ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಬದುಕಿನ ಸಾರ್ಥಕ ಪುಟಗಳು 'ಅನವರತ ಅಪ್ಪು' ಕೃತಿಯನ್ನು ಪತ್ರಕರ್ತ, ಲೇಖಕ ರಾಘವೇಂದ್ರ ಅಡಿಗ ಎಚ್ಚೆನ್ ಅವರು ರಚಿಸಿದ್ದಾರೆ. ಈ ಕೃತಿಗೆ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಬೆನ್ನುಡಿಯ ಬರಹವಿದೆ. ಪುಸ್ತಕದ ಕುರಿತು ಬರೆಯುತ್ತಾ ‘ಅಪ್ಪು ಅವರು ಸದಾ ಹಸನ್ಮುಖಿ, ಸ್ನೇಹಜೀವಿ. ಮೇಲಾಗಿ ಸದಾ ಚಟುವಟಿಕೆಯಿಂದಿರಲು ಬಯಸುತ್ತಿದ್ದರು. ಏನಾದರೂ ಹೊಸದನ್ನು ಮಾಡಲು ಹಾತೊರೆಯುತ್ತಿದ್ದರು. ಅವರ ಚಿತ್ರಗಳು, ಆದರ್ಶ, ಅವರ ಸಮಾಜಮುಖಿ ಕೆಲಸಗಳು ಎಂದೆಂದಿಗೂ ಅಪ್ಪು ಅವರು ಅಮರ ಎಂದು ಸಾರುತ್ತಿದೆ. ಇಂತಹ ಅಮರತ್ವ ಪಡೆಯಬೇಕಿರುವ ಕೆಲಸ ಹಾಗೂ ವ್ಯಕ್ತಿತ್ವವನ್ನು ಮುಂದಿನ ಪೀಳಿಗೆಗೂ ಪರಿಚಯಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮೆಲ್ಲರ ಪ್ರೀತಿಯ ಪುನೀತ್ ಅವರ ಹುಟ್ಟಿನಿಂದ ಈವರೆಗೆ ಇಟ್ಟ ಸಾಧನೆಯ ಹೆಜ್ಜೆಗಳು, ಅವರ ಸಮಾಜಸೇವೆಯ ಗುಣವನ್ನೆಲ್ಲ ಸರಳ ಹಾಗೂ ಆಪ್ತ ರೀತಿಯಲ್ಲಿ ಪರಿಚಯಿಸಬೇಕು, ಈ ಮೂಲಕ ಪುನೀತ್ ಅವರನ್ನು ಜೀವಂತವಾಗಿಡಬೇಕೆಂದು ನಮ್ಮೂರಿನ ಪತ್ರಕರ್ತರಾದ ರಾಘವೇಂದ್ರ ಅಡಿಗ ಎಚ್ಚೆನ್ ಅವರು ಅನವರತ ಅಪ್ಪು ಎನ್ನುವ ಈ ಪುಸ್ತಕವನ್ನು ಬರೆದಿದ್ದಾರೆ’ ಎಂದಿದ್ದಾರೆ. ಜೊತೆಗೆ ಪುನೀತ್ ಅವರ ವ್ಯಕ್ತಿತ್ವವನ್ನು ಅರಿಯಬೇಕೆಂದುಕೊಂಡವರೆಲ್ಲರೂ ಈ ಪುಸ್ತಕವನ್ನು ಓದಬೇಕಾಗಿದೆ ಎಂದು ಆಶಿಸಿದ್ದಾರೆ.
ಪತ್ರಕರ್ತ, ಲೇಖಕ ರಾಘವೇಂದ್ರ ಅಡಿಗ ಎಚ್.ಎನ್ ಅವರು ಮೂಲತಃ ಕುಂದಾಪುರ ತಾಲೂಕಿನವರು. ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಅವರು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ವ್ಯಾಸಂಗ ಪೂರ್ಣಗೊಳಿಸಿದ್ದು, ಉದಯವಾಣಿ, ಗೃಹಶೋಭಾ, ನ್ಯೂ ಇಂಡಿಯನ್ ಎಕ್ಸ್ ಪ್ರೆಸ್, ಕನ್ನಡಪ್ರಭ ಸೇರಿದಂತೆ ಅನೇಕ ಪತ್ರಿಕೆಗಳು, ನಿಯತಕಾಲಿಕೆಗಳಲ್ಲಿ ಉಪ ಸಂಪಾದಕ, ಸಂಪಾದಕೀಯ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದು, ಕೃತಿ ರಚನೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಜೀವನದ ಕುರಿತಾದ 'ಅನವರತ ಅಪ್ಪು' ಎಂಬ ಕೃತಿ ಪ್ರಕಟಗೊಂಡಿದೆ. ...
READ MORE