ಮಾಸ್ತಿ ವೆಂಕಟೇಶ ಅಯ್ಯಂಗಾರ್‍ ಬದುಕು-ಬರಹ

Author : ಎಸ್. ಆರ್. ವಿಜಯಶಂಕರ್

Pages 224

₹ 200.00




Year of Publication: 2020
Published by: ಸಾಹಿತ್ಯ ಅಕಾಡೆಮಿ
Address: #4, ಡಿ.ಎಲ್.ಖಾನ್ ರಸ್ತೆ, ಕೋಲ್ಕತ್ತ 710 025

Synopsys

ಲೇಖಕ ಹಾಗೂ ವಿಮರ್ಶಕ ಎಸ್. ಆರ್. ವಿಜಯಶಂಕರ ಅವರು ಬರೆದ ಜೀವನ ಚಿತ್ರದ ಕೃತಿ-’ಮಾಸ್ತಿ ವೆಂಕಟೇಶ ಅಯ್ಯಂಗಾರ್.ಈ ಕೃತಿ ಎಂಟು ಅಧ್ಯಾಯಗಳನ್ನು ಒಳಗೊಂಡಿದ್ದು, ಮಾಸ್ತಿಯವರು ಬರೆದಿರುವ ಕತೆ, ಕಾವ್ಯ, ಕಾದಂಬರಿ, ನಾಟಕ, ಅನುವಾದ, ಕಥನ ಕಾವ್ಯ, ಮಹಾ ಕಾವ್ಯ ಹಾಗೂ ಇತರ ಸಂಕೀರ್ಣಗಳನ್ನು ಒಳಗೊಂಡಿದೆ. 126 ಕೃತಿಗಳ ವಿಮರ್ಶಾತ್ಮಕ ಒಳನೋಟ ನೀಡುತ್ತದೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕನ್ನಡ ನವೋದಯದ ಅತಿಶ್ರೇಷ್ಠ ಪ್ರತಿಭೆಗಳಲ್ಲಿ ಒಬ್ಬರು. ಜ್ಙಾನಪೀಠ ಪ್ರಶಸ್ತಿ , ಕೇಂದ್ರ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮೊದಲಾದ ಹಲವು ಉನ್ನತ ಗೌರವಗಳಿಂದ ಪುರಸ್ಕೃತರು. ಸಣ್ಣಕತೆಗಳನ್ನು ಕನ್ನಡದಲ್ಲೊಂದು ಪ್ರಕಾರವಾಗಿ ಸ್ಥಾಪಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ನಿವೃತ್ತ ಜೀವನ ಅವಧಿಯಲ್ಲಿಯೂ ಭಾಷೆ-ಸಾಹಿತ್ಯ ಹಾಗೂ ಕನ್ನಡ- ಸಂಸ್ಕೃತಿ ಸೇವೆಗಳಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದರು. ಮಾಸ್ತಿಯವರು ಎರಡು ದಶಕಗಳ ಕಾಲ’ ಜೀವನ’ ಪತ್ರಿಕೆ ಸಂಪಾದಕರಾಗಿ ಕನ್ನಡ ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆಯ ತಲಸ್ಪರ್ಶಿ ಅಧ್ಯಯನವೂ ಇಲ್ಲಿದೆ.  ಅವರ ಎಲ್ಲಾ ಸಾಹಿತ್ಯ ಪ್ರಕಾರಗಳ ವಿವರವಾದ ಮರು ಓದಿನ ಮೂಲಕ ಈ ಕೃತಿ ಮಾಸ್ತಿಯವರ ಬದುಕು ಬರಹಗಳ ವಿಮರ್ಶಾತ್ಮಕ ವಿಶ್ಲೇಷಣೆಯಾಗಿದೆ.

About the Author

ಎಸ್. ಆರ್. ವಿಜಯಶಂಕರ್

ಎಸ್. ಆರ್. ವಿಜಯಶಂಕರ್ ಒಬ್ಬ ವಿಮರ್ಶಕರು. ಬೆಂಗಳೂರಿನಲ್ಲಿ ವಾಸವಿರುವ ಅವರು, ಸಾಹಿತ್ಯ , ಸಂಸ್ಕೃತಿ,  ವಿಮರ್ಶಾ ಬರಹಗಳಿಂದ ಕನ್ನಡ ಓದುಗರಿಗೆ ಪರಿಚಿತರಾಗಿದ್ದಾರೆ.  ಇಂಟೆಲ್ ಟೆಕ್ನಾಲಜಿ ಯಲ್ಲಿ ದಕ್ಷಿಣ ಏಷ್ಯಾದ  ಸಂವಹನ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು, ಜನಪ್ರಿಯ ನಿಯತಕಾಲಿಕೆಗಳಲ್ಲಿ ಲೇಖನಗಳನ್ನೂ ಅಂಕಣಗಳನ್ನೂ ಬರೆಯುತ್ತಾ ಬಂದಿದ್ದಾರೆ. ಇತ್ತೀಚೆಗೆ ಅವರು ತಮ್ಮ ಹೆಚಿನ ಬರಹಗಳನ್ನು ಸಾಹಿತ್ಯಿಕ ಕಿರುಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದಾರೆ.  ಹಿಂದಿನ ಕೃತಿಗಳ ಮರು ಓದುಗರಿಗೆ ಗಮನ ಕೊಡುತ್ತಿರುವ ವಿಜಯ ಶಂಕರ್, ಕವಿ ಗೋಪಾಲಕೃಷ್ಣ ಅಡಿಗರ  ಮರು ಓದಿನ 'ಪ್ರತಿಮಾ ಲೋಕ', ಕೃತಿಯನ್ನು ಸಂಪಾದಿಸಿದ್ದಾರೆ. ...

READ MORE

Reviews

‘ಎಸ್.ಆರ್.ವಿಜಯಶಂಕರ ಅವರ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಬದುಕು-ಬರಹ’

ಮಾಸ್ತಿ ವೆಂಕಟೇಶ ಅಯ್ಯಂಗಾರ್ (1896-1986) ಕನ್ನಡದ ಆಸ್ತಿ ಎಂದು ಪ್ರಸಿದ್ಧರಾದವರು. 'ಮಾಸ್ತಿ' ಎಂದಾಕ್ಷಣ 'ಆಸ್ತಿ' ಎಂದು ಪ್ರಾಸಬದ್ಧವಾಗಿ ಕನ್ನಡ ನಾಡಿನ ಜನರು ಉದ್ಧರಿಸುತ್ತಿರುತ್ತಾರೆ. ಅಷ್ಟರಮಟ್ಟಿಗೆ ಮಾಸ್ತಿಯವರು ಪ್ರಸಿದ್ಧರು. ಜ್ಞಾನಪೀಠ ಪ್ರಶಸ್ತಿಯಂತಹ ಉನ್ನತ ಪ್ರಶಸ್ತಿಯನ್ನು ಪಡೆದಿರುವ ಮಾಸ್ತಿಯವರು ಸಣ್ಣಕತೆ, ಕಾದಂಬರಿ, ನಾಟಕ ವಿಮರ್ಸೆ, ಸಂಶೋಧನೆ, ಕಾವ್ಯ, ಮಹಾಕಾವ್ಯ, ಪತ್ರಿಕೋದ್ಯಮ, ವೈಚಾರಿಕ ಬರಹಗಳ ಸಹಿತ ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಒಟ್ಟು 126 ಕೃತಿಗಳನ್ನು ಬರೆದಿದ್ದಾರೆ. ಸಣ್ಣಕತೆಗಳ ಪ್ರಕಾರಕ್ಕೆ ಒಂದು ಮಾರ್ಗ ಹಾಕಿದ ಇವರನ್ನು ಆಧುನಿಕ ಸಣ್ಣಕತೆಗಳ ಜನಕ ಎಂದೇ ಕರೆಯುತ್ತಾರೆ. ಹೊಸಗನ್ನಡ ಸಾಹಿತ್ಯಕ್ಕೆ ಆಧುನಿಕ ಕತೆಗಳ ಪ್ರಕಾರವೊಂದನ್ನು ಕೊಟ್ಟ ಮಾಸ್ತಿಯವರು ಸಣ್ಣಕತೆಗಳ ಸಾಧ್ಯತೆಗಳನ್ನು ವಿಸ್ತರಿಸಿ ಅದಕ್ಕೊಂದು ಸಾಹಿತ್ಯ ಪ್ರಕಾರಗಳಲ್ಲಿ ಮಹತ್ವದ ಪ್ರಕಾರವನ್ನಾಗಿಸಿದ್ದಾರೆ. ಮಾಸ್ತಿಯವರು ಬರೆದಿರುವುದು ಒಟ್ಟು ಕೃತಿಗಳ ಸಂಖ್ಯೆ ಒಂದುನೂರ ಇಪ್ಪತ್ತಾರು, ಇವುಗಳ ಒಟ್ಟು ಪುಟಗಳು ಇಪ್ಪತ್ತಾರು ಸಾವಿರ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗ್ರಂಥ ರಚನೆ ಮಾಡಿ ಮಾಸ್ತಿಯವರು ಕನ್ನಡದ ಆಸ್ತಿಯಾಗಿದ್ದಾರೆ. ಇಂತಹ ಮಹಾನ್ ಸಾಹಿತಿಯಾದ ಮಾಸ್ತಿಯವರ ಬದುಕು ಮತ್ತು ಬರಹವನ್ನು ಕುರಿತು ಎಸ್‌.ಆರ್‌. ಜಯಶಂಕರ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಬದುಕು-ಬರಹ ಎಂಬ ಅಧ್ಯಯನ ಪೂರ್ಣ ಗ್ರಂಥವನ್ನು ಬರೆದಿದ್ದಾರೆ.

ವಿವಿಧ ಸಾಹಿತ್ಯ ಪ್ರಕಾರಗಳಲ್ಲಿರುವ ಮಾಸ್ತಿಯವರ ಒಟ್ಟು 126 ಕೃತಿಗಳ 20 ಸಾವಿರ -ಗಳನ್ನು ಏಳು ಅಧ್ಯಾಯಗಳಾಗಿ ವಿಂಗಡಿಸಿಕೊಂಡಿದ್ದಾರೆ. 1. ಬದುಕು-ಬರಹ, 2. ಸಣ್ಣ ಹೆಗಳು, 3 ಕಾದಂಬರಿಗಳು, 4. ನಾಟಕಗಳು, 5. ಕಾವ್ಯ, ಕಥನ ಕಾವ್ಯ ಮಹಾಕಾವ್ಯ, 6. ವಿಮರ್ಶೆ, ಸಂಕೀರ್ಣ, ಪತ್ರಿಕೋದ್ಯಮ, 7. ಸಮಾರೋಪ. ಇದರಲ್ಲಿ ಮತ್ತೆ ಉಪಶೀರ್ಷಿಕ ಸೇವೆ. ಇದು ಮರು ಓದಿನ ಕೃತಿ, ಇದು ಸತ್ಯೋತ್ತರ ಕಾಲ, ನಮ್ಮ ಅನುಕೂಲಕ್ಕೆ ಬೇಕಾದ ನಂಬಿಕೆಗಳನ್ನು ಮಾತ್ರ ಪರಮ ಸತ್ಯವೆಂದು ನಂಬುವ ಕಾಲಘಟ್ಟವಿದು. ರಾಜಕೀಯ ಅಧಿಕಾರ ನಡೆಯುವ ದಾಳವಾಗಿ ಧರ್ಮ ದೇವರು ಬಳಕೆಯಾಗುತ್ತಿದೆ. ಇಂತಹ ಕಾಲಮಾನದಲ್ಲಿ ಮಾಸ್ತಿಯವರ ಸಾಹಿತ್ಯದ ಮರುಓದು, ನಿರ್ಮಲ ಜೀವನ, ನಿರುದ್ವಿಗ್ನ ನಂಬುಗೆ, ನೈತಿಕ ನೈರ್ಮಲ್ಯ, ಕ್ರೌಯದ ಆರಿವಿದ್ದೂ ಹುಟ್ಟುವ ಸಾತ್ವಿಕ ನಂಬುಗೆ, ನಿಧಾನ ಶ್ರುತಿಯಲ್ಲಿ ಅರಳುವ ಜೀವನದ ಸಜ್ಜನ ಮೌಲ್ಯಗಳನ್ನು ಎತ್ತಿ ತೋರಿಸುತ್ತದೆ. ಲಾಭ, ಸ್ವಾರ್ಥ, ಪ್ರಯೋಜನವಾದಿ ಚಿಂತನೆಗಳ ವಾತಾವರಣದಲ್ಲಿ ಪ್ರಾಮಾಣಿಕ ನಿರ್ಮಲ ಬದುಕಿನ ಜೀವಪರ ಮೌಲ್ಯಗಳನ್ನು ಪುನಃ ನೆನಪಿಸುತ್ತದೆ. ನಮ್ಮ ಕಾಲಕ್ಕೂ ಸಲ್ಲುವ ಇಂದಿಗೂ ಬೇಕಾದ ಸಾಹಿತ್ಯವಾಗಿ ಅದರ ಸಮಕಾಲೀನ ಮಹತ್ವವನ್ನು ಮಾಸ್ತಿಯವರ ಬರಹಗಳ ಮರುಓದು ತೋರಿಸಿಕೊಡುತ್ತದೆ.” (ಪುಟ 41) ಇದರಿಂದಾಗಿ ಇಲ್ಲಿನ ಈ ಕೃತಿ ಹಲವು ಒಳನೋಟಗಳನ್ನು ಒಳಗೊಳ್ಳಲು ಸಾಧ್ಯವಾಗಿದೆ.

ಮಾಸ್ತಿಯವರು ಬಳಸಿರುವ ರೂಪಕಗಳನ್ನು ವಿಶ್ಲೇಷಿಸುವ ಮೂಲಕ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಸ್ವರೂಪಗಳನ್ನು ಮನುಷ್ಯನ ಬದುಕಿನ ವಿವರಗಳನ್ನು ಅವನ ಘನತೆಯನ್ನು ಚರ್ಚಿಸುತ್ತಾರೆ. ಸಾಹಿತ್ಯದಲ್ಲಿ ರೂಪಕಕ್ಕೆ ಪ್ರಥಮ ಸ್ಥಾನವಿದೆ, ರೂಪಕವು ಸಾಹಿತ್ಯದಲ್ಲಿ ಒಂದು ಶಕ್ತಿ, ಶಬ್ದ, ಅರ್ಥದಂತೆ ಅದೊಂದು ಅನುಭವ ಇರುವುದನ್ನು ಹೇಳುವುದರ ಜೊತೆಗೆ ಇಲ್ಲದ್ದನ್ನು ಸೃಷ್ಟಿಸುವ ಶಕ್ತಿ ಅದಕ್ಕಿದೆ. ಆದ್ದರಿಂದಲೇ ವಿಜಯಶಂಕರ ಅವರು ಮಾಸ್ತಿಯವರಲ್ಲಿ ತತ್ವ ಜಿಜ್ಞಾಸೆಯು ಭಕ್ತಿ, ನಂಬುಗೆ ಹಾಗೂ ಪರಂಪರಾಗತ ಶ್ರದ್ಧೆ ಆಚರಣೆಗಳಿಂದ ಹೇಗೆ ಬಿಡುಗಡೆಗೊಂಡು ಸ್ವತಂತ್ರ ಹಾಗೂ ಮಾನವೀಯ ಚಿಂತನೆಗಳಾಗುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಅವರ ರೂಪಕಶಕ್ತಿಯ ಸ್ವರೂಪವನ್ನು ವಿವರಿಸಿಕೊಳ್ಳುತ್ತಾರೆ. ಇದನ್ನು ಸ್ಪಷ್ಟಪಡಿಸಲು ವಿಶಿಷ್ಟಾದ್ವತದ ಶರಣಾಗತಿಯ ವಿಶಿಷ್ಟ ರೂಪವಾದ 'ಪ್ರಪತ್ತಿ'ಯ ಪರಿಕಲ್ಪನೆಯನ್ನು ಬಳಸಿಕೊಳ್ಳುತ್ತಾರೆ. ರೂಪಕ ಚಿಂತನೆಯನ್ನು ವಿಶ್ಲೇಷಿಸಿಕೊಳ್ಳುವಾಗ 'ಉದ್ಯಾನದಲ್ಲಿ (ಕವಿತೆ), 'ಯಶೋಧರಾ' (ನಾಟಕ) ಮಂತ್ರೋದಯ, ಆಚಾರ್ಯರ ಪತ್ನಿ (ಕತೆಗಳು) ಮುಂತಾದುವನ್ನು ಉದಾಹರಿಸುತ್ತಾರೆ. ಈ ರೂಪಕ ವಿಶ್ಲೇಷಣೆಯನ್ನು ಮಾಡುವಾಗ ಮಾಸ್ತಿಯವರ ಕೃತಿಗಳಲ್ಲಿ ಅಂತರ್ಗತವಾಗಿರುವ ಸಮಾನತೆ, ಜೀವಪರತೆ, ಸ್ತ್ರೀ ಸ್ವಾತಂತ್ರ್ಯದ ಹೊಸ ದೃಷ್ಟಿಕೋನ, ನ್ಯಾಯಪರತೆಯ ನೈತಿಕ ದೃಷ್ಟಿಕೋನ, ಮುಖ್ಯವಾಗಿ ಎಲ್ಲಾ ಸಮುದಾಯದ ಮಾನವ ಜೀವಿಗಳನ್ನು ಸಮಾನವಾಗಿ ಕಾಣುವ, ಮಾನವ ಘನತೆಯನ್ನು ಎತ್ತಿ ಹಿಡಿಯುವ ಸ್ವರೂಪಗಳನ್ನು ವಿಶ್ಲೇಷಣೆ ಮಾಡುವ ಕ್ರಮ ಅನನ್ಯವಾಗಿದೆ.

ಕೃತಿಯ ಉದ್ದಕ್ಕೂ ಸಾಧ್ಯವಾದ ಕಡೆಯಲ್ಲೆಲ್ಲಾ ತೌಲನಿಕ ಅಧ್ಯಯನ ಮಾಡಲಾಗಿದೆ. ತೌಲನಿಕ ವಿಶ್ಲೇಷಣೆ ವಿಮರ್ಶೆಯಲ್ಲಿ ಮುಖ್ಯ ಆಗ ವಿಮರ್ಶೆ ಪೂರ್ಣವಾಗಲು ಸಾಧ್ಯವಾಗುತ್ತದೆ. ವಸ್ತು ರಚನೆ, ಸಂಕೀರ್ಣ ಮತ್ತು ರಹಸ್ಯಮಯವಾದ ಬದುಕು, ಕಷ್ಟ ಪರಂಪರೆಗಳನ್ನು ಎದುರಿಸುವ ಪಾತ್ರಗಳನ್ನು ಮತ್ತೊಂದು ಕೃತಿಯೊಂದಿಗೆ ಹೋಲಿಸಿದಾಗ ಮಹತ್ವದ ಒಳನೋಟಗಳು ದೊರೆಯುತ್ತವೆ.ಏಕೆಂದರೆ ಈ ಬಗೆಯ ವಿಶ್ಲೇಷಣೆಯಲ್ಲಿ ಭಾಷೆ, ಜನಾಂಗ, ದೇಶಗಳಿಗೆ ಬದ್ಧವಾಗದೆ ಜಗತ್ತಿನ ಎಲ್ಲ ಸಾಹಿತ್ಯಗಳ ಸೃಷ್ಟಿ ಮತ್ತು ಅನುಭವದ ಏಕತೆಯನ್ನು ಗಮನದಲ್ಲಿಟ್ಟುಕೊಳ್ಳಲಾಗಿರುತ್ತದೆ. ಮಾಸ್ತಿಯವರ ಕೃತಿಗಳಲ್ಲಿ ಸಮಾನ ವಸ್ತು, ಪಾತ್ರೆಗಳ ವರ್ತನೆ ಇತ್ಯಾದಿಗಳನ್ನು ತೌಲನಿಕವಾಗಿ ಚರ್ಚಿಸಲು ಸಾಬಣ್ಣ ಮತ್ತು 'ಭಾವ', ಮುನೇಶ್ವರನ ಮರ ಮತ್ತು ಮೊಸರಿನ ಮಂಗಮ್ಮ ಕತೆಗಳನ್ನು ಆಯ್ಕೆ ಮಾಡಿ ವಿವರಿಸಿದ್ದಾರೆ. ಪಾಶ್ಚಾತ್ಯ ಸಾಹಿತ್ಯದೊಂದಿಗೆ ಸುಬ್ಬಣ್ಣ , 'ಶಾನ್ತಾ' ನಾಟಕ ಷೇಕ್ಸ್ಪಿಯರನ ಹನ್ನೆರಡನೇ ರಾತ್ರಿ, ತಾಳಿಕೋಟೆ - ಜೂಲಿಯಸ್ ಸೀಸರ್‌ - ಇವುಗಳನ್ನು ತೌಲನಿಕವಾಗಿ ಅಧ್ಯಯನ ಮಾಡಿರುವುದನ್ನು ನೋಡಬಹುದು, ಈ ಕೃತಿಯಲ್ಲಿ ಜೀವನ ಚರಿತ್ರಾತ್ಮಕ ವಿಮರ್ಶೆಯೂ ಇದೆ. ಹಾಗೆ ನೋಡಿದರೆ ಇದರ ಶೀರ್ಷಿಕೆಯೇ ಮಾಸ್ತಿಯವರ ಬದುಕು-ಬರಹ ಹೀಗಾಗಿ ಕೃತಿಯ ಉದ್ದಕ್ಕೂ ಮಾಸ್ತಿಯವರ ಬದುಕಿನ ಘಟನೆಗಳು, ನೆನಪುಗಳು, ಅನುಭವಗಳು ಪ್ರತಿಯೊಂದು ಪ್ರಕಾರದ ಕೃತಿಯ ವಿಶ್ಲೇಷಣೆಯಲ್ಲಿ ಬಂದು ಹೋಗುತ್ತವೆ. ಮಾಸ್ತಿಯವರ ಪಾಂಡಿತ್ಯ, ಪಕ್ವತೆ, ಅವರ ಜೀವನ ಸಿದ್ಧಾಂತದ ಆಳ ವ್ಯಾಪಕತೆ, ಸಂಸ್ಕಾರ - ಇವುಗಳನ್ನು ಗಣನೆಗೆ ತೆಗೆದುಕೊಳ್ಳುವುದರ ಜೊತೆಗೆ ಕೃತಿಯ ಮೂಲ, ಸಾಮಾಜಿಕ ಪರಿಸರದಲ್ಲಿ ಹುಟ್ಟಿರುವ ಆದರೆ ಉಪಯುಕ್ತತೆ ಇವುಗಳನ್ನು ಗಣನೆಗೆ ತೆಗೆದುಕೊಂಡು ನಡೆಸಿರುವ ವಿಶ್ಲೇಷಣೆ ಉಪಯುಕ್ತವಾಗಿದೆ. ಜೊತೆಗೆ ಕೃತಿಯ ಆಯಾಮಗಳನ್ನು ವಿಸ್ತರಿಸಲು ಸಾಧ್ಯವಾಗಿದೆ.

ವಿಜಯಶಂಕರಮಾಸ್ತಿಯವರ ಜೀವನ ಕಥೆಯಾದ 'ಭಾವ'ದ ಮೂರು ಸಂಪುಟಗಳಲ್ಲಿನ ಕೆಲವು ಘಟನೆಗಳನ್ನು ಕತೆ, ಕಾದಂಬರಿ, ಮಹಾಕಾವ್ಯ ಕಾವ್ಯ ಕೃತಿಗಳಿಗೆ ಅನ್ವಯಿಸಿ ಅಧ್ಯಯನ ಮಾಡಲಾಗಿದೆ. ಇದರಿಂದ ಮಾಸ್ತಿಯವರ ಕೃತಿಗಳ ಒಳನೋಟಗಳು ವಿಸ್ತಾರಗೊಳ್ಳಲು ಸಾಧ್ಯವಾಗಿದೆ. ವಿಜಯಶಂಕರ ಅವರು ಮಾಸ್ತಿಯವರ ಕತೆಗಳನ್ನು ಬಹಳ ದೀರ್ಘವಾಗಿ ಆಳವಾಗಿ ವಿಶ್ಲೇಷಿಸಿದ್ದಾರೆ. ಬಹುಶಃ ಇದಕ್ಕೆ ಅವರು ಸಣ್ಣಕತೆಗಳ ಜನಕ, ಕತೆಗಾರ ಮಾಸ್ತಿ ಎಂದು ಪ್ರಸಿದ್ಧರಾಗಿರುವುದು ಕಾರಣವಿರಬಹುದು. ಜೊತೆಗೆ ಕನ್ನಡಕ್ಕೆ ಶ್ರೇಷ್ಠಮಟ್ಟದ ಕತೆಗಳನ್ನು ನೀಡಿದ್ದಾರೆಂಬ ಕಾರಣವೂ ಇದೆ. ಈ ಕೆಳಗಿನ ಸಾಲುಗಳನ್ನು ಉಲ್ಲೇಖಿಸುವುದರ ಮೂಲಕ ಅವರ ವಿಮರ್ಶಾ ಸ್ವರೂಪವನ್ನು ಮನವರಿಕೆ ಮಾಡಿಕೊಡುತ್ತೇನೆ "ವಿಶ್ವಾತ್ಮಕ ದೃಷ್ಟಿಕೋನ (Cosmic Vision) ಮಾಸ್ತಿಯವರು ತಮ್ಮನ್ನು ಹಾಗೂ ಜಗತ್ತನ್ನೂ ತಿಳಿಯಲು ಪರಿಭಾವಿಸಿದ ಕ್ರಮ. ಮೊದಲಿಗೆ ವ್ಯಕ್ತಿ. ಆ ಬಳಿಕ ವ್ಯಕ್ತಿಯಿಂದ ಸಮಾಜ ಮುಂದೆ ಸಮಾಜದಿಂದ ಲೋಕ, ಅಲ್ಲಿಂದ ಸಮಸ್ತ ಪ್ರಪಂಚ, ಅಂದರೆ ವಿಶ್ವಕುಲದ ಭಾಗವಾಗಿ ಮನುಷ್ಯ ಚೇತನವನ್ನು ಆರಿಯುವುದು ಅವರ ಪರಿಭಾವನೆಯ ಮಾರ್ಗ, ಅದು ಕೊನೆಗೊಳ್ಳುವುದು ವಿಶ್ವದ ಅಖಂಡತ್ವದಲ್ಲಿ, ಅದು ದೈವಶಕ್ತಿಯ ತಾತ್ವಿಕ ನೆಲೆಗಳನ್ನು 'ಮಂತ್ರೋದಯ' ಕತೆಯಲ್ಲಿ ತೋರಿಸಿಕೊಟ್ಟಿತು. ಅದೇ ರೂಪಕ ಚಿಂತನೆಯ ತಾತ್ವಿಕತೆ, ಅದೇ ತತ್ವವನ್ನು ಸಾಮಾನ್ಯ ಗ್ರಹಿಕೆಯ 'ದೇವರು' ಕಲ್ಪನೆಯಲ್ಲಿ 'ಶ್ರೀಕೃಷ್ಣನ ಅಂತಿಮ ಸಂದರ್ಶನ' ಕತೆಯಲ್ಲಿ ಕಾಣಿಸಿತು. (ಪುಟ ೫೮) ವಿಜಯಶಂಕರ ಅವರು ಮಾಸ್ತಿಯವರ ಕೃತಿಗಳನ್ನು ವಿಮರ್ಶಿಸುವಾಗ ಬಾಹ್ಯ ಮತ್ತು ಆಂತರಿಕ ವಿಮರ್ಶಾ ವಿಧಾನಗಳೆರಡನ್ನೂ ಬಳಸಿದ್ದಾರೆ. ಕವಿಯ ಮನೋಧರ್ಮ, ಸಮಾಜ, ಮನಃಶಾಸ್ತ್ರ ನೀತಿಧರ್ಮ, ತತ್ವಶಾಸ್ತ್ರ, ಎಲ್ಲಾ ಮಾನವಿಕಗಳನ್ನು ಬಳಸಿ ಅಧ್ಯಯನ ಮಾಡಿರುವುದರಿಂದ ಅವರ ಮರುಓದು ಸಾರ್ಥಕತೆಯನ್ನು ಪಡೆದಿದೆ. 

(ಕೃಪೆ : ಪುಸ್ತಕ ಲೋಕ, ಬರಹ : ಎಚ್ ದಂಡಪ್ಪ)

Related Books