‘ಮಹಾ ಬಯಲು ಭಾಗ-1’ ಕೃತಿಯು ಎಸ್. ಪರಮೇಶ್ ಅವರ ಶಿವಕುಮಾರ ಸ್ವಾಮೀಜಿ ಕುರಿತ ಜೀವನ ಚಿತ್ರಣ ಬರವಣಿಗೆಯಾಗಿದೆ. ಈ ಕೃತಿಗೆ ಶುಭಾಶೀರ್ವಾದ ನುಡಿ ಬರೆದಿರುವ ದೇಶಿಕೇಂದ್ರ ಮಹಾಸ್ವಾಮೀಜಿಗಳು, ಒಟ್ಟು 40 ಅಧ್ಯಾಯಗಳನ್ನು ಒಳಗೊಂಡಿರುವ ಈ ಕೃತಿಯಲ್ಲಿ ಪರಮೇಶ್ ಅವರು ತಮ್ಮ ಬಾಲ್ಯದ ದಿನಗಳಲ್ಲಿ ಶಿವಕುಮಾರ ಸ್ವಾಮೀಜಿಗಳನ್ನು ಕಂಡ ಕುತೂಹಲ ಭಕ್ತಿಬಾವದಿಂದ ಪ್ರಾರಂಭವಾಗಿ, ಮುಂದೆ ಅವರು ವೈದ್ಯರಾಗಿ ಸ್ವಾಮೀಜಿಗಳಿಗೆ ಮಾಡುತ್ತಿದ್ದ ವಿಸ್ಮಯದ ದಿನಮಾನಗಳ ಅಚ್ಚರಿಯ ಘಟನೆಗಳನ್ನು ದಾಖಲಿಸುವ ಪರಿ ತುಂಬಾ ಸ್ವೋಪಜ್ಞವಾಗಿದೆ. ಸ್ವಾಮೀಜಿಗಳನ್ನು ಬಹಳ ಸನಿಹದಿಂದ ನೋಡುತ್ತಲೇ ತಮ್ಮೊಳಗನ್ನು ತಾವು ನೋಡಿಕೊಳ್ಳುವ ಹಾಗೆಯೇ ಪರೋಕ್ಷವಾಗಿ ತಾವು ನಡೆದು ಬಂದ ಹಾದಿಯ ಎಳೆಯನ್ನು ನವಿರಾಗಿ ತಿಳಿಸಿರುವ ರೀತಿ, ಈ ಪ್ರಕ್ರಿಯೆಯಿಂದ ಅವರಲ್ಲಿ ಉಂಟಾದ ಮಾನಸಿಕ ಪರಿಪಾಕ -ಇವು ಕೃತಿಯ ಓಘದ ಒಳಗೆ ಕಂಡೂ ಕಾಣದಂತೆ ಅಭಿವ್ಯಕ್ತಗೊಂಡಿದೆ. ಶಿವಕುಮಾರ ಸ್ವಾಮೀಜಿಗಳ ದೇಹ ಪ್ರಕೃತಿಯಲ್ಲಿ ಉಂಟಾಗುತ್ತಿದ್ದ ವ್ಯತ್ಯಯಗಳು, ಅವುಗಳನ್ನು ಪರಿಹರಿಸಲು ವೈದ್ಯರಾಗಿ ಅವರು ಕೈಗೊಂಡ ಕ್ರಮಗಳು, ಎದುರಾದ ಸವಾಲುಗಳು ಮುಂತಾದ ವಿವರಗಳು ವಸ್ತುನಿಷ್ಠವಾಗಿ ಇಲ್ಲಿ ವರದಿಯಾಗಿದೆ. ಒಟ್ಟಾರೆ ಈ ಕೃತಿಯಲ್ಲಿ ವೈದ್ಯಲೋಕಕ್ಕೆ ವಿಸ್ಮಯ ಉಂಟುಮಾಡಿದ ಸಿದ್ದಗಂಗಾ ಶ್ರೀಗಳವರ ಅಂತಿಮ ದಿನಗಳ ಬದುಕಿನ ಏರಿಳಿತಗಳಲ್ಲಿ ಪರಿಸ್ಥಿತಿಯ ಅನಾವರಣವಾಗುತ್ತಿರುವಂತೆಯೇ ಎಸ್. ಪರಮೇಶ್ ಆತ್ಮಚರಿತ್ರೆಯ ಒಂದು ಭಾಗವು ಅನಾವರಣಗೊಂಡಿದೆಯೆನೋ ಎನಿಸುತ್ತದೆ ಎಂದಿದ್ದಾರೆ.
ಎಸ್.ಪರಮೇಶ್ ಅವರು ಮೂಲತಃ ಮುಗನಹಳ್ಳಿಯ ಮಾಗಡಿ ತಾಲೂಕಿನ ಸೋಲೂರಿನವರು. ಎಂಬಿಬಿಸ್ ಹಾಗೂ ಎಮ್.ಡಿ ವಿದ್ಯಾಭ್ಯಾಸವನ್ನು ಹೊಂದಿರುವ ಅವರು ಅರಿವಳಿಕೆ ಶಾಸ್ತ್ರದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉದ್ಯಮಿಯಾಗಿರುವ ಅವರು ಸಿದ್ಧಗಂಗಾ ಹೆಸರಿನ ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸಿದ್ದಾರೆ. ಇದಕ್ಕೂ ಮೊದಲು ಅವರು ಸಿದ್ದಗಂಗಾ ಡಯಾಗ್ನೋಸ್ಟಿಕ್ ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ...
READ MORE