ಜಾನಪದ ಲೋಕದ ಕರಾವಳಿಯ ಮೇರು ಪ್ರತಿಭೆ ಸುಕ್ರಜ್ಜಿಯ ಜೀವನ ಬವಣೆ-ಸಾಧನೆಗಳನ್ನು ಪರಿಚಯಿಸುವ ಉದ್ದೇಶದ ಕೃತಿಯೇ-ಹಾಲಕ್ಕಿ ಕೋಗಿಲೆ. ಅಕ್ಷತಾ ಕೃಷ್ಣಮೂರ್ತಿ ಅವರು ಕೃತಿಯ ಕರ್ತೃ. ಮುಳ್ಳಿನ ಬಲೆಯನ್ನೇ ಸಾಧನೆಯ ಮಡಿಲನ್ನಾಗಿಸಿಕೊಂಡು ಬದುಕಿ ಬಾಳಿದ ಹಿರಿಯ ಜೀವ ವೀಣೆ. ಇಂತಹ ಅನನ್ಯ ಚೇತನ ಸುಕ್ರಜ್ಜಿ. ಅನಕ್ಷರಸ್ಥೆಯಾದರೂ ಹಿರಿಯರಿಂದ ಬಳುವಳಿಯಾಗಿ ಬಂದ ಜ್ಞಾನದ ಸಂಪತ್ತನ್ನು ಪ್ರದರ್ಶಿಸಿ, ಜಾನಪದೀಯ ಅಮೂಲ್ಯತನಕ್ಕೆ ಸಾಕ್ಷಿಯಾಗಿದ್ದಾರೆ. ಜನಪದ ನಿಘಂಟುನಲ್ಲಿ ಹಾಲಕ್ಕಿ ಸಮುದಾಯದ ಸಂಸ್ಕೃತಿಯು ಒಂದು ಭಾಗವಾಗಲು ಸುಕ್ರಜ್ಜಿ ಹಾಗೂ ಅವರ ತಂಡದ ಶ್ರಮವು ಕಾರಣ ಎಂದು ಕೃತಿಯ ಲೇಖಕರು ಪ್ರತಿಪಾದಿಸುತ್ತಾರೆ.
ಅಕ್ಷತಾ ಕೃಷ್ಣಮೂರ್ತಿಯವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಲೆಕೇರಿಯಲ್ಲಿ 02 ನವೆಂಬರ್1981 ರಲ್ಲಿ ಜನಿಸಿದರು. ಉತ್ತರ ಕನ್ನಡ ಜಿಲ್ಲೆಯ ಅತಿ ಹೆಚ್ಚು ಅರಣ್ಯ ಹೊಂದಿರುವ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ಹಿಂದುಳಿದ ಜೊಹಿಡಾ ತಾಲೂಕಿನ ಹುಲಿ ಸಂರಕ್ಷಿತ ಪ್ರದೇಶದ ಅಣಶಿಯಲ್ಲಿ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಕಿ ವೃತ್ತಿಯ ಜೊತೆಯಲ್ಲಿ ಕನ್ನಡದ ಹಲವಾರು, ದಿನ ಪತ್ರಿಕೆ ,ವಾರಪತ್ರಿಕೆ, ಪಾಕ್ಷಿಕಪತ್ರಿಕೆ ಹಾಗೂ ಮಾಸಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುವ ಮೂಲಕ ಹವ್ಯಾಸಿ ಬರಹಗಾರರಾಗಿದ್ದಾರೆ. ಹಲವಾರು ಕೃತಿ, ಕವನ ಸಂಕಲನಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ...
READ MOREಹಾಲಕ್ಕಿ ಕೋಗಿಲೆ
ಜಾನಪದ ಜ್ಞಾನದ ಗಣಿ, ವಿಶ್ವಕೋಶ ಎಂಬ ಕೀರ್ತಿಗೆ ಪಾತ್ರರಾಗಿರುವವರು ಸುಕ್ರಜ್ಜಿ. ಪದ್ಮಶ್ರೀ ಪ್ರಶಸ್ತಿಯೂ ಸೇರಿ ಹಲವು ಪ್ರಶಸ್ತಿಗಳನ್ನು ಪಡೆದಿರುವ ಅವರು ಶಾಲೆಯ ಶಿಕ್ಷಣ ಪಡೆದವರಲ್ಲ; ವಿಶ್ವವನ್ನೇ ವಿಶ್ವವಿದ್ಯಾಲಯ ಮಾಡಿಕೊಂಡವರು. ಐದು ಸಾವಿರಕ್ಕೂ ಹೆಚ್ಚು ಜಾನಪದ ಹಾಡುಗಳನ್ನು ತಮ್ಮ ನೆನಪಿನ ಉಗ್ರಾಣದಲ್ಲಿ ಶೇಖರಿಸಿಕೊಂಡಿರುವ ಅವರು ನಮ್ಮ ಕಾಲದ ವಿಸ್ಮಯ ವ್ಯಕ್ತಿಗಳಲ್ಲಿ ಒಬ್ಬರು. ಈ ಲೋಕಶಿಕ್ಷಕಿಯ ಬದುಕಿನ ಚಿತ್ರಣವನ್ನು ‘ಹಾಲಕ್ಕಿ ಕೋಗಿಲೆ’ ಕೃತಿ ಕಟ್ಟಿಕೊಡುತ್ತದೆ. ಅಕ್ಷತಾ ಕೃಷ್ಣಮೂರ್ತಿ ಸಂಪಾದಿಸಿರುವ ಈ ಕೃತಿಯಲ್ಲಿ ಇಪ್ಪತ್ತು ಲೇಖಕರು ಸುಕ್ರಜ್ಜಿಯ ಬದುಕಿನ ವಿವರ ಕಟ್ಟಿಕೊಟ್ಟಿದ್ದಾರೆ. ಆದರೆ ಬಹುಪಾಲು ಬರಹಗಳು ನೀರಸವಾಗಿವೆ; ವಿಷಯದ ವ್ಯಾಪ್ತಿ–ವೈವಿಧ್ಯಗಳಲ್ಲಿ ಸೊರಗಿವೆ. ಸುಕ್ರಜ್ಜಿ ಹಾಡುವ ಹಾಡುಗಳಲ್ಲಿ ಕೆಲವನ್ನಾದರೂ ಒಂದೆಡೆ ಕೊಟ್ಟು ವಿವರಿಸಿದ್ದರೆ ಓದುಗರಿಗೆ ಪ್ರಯೋಜವಾಗುತ್ತಿತ್ತು. ‘ವ್ಯಕ್ತಿ ಸರಳವಾದಷ್ಟು ಎತ್ತರಕ್ಕೆ ಏರುತ್ತಾನೆಂಬುದು ಸುಕ್ರಜ್ಜಿಯವರನ್ನು ಗಮನಿಸಿದಾಗ ಅನಿಸಲು ಶುರುವಾಗುತ್ತದೆ. ಸುಕ್ರಜ್ಜಿಯವರ ಅಂತರಾಳದಲ್ಲಿ ಸಮಷ್ಟಿಹಿತದ ಅಂತರಗಂಗೆ ಹರಿಯುತ್ತಲೇ ಇದೆ. ಅದನ್ನು ಸೂಕ್ಷ್ಮವಾಗಿ ಚಿಂತಿಸುತ್ತಾರೆ. ಇರುವುದರಲ್ಲಿಯೇ ಖುಷಿ ಪಡುವುದು ಹೇಗೆ ಎಂಬ ಪಾಠಕ್ಕೆ ಗುರುವಾಗಿ ಸುಕ್ರಜ್ಜಿ ನಿಲ್ಲುತ್ತಾರೆ’ ಎಂದಿದ್ದಾರೆ ಕೃತಿಯ ಸಂಪಾದಕರು.
ಕೃಪೆ : ಪ್ರಜಾವಾಣಿ (2020 ಫೆಬ್ರುವರಿ 23)