ಮಹಾಭಾರತದ ವಿದುರನ ವಿಚಾರಗಳನ್ನು ಪರಿಶೀಲಿಸಿ ಬರೆದ ಕೃತಿ ಇದು. ವಿದ್ವಾನ್ ವಿದ್ಯಾಭೂಷಣ ಬಾಲಸರಸ್ವತಿ ಅವರು ಕೃತಿ ರಚನೆಕಾರರು. ಇಂದಿನ ದಿನಮಾನದಲ್ಲಿ ನೈತಿಕತೆ ಕಡಿಮೆಯಾಗುತ್ತಿದೆ. ವಿದುರನ ಜೀವನಕ್ರಮವು ಮಕ್ಕಳಿಗೆ ಆದರ್ಶ ಪಾಠವಾಗಬೇಕು ಎಂಬ ಉದ್ದೇಶದೊಂದಿಗೆ ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ಲೇಖಕರು ವಿದುರನ ಜೀವನ ಹಾಗೂ ವಿಚಾರಗಳನ್ನು ಸರಳವಾಗಿ ನಿರೂಪಿಸಿದ್ದಾರೆ.
ಅಂತರಂಗದಲ್ಲಿ ಕೆಲಸವನ್ನು ನೆರವೇರಿಸತಕ್ಕವನು ಬಹಿರಂಗದಲ್ಲಿ ಕೆಲಸ ಮಾಡುವವನಷ್ಟು ಪ್ರಸಿದ್ಧಿಗೆ ಬರಲಾರ ಎಂಬುದು ಲೋಕದಲ್ಲಿ ಕಂಡು ಬರುವ ವಿಚಾರ. ಆದರೆ, ಯಾವ ಕೆಲಸವಾದರೂ ಅಂತರಂಗದಲ್ಲಿ ಪರಿಪೂರ್ಣ ರೂಪದಿಂದ ನಡೆಯುವಷ್ಟು ಬಹಿರಂಗದಲ್ಲಿ ನಡೆಯಲು ಅವಕಾಶ ದೊರೆಯದು ಎಂಬುದೂ ಸತ್ಯ. ಇದನ್ನು ಅರ್ಥೈಸಿಕೊಳ್ಳಲು ವಿಶೇಷ ತಾಳ್ಮೆ ಬೇಕು ಎಂಬುದಕ್ಕೆ ವಿದುರನನ್ನು ಇಲ್ಲಿ ಮಾದರಿಯಾಗಿ ತೆಗೆದುಕೊಳ್ಳಲಾಗಿದೆ.