ಲೇಖಕ ಸತ್ಯನಾರಾಯಣರಾವ್ ಅಣತಿ ಅವರ ಕೃತಿ ‘ಹಿಪ್ಪೇಮರ’. ಈ ಕೃತಿಯ ಕುರಿತು ಅಭಿಪ್ರಾಯಗಳನ್ನು ಬರೆದ ಸಾಹಿತಿ ಕೆ. ಸತ್ಯನಾರಾಯಣ, ‘ಈ ವೃತ್ತಾಂತದ ವೈಶಿಷ್ಟ್ಯವೆಂದರೆ, ಅಂದಿನ ಬದುಕಿನ ವಿವರಗಳನ್ನು, ಜೀವಂತಿಕೆಯನ್ನು ಇಂದಿನ ಪ್ರಬುದ್ಧ, ವೈಚಾರಿಕ, ಮಾಗಿದ ದೃಷ್ಟಿಕೋನದಿಂದ ನೋಡದೆ, ಆವತ್ತಿನ ದೃಷ್ಟಿಕೋನ ಮನೋಧರ್ಮದಿಂದಲೇ ನೋಡಿರುವುದು. ಈ ಕಾರಣಕ್ಕೆ ಬಡತನ, ಬದುಕಿನ ಕಷ್ಟ ಸುಖವನ್ನು ನಿರೂಪಿಸುವಾಗಲೂ ಬರವಣಿಗೆಯಲ್ಲಿ ಆತ್ಮ ಮರುಕವಿಲ್ಲ. ಓದುಗರಿಂದ ಮರುಕವನ್ನೂ ಬಯಸುವುದಿಲ್ಲ. ಬದಲಿಗೆ ಅದೂ ಕೂಡ ಒಂದು ಜೀವನ ಕ್ರಮವೇ ಎಂಬ ಉಲ್ಲಾಸದಿಂದಲೇ ಬರೆಯುತ್ತಾರೆ. ವೈಚಾರಿಕ ಅಣತಿಯವರು ಪ್ರತಿಗಾಮಿ ಅರ್ಚಕರ ಮನೆಗೆ ಹೋಗುವುದು, ಇಬ್ಬರೂ ತಮ್ಮ ತಮ್ಮ ಮಿತಿ ಪೂರ್ವಗ್ರಹಗಳನ್ನು ಮೀರುವುದು, ಈ ಮೀರುವಿಕೆ ಪರಸ್ಪರ ಪೂರಕವಾಗುವುದು ಮನ ಕರಗಿಸುವಂತಿದೆ. ಅಣತಿಯವರು ತಮ್ಮ ಸೃಜನಶೀಲ ಬರವಣಿಗೆಯ ಗತಿ ಮತ್ತು ಸಾಧನೆಯನ್ನು ಹಿರಿಯರಿಂದ ಒಡನಾಡಿಗಳಿಂದ ಬಂದ ಪ್ರತಿಕ್ರಿಯೆ ಪ್ರೋತ್ಸಾಹವನ್ನು ಕೂಡ ಈ ವೃತ್ತಾಂತದ ಉತ್ತರಾರ್ಧದಲ್ಲಿ ನಿರೂಪಿಸಿದ್ದಾರೆ. ಓದುಗರಿಗೆ ಇದೊಂದು ಸ್ವಗೀಳಿನ ಬರವಣಿಗೆಯೆಂದು ಎಲ್ಲೂ ಅನ್ನಿಸುವುದಿಲ್ಲ. ಪ್ರತಿಯೊಂದು ಜೀವನ ವೃತ್ತಾಂತವೂ ತನ್ನದೇ ಆದ ವಿಶಿಷ್ಟತೆ ಮತ್ತು ಧ್ವನಿಯನ್ನು ಸಾಕ್ಷಾತ್ಕರಿಸಿಕೊಳ್ಳುತ್ತದೆ. ಆತ್ಮರಂಜಕತೆಗೆ ಹೊರಳದಂತೆ, ವಿಶಿಷ್ಟತೆಯನ್ನು ಅಣತಿಯವರ ಈ ವೃತ್ತಾಂತ ಸಾಕ್ಷಾತ್ಕರಿಸಿಕೊಂಡಿದೆ.‘ ಎಂದು ಪ್ರಶಂಸಿದ್ದಾರೆ.
ಕವಿ, ನಾಟಕಕಾರ ಕೆ. ಸತ್ಯನಾರಾಯಣರಾವ್ ಅಣತಿ ಅವರು ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಗ್ರಾಮದವರು. ತಂದೆ-ಎ.ಎನ್. ಮೂರ್ತಿರಾವ್, ತಾಯಿ-ಶ್ರೀಮತಿ ರತ್ನಮ್ಮ . 1935 ಡಿಸೆಂಬರ್ 12, ರಂದು ಜನಿಸಿದ ಅವರು ಹುಟ್ಟಿದ ಊರಾದ ಅಣತಿ, ತಿಪಟೂರು, ಹಾಸನ, ಬೆಂಗಳೂರು, ಧಾರವಾಡಗಳಲ್ಲಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಸತ್ಯನಾರಾಯಣರಾವ್ ಸಾಹಿತ್ಯಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದ ಹಲವು ವಿಭಾಗಳಲ್ಲಿ ಕೃಷಿಮಾಡಿದ್ದಾರೆ. ಕೃತಿಗಳು: ನೀಲಕುರುಂಜಿ (ಆಯ್ದ ಕವಿತೆಗಳ ಸಂಕಲನ), ಪಾತ್ರಗಳು ಇರಲಿ ಗೆಳೆಯ, ತೆರಕೊಂಡ ಆಕಾಶ, ಕೃಷ್ಣ ಕಣ್ಣಿನ ನೋಟ, ಭೂಮಿ ಬದುಕಿನ ಗಂಧ, ...
READ MORE