‘ನೂರ್ ಇನಾಯತ್ ಖಾನ್’ ಪತ್ರಕರ್ತ, ಲೇಖಕ ಚಂದ್ರಶೇಖರ್ ಮಂಡೆಕೋಲು ಅವರ ಕೃತಿ. ಎರಡನೆ ಮಹಾಯುದ್ಧದಲ್ಲಿ ಇಂಗ್ಲೆಂಡ್ ನಗರವನ್ನು ವಶಪಡಿಸಿಕೊಂಡಾಗ ಹಿಟ್ಲರ್ ನ ನಾಜಿ ಪಡೆಗಳ ವಿರುದ್ಧ ಹೋರಾಡಿದ ಗೂಢಚಾರಿಣಿ ಹಾಗೂ ಮೈಸೂರು ಹುಲಿ ಟಿಪ್ಪು ಸುಲ್ತಾನ್ ವಂಶಸ್ಥೆ ನೂರ್ ಇನಾಯತ್ ಖಾನ್ ಅವರ ಬದುಕಿನ ಚಿತ್ರಣವನ್ನು ಈ ಕೃತಿ ಕಟ್ಟಿಕೊಡುತ್ತದೆ.
ಚರಿತ್ರೆ ಸಂಗೀತ ಮತ್ತು ದರ್ಶನಗಳನ್ನು ವಸಾಹತುಶಾಹಿ ಆಳ್ವಿಕೆಯ ವಿದ್ಯಮಾನಗಳ ಚೌಕಟ್ಟಿನಲ್ಲಿಟ್ಟು ಕಾಣಿಸುವುದರಿಂದ ಈ ಕೃತಿಯು ಏಕಕಾಲಕ್ಕೆ ಕಲೆ, ತತ್ವಶಾಸ್ತ್ರ, ರಾಜಕಾರಣ ಹಾಗೂ ಚರಿತ್ರೆಯ ಕೃತಿಯಾಗಿದೆ ಎನ್ನುತ್ತಾರೆ ಹಿರಿಯ ಲೇಖಕ, ಚಿಂತಕ ರಹಮತ್ ತರೀಕೆರೆ.
ಗಂಡು ಹೆಣ್ಣಿನ ಪ್ರೇಮ, ವ್ಯಕ್ತಿಗಳ ಅನುಭಾವದ ಸಾಧನೆ ಹಾಗೂ ಸಂಗೀತದ ಅಭಿರುಚಿಗಳನ್ನು ಒಂದು ಕೇಂದ್ರಕ್ಕೆ ತರುತ್ತದೆ. ಈ ಮೂಲಕ ಭಾರತದ ಧಾರ್ಮಿಕ ಹಾಗೂ ಕಲಾತ್ಮಕ ಸಾಮರಸ್ಯದ ಅಪೂರ್ವ ಪರಂಪರೆಯನ್ನು ಕಾಣಿಸುತ್ತದೆ. ಈ ಪರಂಪರೆಯ ಒಳಗಿನ ಮಾನವೀಯ ಸಂಬಂಧಗಳನ್ನು ಶೋಧಿಸುತ್ತದೆ. ಈ ಕಾರಣಕ್ಕಾಗಿ ಈ ಕೃತಿ ಸಾಂಸ್ಕೃತಿಕ ಪಠ್ಯವೂ ಆಗಿದೆ. ರಾಜ ಮಹಾರಾಜರ ಕ್ಲಾಸಿಕಲ್ ಚರಿತ್ರೆಯು ಅವಗಣಿಸಿರುವ ಅಜ್ಞಾತರೂ, ಮಹತ್ವದವರೂ ಮಹಿಳೆಯರ ಮೇಲೆ ಕಟ್ಟುತ್ತಿರುವ ಈ ಚರಿತ್ರೆಯ ಸಾಂಪ್ರದಾಯಿಕ ಚರಿತ್ರೆಯನ್ನು ಬೇರೊಂದು ಕಣ್ಣೋಟದಲ್ಲಿ ನೋಡಲು ಪ್ರೇರೇಪಿಸುತ್ತದೆ.
ಚಂದ್ರಶೇಖರ್ ಮಂಡೆಕೋಲು- ತುಳುನಾಡಿನ ನವೀನ ಸಾಹಿತ್ಯದ ಭರವಸೆಯ ಬರಹಗಾರ. ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿ ಹೊಸ ಸಾಧ್ಯತೆಗಳ ಹುಡುಕಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಚಂದ್ರಶೇಖರ್, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದವರು. ಸುಳ್ಯದ ನೆಹರೂ ಸ್ಮಾರಕ ಕಾಲೇಜಿನಲ್ಲಿ ಪದವಿ, ಮಂಗಳೂರು ವಿವಿಯಲ್ಲಿ ಕನ್ನಡದಲ್ಲಿ ಸ್ನಾನಕೋತರ ಪದವಿ ಪಡೆದಿದ್ದಾರೆ. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಅವರು ಉದಯವಾಣಿ, ವಿಜಯವಾಣಿ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ್ದು, ಸದ್ಯ ನ್ಯೂಸ್ 18 ಸುದ್ದಿವಾಹಿನಿಯಲ್ಲಿ ಮುಖ್ಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲೇಜು ದಿನಗಳಿಂದಲೂ ಬರಹದ ಗೀಳು, ತುಳು ಸಂಸ್ಕೃತಿ ಕುರಿತ ಅಧ್ಯಯನಪೂರ್ಣ ‘ಅನ್ವೇಷಣೆ’ ಚೊಚ್ಚಲ ಕೃತಿಗೆ ತುಳು ...
READ MOREವೀಣೆ ನುಡಿಸಿದ ಹೆಣ್ಣು ಹುಲಿ
ಇವಳ ಜೀವನ ಕಥನವನ್ನು ಓದುತ್ತಿದ್ದರೆ, ಇದು ವಾಸ್ತವವೋ ಯಾರೋ ಅಪಾರ ಕಲ್ಪನೆಯಲ್ಲಿ ಹೆಣೆದಿರುವ ವ್ಯಕ್ತಿತ್ವವೋ ಎನ್ನುವ ಅನುಮಾನ ಕಾಡತೊಡಗುತ್ತದೆ. ಯಾವುದೋ ಪುರಾಣದ ಕನ್ನಿಕೆಯಂತೆ ಇವಳು ಕಾಣಿಸತೊಡಗುತ್ತಾಳೆ. ಈ ಮಾತುಗಳು ವಿಮರ್ಶೆಯ ಮಾತುಗಳಾಗಬಾರದು, ನಿಜ. ಆದರೆ ಇವಳ ಬದುಕು, ಇವಳ ವ್ಯಕ್ತಿತ್ವ, ವಿಮರ್ಶೆಯನ್ನು, ವಿಮರ್ಶೆಯ ಪರಿಭಾಷೆಯನ್ನು ಧಿಕ್ಕರಿಸಿ ನಿಲ್ಲುವಂತಹವು. ಹೆಣ್ತನದ ಘೋಷಿತ ಮತ್ತು ಹೇರಲ್ಪಟ್ಟ ನಿರ್ಬಂಧಗಳನ್ನೆಲ್ಲಾ ಅನಾಯಾಸವಾಗಿ ಗಾಳಿಗೆ ತೂರಿ ಮಣ್ಣಿನಿಂದ ಆಕಾಶದ ತನಕ ಬೆಳೆದು ಅರಳಿದ ಮಂದಾರ ಪುಷ್ಪದಂತೆ ನನಗಿವಳು ಕಾಣುತ್ತಾಳೆ. ಇವಳನ್ನು ಓದುತ್ತಿದ್ದರೆ ಮನಸ್ಸಿನಲ್ಲಿ ಪ್ರೀತಿಯೂ, ಹೆಮ್ಮೆಯೂ ಒಟ್ಟೊಟ್ಟಿಗೆ ಉಕ್ಕುತ್ತ ಕಣ್ಣಿನಲ್ಲೂ ನೀರು ಹನಿಯುತ್ತದೆ.
ಅಳುವುದು ಇವಳಿಗೆ ಮಾಡುವ ಅವಮಾನ ಎಂದು ಬುದ್ಧಿಯು ಎಚ್ಚರಿಸುತ್ತಿದ್ದರೂ ಇದು ಶ್ರದ್ಧಾಂಜಲಿಯ ಕಣ್ಣೀರು ಮಾತ್ರವಲ್ಲ ಪ್ರೀತಿ, ಗೌರವದ ನಮನ ಕೂಡ ಎಂದು ನಮಗೆ ನಾವೇ ಸಮಾಧಾನ ಮಾಡಿಕೊಳ್ಳಲೂ ಅವಕಾಶವಿದೆ. ಆದ್ದರಿಂದ, ಇದನ್ನು ಪುಸ್ತಕ ಪರಿಚಯವೆಂದೋ, ಪುಸ್ತಕ ವಿಮರ್ಶೆಯೆಂದೋ ಓದುವ ದರ್ದಿಲ್ಲ. ಇದು ನಾವೆಲ್ಲರೂ ಓದಬೇಕಾದ ಕಾವ್ಯ ವ್ಯಕ್ತಿತ್ವ ಎಂದು ಮಾತ್ರ ಹೇಳಬಲ್ಲೆ.
ಹಾಗೆ ನೋಡಿದರೆ ನೂರ್ ಇನಾಯತ್ ಖಾನ್ ಎನ್ನುವ ಈ ಹೆಣ್ಣು ಮಗಳ ಬದುಕು ಶುದ್ಧ ಅಸಂಗತ ನಾಟಕದಂತೆಯೂ ಕಾಣಿಸುತ್ತದೆ. ಎಲ್ಲಿಯ ಟಿಪ್ಪು ಸುಲ್ತಾನ್? ಎಲ್ಲಿಯ ಲಂಡನ್? ಎಲ್ಲಿಯ ಪ್ಯಾರಿಸ್? ಎಲ್ಲಿಯ ಎರಡನೆಯ ಮಹಾಯುದ್ಧ? ಎಲ್ಲಿಯ ಗೂಢಚಾರಿಣಿ?
-ಎಂ. ಎಸ್. ಆಶಾದೇವಿ (ಜೂನ್ ತಿಂಗಳ ಮಯೂರ)