ಲೇಖಕ, ಭಾರತೀಯ ಕಮ್ಯೂನಿಸ್ಟ್ ಪಕ್ಷದ ನಾಯಕ ಮತ್ತು ಅಖಿಲ ಭಾರತ ಟ್ರೇಡ್ ಯೂನಿಯನ್ ಸಂಘಟನೆಯ ರಾಜ್ಯ ಸದಸ್ಯ ಮತ್ತು ಹೈಕೋರ್ಟ್ ವಕೀಲರೂ ಆಗಿದ್ದ ಎಂ.ಸಿ. ನರಸಿಂಹನ್ ಅವರಿಗೆ ಸಂಬಂಧಿಸಿದ ಕೃತಿ -ಶ್ರಮಿಕ ಸಂಗಾತಿ. ಅವರು (1952-62) ಕೆಜಿಎಫ್ ವಿಧಾನಸಭಾ ಕ್ಷೇತ್ರವನ್ನು ಮತ್ತು 1962-67 ರವರೆಗೆ ವಿಧಾನ ಪರಿಷತ್ತನ್ನು ಪ್ರತಿನಿಧಿಸಿದ್ದರು. ಕರ್ನಾಟಕದಲ್ಲಿ ವಿಧಾನಪರಿಷತ್ತಿಗೆ ಕಮ್ಯುನಿಸ್ಟರೊಬ್ಬರು ಆಯ್ಕೆಯಾದ ಮೊದಲ ಮತ್ತು ಕೊನೆಯವರು ಎಂಸಿ ನರಸಿಂಹನ್. ದುಡಿಯುವ ವರ್ಗ ಜನತೆಯ ಪರವಾಗಿ ಹತ್ತು ಹಲವು ಹೋರಾಟಗಳನ್ನು ನಡೆಸಿ, ವಿವಿಧ ಕಾನೂನುಗಳು ರೂಪುಗೊಳ್ಳಲು ಕಾರಣೀಭೂತರಾಗಿದ್ದರು. 1952ರಲ್ಲಿ ಕಮ್ಯೂನಿಸ್ಟ್ ಪಕ್ಷದ ‘ಜನಶಕ್ತಿ’ ಪತ್ರಿಕೆಯ ಸಂಪಾದಕರಾಗಿದ್ದರು. 2020ರ ಜೂನ್ 10ರಂದು ತಮ್ಮ 98ನೇ ವಯಸ್ಸಿನಲ್ಲಿ ನಿಧನರಾದರು. ಸಂಗಾತಿಗಳು ಸೇರಿ ನರಸಿಂಹನ್ ಅವರ ಬಾಲ್ಯ, ವಿದ್ಯಾಭ್ಯಾಸ, ಕಾನೂನು ಪದವಿ, ಹೋರಾಟ ಮಾತ್ರವಲ್ಲ; ಅವರ ವ್ಯಕ್ತಿತ್ದದ ಸಮಗ್ರ ಆಯಾಮಗಳನ್ನು ಬಿಂಬಿಸಲು ‘ಶ್ರಮಿಕ ಸಂಗಾತಿ’ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ.