ಮಂದಾರ ಕುಸುಮ’ದ ಮುಂದಿನ ಭಾಗ ‘ವಸಂತದ ಚಿಗುರು’.ಮಂದಾರ ಕುಸುಮದಲ್ಲಿ ಅನಾಥೆಯಾಗಿದ್ದ ಉಮಾಳ ಬಾಳು ಭಧ್ರವಾಗುವುದೇ ಎಂಬ ಪ್ರಶ್ನೆಯನ್ನು ಮೂಡಿಸುತ್ತಲೇ ಈ ಕೃತಿ ಮುಂದೆ ಸಾಗುತ್ತದೆ. ಯಾರ ಪಾಲಿನ ಮಂದಾರ ಕುಸುಮ? ಯಾರ ಪಾಲಿನ ವಸಂತದ ಚಿಗುರು.ತಾತ್ಕಾಲಿಕ ಅಮಲು! ಅದು ಯಾವಾಗ ಬರುವುದು? ಅದು ಯಾವಾಗ ಇಳಿಯುವುದು? ತನಗೆ ದೊರಕಿರುವುದರ ಮಹತ್ವ ತಿಳಿಯದೆ ಇದ್ದಾಗ ಅದರ ಮೌಲ್ಯ ಖಂಡಿತಾ ಗೊತ್ತಾಗುವುದಿಲ್ಲ.. ಆದುದರಿಂದ ನಾವು ಅದಕ್ಕಿಂತಲೂ ಉತ್ತಮವಾದುದುರ ಕಡೆ ಗಮನ ಹರಿಸುತ್ತೇವೆ.ಕತ್ತಲಲ್ಲಿ ಕಾಲಿಡುತ್ತಾ ಇರೋದು ನೀರಿಗೋ ಕೊಳಚೆಗೋ ಅರಿವಿರದ ನಡಿಗೆ, ಗಬ್ಬು ಹರಡಿದಾಗಲೇ ಅದರತ್ತ ಲಕ್ಷ್ಯ, ಆದರೆ ಏನು ಪ್ರಯೋಜನ? ಕಾಲುಗಳನ್ನಾದರೂ ತೊಳೆಯಬಹುದು.. ಆದರೆ ರಾಡಿಯಾಗಿರುವ ಪ್ರೀತಿ, ಮನಸ್ಸು, ಹೃದಯ, ಜೀವಗಳು! ನಶೆ ಇಳಿದಾಗ ಸತ್ಯ ಸಂಗತಿ ತಿಳಿದರೂ ಏನೂ ಮಾಡುವಂತಿಲ್ಲ, ತಾನು ಹಿಂತಿರುಗಿ ಸಾಗಬಹುದು, ಇನ್ನೊಂದು ಜೀವಕ್ಕಾದ ಗಾಯ ಮಾಸಿಹೋಗದು..ಮೊದ್ದು ಎಂದು ಉಮಾಳನ್ನು ತಿರಸ್ಕರಿಸಿದ್ದ ಮಹೇಶನ ಹೃದಯದಲ್ಲಿ ಇಂದಿಗೂ ಅವಳಿಗೆ ಜಾಗವಿದೆ! ವಿಚಿತ್ರವೆಂದರೆ ಅವಳ ಹೃದಯದಲ್ಲಿ ಅವನಿಗೆ ಕೂಡ ಸ್ಥಾನವಿದೆ! ಹೆತ್ತವರು ಸಸಿಯಾಗಿ ನೆಟ್ಟದ್ದು ಹೆಮ್ಮರವಾಗಿ ಬೆಳೆದಿತ್ತು ಅದರಿಂದಲೇ ಅವಳು ಸೇಡು ತೀರಿಸಿಕೊಳ್ಳದಂತೆ ಮಾಡಿತ್ತು.ತನ್ನಳಿಯ ಮಹೇಶ ಮಾಡಿದ ಉದ್ಧಟತನಕ್ಕೆ ಪ್ರತಿಯಾಗಿ ಉಮಾಳ ಜೀವನವನ್ನು ಸರಿಯಾದ ದಿಕ್ಕಿಗೆ ಬದಲಿಸುವ ಪ್ರಯತ್ನಪಡುವ ರಾಜೇಂದ್ರಕುಮಾರ್, ಅವರ ಪತ್ನಿ ಲೀಲಾವತಿ, ಊರ ಗೌಡ್ರು ಇವರ ಪಾತ್ರಗಳು ಈ ಕೃತಿಯಲ್ಲಿ ಸ್ಪಷ್ಟವಾಗಿ ಮೂಡಿಬಂದಿದೆ. ಹಾಗೋ ಹೀಗೋ ಬಲವಂತದಿಂದ ಸಂಜಯನ ಮಡದಿಯಾಗುವ ಉಮಾ, ಮುಂದೇನು? ಅವಳ ಪ್ರಶ್ನೆ ಮಾತ್ರವಲ್ಲ, ಓದುಗರಿಗೂ ಪ್ರಶ್ನೆಗಳೇ!! ಅವಳ ಬಾಳನ್ನು ಹಾಳುಗೆಡವಲು ಹಸಿದ ಹುಲಿಗಳಂತೆ ನಿಂತಿರುವ ಸುಷ್ಮಾ, ಮಣಿ, ರಾಧಮ್ಮ, ಇವರುಗಳಿಂದ ರಕ್ಷಣೆ ಒದಗಿಸಲು ಪಣತೊಟ್ಟಿರುವ ಮಹೇಶ, ಮನೋಹರ, ರಾಜೇಂದ್ರಕುಮಾರ್, ಗೌಡ್ರು, ಲೀಲಾವತಿ…ಕಥೆಸಾಗುತ್ತಾ ಸಾಗುತ್ತಾ ಬೆಳಕು ಮೂಡುವುದೇ? ಹೀಗೆ ಓದುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಈ ಕೃತಿ ಯಶಸ್ವಿಯಾಗಿದೆ.
©2024 Book Brahma Private Limited.