೆದುಕೊಂಡ ಆ ನಮ್ಮ ನೆಲವನ್ನು ಪುನಃ ಪಡೆಯುವ - ಕೀರ್ತಿಯವರ ಮುಂದಿನ ವಿಮರ್ಶೆ ಪ್ರತ್ಯಭಿಜ್ಞಾನ. ಈ ಸಿದ್ದಾಂತವನ್ನು ಅವರು ಆರು ಸಂಸ್ಕೃತ ನಾಟಕಕಾರರ ವಿಮರ್ಶೆ ವ್ಯಾಖ್ಯಾನಗಳ ಮೂಲಕ ಪ್ರತಿಪಾದಿಸಿದರು”. (ಮೊದಲ ಮಾತು). ಅವರ ಬರವಣಿಗೆಯ ಕೊನೆಯ ಘಟ್ಟದಲ್ಲಿ ಅವರು ತಮ್ಮ ಅಂಕಣ ಬರಹಗಳಲ್ಲಿ ಸಂಶ್ಲೇಷಣಾತ್ಮಕವಾಗಿ ಚಿಂತಿಸಿ, ಸೃಷ್ಟಿಕ್ರಿಯೆಯ ರಹಸ್ಯವನ್ನು ಅರಿಯುವ ಆಸಕ್ತಿಯಿಂದ ಸಮಗ್ರ ದೃಷ್ಟಿಕೋನವನ್ನು ನೀಡಲು ಪ್ರಯತ್ನಿಸಿದರೆಂದು ಕೂಡ ಎಸ್.ಆರ್.ವಿ. ಗುರುತಿಸಿದ್ದಾರೆ. ಕಾಳಿದಾಸ, ಕುಮಾರವ್ಯಾಸ ಮತ್ತು ಬೇಂದ್ರೆ ಈ ಮೂವರು ಕುರ್ತಕೋಟಿಯವರು ಗುರುತಿಸುವ ಸಾಹಿತ್ಯ ಸಾತತ್ಯದ ಮಹತ್ವದ ಮೂರು ಮೆಟ್ಟಿಲುಗಳು ಎಂದು ಗುರುತಿಸಿರುವುದು ಮತ್ತು ಆಧುನಿಕತೆ ನಮಗೆ ಇಂಗ್ಲಿಷಿನ ಭಾಷಾಂತರ ಮತ್ತು ಕಥಾಂತರಗಳ ಮೂಲಕ ಲಭಿಸಿತು ಎನ್ನುವ ಕುರ್ತಕೋಟಿಯವರು, ನಮ್ಮ ಸಾಹಿತ್ಯಕ ಅಸ್ತಿತೆಗೆ ಅದಕ್ಕಿಂತ ಹಿಂದಿನ ಸಂಸ್ಕೃತದ ಭಾಷಾಂತರಗಳ ಪ್ರತ್ಯಭಿಜ್ಞಾನವೂ ನೆರವಾಗಿರುವದನ್ನು ಗುರುತಿಸಿರುವುದನ್ನು ಎಸ್. ಆರ್. ವಿಜಯಶಂಕರ ಅವರು ಪ್ರಧಾನ ನೆಲೆಗೆ ತಂದು ಚರ್ಚಿಸಿರುವುದು ಈ ಕೃತಿಯ ಮೌಲ್ಯವನ್ನು ಹೆಚ್ಚಿಸಿರುವ ಸಂಗತಿ. - ಎಸ್.ಆರ್.ವಿ. ಅವರ ವಿಸ್ತಾರವಾದ ಓದು ಮತು ತೌಲನಿಕ ಪ್ರತಿಭೆ ಈ ಕೃತಿಯಲ್ಲೂ ಕಾಣಸಿಗುತ್ತದೆ. (ಇದು ಕೀರ್ತಿನಾಥ ಕುರ್ತಕೋಟಿಯವರಲ್ಲಿಯೂ ಇದ್ದ ಒಂದು ಸಾಮರ್ಥ). ಉದಾಹರಣೆಗೆ, ಕುರ್ತಕೋಟಿಯವರು ಎಸ್. ಎಲ್. ಭೈರಪ್ಪರ ಕಾದಂಬರಿಗಳ ಕುರಿತು ಹೇಳುವ ಸೋದ್ದಿಶ್ಯ. (ಅಂದರೆ ಪೂರ್ವಯೋಜಿತವಾಗಿ ಕಥನಗಳನ್ನು ಕಟ್ಟುವುದು) ಎನ್ನುವ ಪರಿಕಲ್ಪನೆ ಸಾರ್ತೆಯ ಬ್ಯಾಡ್ ಫೈತ್ ಎನ್ನುವುದಕ್ಕೆ ಸಂವಾದಿಯಾಗಿದೆ ಎಂದು ಅವರು ಗುರುತಿಸುತ್ತಾರೆ (ಅವುಗಳಿಗೆ ವ್ಯತ್ಯಾಸವಿಲ್ಲವೆ ಎನ್ನುವುದು ಬೇರೆಯಾಗಿ ಚರ್ಚಿಸಬಹುದಾದ ಪ್ರಶ್ನೆ), ಅವರು ಬಳಸುವ ಕಲ್ಪನಾಶಕ್ತಿ ಕೋಲೆರಿಜ್‌ನ ಇಮೇಜಿನೇಶನ್ ಪರಿಕಲ್ಪನೆಯಿಂದ ಪಡೆದುದು ಎಂದು ಗುರುತಿಸುತ್ತಾರೆ. ತಾವು ಗುರು ಸಮಾನರೆಂದು ಗೌರವಿಸುವ ಕುರ್ತಕೋಟಿಯವರ ಮಿತಿಗಳನ್ನೂ ಅಧ್ಯಯನಕಾರನಾಗಿ ಎಸ್‌.ಆರ್‌.ವಿ. ವಿನಮ್ರವಾಗಿ ದಾಖಲಿಸಿದ್ದಾರೆ. ಕೀರ್ತಿನಾಥ ಕುರ್ತಕೋಟಿಯವರ ಕುರಿತಾದ ಈ ಮೋನೋಗ್ರಾಫ್ ಒಂದು ಸಾಹಿತ್ಯಕ ಕೊಡುಗೆಯ ಮೌಲ್ಯಮಾಪನವಾಗಿ ಸ್ವತಃ ಒಂದು ಒಳ್ಳೆಯ ವಿಮರ್ಶನ ಕೃತಿಯಾಗಿದೆ. ಮುಖ್ಯವಾಗಿ ಕುರ್ತಕೋಟಿಯವರ ವಿಮರ್ಶೆಯ ಅಧ್ಯಯನಕ್ಕೆ ಇದೊಂದು ಉತ್ತಮವಾದ ಪ್ರವೇಶವಾಗಿದೆ.

ಡಾ. ಬಿ. ಜನಾರ್ದನ ಭಟ್ 

ಕೃಪೆ : ಹೊಸದಿಗಂತ (2020 ಮಾರ್ಚಿ 08)

 

Related Books