ಸಾಹಿತಿ ಡಾ ಶ್ರೀ ರಾಮ ಇಟ್ಟಣ್ಣ ವರ ಅವರ ಕೃತಿ-ʼಸ್ವಾತಂತ್ರ್ಯ ಹೋರಾಟಗಾರ್ತಿ ಸೀತಾಬಾಯಿ ತಿಮಸಾನಿʼ. ಮುಧೋಳ ತಾಲೂಕಿನ ಮಂಟೂರಿನ ಸ್ವಾತಂತ್ರ್ಯ ಹೋರಾಟಗಾರ್ತಿ ಶ್ರೀಮತಿ ಸೀತಾಬಾಯಿ ತಿಮಸಾನಿಯವರ ಜೀವನ ಚರಿತ್ರೆಗೆ ಸಂಬಂಧಿಸಿದ ಪುಸ್ತಕವಿದಾಗಿದೆ. ಸ್ವಾತಂತ್ರ್ಯ ಹೋರಾಟಗಾರ್ತಿಯ ಹೋರಾಟದ ದಾರಿಯ ಕುರಿತ ವಿಚಾರವನ್ನು ಕಟ್ಟಿಕೊಡುತ್ತದೆ. ದೇಶದ ಸ್ವಾತಂತ್ರ್ಯಾ ನಂತರ ಮೌನವಾಗುಳಿದ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಬದುಕು ಮಣ್ಣಿನಲ್ಲಿ ಮರೆಯಾಗಬಾರದು; ನಮ್ಮ ಗ್ರಾಮೀಣ ಪ್ರದೇಶದ ಚಳವಳಿಗಾರರ ಹೋರಾಟದ ಮಾರ್ಗ ಹಾಗೂ ದೇಶ ಕುರಿತ ಚಿಂತನೆಗಳು ದಾಖಲೆಗೊಳ್ಳಬೇಕು ಎನ್ನುವ ಉದ್ದೇಶ ಈ ಕೃತಿಯ ಹಿಂದಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ದುಡಿದವರ ಸಮೀಕ್ಷೆಗಳು ದಾಖಲೀಕರಣ ಮಾಡಿದ್ದಲ್ಲಿ ಇತಿಹಾಸಕಾರರಿಗೆ ನೆರವಾಗಬಹುದು. ಅಂಥಹ ಒಂದು ಪ್ರಯತ್ನ ಲೇಖಕರದಾಗಿದೆ. ಈ ಕೃತಿ ಯುವ ಪೀಳಿಗೆಗೂ ಸ್ಪೂರ್ತಿದಾಯಕ. ಪುರುಷರಿಗೆ ಹೆಗಲೆಣೆಯಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಕಾರಾಗೃಹವಾಸ ಅನುಭವಿಸಿದ ಸೀತಾಬಾಯಿಯವರ ಉಜ್ವಲ ರಾಷ್ಟ್ರಪ್ರೇಮ ಪ್ರಸ್ತುತ ಪುಸ್ತಕದಲ್ಲಿ ನಿರೂಪಿಸಲ್ಪಟ್ಟಿದೆ.
ಶ್ರೀಕೃಷ್ಣ ಪಾರಿಜಾತ- ಒಂದು ಅಧ್ಯಯನ ಎಂಬ ವಿಷಯದ ಮೇಲೆ ಪಿಎಚ್.ಡಿ . ಪದವಿ ಪಡೆದಿರುವ ಶ್ರೀರಾಮ ಇಟ್ಟಣ್ಣವರ ಅವರು ಬೀಳಗಿಯ ಶ್ರೀಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಬಯಲಾಟ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾಗಿರುವ ಇಟ್ಟಣ್ಣವರ ಅವರು ಬಯಲಾಟ-ಕೃಷ್ಣ ಪಾರಿಜಾತ ಹಾಗೂ ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಹೊಳಿಸಾಲ ಬಳ್ಳಿ; ಗಾಲಿ ಉಳ್ಳತೈತಿ; ನೂರು ಶಿಶುಗೀತೆಗಳು; ಹಾಡುಣು ಬಾಪ್ರೇಮದ ಪಾಡಾ; ಹೊತ್ತು ಮೂಡುವ ಸಮಯ (ಕಾವ್ಯ), ಪಾರಿಜಾತದವರು (ನಾಟಕ), ಜನಪದ ಪಶುವೈದ್ಯ ಬೀಳಗಿ ಸಿದ್ಧಪ್ಪ; ಕೊಣ್ಣೂರ ಕರಿಸಿದ್ದೇಶ್ವರ ದೇವಸ್ಥಾನ (ಜಾನಪದೀಯ) ಹಲಗಲಿ-ಗ್ರಾಮ ಚಾನಪದ (ಅಧ್ಯಯನ), ಲಾವಣಿ: ಸಣ್ಣಾಟ (ಸಂಶೋಧನೆ) ತಟ್ಟಿ ಚಿನ್ನ-ಸಣ್ಣಾಟ; ...
READ MORE