ಗಾಂಧಿ ಕಥನ

Author : ಡಿ.ಎಸ್.ನಾಗಭೂಷಣ

Pages 676

₹ 600.00




Year of Publication: 2019
Published by: ಮುನಿಸ್ವಾಮಿ ಮತ್ತು ಮಕ್ಕಳು
Address: ಸೂರ್ಯೋದಯ, #72, ಪ್ರೋ.ಎ.ಆರ್.ಕೃಷ್ಣಶಾಸ್ತ್ರಿ ರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 9845012740

Synopsys

‘ಗಾಂಧಿ ಕಥನ’ ಡಿ. ಎಸ್. ನಾಗಭೂಷಣ ಕೃತಿ. ಈ ಕೃತಿಯ ಕುರಿತು ಬರೆಯುತ್ತಾ..ಇದು ಗಾಂಧಿಯವರ ಜೀವನ ಚರಿತ್ರೆಯಲ್ಲ ಅಥವಾ ಅವರನ್ನು ಮಹಾತ್ಮರಾಗಿ ವೈಭವೀಕರಿಸಿ ಪ್ರಸ್ತುತಪಡಿಸುವ ಪ್ರಯತ್ನವೂ ಅಲ್ಲ. ಬದಲಿಗೆ ಅವರ ಬದುಕಿನ ಮುಖ್ಯ ಸಂಗತಿಗಳನ್ನು ವಿವಿಧ ಆಕರಗಳಿಂದ ಹೆಕ್ಕಿ ತೆಗೆದು, ಓದುಗರ ಮುಂದಿಟ್ಟು ಅವರೇ ಅವರನ್ನು ಅರ್ಥಮಾಡಿಕೊಳ್ಳಲು ಆಹ್ವಾನಿಸುವ ಒಂದು ಪ್ರಯತ್ನ ಎನ್ನುತ್ತಾರೆ. 

ದೇಶ ಗಾಂಧಿಯವರ 150ನೇ ಜನ್ಮೋತ್ಸವವನ್ನು ಆಚರಿಸುತ್ತಿರುವ ಹೊತ್ತಿನಲ್ಲಿ ಹೊಸ ತಲೆಮಾರು ಕಾಲದ ಪರದೆ ಸರಿಸಿ ಅವರತ್ತ ಮುಕ್ತ ಮನಸ್ಸಿನಿಂದ ನೋಡಿ ಅವರು ಪ್ರತಿಪಾದಿಸಿದ ಮೌಲ್ಯಗಳನ್ನು ಇವೊತ್ತಿನ ಜಗತ್ತಿನಲ್ಲಿ ಒರೆಗೆ ಹಚ್ಚಲು ಅವರಿಗೆ ನೆರವಾಗುವ ಒಂದು ನಮ್ರ ಪ್ರಯತ್ನವೇ ಈ ಕೃತಿ. 

About the Author

ಡಿ.ಎಸ್.ನಾಗಭೂಷಣ
(01 February 1952 - 19 May 2022)

ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...

READ MORE

Reviews

 

ಗಾಂಧಿ ಧ್ಯಾನದಿಂದಲೇ ಹುಟ್ಟಿದ ಗಾಂಧಿ ಸಮಗ್ರ ಚಿತ್ರ

ಈ ಒಂದು ವಾರದಿಂದ ಗೆಳೆಯ ಡಿ.ಎಸ್.ಎನ್ ಬರೆದ ಗಾಂಧಿ ಕಥನ ಓದುತ್ತಿದ್ದೇನೆ. ಮೂರು ಹೆಜ್ಜೆಗಳಲ್ಲಿ, 93 ಶೀರ್ಷಿಕೆಗಳ ಮೂರು ಹೆಜ್ಜೆ ಗುರುತುಗಳಲ್ಲಿ, 573 ಉಪಶೀರ್ಷಿಕೆಗಳಲ್ಲಿ, ಲೇಖಕನ ಮಾತು ಮತ್ತು ಗಾಂಧಿ ಚಿತ್ರ ಸಂಪುಟವು ಸೇರಿದಂತೆ ಏಳುನೂರಕ್ಕೂ ಹೆಚ್ಚು ಪುಟಗಳಲ್ಲಿ ಹಬ್ಬಿಕೊಂಡಿರುವ ಮಹಾತ್ಮ ಗಾಂಧಿಯವರ ಬದುಕಿನ ಸಮಗ್ರ ನಿರೂಪಣೆಯಾಗಿರುವ ಈ ಉದ್ -ಗ್ರಂಥ ನನ್ನನ್ನು ಆವರಿಸಿಕೊಂಡು ಬಿಟ್ಟಿದೆ. ನಮ್ಮ ರತ್ನಾಕರವರ್ಣಿ ತನ್ನ ಕಾವ್ಯವನ್ನು ಪ್ರಾರಂಭಿಸುವಾಗ 'ಬಿನ್ನಹ ಗುರುವೇ, ಧ್ಯಾನಕ್ಕೆ ಬೇಸರಾದಾಗ ಕನ್ನಡದೊಳಗೊಂದು ಕಥೆ ಹೇಳುವೆ' ಎನ್ನುತ್ತಾ ಶುರು ಹಚ್ಚುತ್ತಾನೆ. ಕತೆ ಹೇಳುತ್ತ ಕಥನವೇ ಒಂದು ಧ್ಯಾನವಾಗಿಬಿಡುತ್ತದೆ. ಹಾಗಾಗ ಬೇಕೆಂಬುದೇ ಆಗಾಗಬೇಕೆಂಬುದು ಕವಿಯ ಬಿನ್ನಹ, “ಗಾಂಧಿ ಕಥನ” ದಲ್ಲಿ ಇಂಥದೊಂದು ಚಮತ್ಕಾರ ನಡೆದುಬಿಟ್ಟಿದೆ! ಅಂದರೆ ಕಥನದ 'ವಸ್ತು' ಮತ್ತು ಕಥನದ 'ರೀತಿ' ಒಂದರೊಳಗೊಂದು ಬೆರೆತು ಏಕವಾಗಿಬಿಟ್ಟಿದೆ. ಗಾಂಧಿ ಕಥನ ವನ್ನು ಓದುತ್ತ ಹೋದಂತೆ ಈ ಎರಕದ ಅನುಭವವೇ ಮೊದಲಾಗಿ ನಮಗುಂಟಾಗುವುದು.

ಅಂದರೆ ಗಾಂಧಿಯವರ ಚಿತ್ರ ಆರಾಧನಾ ಭಾವದಿಂದ ಬಾನೇರದಂತೆ, ವಿಮರ್ಶೆಯ ಉಳಿಯಿಂದ ಮೂರ್ತಿ ಭಂಜನೆಯೂ ಆಗದಂತೆ, ವರದಿ ಮಾತ್ರ ವಿವರಣೆಗಳಿಂದ ರಕ್ತ ಹೀನವು ಆಗದಂತೆ, ಸಾವಧಾನದ ಓದುಗರಿಗೆ ತಮ್ಮೊಳಗೇ ಅರ್ಥವಾಗುವಂತೆ, ತಮ್ಮದೇ ಪೂರ್ವಾಗ್ರಹಗಳ ತಿಕ್ಕಾಟದ ಒಳಗಿಂದಲೇ ಗಾಂಧಿ ಮೂರ್ತಿಯೊಂದು ಮೂಡಿಬರಲನುವಾಗುವಂತೆ -ಬಹು ಪರಿಶ್ರಮದಿಂದ ಬರೆದಿರತಕ್ಕ ಅಪೂರ್ವವಾದ ಬರಹವಿದು. ಗಾಂಧಿ, ತಮ್ಮನ್ನು ತಾವೇ ಹೇಗೆ ಕಡೆದುಕೊಂಡರೆನ್ನವುದನ್ನು, ತಮ್ಮನ್ನು ತಾವೇ ಕೆತ್ತಿಕೊಳ್ಳುತ್ತಾ ಆ ಅಸಹನೀಯ ನೋವು ಮತ್ತು ಸ್ವ- ಆವಿಷ್ಕಾರದ ಸಂಭ್ರಮಗಳನ್ನು ಹೇಗೆ ಅನುಭವಿಸಿದರೆಂಬುದನ್ನು ಪಾರದರ್ಶಕವಾಗಿ ತೋರಿಸುತ್ತಿರುವ ಗ್ರಂಥವಿದು. ಪಾರದರ್ಶಕತೆಗೆ ವಿರೋಧಿಯಾದ ಎಲ್ಲ ಬಗೆಯ ವಾಗಾಡಂಬರಗಳನ್ನು ಕೈಬಿಟ್ಟ ಬರಹವಿದು. ಒಂದು ಮಾತಿನಲ್ಲಿ ಹೇಳಬೇಕೆಂದರೆ- ಉಪವಾಸ ಕೂರುತ್ತಾ, ಉಪವಾಸದಿಂದಲೇ ಪುಷ್ಟಿಗೊಳ್ಳುತ್ತ ಹೋಗುವ ಗಾಂಧಿ ವ್ಯಕ್ತಿತ್ವವನ್ನು ತೋರಿಸಬೇಕಾದ ಮಾತು ಹೇಗಿರಬೇಕು ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಸಾಧಿಸಿಕೊಂಡ ಬರಹವಿದು. 

ಎಲ್ಲೋ ಓದಿದ ನೆನಪಿದೆ. ಧ್ಯಾನಮಗ್ನ, ನಿರ್ವಾಣ ಸ್ಥಿತ ಬುದ್ಧನ ಮುಖ ಮೂರ್ತಿ ಬೇಕೆಂದರೆ ಎಲ್ಲೆಡೆ ಕಾಣಸಿಗುತ್ತದೆ. ಅದು ಚಿರಪರಿಚಿತ. ಆದರೆ ಮೊದಲ ಬಾರಿಗೆ ಮನುಜರ ಬಾಳಲ್ಲಿ ಸಾವೆಂಬ ನಿಜವನ್ನು ತಿಳಿದಾಗ, ಒಮ್ಮೆಲೆ ಅಂತರಂಗವೇ ಅಲ್ಲೋಲ ಕಲ್ಲೋಲಗೊಂಡು ಕಂಗೆಟ್ಟು ಹೋದ ಸಿದ್ದಾರ್ಥನ ಉದ್ವಿಗ್ನ ಚಿಂತಾಕ್ರಾಂತ ಮುಖದ ಕೆತ್ತನೆಯನ್ನು ಎಲ್ಲಿಯಾದರು ಕಾಣುವೆವೇನು? ಕೆತ್ತುವುದಕ್ಕಿಂತ ದೊಡ್ಡ ಸವಾಲು ಇದು. ಗಾಂಧಿ ತನ್ನ ಬಾಳು ಪ್ರಯೋಗ ಎಂದುಕೊಂಡಾಗಲೇ, ತನ್ನನ್ನು ತಾನು ಎಲ್ಲರ ಎಲ್ಲರ ಮುಂದೆ ಕೆತ್ತಿಕೊಳ್ಳುತ್ತಾ, ತನ್ನ ಉದ್ವಿಗ್ನಮುಖವನ್ನು ಲೋಕಕ್ಕೆ ಕಾಣಿಸುತ್ತಾ, ಶಿಲ್ಪ ಮತ್ತು ಶಿಲ್ಪಿ ಒಂದೇ ಆಗಿ ಎರಕಗೊಳ್ಳುತ್ತ ಹೋದರು. ಇಂಥ ಗಾಂಧಿಯ ಬಾಳನ್ನು- ಅದು ಹೇಗೆ ನಡೆದಿದೆಯೋ ಹಾಗೆ - ತಮ ವ್ಯಾಖ್ಯಾನವನ್ನು ಎಲ್ಲಿಯೂ ಹೇರದೇ, ಗಾಂಧಿ ಬಗ್ಗೆ ಬರೆದ ಇತರ ಲೇಖಕರ ವ್ಯಾಖ್ಯಾನವನ್ನು ಸೂಕ್ಷ ಎಚ್ಚರಿಕೆಯಿಂದ ಗಮನಿಸಿ, ಎಚ್ಚರದಿಂದ ಆಯ್ಕೆ ಮಾಡಿ, ಡಿ.ಎಸ್.ಎನ್ ಇಲ್ಲಿ ಕಟ್ಟಿದ್ದಾರೆ. ಗಾಂಧಿಗೆ ಪ್ರಿಯವಾದ ಸಂಯಮದ ಮನೋಧರ್ಮವನ್ನು ಈ ಗ್ರಂಥದಲ್ಲಿ ಯಾರೂ ಗುರುತಿಸಬಹುದು. ಒಂದು ಉದಾಹರಣೆ ನೋಡಿ: ಡಿ .ಎಸ್. ಎನ್ ಶ್ರೀ ರಮಣ ಮಹರ್ಷಿಗಳ ಭಕ್ತರೆಂದು ಅವರನ್ನು ಬಲ್ಲ ಎಲ್ಲರಿಗೂ ಗೊತ್ತು, ಸಮಕಾಲೀನರಾಗಿದ್ದು, ಪರಸ್ಪರ ಗೌರವವಿದ್ದು, ರಮಣ ಮತ್ತು ಗಾಂಧಿ ಪರಸ್ಪರ ಭೇಟಿಯಾಗಿಲ್ಲ. ಇನ್ನೇನು ಭೇಟಿ ನಡೆಯುತ್ತದೆ ಎಂಬ ಸಂದರ್ಭವಿದ್ದೂ ಅದು ನಡೆಯಲಿಲ್ಲ. ಈ ಭೇಟಿ ಸಂಭವಿಸಬೇಕಿತ್ತು ಎಂದು ಡಿ.ಎಸ್.ಎನ್ ಹಂಬಲಿಸುತ್ತಾರೆ. ಏಕೆಂದರೆ ಗಾಂಧಿ, ರಮಣರಿಂದ ಅರಿಯಬಹುದಾಗಿದ್ದ ಆಂತರಿಕ ಸತ್ಯ ಒಂದಿತ್ತು ಎಂದು ಅವರು ಭಾವಿಸುತ್ತಾರೆ. ಆದರೆ ಭೇಟಿ ನಡೆಯಲಿಲ್ಲ. ಇದೊಂದು ವಿಧಿವಿಲಾಸವೆಂದೇ ಡಿ.ಎಸ್.ಎನ್ ಹೇಳುತ್ತಾರೆ. ಆಶ್ಚರ್ಯವೆಂದರೆ ಎಲ್ಲ ಮಾತುಗಳನ್ನು ತಮ್ಮ 'ಲೇಖಕನ ಮಾತುಗಳಲ್ಲಿ ಹೇಳಿದ್ದಾರಲ್ಲದೆ ಗ್ರಂಥದಲ್ಲಿ ಈ ಬಗ್ಗೆ ಒಂದೇ ಒಂದು ಮಾತಿಲ್ಲ! ಭೇಟಿಯಾಗದೆ ಇರುವುದರ ಬಗ್ಗೆ ರಮಣರೆ ಏನು ಹೇಳಿದರು ಎಂಬ ಮಾಹಿತಿ ಇದ್ದು ಅಥವಾ ಮಾಹಿತಿಯನ್ನು ಪಡೆಯಬಹುದಾಗಿದ್ದು, ತಾನು ಹೇಳಹೊರಟಿರುವ ಕಥನಕ್ಕೆ ಅದು ಅಷ್ಟಾಗಿ ಅಗತ್ಯವಿಲ್ಲವೆಂದು ಕಂಡುಕೊಳ್ಳುವ ಸಂಯಮ-ರಮಣ ಭಕ್ತನ-ಈ ಸಂಯಮ ತುಂಬಾ ಇಷ್ಟವಾಗುತ್ತದೆ. ಈ ಸಂಯಮ ಗಾಂಧಿ ಧ್ಯಾನದಿಂದಲೇ ಬಂದುದಾಗಿರಬೇಕು.

ವ್ಯಾಖ್ಯಾನಗಳು ಅನಿವಾರ್ಯ. ಏಕೆಂದರೆ ಅವು ಘಟನೆಗಳನ್ನು ಇನ್ನೊಂದು ಬೆಳಕಿನಲ್ಲಿ ನೋಡಲು ಸಾಧ್ಯವಾಗುವಂತೆ ಮಾಡುತ್ತವೆ. ನಮ್ಮ ತಪ್ಪು ನಮಗೆ ಅರಿವಾಗುವಂತೆ ಮಾಡುವುದೂ ವ್ಯಾಖ್ಯಾನಗಳೇ. ಆ ವ್ಯಾಖ್ಯಾನ ಇತರರು ಮಾಡಿದ್ದು ಆಗಿರಬಹುದು ಅಥವಾ ನಾವೇ ಮಾಡಿಕೊಳ್ಳುತ್ತಿರುವ ವ್ಯಾಖ್ಯಾನ ಆಗಿರಬಹುದು. ಆದರೆ ವ್ಯಾಖ್ಯಾನಗಳು ದಾರಿ ತಪ್ಪಿಸಲೂಬಹುದು. ಆದುದರಿಂದಲೇ ಈ ಕಥನದಲ್ಲಿ -ಘಟನೆಗಳಿಗೆ ವ್ಯಾಖ್ಯಾನಗಳನ್ನು ಆಯ್ದುಕೊಳ್ಳುವಲ್ಲಿ ಬಹು ಸೂಕ್ಷವಾದ ಎಚ್ಚರ ಅಗತ್ಯ. ಈ ವಿಷಯದಲ್ಲಿ ಡಿ.ಎಸ್.ಎನ್. ಗೆ ಮೈಯೆಲ್ಲಾ ಎಚ್ಚರ. ಈ ದೃಷ್ಟಾಂತವನ್ನು ನೋಡಿ: ಇದು ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಸೆರೆಮನೆಯಿಂದ ತಮ್ಮ ಮಗ 17ವರ್ಷದ ಮಣಿಲಾಲನಿಗೆ ಬರೆದ ದೀರ್ಘ ಪತ್ರದ ಸಂದರ್ಭ, ಈ ಪತ್ರದಲ್ಲಿ ಗಾಂಧಿ - 'ಈಗ ಮನೆಯಲ್ಲಿರುವ ಹಿರಿಯ ಮಗನಾಗಿ ತಾಯಿ- ಅತ್ತಿಗೆ ಮತ್ತು ತಮ್ಮಂದಿರ ಯೋಗಕ್ಷೇಮವನ್ನು ನೋಡಿಕೊಳ್ಳುವುದು ತನ್ನ ಕರ್ತವ್ಯವೆಂದು ಭಾವಿಸುವಂತೆ ಮನಸ್ಸನ್ನು ತರಬೇತುಗೊಳಿಸಿಕೊಳ್ಳುವುದೇ ನಿಜವಾದ ಶಿಕ್ಷಣವೇ ಹೊರತು ಅಕ್ಷರ ಜ್ಞಾನವಲ್ಲ. ಪ್ರತಿಯೊಬ್ಬನೂ ಹನ್ನೆರಡು ವಯಸ್ಸಿನ ನಂತರ ತನ್ನ ಕರ್ತವ್ಯವನ್ನು ಮನವರಿಕೆ ಮಾಡಿಕೊಳ್ಳುವಂತೆ ಆಲೋಚನೆ, ಮಾತು ಮತ್ತು ಕೆಲಸಗಳಲ್ಲಿ ಸಮಾಧಾನ, ಸತ್ಯವಂತಿಕೆಗಳನ್ನೂ, ಜೀವಹಾನಿ ಮಾಡದಿರುವಂತಹ ಕಲಿಕೆ ಆಚರಣೆಗಳನ್ನೂ ರೂಢಿಸಿಕೊಳ್ಳುವುದೇ ಶಿಕ್ಷಣ'- ಎನ್ನುತ್ತಾರೆ. ಇದರ ಬಗ್ಗೆ ಬರೆಯುತ್ತ- ಡಿ.ಎಸ್.ಎನ್ ‘ಕುಟುಂಬದ ಲೌಕಿಕ ಯೋಗಕ್ಷೇಮದ ವಿಷಯಗಳಲ್ಲದೆ ಕುಟುಂಬದ ಆಂತರಂಗಿಕ ಯೋಗಕ್ಷೇಮದ ಬಗ್ಗೆಯೂ ಅವರು ನೀಡುವ ಸೂಚನೆಗಳ ಸ್ವರೂಪ ಗಾಂಧಿಯಲ್ಲಿದ್ದ ತಾಯ್ತನದ ಜೊತೆಗೆ ತಂದೆತನದ ಪರಿಚಯವನ್ನೂ ಮಾಡಿಕೊಡುತ್ತಾ ಈ ಪತ್ರ ಒಟ್ಟಾರೆ ಅವರ ವ್ಯಕ್ತಿತ್ವದಲ್ಲಿ ಸಿದ್ಧವಾಗುತ್ತಿದ್ದ ಹದದ ಸೂಚನೆಯನ್ನು ನೀಡುತ್ತದೆ' ಎನ್ನುತ್ತಾರೆ. ಜೊತೆಗೆ ಅಧ್ಯಾಯದ ಕೊನೆಯಲ್ಲಿ (126 ಪುಟ) ಲೂಯಿ ಫಿಷರ್ ಮಾಡಿದ ವ್ಯಾಖ್ಯಾನದ ಸಾಲುಗಳನ್ನು ಉಲ್ಲೇಖಿಸುತ್ತಾರೆ. ಅದು ಹೀಗೆ. “ಇದೊಂದು ಹದಿಮೂರನೇ ವಯಸ್ಸಿಗೇ ಮದುವೆಯಾಗಿ, ಬಾಲ್ಯವನ್ನು ಕಳೆದುಕೊಂಡಿದ್ದ ತಂದೆಯೊಬ್ಬ ಅದರ ಫಲವಾಗಿ ತನ್ನ ಮಗನನ್ನು ತನ್ನದೇ ವ್ಯಕ್ತಿತ್ವದ ಎರಕದಲ್ಲಿ ರೂಪಿಸಿಕೊಂಡು ತನ್ನ ಬದುಕಿನ ಮಹಾನ್ ಗುರಿಯನ್ನು ತಲುಪುವುದಕ್ಕೆ ಬೇಕಾದ ಒಳ್ಳೆಯ ಸಹಾಯಕನೊಬ್ಬನನ್ನು ತಯಾರು ಮಾಡಿಕೊಳ್ಳುವ ಪ್ರಯತ್ನದಂತೆ ಕಾಣುತ್ತದೆ. ಮಣಿಲಾಲ, ವಕೀಲನೋ, ವೈದ್ಯನೋ ಆಗ ಬಯಸಿದ್ದರೆ, ಗಾಂಧಿ ಆತನನ್ನು ಒಬ್ಬ ಸಣ್ಣ ಸಂತನನ್ನಾಗಿ ಮಾಡಲು ಪ್ರಯತ್ನಿಸಿದರು. ದಿಗಂತದಲ್ಲಿ ನೆಟ್ಟಿದ್ದ ಗಾಂಧಿಯವರ ದೂರದೃಷ್ಟಿಗೆ ತನ್ನ ಹತ್ತಿರದವರ ಕಾಳಜಿಗಳನ್ನು ಸೂಕ್ಷ್ಮವಾಗಿ ಗಮನಿಸಲಾಗಲಿಲ್ಲವೇನೋ” ಎಂದು ಬರೆಯುತ್ತಾರೆ. ಈ ಕಮೆಂಟ್ ಉಲ್ಲೇಖಾರ್ಹ ಎಂದು ಡಿಎಸ್‌ಎನ್‌ಗೆ ಕಂಡಿತಲ್ಲ, ಇದು ಅವರ ಮನಸ್ಸನ್ನು ಸೂಚಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಇಂಥ ಮನೋಸೂಚನೆಗಳು ತೇಲಿಸಿದ ಮಾತಿನಂತೆಯು ಕೇಳಿಸುವುದುಂಟು. ಜೆ. ಪಿ ಅವರ ಪತ್ನಿ ಪ್ರಭಾವತಿಯವರನ್ನು ಬ್ರಹ್ಮಚರ್ಯದ ಬದುಕಿಗೆ ಒಪ್ಪಿಸುವಲ್ಲಿ ಗಾಂಧಿ ಜೆಪಿ ಅವರೊಡನೆ ಸಮಾಲೋಚಿಸಿರಲಿಲ್ಲ ಎನ್ನುವುದು ಬೇರೆ ಮಾತು ಎಂದಷ್ಟೇ ಡಿ.ಎಸ್‌ಎನ್. ಹೇಳುವರು!

ಇನ್ನೂ ಕೆಲವು ಸಂದರ್ಭಗಳು ಇನ್ನಷ್ಟು ವಿವರಣೆಗಳನ್ನು ಕೊಡಲೇಬೇಕಿತ್ತು ಎನ್ನಿಸುವ ಸಂದರ್ಭಗಳು. ಆದರೆ ಅದೇಕೋ ಡಿ.ಎಸ್.ಎನ್. ಹಾಗೆ ಮಾಡ ಹೋಗುವುದಿಲ್ಲ. ಉದಾ : ಗಾಂಧಿ ಆಧುನಿಕ ನಾಗರಿಕತೆಯನ್ನು ಇನ್ನೊಂದೇ ದೃಷ್ಟಿಯಿಂದ ವಿಮರ್ಶಿಸಲು ಒಂದು ಕಾರಣವನ್ನು ಒದಗಿಸಿದ, ಜಿಕೆ ಚೆಸ್ಪರ್ಟನ್ ಬರೆದ ಅಂಕಣದ ಬಗ್ಗೆ - ಡಿ. ಎಸ್.ಎನ್. ಈಗ ಒದಗಿಸಿದ ವಿವರಗಳು ನಿಜಕ್ಕೂ ಇನ್ನಷ್ಟು ಸ್ಪಷ್ಟತೆಯನ್ನು ಬಯಸುತ್ತದೆ. ಅದಕ್ಕೆಂದೇ ರಾಮಚಂದ್ರ ಗುಹಾ ಅವರು ಒಂದು ಬಗೆಯ ವಿವರಣೆಯನ್ನು ಒದಗಿಸಿಯೂ ಇದ್ದಾರೆ. ಇಲ್ಲಿನ ವಿಚಿತ್ರವನ್ನು ಗಮನಿಸಿ, ಚೆಸ್ಕರ್ಟನ್ ಭಾರತದಲ್ಲಿ ಈಗ ಕೇಳಿಬರುತ್ತಿರುವ ರಾಷ್ಟ್ರೀಯತೆಯ ಕೂಗು ಭಾರತೀಯವು ಅಲ್ಲ, ರಾಷ್ಟ್ರೀಯವು ಅಲ್ಲ ಎಂದು ಲೇವಡಿ ಮಾಡಿದ್ದ. ಈ ಲೇವಡಿ ಹಾಗಾದರೆ ಭಾರತೀಯತೆ ಎಂದರೇನು? ರಾಷ್ಟ್ರೀಯತೆ ಎಂದರೇನು? ಎಂದು ಮೂಲಭೂತವಾಗಿ ಯೋಚಿಸುವಂತೆ ಮಾಡಿತು. ಅಂದರೆ ಅಪಹಾಸ್ಯದ ಮಾತು ಕೂಡ ಅದು ಚಿಂತನೆಯ ಸ್ವರೂಪದ್ದಾಗಿದ್ದರೆ - ಅಪಹಾಸ್ಯಕ್ಕೆ ಈಡಾದವರಲ್ಲಿ ಸ್ವತಂತ್ರ ಚಿಂತನೆಗಳನ್ನು ಸೃಜಿಸಬಲ್ಲದು. ಚಿಂತನೆಗಳು ಕೆಲಸ ಮಾಡುವ ಪರಿಯೇ ಬೇರೆ! ಇನ್ನೊಂದು ಸಂಸ್ಕೃತಿಯ ಜೊತೆ ಯಾವ ರೀತಿಯಲ್ಲಾದರೂ ಸಂಪರ್ಕ ಬಾರದೆ ನಮ್ಮಲ್ಲಿ ಸ್ವತಂತ್ರ ಚಿಂತನೆಗಳು ಉಂಟಾಗುವುದು ಕಷ್ಟು- ಈ ಅಂಶಗಳನ್ನೆಲ್ಲ ಡಿ.ಎಸ್.ಎನ್ ಚೆನ್ನಾಗಿ ವಿಸ್ತರಿಸಬಲ್ಲರು ಎಂದಷ್ಟೇ ನಾನು ಹೇಳುತ್ತಿರುವುದು.

ಅದ್ಭುತವಾದ ಈ ಕಥನ ಎರಡನೆಯ ಮುದ್ರಣ ಕಾಣುವುದು ಖಚಿತ. ಕಾಣಲೇಬೇಕು. ಆಗ ಇಲ್ಲಿನ ಅನೇಕ ದೋಷಗಳು ನಿವಾರಣೆಯಾಗಬೇಕು. ಇನ್ನೊಮ್ಮೆ ಮನಮುಟ್ಟಿ ಪರಿಷ್ಕರಿಸಬೇಕಾದೀತು. ಈ ವಾಕ್ಯ ನೋಡಿ: “ಅನುಭಾವ ಮತ್ತು ಕುಶಲತೆಗಳು ಕುತೂಹಲಕಾರಿ ಕಸಿಯನ್ನು ಧರಿಸಿರುವಂತೆ ತೋರುವ ಆತನ ನೈತಿಕತೆ ಮತ್ತು ಬೌದ್ಧಿಕತೆಗಳು ಆಲೋಚನೆಯ ಸಾಮಾನ್ಯ ಪ್ರಕ್ರಿಯೆಗಳನ್ನು ದಿಕ್ಕುಗೆಡಿಸಿ ಬಿಡುತ್ತದೆ(ಪು 216). ಇದು ಇಂಗ್ಲೀಷ್ ವಾಕ್ಯವೊಂದರ ಅನುವಾದ, ಕನ್ನಡದ ಓದುಗರಿಗೆ ತುಸು ಕಷ್ಟವೇ. ಪುಟ್ಟ 15ರಲ್ಲಿ ಭಗವದ್ಗೀತೆಯ ಶ್ಲೋಕ ತಪ್ಪಾಗಿ ಮುದ್ರಿತವಾಗಿದೆ. ಅದು ಅಧ್ಯಾಯತೋ ವಿಷಯಾನ್ ಅಲ್ಲ. ‘ಧ್ಯಾಯತೋ ವಿಷಯಾನ್' ಆಗಬೇಕು. - ಎಷ್ಟು ಕಾವ್ಯಮಯವಾಗಿಯೂ ಡಿಎಸ್‌ಎನ್‌ ಬರೆಯಬಲ್ಲರು ಎಂಬುದಕ್ಕೆ ನಾನು ಉದಾಹರಿಸಬೇಕೆಂದು ಆಸೆಪಟ್ಟರೂ ಈ ಚಿಕ್ಕ ಪ್ರತಿಸ್ಪಂದನದಲ್ಲಿ ಎಡೆ ಇಲ್ಲದಾಗಿದೆ. ಅದಿರಲಿ ದೇವನೂರು ಮಹಾದೇವ, ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಹೇಳಿದಂತೆ, ತನ್ನ ತನು- ಮನ- ಧನ- ಆತ್ಮಗಳನ್ನು ಸುರಿದು (ಸುರಿಯಲು ಬೇರೆ ಇನ್ನೇನಿದೆ ಮನುಜರಲ್ಲಿ) ಡಿಎಸ್‌ಎನ್- ಈ ಕಥನವನ್ನು ಕಟ್ಟಿದ್ದಾರೆ. ನಾಡಿನ ಎಲ್ಲೆಡೆ ಇನ್ನೊಂದೆರಡು ವರ್ಷವಾದರೂ ಈ ಗ್ರಂಥದ ಕುರಿತು ಚಿಂತನೆಯ ಅಲೆಗಳು ಹರಡುವುದು ನಾಡಿನ ಕ್ಷೇಮಕ್ಕೆ ಒಳ್ಳೆಯದು 

-ಲಕ್ಷ್ಮೀಶ ತೋಳ್ಪಾಡಿ

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ದಿನಪತ್ರಿಕೆ (ನವೆಂಬರ್‌ 2019)

Related Books