ಕವಿ ಉಮೇಶ ನಾಯ್ಕ ಅವರು ತಮ್ಮ ತಂದೆ ಕುಸ್ಲಪ್ಪ ನಾಯ್ಕ ಅವರ ಕುರಿತು ಬರೆದ ಕೃತಿ ’ನಾಲ್ಕೇ ಕ್ಲಾಸು ಓದಿದವನು’. ಸರಳವಾಗಿ ಬದುಕಿದ, ಆ ಸರಳತೆಯಲ್ಲಿಯೇ ಹೋರಾಟದ ಬಹುದೊಡ್ಡ ಹಾದಿಯನ್ನು ಕೂಡಿಸಿಕೊಳ್ಳುತ್ತ ನಡೆದ ಅಪ್ಪನ ಬಗ್ಗೆ ಅಭಿಮಾನ ಮತ್ತು ನೋವಿನಿಂದ ಹೇಳಿರುವ ಕಥನ ಇದು. ಕುಸ್ಲಪ್ಪ ನಾಯ್ಕರ ಹೋರಾಟ, ಅವರು ನಂಬಿದ್ದ ರಾಜಕೀಯ ಆದರ್ಶಗಳು, ಅವರ ಸಂಪ್ರದಾಯ ವಿರೋಧಿ ನಿಲುವು, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಮಿತ್ರರ ಜೊತೆಗಿನ ಅವರ ಒಡನಾಟ, ಅವರ ಕೃಷಿ ಬದುಕು, ಅವರೊಳಗಿದ್ದ ಕಲಾವಿದ -ಹೀಗೆ ಹಲವು ವಿಚಾರಗಳು ಇಲ್ಲಿ ದಾಖಲಾಗಿವೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯವರಾದ ಉಮೇಶ ನಾಯ್ಕ ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಆಸಕ್ತಿಯನ್ನು ಬೆಳೆಸಿಕೊಂಡು ಗಮನ ಸೆಳೆದವರು. ಬರವಣಿಗೆ, ಗಾಯನ, ಶಾಸ್ತ್ರೀಯ ಸಂಗೀತ (ಹಾಡುಗಾರಿಕೆ ಮತ್ತು ತಬಲಾ ವಾದನ), ರಂಗಭೂಮಿ ಮತ್ತು ಸಾಹಿತ್ಯಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಅವರು, ವೃತ್ತಿಯಲ್ಲಿ ಉಪನ್ಯಾಸಕರು. ಕವಿತೆ ಅವರ ಅಭಿವ್ಯಕ್ತಿಯ ಮುಖ್ಯ ಮಾಧ್ಯಮವಾಗಿದ್ದರೂ, ಕವಿತೆಯೇತರ ಬರವಣಿಗೆಯಲ್ಲೂ ತೊಡಗಿಸಿಕೊಂಡಿರುವ ಉಮೇಶ ನಾಯ್ಕ, ಉತ್ತರ ಕನ್ನಡದ ನಾಮಧಾರಿ ಸಮಾಜದ ಬಗೆಗೂ ಅಧ್ಯಯನಪೂರ್ಣ ಕೃತಿ ರಚಿಸಿದ್ದಾರೆ. ಉತ್ತರ ಕನ್ನಡದ ರೈತಹೋರಾಟದ ಹಿನ್ನೆಲೆಯೊಡನೆ ತಮ್ಮ ತಂದೆಯವರ ಕುರಿತು ಅವರು ಬರೆದಿರುವ ಕೃತಿ ಒಂದು ಕಾಲಘಟ್ಟದ ಸಾಂಸ್ಕೃತಿಕ ...
READ MORE