ಲೇಖಕ ಜಿ ಪಿ ಬಸವರಾಜು ಅವರ ಪುಸ್ತಕ ಶಿಖರ ಸಾಲು. ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿಯನ್ನಿಟ್ಟುಕೊಂಡು ಸಾಧನೆ ಮಾಡಿರುವ ಅನೇಕರ ಜೀವನ ಸಾಧನೆಯನ್ನು ಲೇಖಕರು ತಮ್ಮದೇ ಶೈಲಿಯಲ್ಲಿ ಓದುಗರಿಗೆ ಈ ಕೃತಿಯ ಮೂಲಕ ಪರಿಚಯಿಸಿದ್ದಾರೆ. ಸಾಹಿತ್ಯ, ಸಂಗೀತ, ರಂಗಭೂಮಿ, ಸಾಮಾಜಿಕ ಚಳವಳಿ, ಛಾಯಾಚಿತ್ರಗ್ರಹಣ, ರಾಜಕೀಯ ಹಾಗೂ ಪತ್ರಿಕೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಹಲವರ ಜೀವನ ಕ್ರಮ ಮತ್ತು ಬದುಕಿನ ಚಿತ್ರಣವನ್ನು, ಜೀವನ ಸಾಧನೆಯನ್ನು ವಿವರವಾಗಿ ಈ ಪುಸ್ತಕದಲ್ಲಿ ವಿವರಿಸಿದ್ದಾರೆ.
ಶ್ರೇಷ್ಠ ಸಂಗೀತಗಾರರದ ಪಂಡಿತ ರಾಜಗುರು, ಪಂಡಿತ ರಾಜೀವ ತಾರಾನಾಥ, ರೈತ ನಾಯಕರಾದ ಕಡಿದಾಳು ಶಾಮಣ್ಣ, ರಾಜಕಾರಣಿ ಬಾಬುಜೀವನ ರಾಂ, ಪತ್ರಕರ್ತ ಖುಷ್ವಂತ್ ಸಿಂಗ್, ಸಾಹಿತಿ ಜಿ.ಎಚ್. ನಾಯಕ, ಪ್ರಕಾಶಕರಾದ ಡಿವಿಕೆ ಮೂರ್ತಿ, ಛಾಯಾಗ್ರಾಹಕ ಟಿ.ಎಸ್ ಸತ್ಯನ್ ಹೀಗೆ ಹಲವರ ಸಾಧನೆಯ ಹೆಜ್ಜೆಗಳನ್ನು ಲೇಖಕರು ತಿಳಿಸಿದ್ದಾರೆ.
ತಮ್ಮ ತಮ್ಮ ಆಸಕ್ತ ಕ್ಷೇತ್ರಗಳಲ್ಲಿ ಅಗಾಧ ಸಾಧನೆ ಯು ಹಲು ಮಾಡಿದ ಸಾಧಕರನ್ನು ಅಪಾರ ಮೆಚ್ಚುಗೆ, ಅಭಿಮಾನ ಮತ್ತು ಬೆರಗಿನಿಂದ ನೋಡಿ ಅವರ ಜೀವನ-ಸಾಧನೆಗಳನ್ನು ತಮ್ಮದೇ ಶೈಲಿಯಲ್ಲಿ ಬರೆದ ಜಿ.ಪಿ ಬಸವರಾಜು ಅವರ - ಈ ಪುಸ್ತಕ ತನ್ನ ಆಪ್ತತೆಯಿಂದಾಗಿ ನಮ್ಮ ಗಮನ ಸೆಳೆಯುತ್ತದೆ. ಪುಸ್ತಕದ ಶಿರೋನಾಮೆಯೇ ತಿಳಿಸುವಂತೆ ಇದು ಮೇರು ಸಾಧಕರ ಜೀವನ-ಸಾಧನೆಗಳನ್ನು ದಾಖಲಿಸುವ, ತನ್ಮೂಲಕವಾಗಿ ನಮ್ಮ ದೇಶ-ರಾಜ್ಯದ ಸಾಂಸ್ಕೃತಿಕ ಚಹರೆಗಳನ್ನು ಗುರುತಿಸುವ ಒಂದು ಪ್ರಯತ್ನ.
'ಇಲ್ಲಿ ಸಾಧಕರ ವೈಯಕ್ತಿಕ ಸಾಧನೆಯ ಜೊತೆಗೆ ಆ ಕಾಲಘಟ್ಟದ ಹಲವಾರು ಪ್ರಮುಖ ಅಂಶಗಳು ಕೂಡಾ ಮುನ್ನೆಲೆಗೆ ಬಂದಿವೆ. ಒಟ್ಟು ಐದು ಭಾಗಗಳಲ್ಲಿ ಸಂಗೀತ, ಸಾಹಿತ್ಯ, ರಂಗಭೂಮಿ, ಸಾಮಾಜಿಕ ಚಳವಳಿ, ಛಾಯಾಚಿತ್ರಗ್ರಹಣ, ರಾಜಕೀಯ ಹಾಗೂ ಪತ್ರಿಕೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಾಮಾಣಿಕವಾಗಿ ಮತ್ತು ನಿಸ್ವಾರ್ಥವಾಗಿ ತಮ್ಮನ್ನು ತೊಡಗಿಸಿಕೊಂಡ ಹಲವರ - ಜೀವನ ಕ್ರಮ ಮತ್ತು ಜೀವನಶ್ರದ್ದೆ ವಿವರವಾಗಿ ನಿರೂಪಿತವಾಗಿದೆ.
ಹೀಗೆ ಮಹಾನ್ ಸಾಧಕರ ಜೀವನ-ಸಾಧನೆಯನ್ನು ಕುರಿತು ದಾಖಲಿಸುವಾಗ ಲೇಖಕರು ತಮ್ಮ ದೃಷ್ಟಿಕೋನದ ಜತೆಗೆ ಆಯಾ ಸಾಧಕರ ರಾಜಕೀಯ-ಸಾಮಾಜಿಕ ದೃಷ್ಟಿಕೋನವನ್ನು ಬೆರೆಸಿ ವ್ಯಕ್ತಿಚಿತ್ರ ಕಟ್ಟುತ್ತಾರೆ. ಹಾಗಾಗಿ ಇದು ಒಂದು ಕಾಲಧರ್ಮದ ದಾಖಲೆಯೂ ಹೌದು. ಉದಾಃ ರಂಗಕರ್ಮಿ ರಘುನಂದನ ಅವರನ್ನು ಕುರಿತ ಬರಹದಲ್ಲಿ ರಘುನಂದನ ಅವರು ರಂಗಭೂಮಿ ಮತ್ತು ಸಮಕಾಲೀನ ಸಮಾಜದ ವೈರುಧ್ಯಗಳನ್ನು ತೆರೆದಿಟ್ಟ ರೀತಿಯನ್ನು ದಾಖಲಿಸುತ್ತಾರೆ.ಅವರು ಹೇಳುವಂತೆ ಸಮಕಾಲೀನ ರಂಗಭೂಮಿಯಲ್ಲಿ ರಾಜಕೀಯ ಪ್ರಜ್ಞೆ ಗಣನೀಯವಾಗಿ ಕಡಿಮೆಯಾಗಿದೆ ಮತ್ತು ರಂಗಭೂಮಿಯು ಕಾರ್ಪೊರೇಟ್ ಶಕ್ತಿಗಳ ಬಂಡವಾಳಕ್ಕೆ ಶರಣಾಗುತ್ತಿದೆ (ಪು-162), ಪುಸ್ತಕದುದ್ದಕ್ಕೂ ಈ ಬಗೆಯ ವ್ಯಕ್ತಿಗಳ ರಾಜಕೀಯ ಪ್ರಜ್ಞೆ ಸಾಮಾಜಿಕ ಹಿನ್ನಲೆ, ಬೆಳೆದುಬಂದ ದಾರಿ ಹಾಗೂ ಎದುರಿಸಿದ ಸವಾಲುಗಳನ್ನು ದಾಖಲಿಸುವ ಕೃತಿ ಇದು. ಶ್ರೇಷ್ಠ ಸಂಗೀತಗಾರರಾದ ಪಂ.ರಾಜಗುರು, ಪಂ.ರಾಜೀವ ತಾರಾನಾಥರಿಂದ ಹಿಡಿದು ರೈತನಾಯಕ ಕಡಿದಾಳು ಶಾಮಣ್ಣ, ರಾಜಕಾರಣಿ ಬಾಬು ಜಗಜೀವನ ರಾಂ, ಪತ್ರಕರ್ತ ಖುಶ್ವಂತ್ ಸಿಂಗ್, ವಿಮರ್ಶಕರಾದ ಜಿ.ಎಚ್ ನಾಯಕ, ಪ್ರಕಾಶಕ ಡಿವಿಕೆ ಮೂರ್ತಿ, ಛಾಯಾಗ್ರಹಕ ಟಿ.ಎಸ್ ಸತ್ಯನ್ ಹೀಗೆ ಸಾಲು ಸಾಲು ಸಾಧಕರ ಜೀವನದ ಲಯಗಳು, ಸಾಧನೆಯ ಕಷ್ಟಗಳು ಇಲ್ಲಿ ದಾಖಲಾಗಿವೆ. ವ್ಯಕ್ತಿಗಳ ವೈಯಕ್ತಿಕ ವಿವರಗಳನ್ನು ವಿಶಾಲವಾದ ಸಾಮಾಜಿಕ ವಿನ್ಯಾಸದ ಹಿನ್ನಲೆಯಲ್ಲಿ ಬಹಳ ಮೆಚ್ಚುಗೆಯಿಂದ ನೋಡಲಾಗಿದೆ.
ಕೆಲವೊಂದು ಚಿತ್ರಣಗಳಲ್ಲಿ ಅತಿ ನಾಟಕೀಯತೆ ಹಾಗೂ ಸ್ವ ವ್ಯಕ್ತಿತ್ವ ಅಗತ್ಯಕ್ಕಿಂತ ಹೆಚ್ಚಾಗಿ ಮುನ್ನಲೆಗೆ ಬಂದಿದೆ. 'ಉಗ್ರ ಚಳವಳಿಯ ಸೌಮ್ಯ ನಾಯಕ' ಭಾಗದಲ್ಲಿ ರೈತನಾಯಕ ರುದ್ರಪ್ಪನವರು ಪತ್ರಕರ್ತ ವೈಎನ್ಕೆ ಅವರಿಗೆ ರೈತ ಚಳವಳಿಯ ಸಂದರ್ಭದಲ್ಲಿ ಬೆಂಗಳೂರಿಗೆ ಹೋಗಲು ಅನುವು ಮಾಡಿಕೊಟ್ಟ ಪ್ರಸಂಗದಲ್ಲಿ ಈ ಅಂಶವನ್ನು ಗಮನಿಸಬಹುದು.
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವ್ಯಕ್ತಿ ಚಿತ್ರಗಳ ಅಥವಾ ಸ್ಥಳ ಪುರಾಣಗಳ ದಾಖಲೆ ಹೊಸತೇನಲ್ಲ. ನವೋದಯ ಕಾಲಘಟ್ಟದಲ್ಲಿ ಡಿ.ವಿ ಗುಂಡಪ್ಪ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ತರಹದ ಲೇಖಕರು ಹಾಕಿದ ಪರಂಪರೆ ಇದು. ನವ್ಯರ ಉಬ್ಬರದ ದಿನಗಳಲ್ಲಿ ಈ ಬಗೆಯ ವ್ಯಕ್ತಿಚಿತ್ರಗಳ ದಾಖಲೆಯನ್ನು ಅದು ತೀರಾ ವೈಯಕ್ತಿಕ ಎಂಬ ನೆಲೆಯಲ್ಲಿ ಉಪೇಕ್ಷಿಸಿದರೆಂದೆ ಹೇಳಬಹುದು. ಆದರೆ ಇತ್ತೀಚಿನ ವಿಮರ್ಶಾ ಸಿದ್ದಾಂತಗಳು ವ್ಯಕ್ತಿಚಿತ್ರ ಅಥವಾ ಆತ್ಮಕಥನಗಳಂತ ರಚನೆಗಳನ್ನು ಸಮುದಾಯದ ಕಥನಗಳನ್ನಾಗಿಸಿ ಅಥವಾ ಸಾಮಾಜಿಕ ದಾಖಲೆಗಳಾಗಿ ನೋಡುವ ದೃಷ್ಟಿಕೋನವನ್ನು ರೂಪಿಸಿವೆ. ಇಲ್ಲಿನ ವ್ಯಕ್ತಿಚಿತ್ರಗಳು ಶ್ರೇಷ್ಠತೆಯ ಮಾನದಂಡವನ್ನೇ ಅವಲಂಬಿಸಿಲ್ಲ. ಬದಲಾಗಿ ಪ್ರಧಾನಧಾರೆ ಪರಂಪರೆ ಅಥವಾ ಚರಿತೆ. ಪ್ರಯತ್ನಪೂರ್ವಕವಾಗಿ ಮರೆತಿರುವ ಅಂಶವನ್ನು ಮುನ್ನೆಲೆಗೆ ತರುವ ಯತ್ನ ಮಾಡುತ್ತವೆ. ಒಟ್ಟಾರೆಯಾಗಿ ಈ ಕೃತಿ ವ್ಯಕ್ತಿ, ಸಾಧನೆ ಹಾಗೂ ಸಮಕಾಲೀನ ಸಮಾಜದ ಚಿತ್ರಣವನ್ನು ದಾಖಲಿಸುವ ಕೆಲಸ ಮಾಡುತ್ತವೆ.
-ಅವಿನಾಶ್ ಟಿ
ಕೃಪೆ : ಹೊಸ ಮನುಷ್ಯ (ಆಗಸ್ಟ್ 2019)
©2024 Book Brahma Private Limited.