ಪದ್ಮಶ್ರೀ ಪುರಸ್ಕೃತ ಬಿ.ಪಿ. ರಾಧಾಕೃಷ್ಣಅವರು ತಮ್ಮ ಜಾತಿಯ ಕಾರಣದಿಂದ ಅನುಭವಿಸಿದ ಸಾಮಾಜಿಕ ಅವಮಾನಗಳು ಅಸಂಖ್ಯ. ಅವೆಲ್ಲವುಗಳನ್ನು ಮೀರಿ ಡಾ.ಬೆಂಗಳೂರು ಪುಟ್ಟಯ್ಯ ರಾಧಾಕೃಷ್ಣ ಸೆಂಟ್ರಲ್ ಕಾಲೇಜಿನಲ್ಲಿ 37 ವರ್ಷ ಕಾಲ ಸೇವೆ ಸಲ್ಲಿಸಿದವರು. ಜಿಯಾಲಜಿಕಲ್ ಸೊಸೈಟಿಯನ್ನು ಕಟ್ಟಿ ಬೆಳೆಸಿದ ಇವರು, ಮೈಸೂರು ಖನಿಜ ನಿಗಮದ ಮುಖ್ಯಸ್ಥರಾಗಿ, ಕರ್ನಾಟಕ ಸರ್ಕಾರದ ಅಂತರ್ಜಲ ಸಂಪನ್ಮೂಲಗಳ ಅಭಿವೃದ್ಧಿ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
’ಕರ್ನಾಟಕದ ಖನಿಜ ಸಂಪತ್ತು, ಅಂತರ್ಜಲ’ ಸೇರಿದಂತೆ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1974), ಭಾರತ ಸರಕಾರದ ‘ಪದ್ಮಶ್ರೀ’, ಸಾಹಿತ್ಯ ಸೇವೆಗಾಗಿ ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ, ವಿಶ್ವ ಮಾನವ ಪ್ರಶಸ್ತಿ ಲಭಿಸಿದೆ. ‘ಡಾ.ಸಿ.ವಿ. ರಾಮನ್ ಮತ್ತು ಡಾರ್ವಿನ್’ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಎರಡು ಬಾರಿ ಪುರಸ್ಕೃತರಾಗಿದ್ದಾರೆ. ಅವರ ಬದುಕು-ಬರಹ-ಹೋರಾಟ ಕುರಿತ ಸಂಕ್ಷಿಪ್ತ ಪರಿಚಯ ಈ ಕೃತಿಯಲ್ಲಿದೆ. ಈ ಕೃತಿಯನ್ನು ಟಿ.ಆರ್. ಅನಂತರಾಮು ಬರೆದಿದ್ದು, ಡಾ.ನಾ.. ಸೋಮೇಶ್ವರ ಸಂಪಾದಿಸಿದ್ದಾರೆ.
ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ. ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ...
READ MORE