‘ದಾಸೋಹ ಜಗದ್ಗುರು ನಿಡಸೋಸಿಯ ಶ್ರೀ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು’ ಕೃತಿಯು ಪ್ರಕಾಶ ಗಿರಿಮಲ್ಲನವರ ಕನ್ನಡ ಜಾಗೃತಿ ಪುಸ್ತಕ ಮಾಲೆ-41ರ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ನಿಡಸೋಸಿ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ನಮ್ಮ ದಿನಮಾನದ ಅಪರೂಪದ ಲೋಕಜಂಗಮರು. ಅವರಿಗಿರುವ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಳಕಳಿ ಅನನ್ಯ. ಸಾತ್ವಿಕ ಸಮಾಜ ರೂಪುಗೊಳ್ಳಬೇಕೆಂಬುದು ಅವರ ಬಯಕೆ. ಸಮಕಾಲೀನ ಸಮಾಜವು ಸರ್ವಾಂಗ ಸುಂದರವಾಗಿ, ಸಮೃದ್ಧವಾಗಿ ಬೆಳಗಬೇಕೆಂಬುದು ಅವರ ಆಶಯ. ಶ್ರೀಗಳದ್ದು ಸದ್ದುಗದ್ದಲವಿರದ ಸಾಧನೆ. ಶ್ರೀಸಾಮಾನ್ಯ ಭಕ್ತರನ್ನು ಕಾರುಣ್ಯ-ಕಕ್ಕುಲಾತಿಯಿಂದ ಕಾಣುವ ಅವರ ದೃಷ್ಟಿ ವಿಶ್ವವಿಶಾಲ. ಪ್ರಗತಿಪರ ದೃಷ್ಟಿ, ವೈಚಾರಿಕ ಪ್ರಜ್ಞೆಯ ಶ್ರೀಗಳು ಸಾಮಾಜಿಕ ಅನಿಷ್ಟಗಳು, ಮೂಢನಂಬಿಕೆಗಳ ವಿರುದ್ಧ ಬಂಡಾಯವೆದ್ದವರು. ನಾಡು-ನುಡಿಯನ್ನು ಪ್ರೀತಿಸುವ ಶ್ರೀಗಳು ಗಡಿಭಾಗದಲ್ಲಿ ಕನ್ನಡಕ್ಕೆ ಗೌರವದ ಸ್ಥಾನ ಸಿಗಲು ಪರಿಶ್ರಮಿಸಿದವರು. ನಾನು ಹುಬ್ಬಳ್ಳಿ ಕಾಡಸಿದ್ಧೇಶ್ವರ ಆರ್ಟ್ಸ್ ಕಾಲೇಜಿನಲ್ಲಿ ಬಿ.ಎ. ಓದುತ್ತಿದ್ದಾಗ, ಶ್ರೀಗಳು ನನ್ನ ವರ್ಗಮಿತ್ರರಾಗಿದ್ದರು. ಅವರ ಸಾತ್ವಿಕವಾದ ಮಾತು, ಸರಳ ನಡೆ ನುಡಿ, ಕ್ರಾಂತಿಕಾರಕ ವೈಚಾರಿಕತೆಯಿಂದ ಎಲ್ಲರಿಗೂ ಬೇಕು ಬೇಕಾದವರಾಗಿದ್ದರು. ಶರಣ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುತ್ತಿರುವ ಶ್ರೀಗಳ ಬದುಕಿನ ಕಥನವನ್ನು, ಗೆಳೆಯ ಪ್ರಕಾಶ ಗಿರಿಮಲ್ಲನವರ ಈ ಕೃತಿಯಲ್ಲಿ ರಸಾದ್ರ್ರವಾಗಿ ಚಿತ್ರಿಸಿದ್ದಾರೆ’ ಎಂದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಗ್ರಾಮದ ಬಡ ಕೃಷಿಕ ಕುಟುಂಬದಲ್ಲಿ (ಜನನ : 28-4-1980) ಜನಿಸಿದ ಪ್ರಕಾಶ ಗಿರಿಮಲ್ಲನವರ ಶರಣ ಸಾಹಿತ್ಯ, ಸಂಸ್ಕೃತಿ ಪರಿಸರದಲ್ಲಿ ಬೆಳೆದು ಬಂದ ಒಬ್ಬ ಭರವಸೆಯ ಯುವ ಬರಹಗಾರ. ನಾಗನೂರು ರುದ್ರಾಕ್ಷಿಮಠದ ಪೂಜ್ಯ ಡಾ. ಶಿವಬಸವ ಮಹಾಸ್ವಾಮಿಗಳವರು ಸ್ಥಾಪಿಸಿದ ಉಚಿತ ಪ್ರಸಾದ ನಿಲಯದಲ್ಲಿ ಆಶ್ರಯ ಪಡೆದು ಬೆಳೆದವರು. ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ’ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯ’ (ವಚನ ಅಧ್ಯಯನ ಕೇಂದ್ರ)ದಲ್ಲಿ 20 ವರ್ಷಗಳ ಕಾಲ ಗ್ರಂಥಾಲಯ ಸಹಾಯಕರಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಇದುವರೆಗೂ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ...
READ MORE